ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ರೈತರ ಸಾಲ ಮನ್ನಾ ಮಾಡಲಿ

Last Updated 9 ಜನವರಿ 2018, 5:49 IST
ಅಕ್ಷರ ಗಾತ್ರ

ಉಡುಪಿ: ‘ಸತತ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಾಲ ಮನ್ನಾ ಮಾಡಿದ್ದೇನೆ. ಕೇಂದ್ರ ಸರ್ಕಾರ ಸಹ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ರೈತರು ಮಾಡಿರುವ ಸಾಲವನ್ನು ಪ್ರಧಾನಿ ನರೇಂದ್ರ ಮೋದಿ ಮನ್ನಾ ಮಾಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಬೈಂದೂರು ಮತ್ತು ಬ್ರಹ್ಮಾವರದಲ್ಲಿ ಸೋಮವಾರ ನಡೆದ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಮಾರು ₹ 40 ಸಾವಿರ ಕೋಟಿ ರಾಷ್ಟ್ರೀಕೃತ ಬ್ಯಾಂಕಿನ ಸಾಲವನ್ನು ಮನ್ನಾ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರ ಈಗಾಗಲೇ ಸುಮಾರು ₹8,500 ಕೋಟಿ ಸಾಲ ಮನ್ನಾ ಮಾಡಿದೆ. ರೈತರ ಪರ ಎಂದು ಹೇಳುವ ಯಡಿಯೂರಪ್ಪ ಅವರು ಪ್ರಧಾನಿ ಅವರ ಮೇಲೆ ಒತ್ತಡ ಹೇರಿ ಸಾಲ ಮನ್ನಾ ಮಾಡಿಸಬೇಕು. ನಾನು ಈ ಬಗ್ಗೆ ಪ್ರಧಾನಿ ಅವರ ಬಳಿ ನಿಯೋಗ ಕೊಂಡೊಯ್ದಿದ್ದ ವೇಳೆ ಬಿಜೆಪಿಯ ಒಬ್ಬ ಮುಖಂಡರೂ ಮೋದಿ ಅವರ ಮುಂದೆ ಬಾಯಿ ಬಿಚ್ಚಲಿಲ್ಲ ಎಂದು ಟೀಕಿಸಿದರು.

ಚುನಾವಣಾ ಭಾಷಣ ಮಾಡಿದ ಸಿಎಂ: ಕಾಂಗ್ರೆಸ್ ಶಾಸಕರು ಇರುವ ಬೈಂದೂರು, ಉಡುಪಿ ಹಾಗೂ ಕಾಪು ಕ್ಷೇತ್ರದಲ್ಲಿ ನಡೆದ ಸಾಧನಾ– ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅವರು ಮೂರೂ ಮಂದಿಗೆ ಮತ್ತೆ ಆಶೀರ್ವಾದ ಮಾಡು ವಂತೆ ಚುನಾವಣಾ ಭಾಷಣವನ್ನೂ ಮಾಡಿದರು.

‘ನಾಲ್ಕು ಬಾರಿ ಗೆದ್ದಿರುವ ಬೈಂ ದೂರು ಶಾಸಕ ಕೆ. ಗೋಪಾಲ ಪೂಜಾರಿ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇರುವ ವ್ಯಕ್ತಿ. ವಾರಕ್ಕೊಮ್ಮೆಯಾದರೂ ನನ್ನನ್ನು ಭೇಟಿ ಮಾಡಿ ಕ್ಷೇತ್ರ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಅವರನ್ನು ಇನ್ನೊಮ್ಮೆ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ’ ಎಂದರು.

ಪ್ರಮೋದ್ ಮಧ್ವರಾಜ್ ಅವರಿಗೆ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯ ಇದೆ. ರಾಜಕೀಯ ಕುಟುಂಬದಿಂದ ಬಂದಿದ್ದರೂ ಸ್ವಲ್ಪವೂ ಜಂಭ ಇಲ್ಲ ಎಂದು ಹೊಗಳಿದ ಅವರು, ಇನ್ನೊಮ್ಮೆ ಆಶೀರ್ವಾದ ಮಾಡಿ 50 ಸಾವಿರ ಮತಗಳ ಅಂತರದಿಂದ ಮತ್ತೊಮ್ಮೆ ಆರಿಸಿ ಕಳುಹಿಸಿ ಎಂದರು.

ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರು ಹೆಸರಿಗೆ ತಕ್ಕಂತೆ ವಿನಯವಂತ ವ್ಯಕ್ತಿ. ಅವರನ್ನು ಸಹ ಇನ್ನೊಮ್ಮೆ ಆಯ್ಕೆ ಮಾಡಿ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರನ್ನು ಸಹ ಟೀಕಿಸಿದರು.

ದಾಖಲೆ ನೀಡಲಿ: ದೀಪಕ್ ರಾವ್ ಕೊಲೆಗೆ ಬಿಜೆಪಿ ಕಾರ್ಪೊರೇಟರ್ ಸುಪಾರಿ ನೀಡಿದ್ದಾರೆ ಎಂಬ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರು ಆರೋಪ ಮಾಡಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆ ಬಗ್ಗೆ ಅವರ ಬಳಿ ದಾಖಲೆ ಇದ್ದರೆ ನೀಡಲಿ’ ಎಂದರು.

 * * 

ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಅಮಿತ್ ಷಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಇಬ್ಬರೂ ಜೈಲಿಗೆ ಹೋಗಿ ಬಂದವರು. ಅವರಿಂದ ಪಾಠ ಕಲಿಯಬೇಕಿಲ್ಲ. ಸಿದ್ದರಾಮಯ್ಯ, ಸಿಎಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT