ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‌ ಟಾಪ್

7

ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‌ ಟಾಪ್

Published:
Updated:

ತುಮಕೂರು: ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳ ಹಾಗೂ ಡಿಪ್ಲೊಮಾ ಕಾಲೇಜುಗಳ ವಿದ್ಯಾರ್ಥಿಗಳಿಗೆ 1,676 ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮ ಸೋಮವಾರ ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನಡೆಯಿತು.

ಜಿಲ್ಲೆಯ 19 ಪ್ರಥಮ ಪ್ರಥಮ ದರ್ಜೆ ಕಾಲೇಜು ಹಾಗೂ 2 ಡಿಪ್ಲೊಮಾ ಕಾಲೇಜಿನ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಲ್ಯಾಪ್‌ಟಾಪ್ ವಿತರಣೆ ಮಾಡಿದರು.

ಪರಿಶಿಷ್ಟ ಜಾತಿ ಉಪ ಯೋಜನೆ(ಎಸ್‌ಸಿಪಿ) ಮತ್ತು ಗಿರಿಜನ ವಿಶೇಷ ಘಟಕ ಯೋಜನೆಯಡಿ(ಟಿಎಸ್‌ಪಿ) ಸರ್ಕಾರವು 2016–17ನೇ ಸಾಲಿನ ಬಿಎ,ಬಿಎಸ್ಸಿ ಮತ್ತು ಬಿಕಾಂ ಹಾಗೂ ಡಿಪ್ಲೊಮಾ ಓದುತ್ತಿರುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಿದೆ ಎಂದರು.

‘ಈ ಸಮುದಾಯಗಳ ಮಕ್ಕಳು ಶಿಕ್ಷಣದಲ್ಲಿ  ಹಿಂದೆ ಬೀಳಬಾರದು. ಎಲ್ಲ ರೀತಿಯ ಅನುಕೂಲತೆ ಲಭಿಸಬೇಕು ಎಂಬ ಆಶಯದಿಂದ ಸರ್ಕಾರ ಲ್ಯಾಪ್‌ ಟಾಪ್ ವಿತರಿಸಿದೆ. ಇದನ್ನು ಸಮರ್ಪಕವಾಗಿ ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

2017–2018ರ ಶೈಕ್ಷಣಿಕ ವರ್ಷದಲ್ಲಿ ಸಾಮಾನ್ಯ ವರ್ಗ ಸೇರಿದಂತೆ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ಸರ್ಕಾರ ವಿತರಣೆ ಮಾಡಲಿದೆ. ಇದಕ್ಕಾಗಿ ₹ 250 ಕೋಟಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಶಾಸಕ ಡಾ.ರಫೀಕ್ ಅಹಮ್ಮದ್ ಮಾತನಾಡಿ, ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ರಾಜ್ಯ ಮಾದರಿ ರಾಜ್ಯವಾಗಿದ್ದು, ತಂತ್ರಜ್ಞಾನ ಬಳಕೆಯಲ್ಲಿ ಯಾವುದೇ ರೀತಿಯಲ್ಲಿ ನಮ್ಮ ನಾಡಿನ ಮಕ್ಕಳು ಹಿಂದುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರವು ಉಚಿತವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡುತ್ತಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ, ಕಾಲೇಜು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಮಲ್ಲೇಶ್ವರಪ್ಪ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ ಬಾಬು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ದೇವರಾಜ್, ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ರಾಜಕುಮಾರ್ ವೇದಿಕೆಯಲ್ಲಿದ್ದರು.

ಕಂಪ್ಯೂಟರ್ ಗೊತ್ತಿಲ್ಲದವರೇ ಅನಕ್ಷರಸ್ಥರು

‘ಈಗಿನ ಜಗತ್ತಿನಲ್ಲಿ ಕಂಪ್ಯೂಟರ್, ಲ್ಯಾಪ್‌ಟಾಪ್ ಬಳಕೆ ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕು.ಕಂಪ್ಯೂಟರ್ ಬಳಕೆ ಗೊತ್ತಿಲ್ಲದವರೇ ಅನಕ್ಷರಸ್ಥರು ಎಂಬ ಕಾಲವಿದು’ ಎಂದು ವಿದ್ಯಾರ್ಥಿನಿ ನಾಗಲಕ್ಷ್ಮಿ ಅಭಿಪ್ರಾಯ ವ್ಯಕ್ತಪಡಿಸಿದರು.

‘ಮಾಹಿತಿ, ಜ್ಞಾನಾರ್ಜನೆಗೆ ಕಂಪ್ಯೂಟರ್‌ ತೀರಾ ಅವಶ್ಯಕವಾಗಿದೆ. ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲು ಲ್ಯಾಪ್‌ಟಾಪ್ ನೀಡಿರುವುದು ಸಹಕಾರಿಯಾಗಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry