ಪಾಕ್‌ ರಾಯಭಾರ ಕಚೇರಿ ಎದುರು ಪ್ರತಿಭಟನೆ

7

ಪಾಕ್‌ ರಾಯಭಾರ ಕಚೇರಿ ಎದುರು ಪ್ರತಿಭಟನೆ

Published:
Updated:

ವಾಷಿಂಗ್ಟನ್‌: ಗಲ್ಲುಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಅವರನ್ನು ಭೇಟಿ ಮಾಡಿದ ವೇಳೆ ಅವರ ತಾಯಿ ಮತ್ತು ಪತ್ನಿಯನ್ನು ಪಾಕಿಸ್ತಾನ ಅಮಾನವೀಯವಾಗಿ ನಡೆಸಿಕೊಂಡಿದೆ ಎಂದು ಖಂಡಿಸಿ, ಅಮೆರಿಕದಲ್ಲಿರುವ ಭಾರತ, ಅಘ್ಗಾನಿಸ್ತಾನ ಮತ್ತು ಬಲೂಚಿಸ್ತಾನ ಮೂಲದ ಹಲವರು ಇಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು, ಜಾಧವ್‌ ಪತ್ನಿಯ ಚಪ್ಪಲಿಯನ್ನು ವಾಪಸ್‌ ಕೊಡದ ಪಾಕ್ ಕ್ರಮಕ್ಕೆ ಪ್ರತಿಭಟನಾರ್ಥವಾಗಿ, ಕಚೇರಿಯ ಅಧಿಕಾರಿಗಳಿಗೆ ನೀಡಲು ಚಪ್ಪಲಿಗಳನ್ನೂ ಜೊತೆಗೆ ತಂದಿದ್ದರು.

‘ಜಾಧವ್‌ ಅವರ ಪ್ರಕರಣವನ್ನು ಸೇನಾ ನ್ಯಾಯಾಲಯದಿಂದ ವಿಚಾರಣೆ ನಡೆಸುವ ಮೂಲಕ ಎಲ್ಲಾ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಲಾಗಿದೆ’ ಎಂದು ಬಲೂಚಿಸ್ತಾನ ಅಮೆರಿಕ ಗೆಳೆಯರ ಬಳಗದ ಸ್ಥಾಪಕ ಅಹಮರ್‌ ಮುಸ್ತಿಖಾನ್‌ ಆರೋಪಿಸಿದರು. ಈ ಸಂಘಟನೆಯು ‘ಚಪ್ಪಲಿ ಕಳ್ಳ ಪಾಕಿಸ್ತಾನ’ ಎಂಬ ವಿನೂತನ ಕಾರ್ಯಕ್ರಮವನ್ನು ಸಹ ಇತ್ತೀಚೆಗೆ ಆಯೋಜಿಸಿತ್ತು.

‘ಜಾಧವ್‌ ತಾಯಿ ಮತ್ತು ಪತ್ನಿಯ ಚಪ್ಪಲಿ, ಮಂಗಳಸೂತ್ರ, ಬಿಂದಿ ತೆಗೆಸುವ ಮೂಲಕ ಪಾಕ್ ಅಧಿಕಾರಿಗಳು ಹಿಂದೂ ಮಹಿಳೆಯರ ಧಾರ್ಮಿಕ ನಂಬಿಕೆಗೆ ಅವಮಾನ ಮಾಡಿದ್ದಾರೆ’ ಎಂದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಧನಂಜಯ್‌ ಶೆವಿಲ್ಕರ್‌ ಖಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry