ಕುರಿ–ಮೇಕೆ ಸಂತೆಗೆ ಮೇಟಿ ಚಾಲನೆ

7

ಕುರಿ–ಮೇಕೆ ಸಂತೆಗೆ ಮೇಟಿ ಚಾಲನೆ

Published:
Updated:
ಕುರಿ–ಮೇಕೆ ಸಂತೆಗೆ ಮೇಟಿ ಚಾಲನೆ

ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆ ಕಾರಣಕ್ಕೆ ಸ್ಥಗಿತಗೊಂಡಿದ್ದ ನಗರದ ಕುರಿ ಹಾಗೂ ಮೇಕೆ ಸಂತೆಯನ್ನು ಸೋಮವಾರ ಪುನರ್‌ ಆರಂಭಿಸಲಾಯಿತು. ಇಲ್ಲಿನ ಕೃಷ್ಣಾ ಚಿತ್ರಮಂದಿರ ಎದುರಿನ ಹಿನ್ನೀರಿನ ಖಾಲಿ ಪ್ರದೇಶದಲ್ಲಿ ಆರಂಭವಾದ ಸಂತೆಗೆ ಶಾಸಕ ಎಚ್.ವೈ.ಮೇಟಿ ಚಾಲನೆ ನೀಡಿದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ದಿ ಪಡಿಸಿರುವ ಆವರಣದಲ್ಲಿ ಸಂತೆ ಆರಂಭವಾಗಿದೆ.

ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಶಾಸಕ ಎಚ್.ವೈ.ಮೇಟಿ, ಬಾಗಲಕೋಟೆ ಈ ಹಿಂದೆ ಕುರಿ–ಮೇಕೆ ವಹಿವಾಟಿಗೆ ಹೆಸರುವಾಸಿಯಾಗಿತ್ತು. ಮುಳುಗಡೆ ಕಾರಣದಿಂದ ಸಂತೆಯ ಮೇಲೆ ಕರಿನೆರಳು ಬಿದ್ದಿತ್ತು. ರೈತರ ಆಗ್ರಹ ಹಾಗೂ ನಗರದಲ್ಲಿ ವಾಣಿಜ್ಯ ಚಟುವಟಿಕೆಯ ಉತ್ತೇಜನಕ್ಕಾಗಿ ಎಪಿಎಂಸಿ ವತಿಯಿಂದ ಪುನಃ ಸಂತೆ ಆರಂಭಿಸಲಿದೆ. ಸುತ್ತಲಿನ ಹಳ್ಳಿಗಳ ರೈತರು ಇದರ ಉಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಸಂತೆ ಮೊದಲಿನ ವೈಭವ ಪಡೆದುಕೊಳ್ಳಲು ಕೆಲ ಸಮಯ ಬೇಕಾಗಬಹುದು. ಈಗ ವ್ಯಾಪಕ ಪ್ರಚಾರ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಇದು ಪ್ರಮುಖ ಮಾರುಕಟ್ಟೆಯಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಕುರಿ ಸಂತೆ ಆರಂಭದಿಂದ ವ್ಯಾಪಾರ ವಹಿವಾಟು ಹೆಚ್ಚಳಗೊಂಡು ಮುಳುಗಡೆ ಪ್ರದೇಶ ಎಂಬ ಶಾಪ ವಿಮೋಚನೆಯಾಗಲಿದೆ. ಮುಂಬರುವ ದಿನಗಳಲ್ಲಿ ಈ ಪ್ರದೇಶ ಪ್ರಮುಖ ವಾಣಿಜ್ಯ ಕೇಂದ್ರವಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿ ಸೋಮವಾರ ಕುರಿ ಸಂತೆ ನಡೆದರೆ ವಾರದ ಉಳಿದ ದಿನ ಇಲ್ಲಿ ತರಕಾರಿ ಸಂತೆ ನಡೆಸುವುದು ಸೂಕ್ತ. ಇದು ಸ್ಥಳೀಯರ ಬೇಡಿಕೆಯೂ ಆಗಿದೆ ಎಂದರು. ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಇಲ್ಲಿ ಮತ್ತೆ ಕುರಿ ಸಂತೆ ಆರಂಭವಾಗುತ್ತಿರುವುದು ಸಮಾಧಾನಕರ ಸಂಗತಿ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಪಿಎಂಸಿ ಅಧ್ಯಕ್ಷ ಶಿವಾನಂದ ಅಬ್ದಲ್‌ಪುರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗಪ್ಪ ಸೊನ್ನದ, ಕಾರ್ಯದರ್ಶಿ ಟಿ.ಜಿ.ಉಣ್ಣಿಬಾವಿ, ನಿರ್ದೇಶಕರು, ಬಿಟಿಡಿಎ ಅಧ್ಯಕ್ಷ ಎ.ಡಿ.ಮೊಕಾಶಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry