ಬಿಜೆಪಿ, ಜೆಡಿಎಸ್‌ ಇಬ್ಬರು; ಕಾಂಗ್ರೆಸ್‌ನಲ್ಲಿ ಹಲವರು

7

ಬಿಜೆಪಿ, ಜೆಡಿಎಸ್‌ ಇಬ್ಬರು; ಕಾಂಗ್ರೆಸ್‌ನಲ್ಲಿ ಹಲವರು

Published:
Updated:
ಬಿಜೆಪಿ, ಜೆಡಿಎಸ್‌ ಇಬ್ಬರು; ಕಾಂಗ್ರೆಸ್‌ನಲ್ಲಿ ಹಲವರು

ಶಿವಮೊಗ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ, ಜೆಡಿಎಸ್‌ ಪಕ್ಷದಲ್ಲಿ ಇಬ್ಬರ ನಡುವೆ ಪೈಪೋಟಿ ಇದ್ದರೆ, ಕಾಂಗ್ರೆಸ್‌ನಲ್ಲಿ ಹಲವರು ತೀವ್ರ ಪ್ರಯತ್ನ ಆರಂಭಿಸಿದ್ದಾರೆ.

ಎರಡು ದಶಕಗಳಿಂದ ಬಿಜೆಪಿ ಪ್ರತಿನಿಧಿಸುತ್ತಾ ಬಂದಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ, ಹಾಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌. ರುದ್ರೇಗೌಡರ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ.

ಹಿಂದೆ ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾಗಿ ಹಲವು ವರ್ಷ ದುಡಿದಿರುವ ಎಂ. ಶ್ರೀಕಾಂತ್ ಈ ಬಾರಿಯೂ ಆ ಪಕ್ಷದ ಟಿಕೆಟ್ ಆಕಾಂಕ್ಷಿ. ಪ್ರಸ್ತುತ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಎಚ್‌.ಎನ್. ನಿರಂಜನ್ ಈಗಾಗಲೇ ಒಂದು ಬಾರಿ ಕ್ಷೇತ್ರ ಸುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮತ್ತೆ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಕಳೆದ ಬಾರಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದ ಮಾಜಿ

ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಅವರ ಪುತ್ರ, ಪಾಲಿಕೆ ಸದಸ್ಯ ಎಚ್‌.ಸಿ. ಯೋಗೀಶ್, ‘ಕಾಡಾ’ ಅಧ್ಯಕ್ಷ ಎಚ್‌.ಎಸ್. ಸುಂದರೇಶ್, ನಗರಸಭೆ ಮಾಜಿ ಅಧ್ಯಕ್ಷ ಎಲ್‌. ಸತ್ಯನಾರಾಯಣ ರಾವ್, ಇಂತಿಯಾಜ್‌ ಖಾನ್ ಈ ಬಾರಿ ಟಿಕೆಟ್‌ಗಾಗಿ ಲಾಬಿ ಆರಂಭಿಸಿದ್ದಾರೆ.

ಆರಂಭದಲ್ಲಿ ಕಾಂಗ್ರೆಸ್‌ ಭದ್ರಕೋಟೆ: 1957ರಿಂದ ಸತತ ಐದು ಅವಧಿ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಮಾಧವ ರಾವ್ ಅವರ ಪತ್ನಿ ರತ್ನಮ್ಮ ಎರಡು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನಂತರ ಬದರಿನಾರಾಯಣ್, ಎ.ಬಿ.ಬಿ. ನಾರಾಯಣ ಅಯ್ಯಂಗಾರ್ ಕೆ.ಎಚ್. ಶ್ರೀನಿವಾಸ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. 1983ರಲ್ಲಿ ಶ್ರೀನಿವಾಸ್ ಮಣಿಸುವ ಮೂಲಕ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ. ಆನಂದರಾವ್ ಆ ಪಕ್ಷಕ್ಕೆ ಮೊದಲ ಗೆಲುವು ತಂದು ಕೊಟ್ಟಿದ್ದರು. ಮತ್ತೆ ಎರಡು ವರ್ಷಗಳಲ್ಲೇ ನಡೆದ ಚುನಾವಣೆಯಲ್ಲಿ ಕೆ.ಎಚ್. ಶ್ರೀನಿವಾಸ್ ಮತ್ತೆ ಶಾಸಕರಾದರು.

ಈಶ್ವರಪ್ಪ ಯುಗಾರಂಭ: 1989ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಎಸ್. ಈಶ್ವರಪ್ಪ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದರು. 1994ರಲ್ಲಿ ಎರಡನೇ ಗೆಲುವು ದಾಖಲಿಸಿದ್ದರು. ಆದರೆ, 1999ರಲ್ಲಿ ನಡೆದ ಚುನಾವಣೆಯಲ್ಲಿ  ಎಚ್‌.ಎಂ. ಚಂದ್ರಶೇಖರಪ್ಪ ವಿರುದ್ಧ ಸೋಲು ಕಂಡರು. ನಂತರ ಫಿನಿಕ್ಸ್‌ನಂತೆ ಮೇಲೆದ್ದು ಬಂದ ಅವರು 2004, 2008ರ ಚುನಾವಣೆಯಲ್ಲಿ ಸತತ ಗೆಲುವು ಕಂಡರು.

ಮೊದಲ ಬಾರಿ ತ್ರಿಕೋನ ಸ್ಪರ್ಧೆ: ಆರು ದಶಕಗಳ ಇತಿಹಾಸದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇರುತ್ತಿತ್ತು. 2013ರಲ್ಲಿ ಮೊದಲ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್, ಕೆಜೆಪಿ, ಬಿಜೆಪಿ ಮಧ್ಯೆ ನಡೆದ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಕೆ.ಬಿ. ಪ್ರಸನ್ನಕುಮಾರ್ ಗೆಲುವು ಪಡೆದಿದ್ದರು. 

ಕಾಂಗ್ರೆಸ್‌ಗೇ ಅಧಿಕ ಗೆಲುವು: 1957ರಿಂದ 2013ರವರೆಗೆ ಒಟ್ಟು 13 ಬಾರಿ ಚುನಾವಣೆ ನಡೆದಿದೆ. ಅದರಲ್ಲಿ 8 ಬಾರಿ ಕಾಂಗ್ರೆಸ್, 5 ಬಾರಿ ಬಿಜೆಪಿ ಗೆಲುವು ಪಡೆದಿವೆ.

ವರ್ಷ     ಚುನಾಯಿತರು       ಪಕ್ಷ

1957      ರತ್ನಮ್ಮ         ಕಾಂಗ್ರೆಸ್

1962      ರತ್ನಮ್ಮ         ಕಾಂಗ್ರೆಸ್

1967  ಬದರಿನಾರಾಯಣ್    ಕಾಂಗ್ರೆಸ್

1972 ನಾರಾಯಣ ಅಯ್ಯಂಗರ್ ಕಾಂಗ್ರೆಸ್

1978 ಕೆ.ಎಚ್. ಶ್ರೀನಿವಾಸ್    ಕಾಂಗ್ರೆಸ್

1983  ಎಂ. ಆನಂದ ರಾವ್     ಬಿಜೆಪಿ

1985  ಕೆ.ಎಚ್. ಶ್ರೀನಿವಾಸ್    ಕಾಂಗ್ರೆಸ್

1989  ಕೆ.ಎಸ್. ಈಶ್ವರಪ್ಪ      ಬಿಜೆಪಿ

1994  ಕೆ.ಎಸ್. ಈಶ್ವರಪ್ಪ      ಬಿಜೆಪಿ

1999 ಎಚ್‌.ಎಂ. ಚಂದ್ರಶೇಖರಪ್ಪ ಕಾಂಗ್ರೆಸ್

2004  ಕೆ.ಎಸ್. ಈಶ್ವರಪ್ಪ       ಬಿಜೆಪಿ

2008  ಕೆ.ಎಸ್. ಈಶ್ವರಪ್ಪ       ಬಿಜೆಪಿ

2013  ಕೆ.ಬಿ. ಪ್ರಸನ್ನಕುಮಾರ್  ಕಾಂಗ್ರೆಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry