ಕರಾವಳಿ ಕರ್ನಾಟಕದಲ್ಲಿ ಸಮಸ್ಯೆ: ಹೈಕೋರ್ಟ್‌ ಆತಂಕ

7

ಕರಾವಳಿ ಕರ್ನಾಟಕದಲ್ಲಿ ಸಮಸ್ಯೆ: ಹೈಕೋರ್ಟ್‌ ಆತಂಕ

Published:
Updated:

ಬೆಂಗಳೂರು: ‘ಸದ್ಯದ ಸಂದರ್ಭದಲ್ಲಿ ಕರಾವಳಿ ಕರ್ನಾಟಕದ ಜನರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ಹೈಕೋರ್ಟ್‌ ಆತಂಕ ವ್ಯಕ್ತಪಡಿಸಿದೆ.

‘ಟೆಕಿ ಕುಮಾರ್ ಅಭಿಜಿತ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಕೋರಿ ಕುಮಾರ್ ಅಭಿಜಿತ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬೋಪಣ್ಣ ಮೌಖಿಕಾಗಿ ರಾಜ್ಯ ಪೊಲೀಸರಿಗೆ ಕಿವಿಮಾತು ಹೇಳಿದರಲ್ಲದೆ, ‘ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಇನ್ನೂ ಪತ್ತೆ ಹಚ್ಚದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿನ ಕೆಲವು ಸಂದರ್ಭಗಳನ್ನು ಗಮನಿಸಿದರೆ ಪೊಲೀಸರು ಜನರಲ್ಲಿ ವಿಶ್ವಾಸ ತುಂಬುವ ಜರೂರತ್ತಿದೆ’ ಎಂದರು.

‘ಟೆಕಿ ಕುಮಾರ್ ಅಭಿಜಿತ್ ನಾಪತ್ತೆಯಾಗಿರುವುದು ಮತ್ತು ಈ ಕುರಿತಂತೆ ಅವರ ಕುಟುಂಬ ಅನುಭವಿಸುತ್ತಿರುವ ನೋವಿನ ಬಗ್ಗೆ ಅನುಕಂಪ ಇದೆ.

ಆದರೆ, ಭಾರತದಂತಹ ಜನಸಂಖ್ಯೆ ತುಂಬಿ ತುಳುಕುತ್ತಿರುವ ದೊಡ್ಡ ದೇಶದಲ್ಲಿ ಈ ರೀತಿಯ ಅಪರಾಧ ಪ್ರಕರಣಗಳನ್ನೆಲ್ಲಾ ಸಿಬಿಐನಿಂದಲೇ ತನಿಖೆ ನಡೆಸಬೇಕು ಎಂದು ಕೇಳುವುದು ಸಮಂಜಸವಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎ.ಜಿ.ಶಿವಣ್ಣ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಮಹತ್ವದ ಸುಳಿವು ಲಭ್ಯವಾಗಿವೆ’ ಎಂದು  ನ್ಯಾಯಪೀಠಕ್ಕೆ ವಿವರಿಸಿದರು.

‘ಮುಂದಿನ ವಿಚಾರಣೆ ವೇಳೆಗೆ ತನಿಖೆಯ ಪ್ರಗತಿ ವರದಿ ಸಲ್ಲಿಸಿ’ ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿದೆ.

‘ನನ್ನ ಮಗ ನಾಪತ್ತೆಯಾಗಿರುವ ಬಗ್ಗೆ ವೈಟ್‍ಫೀಲ್ಡ್ ಪೊಲೀಸ್ ಠಾಣೆಯಲ್ಲಿ 2017ರ ಡಿ.20 ಹಾಗೂ 29ರಂದು ಎರಡು ಎಫ್‍ಐಆರ್‍ ದಾಖಲಿಸಲಾಗಿದೆ. ಆದರೂ ಯಾವುದೇ ಸುಳಿವು ಲಭ್ಯವಾಗಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

ಬ್ರಿಟಿಷ್ ಟೆಲಿಕಾಂ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಕುಮಾರ್ ಅಭಿಜಿತ್ ಡಿ.18ರ ಸಂಜೆ 6.30ರಿಂದ ನಾಪತ್ತೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry