ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ, ಶಾಸಕರ ವಿರುದ್ಧ ಪ್ರತಿಭಟನೆ

Last Updated 9 ಜನವರಿ 2018, 5:26 IST
ಅಕ್ಷರ ಗಾತ್ರ

ಚನ್ನಪಟ್ಟಣ: ಸಚಿವರು ಹಾಗೂ ಶಾಸಕರು ಮದುವೆ, ಪೊರಕೆ ಸೇವೆ ಪದಗಳನ್ನು ಬಳಸುವುದನ್ನು ಬಿಟ್ಟು ತಾಲ್ಲೂಕನ್ನು ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ತಾಲ್ಲೂಕಿನ ಅಭಿವೃದ್ಧಿ ವಿಷಯದಲ್ಲಿ ನಾವೇನು ಮಾಡುತ್ತೇವೆ ಎಂಬುದರ ಬಗ್ಗೆ ಚರ್ಚೆ ಮಾಡದೆ ಈ ರೀತಿ ಮಾತನಾಡುವುದು ತರವಲ್ಲ ಎಂದು ಖಂಡಿಸಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ತಾಲ್ಲೂಕಿನಲ್ಲಿ ವಿ.ವೆಂಕಟಪ್ಪ, ಪುಟ್ಟರಾಮಯ್ಯ, ಬಿ.ಜೆ.ಲಿಂಗೇಗೌಡ, ಷಾಬುದ್ದೀನ್ ಫೌಜ್ದಾರ್, ಡಿ.ಟಿ.ರಾಮು, ಎಂ.ವರದೇಗೌಡ ಟಿ.ವಿ.ಕೃಷ್ಣಪ್ಪ, ಸಾದತ್ ಆಲಿಖಾನ್ ರಂತವರು ಶಾಸಕರಾಗಿದ್ದರು. ವಿರೋಧ ಪಕ್ಷದ ಮುಖಂಡರಾಗಿದ್ದರು. ಮಂತ್ರಿಗಳು ಆಗಿ ತಾಲ್ಲೂಕಿನ ಕೀರ್ತಿ ಪತಾಕೆ  ಹಾರಿಸಿದ್ದಾರೆ. ಇಂತಹ ಮಹನೀಯರು ಇದ್ದ ಈ ಕ್ಷೇತ್ರದಲ್ಲಿ ಸಚಿವರು ಮತ್ತು ಶಾಸಕರು ಕೀಳುಮಟ್ಟದ ಭಾಷೆ ಬಳಸುತ್ತಿರುವುದು ಕ್ಷೇತ್ರಕ್ಕೆ ಕಳಂಕ ಎಂದರು.

ಜಿಲ್ಲೆಯಲ್ಲಿ ರಾಜೀವ್ ಗಾಂಧಿ ವಿ.ವಿ. ನನೆಗುದಿಗೆ ಬಿದ್ದಿದೆ, ವೃಷಭಾವತಿ ನದಿ ಕಲುಷಿತಗೊಂಡಿದೆ. ಜಿಲ್ಲೆಯಲ್ಲಿ ಆನೆಗಳ ಹಾವಳಿ ಎಗ್ಗಿಲ್ಲದೆ ಮುಂದುವರಿಯುತ್ತಿದೆ. 12 ವರ್ಷ ಕಳೆದರೂ ಮಹದೇಶ್ವರ ದೇವಸ್ಥಾನ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾರ್ಮಿಕರ ಆಶಾಕಿರಣವಾಗಿದ್ದ ಕೆ.ಎಸ್.ಐ.ಸಿ. ಮಿಲ್ ಅನ್ನು ಮುಚ್ಚಿ ಕಾರ್ಮಿಕರನ್ನು ಬೀದಿಗೆ ದೂಡಿದ ಕೀರ್ತಿ ಇವರಿಬ್ಬರಿಗೂ ಸಲ್ಲುತ್ತದೆ ಎಂದು ದೂರಿದರು.

ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಇದನ್ನು ಸರಿಪಡಿಸುವ ಕೆಲಸ ಮಾಡದೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವೀರೋಧದ ಬಗ್ಗೆ ಚರ್ಚೆ ಮಾಡುತ್ತಾ ಯುವಕರನ್ನು ಎತ್ತಿಕಟ್ಟುವ ಕೆಲಸ ಮಾಡಿ ಶಾಂತಿ ನೆಮ್ಮದಿ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ ಮಾತನಾಡಿ, ಯುವ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಕಾಂಗ್ರೆಸ್, ಬಿಜೆಪಿ ಎಂದು ದ್ವೇಷ ಸಾಧಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡಲಿ ಎಂದು ಒತ್ತಾಯಿಸಿದರು.

ರಾಮನಗರ ತಾಲ್ಲೂಕು ಅಧ್ಯಕ್ಷೆ ನಾಗರತ್ನ, ಯುವ ಘಟಕದ ಉಪಾಧ್ಯಕ್ಷ ರಂಜಿತ್ ಗೌಡ, ಟೆಂಪೋ ಘಟಕದ ರಾಜೇಶ್, ಬಾಳೆಮಂಡಿ ಕುಮಾರ್, ಕಿರಣ್ ಸಿಂಗ್, ವೆಂಕಟೇಶ್, ಶಿವಣ್ಣ, ಡ್ರೈವರ್ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT