ಸಿದ್ಧ ಬಿಡಿಭಾಗಗಳಿಂದ ಇಂದಿರಾ ಕ್ಯಾಂಟಿನ್‌ ನಿರ್ಮಾಣ

7

ಸಿದ್ಧ ಬಿಡಿಭಾಗಗಳಿಂದ ಇಂದಿರಾ ಕ್ಯಾಂಟಿನ್‌ ನಿರ್ಮಾಣ

Published:
Updated:
ಸಿದ್ಧ ಬಿಡಿಭಾಗಗಳಿಂದ ಇಂದಿರಾ ಕ್ಯಾಂಟಿನ್‌ ನಿರ್ಮಾಣ

ರಾಯಚೂರು: ಜಿಲ್ಲೆಯ ವಿವಿಧೆಡೆ ಫೆಬ್ರುವರಿಯಲ್ಲಿ ಇಂದಿರಾ ಕ್ಯಾಂಟಿನ್‌ ಆರಂಭಿಸಲು ಜಿಲ್ಲಾಡಳಿತವು ಕ್ರಮ ವಹಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಲಘುಬಗೆಯಿಂದ ಕೆಲಸ ಮಾಡಿಸಲಾಗುತ್ತಿದೆ.

ಈ ಮೊದಲು ಇಂದಿರಾ ಕ್ಯಾಂಟಿನ್‌ಗಾಗಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೆ ರಾಜ್ಯಮಟ್ಟದ ಅಧಿಕಾರಿಗಳು ಯೋಜನೆ ರೂಪಿಸಿದ್ದರು. ನೀಲನಕ್ಷೆ ಸಿದ್ಧಪಡಿಸಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌)ದ ಮೂಲಕ ಕೆಲಸ ಆರಂಭಿಸಲು ಜಿಲ್ಲಾಡಳಿತಕ್ಕೆ ಸೂಚನೆ ಕೂಡಾ ಕೊಟ್ಟಿದ್ದರು. ಆದರೆ, ನಿರ್ಮಾಣ ಜವಾಬ್ದಾರಿಯನ್ನು ಕೆಆರ್‌ಐಡಿಎಲ್‌ಗೆ ವಹಿಸುವುದು ಬೇಡ ಎಂದು ಜಿಲ್ಲಾಡಳಿತದಿಂದ ಪತ್ರ ರವಾನಿಸಲಾಗಿತ್ತು. ಅಂತಿಮವಾಗಿ ಬೆಂಗಳೂರಿನಿಂದಲೆ ಕಟ್ಟಡ ನಿರ್ಮಾಣದ ಸಿದ್ಧ ಬಿಡಿಭಾಗಗಳನ್ನು (ಪ್ರೀ ಫ್ಯಾಬ್ರಿಕೆಟೆಡ್‌ ಬಿಲ್ಡಿಂಗ್‌) ತರಿಸಿಕೊಳ್ಳುವುದಕ್ಕೆ ಒಪ್ಪಿಗೆ ಸಿಕ್ಕಿತು.

ಇದೀಗ ಬೆಂಗಳೂರಿನಿಂದ ಸಿದ್ಧ ಬಿಡಿಭಾಗಗಳು ರಾಯಚೂರಿಗೆ ಬಂದಿವೆ. ಈಗಾಗಲೇ ನಗರದ ಕೇಂದ್ರ ಬಸ್‌ ನಿಲ್ದಾಣದ ಎದುರು, ರೈಲ್ವೆ ನಿಲ್ದಾಣದ ದ್ವಾರದ ಎದುರು ಹಾಗೂ ಗಂಜ್‌ ಆವರಣದಲ್ಲಿ ಕ್ಯಾಂಟಿನ್‌ಗಾಗಿ ಜಾಗಗಳನ್ನು ಗುರುತಿಸಲಾಗಿದೆ. ಮೂರು ಕಡೆಗೂ ಇಂದಿರಾ ಕ್ಯಾಂಟಿನ್‌ ನಿರ್ಮಾಣಕ್ಕೆ ಬಿಡಿಭಾಗಗಳನ್ನು ಹೊಂದಿಸುವ ಕೆಲಸ ನಡೆಯುತ್ತಿದೆ. ಬಿಡಿಭಾಗಗಳನ್ನು ಹೊಂದಿಸುವುದಕ್ಕೆ ಭಾರಿ ಸಾಮರ್ಥ್ಯದ ಕ್ರೇನ್‌ ಬಂದು ನಿಂತಿದೆ.

ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದೊಂದು ಸೇರಿ ಒಟ್ಟು ಏಳು ಕ್ಯಾಂಟಿನ್‌ ಹಾಗೂ ರಾಯಚೂರು ನಗರದಲ್ಲಿ ಒಂದು ಮಾಸ್ಟರ್‌ ಕ್ಯಾಂಟಿನ್‌ ಆರಂಭಿಸುವುದಕ್ಕೆ ಸರ್ಕಾರವು ಅನುಮತಿ ನೀಡಿದೆ. ಕ್ಯಾಂಟಿನ್‌ ಆರಂಭವಾದ ಬಳಿಕ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸಿಗುತ್ತದೆ. ಒಂದು ಕ್ಯಾಂಟಿನ್‌ನಲ್ಲಿ ಗರಿಷ್ಠ 500 ಜನರಿಗೆ ಮಾತ್ರ ಕೂಪನ್‌ ಕೊಡಲಾಗುವುದು. ರಾಯಚೂರು ನಗರದಲ್ಲಿ ಮಾತ್ರ ಒಟ್ಟು 1,500 ಜನರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ಸಂಜೆ ಊಟದ ವ್ಯವಸ್ಥೆ ದೊರೆಯಲಿದೆ.

ಉಪಹಾರಕ್ಕೆ ₹5, ಊಟಕ್ಕೆ ₹10 ಕೊಟ್ಟು ಕೂಪನ್‌ ಪಡೆದುಕೊಳ್ಳಬೇಕು. ಸ್ವ–ಸಹಾಯ ಪದ್ಧತಿಯಲ್ಲಿ ಆಹಾರ ಪದಾರ್ಥ ಪಡೆದು ಸೇವಿಸಬೇಕು. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ಪದಾರ್ಥಗಳಲ್ಲಿ ಪ್ರತಿದಿನ ಬದಲಾವಣೆ ಇರುತ್ತದೆ. ಒಬ್ಬರಿಗೆ ಒಂದೇ ಚೀಟಿ ಹಾಗೂ ಪಾರ್ಸಲ್‌ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಇರುವುದಿಲ್ಲ.

ತಾಲ್ಲೂಕಿನಲ್ಲಿ ಒಂದು

ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಒಂದು ಇಂದಿರಾ ಕ್ಯಾಂಟಿನ್‌ ತೆರೆಯಲಾಗುತ್ತಿದೆ. ಸಿಂಧನೂರು ನಗರಸಭೆ ಕಚೇರಿಯ ಹಿಂಭಾಗ, ಮಾನ್ವಿ ಪಟ್ಟಣದ ಬಸವ ವೃತ್ತದಿಂದ ಬಸ್‌ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿರುವ ತೋಟಗಾರಿಕೆ ಇಲಾಖೆಯ ಆವರಣದಲ್ಲಿ, ದೇವದುರ್ಗ ಪಟ್ಟಣದ ಪುರಸಭೆ ಕಚೇರಿ ಹಿಂಭಾಗ ಹಾಗೂ ಲಿಂಗಸುಗೂರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಮುಂದೆ ಮುದಗಲ್‌ ರಸ್ತೆಯಲ್ಲಿ ಇಂದಿರಾ ಕ್ಯಾಂಟಿನ್‌ಗಳನ್ನು ಆರಂಭಿಸಲಾಗುತ್ತದೆ. ಹೊಸದಾಗಿ ರಚನೆಯಾದ ಸಿರವಾರ ಮತ್ತು ಮಸ್ಕಿ ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟಿನ್‌ ಆರಂಭಿಸಲು ಇನ್ನೂ ಯೋಜನೆಯಾಗಿಲ್ಲ.

* *

ಇಂದಿರಾ ಕ್ಯಾಂಟಿನ್‌ ಕೆಲಸ ಪ್ರಗತಿಯಲ್ಲಿದೆ. ಪ್ರೀ ಫ್ಯಾಬ್ರಿಕೆಟೆಡ್‌ ಬಿಡಿಭಾಗಗಳನ್ನು ತರಿಸಿಕೊಳ್ಳಲಾಗಿದ್ದು, ಆದಷ್ಟು ಬೇಗನೆ ಕಾಮಗಾರಿ ಪೂರ್ಣವಾಗುತ್ತದೆ.

ಡಾ.ಬಗಾದಿ ಗೌತಮ್‌

ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry