ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಸಬ್ಸಿಡಿ ಹಣಕ್ಕೆ ಏರ್‌ಟೆಲ್ ಕನ್ನ!

Last Updated 9 ಜನವರಿ 2018, 5:24 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ನೂರಾರು ರೈತರಿಗೆ ಸರ್ಕಾರವು ನೀಡುತ್ತಿರುವ ಹಾಲಿನ ಪ್ರೋತ್ಸಾಹಧನವು ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್ ಖಾತೆಗೆ ಸೇರುತ್ತಿದೆ. ತಮಗೆ ಅರಿವೇ ಇಲ್ಲದಂತೆ ಈ ಹಣ ವರ್ಗಾವಣೆ ಆಗಿರುವುದರಿಂದ ಅನ್ನದಾತರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ಏರ್‌ಟೆಲ್ ಮೊಬೈಲ್ ಸಿಮ್‌ ಬಳಸುತ್ತಿರುವ ಒಂದಿಷ್ಟು ರೈತರು ಸುಮಾರು ಆರು ತಿಂಗಳ ಹಿಂದೆ ಕಂಪನಿಯ ಕರೆಯಂತೆ ತಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್‌ ಸಂಖ್ಯೆಯೊಂದಿಗೆ ಜೋಡಿಸಿದ್ದರು. ಈ ರೈತರಿಗೆ ಗೊತ್ತಿಲ್ಲದಂತೆ ಏರ್‌ಟೆಲ್‌ ಅವರ ಹೆಸರಿನಲ್ಲಿ ಪೇಮೆಂಟ್ಸ್‌ ಬ್ಯಾಂಕ್‌ ಖಾತೆ ತೆರೆದಿತ್ತು. ಜಿಲ್ಲೆಯಲ್ಲಿನ 450ಕ್ಕೂ ಹೆಚ್ಚು ರೈತರ ಹಣ ಇಂತಹ ಖಾತೆಗಳಿಗೆ ವರ್ಗಾವಣೆ ಆಗಿದೆ. ಹಣ ತಮ್ಮ ಎಂದಿನ ಬ್ಯಾಂಕ್‌ ಖಾತೆಗೆ ಸೇರದ್ದಕ್ಕೆ ಆತಂಕಗೊಂಡು ರೈತರು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧಿಕಾರಿಗಳಲ್ಲಿ ವಿಚಾರಿಸಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

ಹೀಗೆ ವರ್ಗಾವಣೆಯಾದ ಹಣದ ಪೈಕಿ ಬೆರಳೆಣಿಕೆಯ ಜನರ ಮೊತ್ತವನ್ನು ಕಂಪನಿಯು ರೈತರಿಗೆ ಹಿಂತಿರುಗಿಸಿದೆ. ಆದರೆ ಇನ್ನೂ ಸಾಕಷ್ಟು ಮಂದಿಯ ಹಣ ಏರ್‌ಟೆಲ್‌ ಬಳಿಯೇ ಉಳಿದುಕೊಂಡಿದೆ. ‘ಕಂಪನಿಯ ಕಚೇರಿಗೆ ಅಲೆದಾಡಿದರೂ ಹಣ ವಾಪಸ್ ಮಾಡಿಲ್ಲ’ ಎಂದು ಪಾಲಬೋವಿದೊಡ್ಡಿ ಗ್ರಾಮದ ಪುಟ್ಟರಾಮಯ್ಯ, ರಾಮಕೃಷ್ಣಯ್ಯ, ರತ್ನಮ್ಮ , ರೇಣುಕಮ್ಮ ಆರೋಪಿಸುತ್ತಾರೆ.

ರೈತರು ಪೂರೈಕೆ ಮಾಡುವ ಪ್ರತಿ ಲೀಟರ್‌ ಹಾಲಿಗೆ ರಾಜ್ಯ ಸರ್ಕಾರವು ಸದ್ಯ ಐದು ರೂಪಾಯಿ ಪ್ರೋತ್ಸಾಹಧನವನ್ನಾಗಿ ನೀಡುತ್ತಿದೆ. ‘ರಾಮನಗರ ಜಿಲ್ಲೆ ಒಂದರಲ್ಲಿಯೇ ಸುಮಾರು 53 ಸಾವಿರ ರೈತರಿಗೆ ಈ ಪ್ರೋತ್ಸಾಹಧನ ಸಿಗುತ್ತಿದೆ. ಅವ್ಯವಹಾರಕ್ಕೆ ಆಸ್ಪದ ನೀಡಬಾರದು ಎಂಬ ಕಾರಣಕ್ಕೆ ಸರ್ಕಾರದ ಆದೇಶದಂತೆ ರೈತರ ಆಧಾರ್‌ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲಾಗುತ್ತಿದೆ. ಹೀಗಾಗಿ ಯಾವ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗಿದೆಯೋ ಅಲ್ಲಿಗೆ ಹಣ ಹೋಗುತ್ತಿದೆ. ರೈತರು ಇತ್ತೀಚೆಗೆ ಏರ್‌ಟೆಲ್‌ಗೆ ಆಧಾರ್‌ ಲಿಂಕ್‌ ಮಾಡಿದ್ದು, ಅವರ ಹೆಸರಿನಲ್ಲಿ ಕಂಪನಿಯು ಖಾತೆ ತೆರೆದುಕೊಂಡಿರುವ ಕಾರಣ ಅಲ್ಲಿಗೆ ಹಣ ಸಂದಾಯವಾಗುತ್ತಿದೆ’ ಎಂದು ಕೆಎಂಎಫ್‌ನ ರಾಮನಗರ ಶಿಬಿರ ಉಪ ವ್ಯವಸ್ಥಾಪಕ ಶಿವಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರು ತಿಂಗಳ ಹಿಂದೆಯೇ ಈ ಸಮಸ್ಯೆ ಉದ್ಬವಿಸಿತ್ತು. ಅಂತಹ ರೈತರ ಆಧಾರ್‌ ಸಂಖ್ಯೆಗೆ ಹಣ ಹಾಕುವುದನ್ನು ನಿಲ್ಲಿಸಿದ್ದೆವು. ಆದರೆ ತುಂಬ ದಿನ ಹೀಗೆ ತಡೆ ಹಿಡಿಯುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮತ್ತೆ ಹಣ ಹಾಕಿದ್ದೇವೆ. ಸಮಸ್ಯೆ ಎದುರಿಸುತ್ತಿರುವ ರೈತರು ಮರಳಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ತೆರಳಿ ಆಧಾರ್ ಲಿಂಕ್ ಮಾಡಿಸುವಂತೆ ಸೂಚಿಸಿದ್ದೇವೆ. ಕೆಲವರ ಸಮಸ್ಯೆ ಬಗೆಹರಿದಿದೆ’ ಎಂದು ಅವರು ವಿವರಿಸಿದರು.

ರಾಮನಗರ ಜಿಲ್ಲಾ ಲೀಡ್‌ ಬ್ಯಾಂಕ್‌ ಅಧಿಕಾರಿ ರವೀಂದ್ರ ಪ್ರತಿಕ್ರಿಯಿಸಿ ‘ಏರ್‌ಟೆಲ್ ಅಕ್ರಮವಾಗಿ ರೈತರ ಹೆಸರಿನಲ್ಲಿ ಖಾತೆ ತೆರೆದು ಆಧಾರ್‌ ಲಿಂಕ್ ಮಾಡಿರುವುದರಿಂದ ಸಬ್ಸಿಡಿ ಹಣ ಅಲ್ಲಿಗೆ ಸಂದಾಯವಾಗುತ್ತಿದೆ. ಪೇಮೆಂಟ್‌ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯನ್ನು ತೆಗೆದುಹಾಕಿದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಎಂದಿನಂತೆ ರೈತರ ಹಳೆಯ ಬ್ಯಾಂಕ್‌ ಖಾತೆಗಳಿಗೇ ಹಣ ಸಂದಾಯವಾಗುತ್ತದೆ’ ಎಂದು ತಿಳಿಸಿದರು.

‘ಏರ್‌ಟೆಲ್‌ ಕಂಪನಿಯು ಕೂಡಲೇ ತನ್ನ ಖಾತೆ ರದ್ದು ಮಾಡಿ ರೈತರ ಹಣ ಹಿಂತಿರುಗಿಸಬೇಕು. ಇಲ್ಲವಾದಲ್ಲಿ ಸರ್ಕಾರವೇ ಅದರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ರೈತರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ರಾಮನಗರ ತಾಲ್ಲೂಕಿನ ಅರೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಆರ್.ತ್ರಿಮೂರ್ತಿ ಒತ್ತಾಯಿಸಿದರು.

* * 

ನನ್ನ ಮೂರ್ನಾಲ್ಕು ತಿಂಗಳ ಸಬ್ಸಿಡಿ ಹಣ ಏರ್‌ಟೆಲ್‌ ಕಂಪನಿಗೆ ಹೋಗಿದೆ. ಅಲ್ಲಿನ ಸಿಬ್ಬಂದಿಯನ್ನು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ
ಮಂಚಯ್ಯ
ರೈತ, ಪಾಲಬೋವಿದೊಡ್ಡಿ
(ಚಿತ್ರ: 9ಆರ್ಎಂಜಿ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT