ಸಂಸ್ಕೃತ ಭಾಷೆ ಆಡುಭಾಷೆಯಾಗಲಿ

7

ಸಂಸ್ಕೃತ ಭಾಷೆ ಆಡುಭಾಷೆಯಾಗಲಿ

Published:
Updated:

ತುಮಕೂರು: ದೇವಭಾಷೆ ಎಂದು ಕರೆಸಿಕೊಳ್ಳುವ, ಜಗತ್ತಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದ ಸಂಸ್ಕೃತ ಭಾಷೆಯು ಜನರ ಆಡುಭಾಷೆಯಾಗಬೇಕು ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ನಗರದಲ್ಲಿ ಸಂಸ್ಕೃತ ಭಾರತಿ ಸಂಸ್ಥೆಯ ಆಶ್ರಯದಲ್ಲಿ ಈಚೆಗೆ ನಡೆದ ‘ಸಂಸ್ಕೃತಗಂಗಾ’ ಜಿಲ್ಲಾ ಸಂಸ್ಕೃತ ಸಮ್ಮೇಳನದಲ್ಲಿ ಅವರು ಮಾತನಾಡಿದರು.

’ಸಂಸ್ಕೃತ ಭಾಷೆಗೆ ಎಂದಿಗೂ ಸಾವಿಲ್ಲ. ಸಂಸ್ಕೃತ ಭಾಷೆಯ ಬಗ್ಗೆ ನಮ್ಮ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದ್ದರೂ ವಿದೇಶಿಗರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಎಲ್ಲಾ ಸಂಪತ್ತು ಸಿಗುವ ಏಕೈಕ ಭಾಷೆ ಸಂಸ್ಕೃತವಾಗಿದೆ. ನಾವೆಲ್ಲರೂ ಈ ವರ್ಷ ಮುಗಿಯುವುದರೊಳಗಾಗಿ ಸಂಸ್ಕೃತದಲ್ಲಿಯೇ ವ್ಯವಹಾರ ಮಾಡುವಷ್ಟು ಸಂಸ್ಕೃತವನ್ನು ಕಲಿಯುತ್ತೇವೆ ಎಂದು ಸಂಕಲ್ಪ ಮಾಡಬೇಕು’ ಎಂದರು.

ಅನೇಕ ಕಡೆ ಸಂಸ್ಕೃತ ಶಾಲಾ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇದು ಇಷ್ಟಕ್ಕೆ ಸೀಮಿತವಾದರೆ ಪ್ರಯೋಜನವಿಲ್ಲ. ಜನರು ಈ ಭಾಷೆಯನ್ನು ನಿತ್ಯ ಜೀವನದ ವ್ಯವಹಾರದಲ್ಲಿ ಬಳಸುವಂತಾಗಬೇಕು ಎಂದು ಹೇಳಿದರು.

ಸಂಸ್ಕೃತ ಭಾರತಿ ಕರ್ನಾಟಕ ಘಟಕದ ಅಧ್ಯಕ್ಷ ಟಿ.ಎನ್‌.ಪ್ರಭಾಕರ್‌ ಮಾತನಾಡಿ, ‘ಭಾರತ ಎಂದ ತಕ್ಷಣ ವಿದೇಶಿಯರು ಸಂಸ್ಕೃತ ಭಾಷೆಯನ್ನು ನೆನಪಿಸಿಕೊಳ್ಳುತ್ತಾರೆ. ಪ್ರಪಂಚದ ದೊಡ್ಡ ಗ್ರಂಥವಾದ ಮಹಾಭಾರತ ಸಂಸ್ಕೃತದಲ್ಲಿ ರಚನೆಯಾಗಿದೆ. ಹೀಗಾಗಿ ನಮ್ಮ ಸಂಸ್ಕೃತಿಯ ಮೇಲೆ ನಮಗೆ ಹೆಮ್ಮೆ ಇರಬೇಕು. ಆದರೆ ಭಾರತೀಯರಾದ ನಾವು ನಮ್ಮ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಯನ್ನು ಮರೆಯುತ್ತಿದ್ದೇವೆ’ ಎಂದರು.

ನೂರಾರು ವರ್ಷಗಳ ಹಿಂದೆಯೇ ನಿರ್ಮಾಣವಾಗಿರುವ ‘ಕುತುಬ್‌ ಮಿನಾರ್‌’ ಕಂಬವು ಮಳೆ, ಬಿಸಲಿಗೆ ಮೈಯೊಡ್ಡಿ ನಿಂತಿದ್ದರೂ ತುಕ್ಕು ಹಿಡಿದಿಲ್ಲ. ಇದು ದೇಶದ ಶ್ರೇಷ್ಠ ವಿಜ್ಞಾನದ ಕೊಡುಗೆ ಎಂದು ತಿಳಿಸಿದರು.

ಪಾಶ್ಚಾತ್ಯ ಅನುಕರಣೆ ಬಿಡಿ

’ವಿದೇಶಿಗರು ನಮ್ಮ ದೇಶದ ಆಹಾರ ಪದ್ಧತಿ ಮತ್ತು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ನಾವು ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿರುವುದು ವಿಷಾದನೀಯ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ರಾಜೇಂದ್ರ ಬದಾಮಿಕರ್‌ ಹೇಳಿದರು. ಸಂಸ್ಕೃತ ಸಮ್ಮೇಳನದಲ್ಲಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕೃತದಲ್ಲಿ ಮಂತ್ರ ಪಠಣ ಮಾಡಿದರೆ ಮಾತ್ರ ಕಾರ್ಯಸಿದ್ಧಿ ಆಗುತ್ತದೆ ಎನ್ನುವ ನಂಬಿಕೆ ಹಲವು ಜನರಲ್ಲಿದೆ. ಸಂಸ್ಕೃತ ಭಾಷೆಯ ಮೂಲಕ ಸಂಸ್ಕೃತಿಯ ಮೂಲವನ್ನು ಕಂಡುಕೊಳ್ಳಬಹುದು. ಹೀಗಿದ್ದರೂ ಯಾರೂ ಕೂಡ ಸಂಸ್ಕೃತ ಭಾಷೆಯನ್ನು ಬೆಳೆಸುವ ಪ್ರಯತ್ನ ಮಾಡುತ್ತಿಲ್ಲ ಎಂದರು.

ಗಮನ ಸೆಳೆದ ವಸ್ತು ಪ್ರದರ್ಶನ

ಸಮ್ಮೇಳನದ ಪ್ರಯುಕ್ತ ಆಯೋಜಿಸಲಾಗಿದ್ದ ವಸ್ತುಪ್ರದರ್ಶನವು ವಿದ್ಯಾರ್ಥಿಗಳ ಮತ್ತು ಜನರ ಗಮನ ಸೆಳೆಯಿತು. ಆಹಾರ ಪದಾರ್ಥಗಳು, ದೈನಂದಿನ ಬಳಕೆ ವಸ್ತುಗಳು ಸೇರಿದಂತೆ ಎಲ್ಲ ರೀತಿಯ ಅಗತ್ಯ ವಸ್ತುಗಳು ಹಾಗೂ ಕಲೆ, ವಾಸ್ತುಶಿಲ್ಪ, ಪ್ರಕೃತಿಗೆ ಸಂಬಂಸಿದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry