ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಹುಮಹಡಿ ಕಟ್ಟಡಗಳು ಅತಿ ಅಪಾಯಕಾರಿ!

ಅಪಾಯದಲ್ಲಿರುವ 70 ಕಟ್ಟಡಗಳ ಗುರುತು
Last Updated 8 ಜನವರಿ 2018, 20:01 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಹುಮಹಡಿ ಕಟ್ಟಡಗಳು ನೋಡಲಷ್ಟೇ ಚೆಂದ. ಬೆಂಕಿ ಅವಘಡ ಸಂಭವಿಸಿದರಂತೂ ಅಪಾಯ ಕಟ್ಟಿಟ್ಟ ಬುತ್ತಿ. ಒಳಗೆ ಹೋದವರು, ಅವಘಡದ ವೇಳೆ ಹೊರಗೆ ಬರುವುದು ಅಷ್ಟು ಸುಲಭವಲ್ಲ.

ಈ ಕಟ್ಟಡಗಳ ವಾಸ್ತವ ಕಂಡು ಸ್ವತಃ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳೇ ಹೌಹಾರಿದ್ದಾರೆ.

ಅತೀ ಅಪಾಯ ಎದುರಿಸುತ್ತಿರುವ ಇಂಥ 12 ಬಹುಮಹಡಿ ಕಟ್ಟಡಗಳನ್ನು ಇಲಾಖೆ ಅಧಿಕಾರಿಗಳು ಗುರುತಿಸಿದ್ದಾರೆ. ಈ ಕಟ್ಟಡಗಳಿಗೆ ಎಚ್ಚರಿಕೆಯ ನೋಟಿಸ್‌ ನೀಡಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು 15 ದಿನ ಅವಕಾಶ ನೀಡಿದ್ದಾರೆ.

ಈ ಕಟ್ಟಡಗಳಲ್ಲಿ ಪಬ್‌, ಬಾರ್‌ ಹಾಗೂ ರೆಸ್ಟೊರೆಂಟ್‌ ಮತ್ತು ರೂಫ್‌ ಟಾಪ್‌ ಹೋಟೆಲ್‌ಗಳು ವಹಿವಾಟು ನಡೆಸುತ್ತಿವೆ. ವಿದ್ಯುದ್ದೀಪ, ಬಣ್ಣದ ಬರಹ, ಚಿತ್ರಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಇಲ್ಲಿನ ವ್ಯಾಪಾರಿಗಳು, ಅವರ ಸುರಕ್ಷತೆಗೆ ಮಾತ್ರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ.

ಈ ಕಟ್ಟಡಗಳಲ್ಲೇನಾದರೂ ಸಮಸ್ಯೆಯಾದರೆ, ಗ್ರಾಹಕರು ಸುರಕ್ಷಿತವಾಗಿ ಹೊರಗೆ ಬರುತ್ತಾರೆ ಎಂಬ ನಂಬಿಕೆ ಇಲ್ಲ ಎಂಬ ಅಂಶ ಅಧಿಕಾರಿಗಳ ವರದಿಯಲ್ಲಿದೆ.

ಇತ್ತೀಚೆಗೆ ಮುಂಬೈನ ಕಮಲಾ ಮಿಲ್ಸ್‌ ಕಾಂಪೌಂಡ್‌ ಪ್ರದೇಶದ ಕಟ್ಟಡದಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ 14 ಮಂದಿ ಮೃತಪಟ್ಟಿದ್ದರು. ಕಟ್ಟಡದಲ್ಲಿ ಸುರಕ್ಷತಾ ಕ್ರಮಗಳಿಲ್ಲದಿರುವುದು ಈ ಅವಘಡಕ್ಕೆ ಕಾರಣ ಎಂಬ ಅಂಶ ಜಗಜ್ಜಾಹೀರಾಯಿತು. ಅಂಥ ಘಟನೆ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಸಂಭವಿಸಬಾರದೆಂಬ ಕಾರಣಕ್ಕೆ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು, ಅಪಾಯಕಾರಿ ಕಟ್ಟಡಗಳನ್ನು ಗುರುತಿಸುವ ಕೆಲಸ ಆರಂಭಿಸಿದ್ದಾರೆ.

ಅಪಾಯದಲ್ಲಿ 70 ಕಟ್ಟಡ: ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ 10ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದೆ. ಅದರ ಸದಸ್ಯರು ಇಂದಿರಾನಗರ, ಕೋರಮಂಗಲ, ಜೆ.ಪಿ.ನಗರ, ವೈಟ್‌ಫೀಲ್ಡ್‌, ಮಾರತಹಳ್ಳಿ, ದೊಮ್ಮಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟಡಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಅತೀ ಅಪಾಯಕಾರಿ ಹಾಗೂ ಅಪಾಯಕಾರಿ ಎಂಬ ಎರಡು ವಿಧದಲ್ಲಿ ಕಟ್ಟಡಗಳನ್ನು ಗುರುತು ಮಾಡಿದ್ದಾರೆ. ಪ್ರತಿಯೊಂದು ಕಟ್ಟಡದ ಬಗ್ಗೆಯೂ ಪ್ರತ್ಯೇಕ ವರದಿ ಸಿದ್ಧಪಡಿಸಿ, ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಈಗಾಗಲೇ ಆ 70 ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

‘ಒಂದು ಸುತ್ತಿನ ಪರಿಶೀಲನೆ ನಡೆಸಿ ನೋಟಿಸ್‌ ಕೊಟ್ಟಿದ್ದೇವೆ. ಈ ಕಟ್ಟಡಗಳನ್ನು ಇನ್ನೊಮ್ಮೆ ಪರಿಶೀಲನೆ ನಡೆಸಲಿದ್ದೇವೆ. ಆ ಸಂದರ್ಭದಲ್ಲೂ ನಿಯಮ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಇಲಾಖೆ ನಿರ್ದೇಶಕ ಕೆ.ಯು.ರಮೇಶ್‌ ತಿಳಿಸಿದರು.

‘ಕರ್ನಾಟಕ ಅಗ್ನಿಶಾಮಕ ಸೇವೆಗಳ ಕಾಯ್ದೆ–1964 ಹಾಗೂ ರಾಷ್ಟ್ರೀಯ ಕಟ್ಟಡ ನೀತಿಯಲ್ಲಿ (ಎನ್‌ಬಿಸಿ) ಕಟ್ಟಡಗಳ ಸುರಕ್ಷತಾ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಸುರಕ್ಷತಾ ಕ್ರಮಗಳನ್ನು ಈ ಬಹುಮಹಡಿ ಕಟ್ಟಡಗಳಲ್ಲಿ ಪಾಲಿಸಲಾಗಿಲ್ಲ. ಒಂದೊಂದು ಕಟ್ಟಡದಲ್ಲಿ ಒಂದೊಂದು ರೀತಿಯ ನಿಯಮ ಉಲ್ಲಂಘನೆ ಕಂಡು ಬಂದಿದೆ’ ಎಂದರು.

ನಿರಾಕ್ಷೇಪಣಾ ಪತ್ರವಿದ್ದರೂ ಅಕ್ರಮ: ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡ (1+4) ಹಾಗೂ 15 ಮೀಟರ್‌ಗಿಂತ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮೇಲಿದೆ. ಹೊಸ ಕಟ್ಟಡ ನಿರ್ಮಿಸುವಾಗ ಮಾಲೀಕರು ಸಲ್ಲಿಸುವ ಅರ್ಜಿ ಪರಿಶೀಲಿಸುವ ಅಧಿಕಾರಿಗಳು, ನಿರಾಕ್ಷೇಪಣಾ ಪತ್ರ ನೀಡುತ್ತಾರೆ.

ಈಗ ಪತ್ತೆ ಮಾಡಿರುವ ಅಪಾಯಕಾರಿ ಕಟ್ಟಡಗಳ ಪೈಕಿ ಶೇ 80ರಷ್ಟು ಕಟ್ಟಡಗಳಿಗೆ ನಿರಾಕ್ಷೇಪಣಾ ಪತ್ರಗಳಿವೆ. ಆರಂಭದಲ್ಲಿ ಈ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳಿರುವ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದರು. ಕಟ್ಟಡ ನಿರ್ಮಿಸಿದ ಬಳಿಕ ವಾಣಿಜ್ಯ ಚಟುವಟಿಕೆಗೆ ತಕ್ಕಂತೆ ಅದರ ಸ್ವರೂಪವನ್ನೇ ಬದಲಾಯಿಸಲಾಗಿದೆ.

12 ಸಾವಿರ ಕಟ್ಟಡಗಳ ವಿರುದ್ಧ ಕ್ರಮವಿಲ್ಲ: ರಾಜ್ಯದಾದ್ಯಂತ ಒಟ್ಟು 12 ಸಾವಿರ ಅಪಾಯಕಾರಿ ಕಟ್ಟಡಗಳಿರುವುದನ್ನು ಇಲಾಖೆಯ ಅಧಿಕಾರಿಗಳು 2010ರಲ್ಲೇ ಪತ್ತೆ ಹಚ್ಚಿದ್ದರು. ಅವುಗಳಿಗೆ ನೀಡಿದ್ದ ವಿದ್ಯುತ್‌, ನೀರಿನ ಸಂಪರ್ಕ, ವಾಣಿಜ್ಯ ಚಟುವಟಿಕೆ ಪರವಾನಗಿ ರದ್ದುಪಡಿಸುವಂತೆ ಶಿಫಾರಸು ಮಾಡಿದ್ದರು. ಆದರೆ, ಇದುವರೆಗೂ ಆ ಕಟ್ಟಡಗಳ ಮಾಲೀಕರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ.

***

ಅಪಾಯಕಾರಿ ಕಟ್ಟಡದಲ್ಲಿರುವ ಪಬ್‌ಗಳು

ಇಂದಿರಾನಗರ: ‘ವೇಪರ್‌ ಪಬ್‌’, ‘ಪೆಕಾಸ್ ಪಬ್’, ‘ಹಮ್ಮಿಂಗ್ ಟ್ರಿ’, ‘ಶೆರ್ಲಾಕ್ ಪಬ್‌’, ‘ಟಿಪ್ಸಿ ಬುಲ್’ ಹಾಗೂ ‘ಎಸ್ಕೇಪ್ ಹೋಟೆಲ್ ಆ್ಯಂಡ್‌ ಸ್ಪಾ’

ಕೋರಮಂಗಲ: ‘ಬಾರ್‌ಬೆಕ್‌ ನ್ಯಾಷನಲ್‌’, ‘ಬಾಸಿಲ್ ಮೊನಾರ್ಕ್‌’, ‘ತುಬೆ ಬಾರ್’, ‘ಆರ್‌.ಎನ್‌ ಸ್ಕ್ವೇರ್’, ‘ಬಾರ್ಲೆಜ್‌ ಬಾರ್‌’ ಹಾಗೂ ‘ಇಕ್ವಿನಾಕ್ಸ್‌ ಇಂದ್ರಪ್ರಸ್ಥ’.

***

ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು

* ರಸ್ತೆಗೂ ಬಹುಮಹಡಿ ಕಟ್ಟಡಕ್ಕೂ 12 ಮೀಟರ್ ಅಂತರವಿರಬೇಕು

* ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಸಂಚರಿಸುವಷ್ಟು ಜಾಗವಿರಬೇಕು

* ಚಾವಣಿಯಲ್ಲಿ ಮತ್ತು ನೆಲ ಅಂತಸ್ತಿನಲ್ಲಿ ನೀರಿನ ಟ್ಯಾಂಕ್ ಇರಬೇಕು

* ನೆಲ ಅಂತಸ್ತು ವಾಹನ ನಿಲುಗಡೆಗೆ ಮಾತ್ರ ಬಳಕೆಯಾಗಬೇಕು

* ಕಟ್ಟಡದಲ್ಲಿ ಕಡ್ಡಾಯವಾಗಿ ಒಬ್ಬ ಅಗ್ನಿ ಸುರಕ್ಷತಾ ಅಧಿಕಾರಿ ಇರಬೇಕು

* ನೀರು ಕೊಳವೆ, ಎಲೆಕ್ಟ್ರಿಕ್ ಅಲಾರಾಂ ಹಾಗೂ ಅಗ್ನಿ ನಂದಕ ಸಲಕರಣೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು

* ಕಟ್ಟಡದಲ್ಲಿ ಕನಿಷ್ಠ 2 ಕಡೆ ಮೆಟ್ಟಿಲು, ಲಿಫ್ಟ್ ಇರುವುದು ಕಡ್ಡಾಯ

* ಅಗ್ನಿ ಸುರಕ್ಷತೆ ಬಗ್ಗೆ ಸಿಬ್ಬಂದಿಗೆ ಆಗಾಗ ಪ್ರಾತ್ಯಕ್ಷಿಕೆ ನೀಡಬೇಕು

* ನಿರ್ಗಮನ ದ್ವಾರಗಳು ಕತ್ತಲಲ್ಲೂ ಗೋಚರವಾಗುವಂತೆ ಇರಬೇಕು

(ಆಧಾರ: ರಾಷ್ಟ್ರೀಯ ಕಟ್ಟಡ ನೀತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT