ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನಕ್ಕೆ ಮೆಚ್ಚುಗೆ ಮಹಾಪೂರ

Last Updated 9 ಜನವರಿ 2018, 5:55 IST
ಅಕ್ಷರ ಗಾತ್ರ

ವಿಜಯಪುರ: ಬಗೆ ಬಗೆಯ ಹೂವುಗಳು. ಒಂದಕ್ಕಿಂತ ಒಂದು ಚೆಂದ. ಕೆಲವು ಕುಸುಮ ಸುವಾಸನೆ ಬೀರಿ ತನ್ನತ್ತ ಆಕರ್ಷಿಸಿದರೆ, ಹಲವು ಸೌಂದರ್ಯದ ಪ್ರತೀಕದಂತಿದ್ದವು... ಆಧುನಿಕ ಫ್ಯಾಷನ್‌ ಲೋಕದ ಅಲಂಕಾರದಲ್ಲಿ ವಿರಾಜಿಸುವ ಹತ್ತಾರು ತಳಿಯ ಹೂವುಗಳು ಒಂದೇ ಸೂರಿನಡಿ ಪ್ರದರ್ಶನಗೊಂಡು ವೀಕ್ಷಕರ ಹೃನ್ಮನ ತಣಿಸಿದವು...

ವಿಜಯಪುರ ಹೊರವಲಯದಲ್ಲಿನ ಹಿಟ್ನಳ್ಳಿ ಬಳಿಯ ಕೃಷಿ ಮಹಾ ವಿದ್ಯಾಲಯದಲ್ಲಿ 2017–18ನೇ ಸಾಲಿನ 31ನೇ ಕೃಷಿ ಮೇಳದ ಅಂಗವಾಗಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಫಲ–ಪುಷ್ಪ ಪ್ರದರ್ಶನ ರೈತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಪ್ರದರ್ಶನದ ಮಧ್ಯ ಭಾಗದಲ್ಲಿ ನಾನಾ ನಮೂನೆಯ ಹೂವುಗಳಿಂದ ನಿರ್ಮಿಸಿದ್ದ ಗೋಳಗುಮ್ಮಟ ಆಕರ್ಷಣೆಯ ಪ್ರಮುಖ ಕೇಂದ್ರ ಭಾಗವಾಗಿತ್ತು. ಭೇಟಿ ನೀಡಿದ ಪ್ರತಿ
ಯೊಬ್ಬರು ಹೂವಿನ ಗುಮ್ಮಟದ ಮುಂಭಾಗ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದ್ದು ವಿಶೇಷವಾಗಿ ಗೋಚರಿಸಿತು.

‘12X12 ಅಳತೆಯ ಒಂಬತ್ತು ಅಡಿ ಎತ್ತರದ ಹೂವಿನ ಗೋಳಗುಮ್ಮಟವನ್ನು 10 ಬಂಚ್‌ ಜರ್ಬೆರಾ, 20 ಬಂಚ್‌ ಆ್ಯಂಥೂರಿಯಂ, 80 ಕೆ.ಜಿ. ಡಚ್‌, 50 ಕೆ.ಜಿ. ಸೇವಂತಿ, ಹುಲ್ಲು ಬಳಸಿ ನಿರ್ಮಿಸಲಾಗಿದೆ’ ಎಂದು ಪುಷ್ಪ ಕಲಾವಿದ ಹುಬ್ಬಳ್ಳಿಯ ರಾಜು ಸೋನಾವನೆ ಮಾಹಿತಿ ನೀಡಿದರು.

₹ 1.37 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದೇ ಪ್ರತಿಕೃತಿಯನ್ನು ಈ ಹಿಂದೆ ಹುಬ್ಬಳ್ಳಿಯ ಗ್ಲಾಸ್‌ ಹೌಸ್‌ನಲ್ಲಿ ನಿರ್ಮಿಸಿದ್ದೆ. ಇದೀಗ ವಿಜಯಪುರದಲ್ಲೇ ನಿರ್ಮಿಸುವ ಅವಕಾಶ ದೊರೆತಿದ್ದರಿಂದ ಇಲ್ಲಿನ ಜಗದ್ವಿಖ್ಯಾತ ಸ್ಮಾರಕದ ಪ್ರತಿಕೃತಿಯನ್ನು ಪುಷ್ಪ ಬಳಸಿ ನಿರ್ಮಿಸಿರುವೆ’ ಎಂದು ಹೇಳಿದರು.

ಸಿರಿಧಾನ್ಯದ ಗಳಗನಾಥ: ಹುಬ್ಬಳ್ಳಿಯ ಕಲಾವಿದ ಶಿವಲಿಂಗಪ್ಪ ಶಿ ಬಡಿಗೇರ 40 ಕೆ.ಜಿ. ಸಿರಿಧಾನ್ಯ ಬಳಸಿ ಪಟ್ಟದಕಲ್ಲಿನ ಗಳಗನಾಥ ದೇಗುಲದ ಪ್ರತಿಕೃತಿ ರಚಿಸಿದ್ದಾರೆ. ಇದೂ ಸಹ ಪ್ರದರ್ಶನದಲ್ಲಿ ಅಪಾರ ಜನರ ಮೆಚ್ಚುಗೆಗೆ ಪಾತ್ರ ವಾಯಿತು. ‘ನವಣೆ, ಸಜ್ಜೆ, ರಾಗಿ, ಬರಗು, ಸಾವೆ ಸಿರಿಧಾನ್ಯವನ್ನು ಬಳಸಿಕೊಂಡು ದೇಗುಲ ನಿರ್ಮಿಸಿ ರುವೆ. ಇದರ ತಯಾರಿಗೆ 20 ದಿನ ಸಮಯ ಹಿಡಿದಿದೆ.

ಇದರ ಮುಂಭಾಗ ನಿಂತು ವೀಕ್ಷಕರು, ರೈತರು ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದು ಕೊಳ್ಳುವುದನ್ನು ನೋಡಿದಾಗ ಆನಂದವುಂಟಾಗುತ್ತದೆ’ ಎಂದರು. ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ರಂಗೋಲಿ ಭಾವಚಿತ್ರಗಳು ಎಲ್ಲರ ಮನಸೂರೆಗೊಂಡವು. ಶಿವಲಿಂಗಪ್ಪ ಶಿ ಬಡಿಗೇರ ಅವರೇ ಈ ಎರಡೂ ಕಲಾಕೃತಿ ರಚಿಸಿದ್ದಾರೆ.

ತರಕಾರಿಯಲ್ಲಿ ಅರಳಿದ ಕಲಾಕೃತಿ

ಈ ಹಿಂದಿನ ಕೃಷಿ ಮೇಳದಲ್ಲಿ ತರಕಾರಿ ಕಲಾಕೃತಿಗಳನ್ನು ಬೆರಳೆಣಿಕೆ ಪ್ರಮಾಣದಲ್ಲಿ ಪ್ರದರ್ಶಿಸಲಾಗಿತ್ತು. ಆದರೆ ಈ ಬಾರಿ ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದು ವಿಶೇಷವಾಗಿ ಕಂಗೊಳಿಸಿತು.

ಹಾಗಲಕಾಯಿಯ ಡ್ರ್ಯಾಗನ್‌, ಮೊಸಳೆ, ಬೂದುಗುಂಬಳ ಕಾಯಿ, ಸೋರೆಕಾಯಿಯಲ್ಲಿ ಮೂಡಿದ ನಾಗದೇವತೆ, ಕಲ್ಲಂಗಡಿಯಲ್ಲಿ ಅರಳಿದ ಕಮಲ, ಮೂಲಂಗಿಯಲ್ಲಿ ಗರಿಬಿಚ್ಚಿದ್ದ ಮಯೂರ, ಬದನೆಕಾಯಿಯಲ್ಲಿ ನಿಂತಿದ್ದ ಗರುಡ, ಇನ್ನಿತರೆ ತರಕಾರಿಗಳಲ್ಲಿ ಮೀನು, ಗಣಪ, ಅಣಬೆ, ಗೂಬೆ, ಓಂ, ತರಹೇವಾರಿ ಹೂವುಗಳ ಕಲಾಕೃತಿ ಪ್ರದರ್ಶನಕ್ಕಿದ್ದವು.

ಆ್ಯಂಥೂರಿಯಂ, ಜರ್ಬೆರಾ, ಹೆಲಕೋನಿಯಾ, ಗಿಪ್ಸೊಫೆಲಿಯಾ, ಬರ್ಡ್‌ ಆಫ್‌ ಪ್ಯಾರಡೈಸ್‌, ಸೇವಂತಿಗೆ, ಹೈಬ್ರೀಡ್‌ ಸೇವಂತಿಗೆ, ನಾನಾ ನಮೂನೆಯ ಗುಲಾಬಿ, ಸುಗಂಧರಾಜ, ಆಸ್ಲರ್‌ ತಳಿಗಳ ಹೂವುಗಳು, ಗ್ಲ್ಯಾಡಿಯೋಲಸ್‌, ಕಾರ್ನೇಶನ್‌, ವಿಲಿಯಮ್ಸ್‌ ಒರಿಂಟಲ್, ಆರ್ಕಿಡ್ಸ್‌ (ಸೀತಾಳೆ) ಹೂವುಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಬಾರೆ, ಆಪಲ್ ಬಾರೆ, ಪ್ಲಾಮ್‌ ಬಾರೆ, ಸೀಬೆ ಬಾರೆ, ಕಿವಿ, ಪೀಯೆರ್, ಸೀತಾಫಲ, ತೆಂಗಿನಕಾಯಿ, ಡ್ರ್ಯಾಗನ್‌ ಫ್ರೂಟ್‌, ದಾಳಿಂಬೆ, ನಿಂಬೆ ಹಣ್ಣು ಸಹ ಪ್ರದರ್ಶನದಲ್ಲಿದ್ದವು.

* * 

ವಾರದಿಂದ ಸಿದ್ಧತೆ ನಡೆದಿತ್ತು. ಕೃಷಿ ವಿ.ವಿ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಮುಂದಿನ ವರ್ಷ ಬೃಹತ್ ಪ್ರಮಾಣದಲ್ಲಿ ಪ್ರದರ್ಶನ ಆಯೋಜಿಸುತ್ತೇವೆ
ಎಸ್‌.ಆರ್‌.ಕುಮಾರಸ್ವಾಮಿ
ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT