25 ಕುಟುಂಬಗಳ ಬದುಕಲ್ಲಿ ‘ಕತ್ತಲೆ’

7

25 ಕುಟುಂಬಗಳ ಬದುಕಲ್ಲಿ ‘ಕತ್ತಲೆ’

Published:
Updated:
25 ಕುಟುಂಬಗಳ ಬದುಕಲ್ಲಿ ‘ಕತ್ತಲೆ’

ಶಹಾಪುರ: ಶಿಕ್ಷಣ ವಂಚಿತ ಮಕ್ಕಳು. ಗ್ರಾಮ ಪಂಚಾಯಿತಿ ಸದಸ್ಯೆಯೇ ಗುಡಿಸಲಿನಲ್ಲಿ ವಾಸ. 30 ವರ್ಷಗಳಿಂದಲೂ ಇಲ್ಲದ ವಿದ್ಯುತ್ ಸಂಪರ್ಕ. ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯವಿಲ್ಲದೆ ಗ್ರಾಮಸ್ಥರ ಜೀವನ. ಇದು ತಾಲ್ಲೂಕಿನ ಐಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಕೂರ ದುರ್ಗಾನೋರ ಗುಡಿಸಲು ನಿವಾಸಿಗಳ ಬವಣೆ.

ಐಕೂರ ಗ್ರಾಮದಿಂದ ನಾಲ್ಕು ಕಿ.ಮೀ ದೂರವಿದೆ. ಅಲ್ಲದೆ ಹಂಚಿನಾಳ–ಬಿರಣಕಲ್ ಹೆದ್ದಾರಿಗೆ ಹೊಂದಿಕೊಂಡು ಗುಡಿಸಲುಗಳು ಇವೆ. ಕಳೆದ 30 ವರ್ಷಗಳಿಂದ 25 ಕುಟುಂಬಗಳು ತಮ್ಮ ಜಮೀನುಗಳಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಗ ಅಲ್ಲಿನ ಜನಸಂಖ್ಯೆ ಸುಮಾರು 200 ಇದೆ. ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದವರು ಹೆಚ್ಚಾಗಿ ಇದ್ದಾರೆ. ಸ್ವತಃ ಗ್ರಾಮ ಪಂಚಾಯಿತಿ ಸದಸ್ಯೆ ಚೆನ್ನಮ್ಮ ಅವರಿಗೆ ಮನೆ ಇಲ್ಲ. ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಇಂದಿಗೂ ಸೂರು ವಂಚಿತ ಐಕೂರ ದುರ್ಗಾನೋರ ಗುಡಿಸಲು ನಿವಾಸಿಗಳು ಎತ್ತುಗಳ ಜತೆಯಲ್ಲಿ ಆಕಳು, ಕುರಿ, ಕೋಳಿ ಸಾಕಣೆ ಮಾಡಿ ಜೀವನ ನಡೆಸುತ್ತಿದ್ದಾರೆ.

‘ಗುಡಿಸಲಿನಲ್ಲಿ ವಾಸವಾಗಿದ್ದರಿಂದ ಚಿಮಣಿ ದೀಪ ಹಚ್ಚುವುದಿಲ್ಲ. ತುಸು ಗಾಳಿ ಬೀಸಿದರೆ ದೀಪದ ಕಿಡಿ ಗುಡಿಸಲಿಗೆ ತಾಗುವ ಭೀತಿಯಿದೆ. ಎರಡು ವರ್ಷಗಳ ಹಿಂದೆ ದೀಪದ ಬೆಂಕಿಯಿಂದ ಮೂರು ಗುಡಿಸಲು ಸುಟ್ಟು ಹೋದವು. ಗುಡಿಸಲಿನಲ್ಲಿ ಸಂಗ್ರಹಿಸಿಟ್ಟಿದ್ದ ದವಸಧಾನ್ಯ ಹಾಗೂ ಬಟ್ಟೆ ಎಲ್ಲವೂ ಬೆಂಕಿಗೆ ಆಹುತಿಯಾದವು. ರಾತ್ರಿಯ ದೀಪವೆಂದರೆ ಭಯ ಪಡುವ ದುಃಸ್ಥಿತಿ ಇದೆ. ಹಾವು ಕಡಿತದಿಂದ ಎರಡು ಮಕ್ಕಳನ್ನು ಕಳೆದುಕೊಂಡಿದ್ದೇವೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಅಲ್ಲಿನ ನಿವಾಸಿ ಅಯ್ಯಮ್ಮ.

‘ಕುಡಿಯುವ ನೀರಿಲ್ಲ. ಜಮೀನಿನ ಒಂದು ಮೂಲೆಯಲ್ಲಿ ಗುಂಡಿ ತೋಡಿದ್ದೇವೆ. ಅದೇ ಕಲುಷಿತ ನೀರು ನಮಗೆ ಪಂಚಾಮೃತವಾಗಿದೆ. ಬೇಸಿಗೆ ಸಮಯದಲ್ಲಿ ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತದೆ. ಈಗ ಒಂದು ಕೈಪಂಪು ಕೊರೆಸಿದ್ದಾರೆ. ವಾಲ್ಮೀಕಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಮಂಜೂರಾತಿಗೆ ಸತತ ನಾಲ್ಕು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮದ ಮುಖಂಡ ಹಣಮಂತ.

‘ಗ್ರಾಮದಲ್ಲಿ ಸುಮಾರು 60 ಮಕ್ಕಳು ಇದ್ದಾರೆ. ಶಾಲೆ ಇಲ್ಲದ ಕಾರಣ ಅವರು ಶಾಲೆಯ ಮುಖವನ್ನು ನೋಡಿಲ್ಲ. ಕನಿಷ್ಠ ಅಂಗನವಾಡಿ ಕೇಂದ್ರ ಸಹ ಇಲ್ಲ. ಕೆಲ ಸ್ಥಿತಿವಂತರು ತಮ್ಮ ಸಂಬಂಧಿಕರ ಮನೆಯಲ್ಲಿ ಮಕ್ಕಳನ್ನು ಬಿಟ್ಟಿದ್ದಾರೆ. ಅವರಲ್ಲಿ ಶರಣಬಸವ ಎಂಬ ಯುವಕ ಪದವೀಧರನಾಗಿದ್ದಾನೆ. ಶಾಲೆಯನ್ನಾದರೂ ಸ್ಥಾಪಿಸಿ ನಮ್ಮ ಮಕ್ಕಳಿಗೆ ಶಿಕ್ಷಣ ಭಾಗ್ಯ ಕಲ್ಪಿಸಿ’ ಎಂದು ಪಾಲಕರು ಒತ್ತಾಯಿಸುತ್ತಾರೆ. ‘ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲವಾದರೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಮೊರೆ ಹೋಗುತ್ತೇವೆ’ ಎಂದು ಯುವಕ ಶರಣಬಸವ ತಿಳಿಸಿದರು.

ತಾತ್ಕಾಲಿಕ ಶಾಲೆ ಆರಂಭ’

‘ಶಾಲೆಯಿಂದ ಮಕ್ಕಳು ಹೊರಗುಳಿದಿರುವ ಮಾಹಿತಿ ಇಲ್ಲ. ಸಿಆರ್‌ಸಿಯಿಂದ ವರದಿ ತರಿಸಿಕೊಂಡು ಅಗತ್ಯವೆನಿಸಿದರೆ ನಾಳೆಯಿಂದಲೇ ತಾತ್ಕಾಲಿಕ ಶಾಲೆ ಆರಂಭಿಸಲಾಗುವುದು. ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವುದಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ವೆಂಕಯ್ಯ ಇನಾಮದಾರ ತಿಳಿಸಿದರು.

* * 

25 ಕುಟುಂಬಗಳಿವೆ. ಒಂದು ಆಶ್ರಯ ಮನೆ ಮಂಜೂರು ಆಗಿದೆ. ನಿವೇಶನ ಒದಗಿಸಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ

ಚೆನ್ನಮ್ಮ ,ಗ್ರಾಮ ಪಂಚಾಯಿತಿ ಸದಸ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry