ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ: ಮಹಿಳೆಯರಿಗೆ ಐಐಎಂಬಿ ಉತ್ತೇಜನ

Last Updated 8 ಜನವರಿ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮ ಕ್ಷೇತ್ರದಲ್ಲಿ ಸ್ವಂತ ಕಂಪನಿ ಸ್ಥಾಪಿಸಬೇಕೆಂಬ ಮಹದಾಸೆ ಹೊಂದಿರುವ ಮಹಿಳೆಯರಿಗೆ ನೆರವಾಗಲು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂಬಿ) ಮುಂದಾಗಿದೆ.

ಉದ್ಯಮ ಆರಂಭಿಸಲು ಸರಿಯಾದ ಮಾರ್ಗದರ್ಶನ ಸಿಗದೆ ಗೊಂದಲದಲ್ಲಿರುವ ಮಹಿಳೆಯರಿಗೆ ತರಬೇತಿ ನೀಡುವುದರ ಜೊತೆಗೆ ಹಣಕಾಸಿನ ನೆರವನ್ನೂ ಐಐಎಂಬಿ ಒದಗಿಸಲಿದೆ. ಈ ಕಾರ್ಯಕ್ರಮಕ್ಕೆ ಗೋಲ್ಡ್‌ಮ್ಯಾನ್ ಸ್ಯಾಕ್ಸ್ ಕಂಪನಿ ಹಾಗೂ ಕೇಂದ್ರ ಸರ್ಕಾರ ಆರ್ಥಿಕ ನೆರವು ಸಹಯೋಗ ಒದಗಿಸಲಿವೆ.

ಐಐಎಂಬಿಯ ಎನ್‍.ಎಸ್.ರಾಘವನ್ ನವೋದ್ಯಮ ತರಬೇತಿ ಕೇಂದ್ರದ (ಎನ್‍ಎಸ್‍ಆರ್‍ಸಿಇಎಲ್) ಮೂಲಕ  ರೂಪಿಸಿರುವ 2018ರ ‘ಮಹಿಳಾ ನವೋದ್ಯಮ’ ಕಾರ್ಯಕ್ರಮಕ್ಕೆ (ಡಬ್ಲ್ಯುಎಸ್‌ಪಿ) ಇಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ಐಐಎಂಬಿಯ ನಿರ್ದೇಶಕ ಪ್ರೊ.ಜಿ.ರಘುರಾಮ್, ‘ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಪರಿಣತಿ ಪಡೆಯಲು ಈ ಕಾರ್ಯಕ್ರಮ ನೆರವಾಗಲಿದೆ’ ಎಂದರು.

ಸಂಸ್ಥೆ ವತಿಯಿಂದ ಕಳೆದ ವರ್ಷ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಇದರಿಂದ 15 ಮಂದಿ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಅವರೆಲ್ಲರೂ ಸ್ವಂತ ಉದ್ಯಮ ನಡೆಸುತ್ತಿದ್ದಾರೆ ಎಂದರು.

ಹೆಮ್ಯಾಥ್ ಕಂಪನಿಯ ಸಹ ಸಂಸ್ಥಾಪಕಿ ನಿರ್ಮಲಾ ಶಂಕರನ್, ‘ಬಹುತೇಕ ಮಹಿಳೆಯರಲ್ಲಿ ಸ್ವಯಂಪ್ರೇರಣೆ ಕಡಿಮೆ ಇದೆ. ಹೀಗಾಗಿ, ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವರು ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಮಹಿಳೆಯರು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು’ ಎಂದರು.

‘ಗುರಿ ಸಾಧನೆಯಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿ. ನನ್ನ ಜೀವನದಲ್ಲೂ ಇದೇ ನಿಯಮ ಪಾಲಿಸಿದ್ದೇನೆ’ ಎಂದು ಹುರಿದುಂಬಿಸಿದರು.

ಎನ್‍ಎಸ್‍ಆರ್‍ಸಿಇಎಲ್‌ನ ನವೋದ್ಯಮ ಇಕೊಸಿಸ್ಟಮ್‌ನ ಅಧ್ಯಕ್ಷ ಪ್ರೊ.ಸುರೇಶ್ ಭಾಗವತುಲ, ‘ಈ ಕಾರ್ಯಕ್ರಮವನ್ನು ಈ ಬಾರಿ ದೇಶದಾದ್ಯಂತ ವಿಸ್ತರಿಸಲಾಗಿದೆ. ತಂತ್ರಜ್ಞಾನ ಆಧಾರಿತ ಹಾಗೂ ವಾಸ್ತವ ತರಬೇತಿಯನ್ನು ಅಭ್ಯರ್ಥಿಗಳಿಗೆ ನೀಡುತ್ತೇವೆ’ ಎಂದರು.

ರಾಷ್ಟ್ರೀಯ ವಿಜ್ಞಾನ ಹಾಗೂ ತಂತ್ರಜ್ಞಾನ ನವೋದ್ಯಮ ಅಭಿವೃದ್ಧಿ ಮಂಡಳಿ ಮುಖ್ಯಸ್ಥೆ ಡಾ.ಅನಿತಾ ಗುಪ್ತಾ, ‘ಈ ಕಾರ್ಯಕ್ರಮ ಮಹಿಳೆಯರಿಗೆ ಸರಿಯಾದ ಉದ್ಯಮ ವಾತಾವರಣ ಸೃಷ್ಟಿಸಲು ನೆರವಾಗಲಿದೆ. ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪ್ರತಿಭೆ ಅನಾವರಣಕ್ಕೂ ಸಹಕಾರಿಯಾಗಲಿದೆ’ ಎಂದರು.

ಉದ್ಯಮಿಗಳಾಗುವ ಅವಕಾಶಗಳನ್ನು ಮಹಿಳೆಯರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಗೋಲ್ಡ್‌ಮ್ಯಾನ್ ಸ್ಯಾಕ್ಸ್‌ನ (ಬೆಂಗಳೂರು) ಮುಖ್ಯ ಆಡಳಿತಾಧಿಕಾರಿ ರವಿ ಕೃಷ್ಣನ್ ಹೇಳಿದರು.

ನವೋದ್ಯಮ ಸ್ಥಾಪಿಸಲು ಇಚ್ಛಿಸುವವರು wsp.nsrcel.org ನಲ್ಲಿ ಅರ್ಜಿ ಸಲ್ಲಿಸಬೇಕು. ಆ ಬಳಿಕ ತಮ್ಮ ಉದ್ದೇಶಿತ ನವೋದ್ಯಮದ ಬಗ್ಗೆ ವಿವರ ನೀಡಬೇಕು. ಇದಕ್ಕೆ ಯಾವುದೇ ಶುಲ್ಕವಿಲ್ಲ.

‘ಮೊದಲು ಅರ್ಜಿ ಸಲ್ಲಿಸಿದ 12,000 ಮಹಿಳೆಯರಿಗೆ ಎನ್‍ಎಸ್‍ಆರ್‍ಸಿಇಎಲ್ ಮೂಲಕ ಐದು ವಾರಗಳ ‘ಡು ಯುವರ್ ವೆಂಚರ್’ ಆನ್‌ಲೈನ್ ತರಬೇತಿ ನೀಡಲಾಗುತ್ತದೆ. ಈ ಪೈಕಿ 300 ಮಂದಿಯನ್ನು ಮೊದಲ ಹಂತದ ತರಬೇತಿ ಶಿಬಿರಕ್ಕೆ ಆಯ್ಕೆ ಮಾಡುತ್ತೇವೆ. ಅವರಲ್ಲಿ 100 ಮಂದಿಯನ್ನು ಅಂತಿಮ ಹಂತದ ಶಿಬಿರಕ್ಕೆ ಆರಿಸಲಾಗುತ್ತದೆ. ಇವರಿಗೆ ಸಮೀಪದ ಪಾಲುದಾರ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತದೆ’ ಎಂದು ರಘುರಾಮ್‌ ತಿಳಿಸಿದರು.

ಯೋಜನೆ ಸಿದ್ಧಪಡಿಸುವುದು, ವೆಚ್ಚ ಹಾಗೂ ಬೆಲೆ ನಿಗದಿ, ಮಾರಾಟ ಮತ್ತು ಮಾರುಕಟ್ಟೆ, ಸಮಾಲೋಚನೆಯ ತಂತ್ರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಪ್ರತಿಯೊಬ್ಬರಿಗೂ ಒಂದು ವರ್ಷದ ವರೆಗೆ ತಿಂಗಳಿಗೆ ₹30,000 ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT