ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಮಗಾರಿ; ಅಪೂರ್ಣ ಮಾಹಿತಿ

Last Updated 9 ಜನವರಿ 2018, 6:00 IST
ಅಕ್ಷರ ಗಾತ್ರ

ಯಾದಗಿರಿ: ‘ಅಭಿವೃದ್ಧಿ ಕಾಮಗಾರಿ ಕುರಿತು ಟೆಂಡರ್ ಏಕೆ ರದ್ದುಪಡಿಸಿದ್ದೀರಿ? ಸಿದ್ಧಪಡಿಸಿರುವ ಕ್ರಿಯಾಯೋಜನೆಯಲ್ಲಿ ಆಗಿರುವ ಲೋಪಗಳೇನು ತಿಳಿಸಿ? ಉಳಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಏಕೆ ನಡೆಸಿಲ್ಲ? ಟೆಂಡರ್ ಪ್ರಕ್ರಿಯೆ ರದ್ದುಪಡಿಸುತ್ತಾ ಹೋದರೆ ಪುನರ್ ಕ್ರಿಯಾಯೋಜನೆಯ ವೆಚ್ಚ ಯಾರು ಭರಿಸುತ್ತಾರೆ? ನೀವೇನು ಆಟ ಆಡುತ್ತಿದ್ದೀರಾ? ಅಭಿವೃದ್ಧಿ ಕೆಲಸ ಆಗದಿದ್ದರೆ ಜನ ಸರ್ಕಾರಕ್ಕೆ ಶಾಪ ಹಾಕುತ್ತಾರೆ. ಸಚಿವರನ್ನು ಪ್ರಶ್ನಿಸುತ್ತಾರೆ..’

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಹಾಗೂ ನಗರಾಭಿವೃದ್ಧಿ ಕೋಶದ ನಿರ್ದೇಶಕ ಎಸ್.ಪಿ.ನಂದಗಿರಿ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

‘ಜಿಲ್ಲೆಯಲ್ಲಿನ ನಗರಸಭೆ ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಸರ್ಕಾರ ನಿಗದಿತ ಅನುದಾನ ನೀಡಿ ದ್ದರೂ, ಸ್ಥಳೀಯ ಸಂಸ್ಥೆಗಳು ಸಕಾಲದಲ್ಲಿ ಕ್ರಿಯಾಯೋಜನೆ ನಡೆಸಿ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಈ ಕುರಿತು ನೀವು ಜಿಲ್ಲಾಧಿಕಾರಿಗೆ ಏಕೆ ವರದಿ ಸಲ್ಲಿಸಿಲ್ಲ, ನೋಟಿಸ್‌ ಏಕೆ ನೀಡಿಲ್ಲ? ಸರ್ಕಾರದ ಅನುದಾನ ಬಳಕೆಯಾಗುವಂತೆ ಅಧಿಕಾರಿಗಳ ಮೇಲೆ ಒತ್ತಡ ತಂದು ಅಭಿವೃದ್ಧಿ ಕೆಲಸ ಮಾಡಿಸುವ ಹೊಣೆ ಯಾರದ್ದು? ನೀವು ಹೇಳಿದ್ದನ್ನು ಕೇಳಲು ನಾನು ಬಂದಿಲ್ಲ. ನೀವು ಮಾಡಿರುವ ಪ್ರಗತಿ ಕುರಿತು ನಿಖರ ಮಾಹಿತಿ ಒದಗಿಸಬೇಕು? ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಸಚಿವ ಪ್ರಿಯಾಂಕ್ ಶಹಾಪುರ, ಸುರಪುರ ನಗರಸಭೆ ಹಾಗೂ ಉಳಿದ ಪುರಸಭೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

‘ಬರುವ ಮಾರ್ಚ್‌ ಅಂತ್ಯದಲ್ಲಿ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂಬುದಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಚಿವರಿಗೆ ಉತ್ತರಿಸಿದರು.

ಶಹಾಪುರ ಹಾಗೂ ಸುರಪುರಗಳಲ್ಲಿನ ನರಗಸಭೆಗಳು ಅಭಿವೃದ್ಧಿಯನ್ನೇ ಮರೆತಿವೆ. ಕೆಲಸ ನಿರ್ವಹಿಸದ ಅಧಿಕಾರಿಗಳಿಗೆ ಇನ್ನು ಅವಕಾಶ ನೀಡುವುದಿಲ್ಲ. ನೇರ ಅಮಾನತಿಗೆ ಶಿಫಾರಸು ಮಾಡುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಬಹುಗ್ರಾಮ ಕುಡಿವ ನೀರಿನ ಯೋಜನೆ ಚರ್ಚೆ: ಸಭೆ ಆರಂಭಕ್ಕೂ ಮೊದಲು ಅನುಪಾಲನಾ ವರದಿ ಕುರಿತಂತೆ ಚರ್ಚೆಗೆ ಅವಕಾಶ ಕಲ್ಪಿಸಲಾಯಿತು. ಆಗ ಜಿಲ್ಲಾ ಪಂಚಾಯಿತಿ ಸದಸ್ಯರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನನೆಗುದಿಗೆ ಬಿದ್ದು ಎಂಟು ವರ್ಷಗಳಾದರೂ ಪೂರ್ಣಗೊಂಡಿಲ್ಲ ಎಂಬುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯರು ಸಭೆಯ ಗಮನ ಸೆಳೆದರು.

ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಪೂರ್ಣಗೊಳಿಸಲು ಎಂಟು ವರ್ಷಗಳ ಕಾಲಾವಕಾಶ ಬೇಕೆ? ಎಂದು ಸಚಿವರು ಅಚ್ಚರಿ ವ್ಯಕ್ತಪಡಿಸಿದರು. ಕೂಡಲೇ ಈ ಕುರಿತು ವಿವರಣೆ ನೀಡುವಂತೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ್‌ ಅವರಿಗೆ ಸೂಚಿಸಿದರು.

‘ರೈಲ್ವೆ ತಿರುವುಗಳಲ್ಲಿ ಪೈಪ್‌ಲೈನ್‌ ಕಾರ್ಯ ಬರುವುದರಿಂದ ರೈಲ್ವೆ ಇಲಾಖೆಯಿಂದ ಅನುಮತಿ ಪಡೆಯಲು ಎರಡು ವರ್ಷ ಬೇಕಾಯಿತು. ಈಗಾಗಲೇ ಅಳವಡಿಸಿರುವ ಪೈಪ್‌ಲೈನ್ ಅನ್ನು ರೈತರು ಹೊಲಗಳಲ್ಲಿ ಬೇಸಾಯ ಸಂದರ್ಭದಲ್ಲಿ ಹಾಳು ಮಾಡಿದ್ದಾರೆ. ಇದರಿಂದ ಶೇ 40ರಷ್ಟು ಪೈಪ್‌ಲೈನ್‌ ಒಡೆದು ಹೋಗಿದೆ’ ಎಂದು ಎಂಜಿನಿ ಯರ್ ಮಲ್ಲಿಕಾರ್ಜುನ್‌ ಉತ್ತರಿಸಿದರು.

ಅಧಿಕಾರಿಯ ಉತ್ತರದಿಂದ ತೃಪ್ತರಾಗದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ, ‘ಕ್ರಿಯಾಯೋಜನೆ ಸಂದರ್ಭದಲ್ಲೇ ಪೈಪ್‌ಲೈನ್‌ ಹೇಗೆ? ಎಲ್ಲಿ? ಎಷ್ಟು? ಆಳದಲ್ಲಿ ಅಳವಡಿಸುವ ಕುರಿತು ಅಧ್ಯಯನ ಮಾಡಿಯೇ ಕ್ರಿಯಾಯೋಜನೆ ರೂಪಿಸಲಾಗಿರುತ್ತದೆ. ಹಾಗಾದರೆ, ಬೇಸಾಯ ಸಂದರ್ಭದಲ್ಲಿ ಪೈಪ್‌ಲೈನ್‌ ಹಾಳಾಗಿದೆ ಎಂದರೆ ಕಾಮಗಾರಿ ಕಳಪೆ ಎಂದೇ ಅರ್ಥ ಬರುತ್ತದೆ. ಈ ಕುರಿತು ಕೂಡಲೇ ತನಿಖೆ ನಡೆಸಿ ಕಾಮಗಾರಿ ಪ್ರಗತಿ ಕುರಿತು ಸಮಗ್ರ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವಿನಾಶ್ ಮೆನನ್‌ ರಾಜೇಂದ್ರನ್ ಅವರಿಗೆ ಸೂಚಿಸಿದರು.

ಯುಜಿಡಿ ಇಲ್ಲದ ಕಡೆ ರಸ್ತೆ ಬೇಡ: ಯಾದಗಿರಿ ನಗರಸಭೆಯಲ್ಲಿ ಯುಜಿಡಿ (ಒಳಚರಂಡಿ ವ್ಯವಸ್ಥೆ) ಯೋಜನೆ ಅನುಷ್ಠಾನಕ್ಕೆ ಸರ್ಕಾರ ₹25 ಕೋಟಿ ಅನುದಾನ ನೀಡಿದೆ. ಆದರೆ, ಇದುವರೆಗೂ ಯುಜಿಡಿ ಯೋಜನೆ ಸಾಕಾರವಾಗಿಲ್ಲ. ಅಧಿಕಾರಿಗಳ–ನಗರಸಭೆ ಸದಸ್ಯರ ನಿರ್ಲಕ್ಷ್ಯದಿಂದ ಜನೋಪಯೋಗಿ ಯೋಜನೆ ಹಳ್ಳ ಹಿಡಿದಿದೆ. ಯುಜಿಡಿ ಇಲ್ಲದ ಕಡೆಯ ಬಡಾವಣೆಗಳಲ್ಲಿ ರಸ್ತೆಗಳನ್ನು ನಿರ್ಮಿಸಬಾರದು ಎಂದು ಹರ್ಷಗುಪ್ತ ಅಧಿಕಾರಿಗಳಿಗೆ ಸೂಚಿಸಿದರು.

ಮಾರುಕಟ್ಟೆ ಮಂಜೂರಾಗಿ ಮೂರು ವರ್ಷ: ನಗರಕ್ಕೆ ತರಕಾರಿ ಹಾಗೂ ಮಾಂಸ ಮಾರುಕಟ್ಟೆ ಮಂಜೂರಾಗಿ ಮೂರು ವರ್ಷ ಕಳೆದರೂ, ನಗರಸಭೆ ಅಧಿಕಾರಿಗಳು ಮಾರುಕಟ್ಟೆ ನಿರ್ಮಾಣಕ್ಕೆ ಕನಿಷ್ಠ ಸ್ಥಳ ಪರಿಶೀಲನೆ ಕೂಡ ನಡೆಸಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳನ್ನು ಪುನಃ ತರಾಟೆಗೆ ತೆಗೆದುಕೊಂಡರು. ಜನರು ಮಾರುಕಟ್ಟೆ ಇಲ್ಲದೇ ನಿರಾಶರಾಗಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಒಂದೂ ಮಾರುಕಟ್ಟೆ ಇಲ್ಲ ಎಂದರೆ ಮುಜುಗರ ಅನುಭವಿಸಬೇಕಾಗುತ್ತದೆ. ಅಂಥ

ದ್ದರಲ್ಲಿ ಸರ್ಕಾರ ಮಾರುಕಟ್ಟೆ ನಿರ್ಮಾಣಕ್ಕೆ ಹಣ ನೀಡಿದ್ದರೂ, ಅಧಿಕಾರಿಗಳು ಸ್ಥಳ ಗುರುತಿಸುವ ಗೋಜಿಗೆ ಹೋಗದಿರುವುದು ಬೇಜವಾಬ್ದಾರಿ ತೋರಿಸುತ್ತದೆ. ಇಂಥಾ ಬೇಜವಾಬ್ದಾರಿ ಮುಂದುವರಿದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಹರಿಹಾಯ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ ಅನಪೂರ, ಶಾಸಕರಾದ ರಾಜಾ ವೆಂಕಟಪ್ಪನಾಯಕ, ಗುರು ಪಾಟೀಲ ಶಿರವಾಳ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಇದ್ದರು.

ಅಮಾನತಿಗೆ ಸೂಚನೆ

ತ್ರೈಮಾಸಿಕ ಪ್ರಗತಿ ಪರಿಶೀಲನಾಸಭೆಗೆ ಗೈರಾಗಿದ್ದ ಕರ್ನಾಟಕ ಗೃಹ ಮಂಡಳಿಯ ಅಧಿಕಾರಿಗೆ ನೋಟಿಸ್‌ ನೀಡದೇ ನೇರವಾಗಿ ಕಾರಣಗಳನ್ನು ಸೂಚಿಸಿ ಅಮಾನತಿಗೆ ಶಿಫಾರಸು ಮಾಡುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಅದೇ ರೀತಿಯಲ್ಲಿ ಸುರಪುರ ಹಾಗೂ ಶಹಾಪುರ ನಗರಸಭೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಎಂಜಿನಿಯರ್ ‘ಸಾದಿಕ್‌’ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬುದಾಗಿ ಶಾಸಕರಾದ ಗುರು ಪಾಟೀಲ ಶಿರವಾಳ, ರಾಜಾ ವೆಂಕಟಪ್ಪ ನಾಯಕ ಸಚಿವರಿಗೆ ದೂರಿದರು. ಕೂಡಲೇ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಎಸ್‌ಸಿಪಿ, ಟಿಎಸ್‌ಪಿ ಕಾಮಗಾರಿ ವಿಳಂಬವಾದರೆ ಜೈಲು: ಎಚ್ಚರಿಕೆ

‘ವಿವಿಧ ಇಲಾಖೆಗಳಲ್ಲಿನ ಎಸ್‌ಸಿಪಿ, ಟಿಎಸ್‌ಪಿ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ) ಯೋಜನೆಯ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದಿದ್ದರೆ ಅಧಿಕಾರಿಗಳು ಜೈಲು ಪಾಲಾಗಬೇಕಾಗುತ್ತದೆ’ ಎಂದು ಸಚಿವ ಪ್ರಿಯಾಂಕ್ ಎಂ.ಖರ್ಗೆ ಖಡಕ್ ಎಚ್ಚರಿಕೆ ನೀಡಿದರು.

2014–15ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುರುಮಠಕಲ್‌ನಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಡಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ನಿರ್ಮಿತಿ ಕೇಂದ್ರ ಕೈಗೊಂಡಿರುವ ಯೋಜನೆಗಳ ಕಾಮಗಾರಿಗಳು ಅಪೂರ್ಣಗೊಂಡಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

‘ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಮುಂತಾದ ಇಲಾಖೆಗಳು ಬಳಸಿಕೊಂಡು ಗುರಿ ಸಾಧಿಸುವ ಮೂಲಕ ನಿಗದಿತ ಸಮಯದಲ್ಲಿ ಫಲಾನುಭವಿಗಳಿಗೆ ಯೋಜನೆಗಳ ಲಾಭ ತಲುಪಿಸಬೇಕು’ ಎಂದು ಸೂಚಿಸಿದರು.

32 ತೊಗರಿ ಖರೀದಿ ಕೇಂದ್ರ ಸ್ಥಾಪನೆ

ಜಿಲ್ಲೆಯಲ್ಲಿ ರೈತರು ಬೆಳೆದ ತೊಗರಿ ಖರೀದಿಸಲು ಈಗಾಗಲೇ 32 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇಂದ್ರಗಳಲ್ಲಿ ಖಾಲಿ ಚೀಲಗಳ ಸಮಸ್ಯೆ ಇತ್ತು. ಈಗ ಪ್ರತಿಯೊಂದು ತೊಗರಿ ಕೇಂದ್ರಗಳಿಗೆ 20 ಸಾವಿರ ಖಾಲಿ ಚೀಲಗಳನ್ನು ನೀಡಲಾಗಿದೆ. ಬೆಳೆ ದೃಢೀಕರಣ ಪತ್ರ ಕೈಬಿಡುವಂತೆ ರೈತರಿಂದ ಒತ್ತಡ ಬರುತ್ತಿದೆ. ಆದರೆ, ದೃಢೀಕರಣ ಇಲ್ಲದಿದ್ದರೆ ಅವ್ಯವಸ್ಥೆ ಉಂಟಾಗುತ್ತದೆ. ಮೊದಲು ತೊಗರಿ ಖರೀದಿಸಿ, ನಂತರ ರೈತರಿಂದ ದೃಢೀಕರಣ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಚಿವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

* * 

ಕಾಮಗಾರಿಗಳಿಗೆ ಎಚ್‌ಕೆಆರ್‌ಡಿಬಿ ಯಿಂದ ದುರಸ್ತಿ ವೆಚ್ಚ ನೀಡುವುದಿಲ್ಲ. ಈ ರೀತಿಯ ಅವಕಾಶ ಇರುವುದರಿಂದಲೇ ಕಾಮಗಾರಿ ಕಳಪೆ ಮಾಡಲಾಗುತ್ತಿದೆ.
ಹರ್ಷಗುಪ್ತ
ಪ್ರಾದೇಶಿಕ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT