ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಘರ್ಷಣೆ: ಪೊಲೀಸರು, ಕೈದಿಗಳಿಗೆ ಗಾಯ

Last Updated 9 ಜನವರಿ 2018, 5:07 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಸಂಜೆ ಹಿಂದೂ ಮತ್ತು ಮುಸ್ಲಿಂ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ ಬಂದಿಖಾನೆ ಸಿಬ್ಬಂದಿ, ಪೊಲೀಸರ ಮೇಲೂ ಹಲ್ಲೆ ಮಾಡಲಾಗಿದೆ. ಐವರು ಪೊಲೀಸರು, ಕೆಲವು ಕೈದಿಗಳು ಗಾಯಗೊಂಡಿದ್ದಾರೆ.

ಸಂಜೆ 6 ಗಂಟೆ ಸುಮಾರಿಗೆ ಎರಡೂ ಬ್ಲಾಕ್‌ಗಳಲ್ಲಿದ್ದ ಕೆಲವು ಕೈದಿಗಳನ್ನು ಸಂದರ್ಶಕರ ಭೇಟಿಗಾಗಿ ಬಿಡಲಾಗಿತ್ತು. ಕಲ್ಲಡ್ಕದ ಮಿಥುನ್‌ ಮತ್ತು ಶರತ್‌ ಮಡಿವಾಳ ಕೊಲೆ ಪ್ರಕರಣದ ಆರೋಪಿ ಸಾದಿಕ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಅದು ಹಿಂದೂ ಮತ್ತು ಮುಸ್ಲಿಂ ಕೈದಿಗಳ ನಡುವೆ ಘರ್ಷಣೆ ಆರಂಭವಾಗಿದೆ. ಬಂದಿಖಾನೆ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದ್ದಾರೆ. ಅಷ್ಟರೊಳಗೆ ಕೆಲವರು ಮುಸ್ಲಿಂ ಕೈದಿಗಳಿದ್ದ ಬ್ಯಾರಕ್‌ನ ಪಹರೆ ಸಿಬ್ಬಂದಿಯನ್ನು ಕೆಡವಿ ಬಾಗಿಲು ತೆರೆದಿದ್ದಾರೆ. ಆಗ 100ಕ್ಕೂ ಹೆಚ್ಚು ಕೈದಿಗಳು ಹೊರ ಬಂದಿದ್ದಾರೆ ಎಂದು ಗೊತ್ತಾಗಿದೆ.

ಕೈದಿಗಳು ಕೈಗೆ ಸಿಕ್ಕ ವಸ್ತುಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಊಟಕ್ಕಾಗಿ ಸಿದ್ಧಪಡಿಸಿದ್ದ ಸಾಂಬಾರನ್ನೂ ಎರಚಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರ ಮೇಲೆ ಖಾರದಪುಡಿ ಎರಚಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಬಂದಿಖಾನೆ ಅಧಿಕಾರಿಯೊಬ್ಬರ ಕೈ ಮೂಳೆ ಮುರಿದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬರ್ಕೆ ಠಾಣೆ ಪೊಲೀಸರು, ರಾಜ್ಯ ಮೀಸಲು ಪೊಲೀಸ್‌ ಪಡೆಯ ತುಕಡಿಗಳನ್ನು ಕರೆಸಿಕೊಂಡರು. ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ಸ್ಥಳಕ್ಕೆ ಬಂದು ಕಾರಾಗೃಹದೊಳಕ್ಕೆ ಪರಿಸ್ಥಿತಿ ನಿಯಂತ್ರಣ ಕಾರ್ಯಾಚರಣೆ ಆರಂಭಿಸಿದರು. ಕೈದಿಗಳನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಲಾಯಿತು. ಕಾರ್ಯಾಚರಣೆ ವೇಳೆ ಡಿಸಿಪಿಯವರ ಹಣೆಯ ಬಲಭಾಗಕ್ಕೆ ಪೆಟ್ಟಾಗಿದೆ.

ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಘಟನೆಯಲ್ಲಿ ಐವರು ಬಂದಿಖಾನೆ ಸಿಬ್ಬಂದಿ ಮತ್ತು ಪೊಲೀಸರಿಗೆ ಗಾಯಗಳಾಗಿವೆ. ಹಲವು ಕೈದಿಗಳು ಗಾಯಗೊಂಡಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಅವರನ್ನು ಚಿಕಿತ್ಸೆಗಾಗಿ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸ್‌ ಸಿಬ್ಬಂದಿ ಯೋಗೀಶ್, ಜೈಲರ್‍ಗಳಾದ ಸಿದ್ಧರಾಮ್ ಪಾಟೀಲ್, ಕೆ.ಬಿ. ರಹಿಮಾನಿ, ಕೈದಿಗಳಾದ ಷರೀಫ್, ಸೈಯದ್‌ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಸೈಯದ್‍ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರ್ಯಾಚರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿಸಿಪಿ ಹನುಮಂತರಾಯ, ‘ಘಟನೆಯಲ್ಲಿ ಐವರು ಪೊಲೀಸರು ಮತ್ತು ಬಂದಿಖಾನೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಲವು ಕೈದಿಗಳು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಜೈಲಿನ ಆಸ್ತಿಗೆ ಹೆಚ್ಚಿನ ಹಾನಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT