ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 10ಕ್ಕೆ ಕೆ.ಜಿ. ಗೆಡ್ಡೆ ಕೋಸು, ಮೂಲಂಗಿ, ಕುಂಬಳಕಾಯಿ

Last Updated 9 ಜನವರಿ 2018, 5:14 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ತಿಂಗಳು ಕೆ.ಜಿ. ಗೆಡ್ಡೆಕೋಸಿಗೆ ಚಿನ್ನದ ಬೆಲೆ ಬಂದಿತ್ತು. ಬೆಲೆ ಕೇಳಿದ ಗ್ರಾಹಕರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಆದರೆ ಈ ವಾರ ಗೆಡ್ಡೆಕೋಸಿನ ಬೆಲೆ ಪಾತಾಳಕ್ಕಿಳಿದಿದೆ. ಕೆ.ಜಿ.ಗೆ ಕೇವಲ ₹ 10!

ಹೌದು, ಪೌಷ್ಟಿಕಾಂಶದ ತರಕಾರಿ ತಿನ್ನುವವರಿಗೆ ಇದು ಸಕಾಲ. ₹ 100ಕ್ಕೆ ಬ್ಯಾಗ್‌ ತುಂಬೆಲ್ಲಾ ತರಕಾರಿ ತುಂಬಿಕೊಂಡು ಹೋಗಬಹುದು. ₹ 10ಕ್ಕೆ ಕೆ.ಜಿ. ಗೆಡ್ಡೆ ಕೋಸು ಸೇರಿ ಸೌತೆಕಾಯಿ, ಕುಂಬಳಕಾಯಿ ಮಾರಾಟವಾಗುತ್ತಿದೆ. ಟೊಮೆಟೊ ಬೆಲೆ ಕಳೆದ ಮೂರು ವಾರಗಳಿಂದ ಸ್ಥಿರವಾಗಿದ್ದು ₹ 20ಕ್ಕೆ ಎರಡೂವರೆ ಕೆ.ಜಿ. ಮಾರಾಟವಾಗುತ್ತಿದೆ. ಭಜಿ ಮೆಣಸಿನಕಾಯಿ, ಬೀನ್ಸ್‌, ತೊಂಡೆಕಾಯಿ, ತೊಗರಿ ಕಾಯಿ, ಬೆಂಡೆಕಾಯಿ, ಬದನೆಕಾಯಿ, ಸೀಮೆ ಬದನೆ, ಎಲೆ ಕೋಸು ಕೆ.ಜಿ. ₹ 20ಕ್ಕೆ ಸಿಗುತ್ತಿವೆ. ಹಸಿ ಮೆಣಸಿನ ಕಾಯಿ, ಬೀಟ್‌ರೂಟ್‌, ಹಾಗಲಕಾಯಿ ₹ 30ಕ್ಕೆ ಮಾರಾಟವಾಗುತ್ತಿವೆ.

ಹೂಕೋಸು ಒಂದಕ್ಕೆ ₹ 30 ಇದೆ. ಕ್ಯಾರೆಟ್‌, ದೊಣ ಮೆಣಸಿನಕಾಯಿ, ಚಪ್ಪರದ ಅವರೆಕಾಯಿ ಕೆ.ಜಿ.ಗೆ ₹ 40 ಇದೆ. ಸುವರ್ಣ ಗೆಡ್ಡೆ ಕೆ.ಜಿ.ಗೆ ₹ 40 ಇದೆ. ಆಲೂಗಡ್ಗೆ ₹ 16–20ಕ್ಕೆ ಮಾರಾಟವಾಗುತ್ತಿದೆ. ನುಗ್ಗೆಕಾಯಿ ಬೆಲೆ ಹೆಚ್ಚಳವಾಗಿದ್ದು ಕೆ.ಜಿಗೆ ₹ 180ರಿಂದ ₹ 200 ಇದೆ. ‘ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆಯುವ ತರಕಾರಿ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದೆ. ಚಳಿಗಾಲವಾದ ಕಾರಣ ಇಬ್ಬನಿಯಲ್ಲೇ ಉತ್ತಮ ತರಕಾರಿ ಬೆಳೆ ಬರುತ್ತಿದೆ. ಪೂರೈಕೆ ಹೆಚ್ಚಾಗಿರುವ ಕಾರಣ ಬೆಲೆಯೂ ಕಡಿಮೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಹರ್ಷ ತಿಳಿಸಿದರು.

ಸ್ಥಿರವಾದ ಈರುಳ್ಳಿ ಬೆಲೆ: ಈರುಳ್ಳಿ ಬೆಲೆ ಕಳೆದ ಮೂರು ವಾರಗಳಿಂದ ಸ್ಥಿರವಾಗಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹ 60 ಇದೆ. ಸಾದಾರಣ ಗುಣಮಟ್ಟದ ಈರುಳ್ಳಿ ₹ 50ಕ್ಕೆ ಸಿಗುತ್ತಿದೆ. ಬೆಲೆ ಇನ್ನೂ ಹೆಚ್ಚಳವಾಗುತ್ತದೆ ಎಂದು ಆತಂಕಗೊಂಡಿದ್ದರು. ಆದರೆ ಬೇರೆ ರಾಜ್ಯಗಳಿಂದ ಮಾರುಕಟ್ಟೆಗೆ ಈರುಳ್ಳಿ ಬರುತ್ತಿರುವ ಕಾರಣ ಬೆಲೆ ನಿಯಂತ್ರಣದಲ್ಲಿ ಇದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ.

ಸೊಪ್ಪಿನ ಬೆಲೆಯಲ್ಲಿ ನಿಯಂತ್ರಣದಲ್ಲಿದ್ದು ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪು ₹ 5, ಫಾರಂ ಕೊತ್ತಂಬರಿ ಸೊಪ್ಪಿನ ಬೆಲೆ ₹ 10ಕ್ಕೆ ಮೂರು ಕಟ್ಟು ಸಿಗುತ್ತಿದೆ. ಕೀರೆಸೊಪ್ಪು ₹ 10ಕ್ಕೆ ಮೂರು ಕಂತೆ ಮಾರಾಟ ಮಾಡಲಾಗುತ್ತಿದೆ. ಕರಿಬೇವಿನ ಸೊಪ್ಪು ₹ 10, ಸಬ್ಬಸಿಗೆ, ಪಾಲಾಕ್‌ ಸೊಪ್ಪು, ಮೆಂಥೆ, ದಂಟಿನ ಸೊಪ್ಪಿನ ಬೆಲೆಯು ₹ 5ಕ್ಕೆ ಸಿಗುತ್ತಿದೆ.

ಸೇಬು, ದಾಳಿಂಬೆ ಬೆಲೆ ಹೆಚ್ಚಳ: ಕಳೆದ ವಾರದ ಬೆಲೆಗಿಂತ ಸೇಬು ಮತ್ತು ದಾಳಿಂಬೆ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಸೇಬು ₹ 120, ದಾಳಿಂಬೆ ₹ 80 ಇದೆ. ದ್ರಾಕ್ಷಿಯ ಬೆಲೆ ಕಳೆದ ವಾರಕ್ಕಿಂತ ಸ್ವಲ್ಪ ಕಡಿಮೆಯಾಗಿದ್ದು ₹ 80ಕ್ಕೆ ಮಾರಾಟವಾಗುತ್ತಿದೆ. ಮೋಸಂಬಿ ₹ 80, ಕಿತ್ತಳೆ ₹ 70, ಕಿವಿ ಹಣ್ಣು ಬಾಕ್ಸ್‌ಗೆ ₹ 70, ಏಲಕ್ಕಿ ಬಾಳೆ ಹಣ್ಣು ಕೆ.ಜಿ. ₹ 50, ಪಚ್ಚಬಾಳೆ ₹ 30, ಪಪ್ಪಾಯ ₹ 25, ಸಪೋಟಾ ₹ 60, ಕಪ್ಪು ದ್ರಾಕ್ಷಿ ₹ 120ಕ್ಕೆ ಮಾರಾಟವಾಗುತ್ತಿದೆ.

‘ಸ್ಥಳೀಯವಾಗಿ ಸಿಗುವ ದ್ರಾಕ್ಷಿಗೆ ಇದು ಸಕಾಲವಲ್ಲ. ಹೊರ ರಾಜ್ಯಗಳಿಂದ ದ್ರಾಕ್ಷಿ ಹಣ್ಣನ್ನು ತರಿಸಲಾಗುತ್ತಿದೆ. ಹೀಗಾಗಿ ದ್ರಾಕ್ಷಿ ಬೆಲೆಯಲ್ಲಿ ಕೊಂಚ ಜಾಸ್ತಿಯಾಗಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ’ ಎಂದು ಹಣ್ಣಿನ ವ್ಯಾಪಾರಿ ನಯಾಜ್‌ ಖಾನ್‌ ಹೇಳಿದರು.

ಹೂವಿನ ಬೆಲೆಯಲ್ಲಿ ಕಳೆದ ವಾರಕ್ಕಿಂತ ಸ್ವಲ್ಪ ಬೆಲೆ ತಗ್ಗಿದೆ. ಹೊಸ ವರ್ಷದ ಆರಂಭದಲ್ಲಿ ಬೆಲೆ ಹೆಚ್ಚಳವಾಗಿತ್ತು. ಮಾರು ಮಲ್ಲಿಗೆ ₹ 60, ಕಾಕಡ ₹ 20, ಸೇವಂತಿಗೆ ₹ 20, ಗುಲಾಬಿ ಒಂದಕ್ಕೆ ₹ 10, ಸಣ್ಣ ಗುಲಾಬಿ ಕೆ.ಜಿ.ಗೆ ₹ 180, ಹೂವಿನ ಹಾರ ₹ 30ರಿಂದ ₹ 100ಕ್ಕೆ ಮಾರಾಟವಾಗುತ್ತಿದೆ. ದೊಡ್ಡ ಹಾರ ₹ 350ಕ್ಕೆ ಸಿಗುತ್ತಿದೆ.

ಅವರೆಕಾಯಿಯ ಆಕರ್ಷಣೆ

ನಗರದ ತರಕಾರಿ ಮಾರುಕಟ್ಟೆಯಲ್ಲಿ ಅವರೆಕಾಯಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಉತ್ತಮ ಬೆಳೆ ಬಂದಿರುವ ಕಾರಣ ಬೆಲೆಯೂ ಕೈಗೆಟುವಂತಿದೆ. ಕೆ.ಜಿ.ಗೆ ₹ 30ಕ್ಕೆ ಮಾರಾಟವಾಗುತ್ತಿದೆ. ತರಕಾರಿ ಮಾರುಕಟ್ಟೆ ಮಾತ್ರವಲ್ಲದೆ ವಿವಿ ರಸ್ತೆ, ಆರ್‌ಪಿ ರಸ್ತೆ, ನೂರು ಅಡಿ ರಸ್ತೆಯಲ್ಲಿ ಹಳ್ಳಿಯಿಂದ ಬಂದ ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ರೈತರು ಕೆ.ಜಿಗೆ ₹ 25ಕ್ಕೆ ಮಾರುತ್ತಿದ್ದಾರೆ.

‘ಸಂಕ್ರಾಂತಿ ಹಬ್ಬದೊಳಗೆ ಅವರೆಕಾಯಿ ತಿಂದು ಮುಗಿಸಬೇಕು. ಹಬ್ಬದ ನಂತರ ಅವರೆಕಾಯಿ ಸುಗ್ಗಿ ಮುಗಿದು ಕಾಯಿಗೆ ಹುಳು ಬೀಳುತ್ತವೆ. ಹೀಗಾಗಿ ಜನರು ಹೆಚ್ಚೆಚ್ಚು ಅವರೆಕಾಯಿ ಕೊಳ್ಳುತ್ತಿದ್ದಾರೆ. 2 ಗಂಟೆಯಲ್ಲಿ 200 ಕೆ.ಜಿ ಅವರೆಕಾಯಿ ಮಾರಾಟ ಮಾಡಿದ್ದೇನೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT