ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಕಲುಷಿತ: ಅಧಿಕಾರಿಗಳ ವಿರುದ್ಧ ದೂರು

Last Updated 9 ಜನವರಿ 2018, 6:44 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸೂಕ್ತ ಜಾಗವಿಲ್ಲದ ಕಾರಣ ಪಾಳುಬಾವಿಗಳು, ಗುಂಡಿಗಳಿಗೆ ತುಂಬಿ ಬೆಂಕಿ ಹಚ್ಚಲಾಗುತ್ತಿದ್ದು, ಜನರ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ ಎಂದು ದೂರಲಾಗಿದೆ.

ಇಲ್ಲಿ 23 ವಾರ್ಡುಗಳಿವೆ. 38 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪ್ರತಿನಿತ್ಯ 4 ರಿಂದ 5 ಟನ್ ಕಸ ಉತ್ಪಾದನೆಯಾಗುತ್ತಿದೆ. ಉತ್ಪಾದನೆಯಾಗುತ್ತಿರುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಜಾಗವಿಲ್ಲದ ಕಾರಣ ಅನಿವಾರ್ಯವಾಗಿ ರಾತ್ರಿಯ ವೇಳೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಪಾಳು ಬಾವಿಗಳಿಗೆ ಸುರಿಯುತ್ತಿದ್ದಾರೆ. ದೇವನಹಳ್ಳಿ ರಸ್ತೆಯಲ್ಲಿರುವ ಬಸಪ್ಪನ ತೋಪಿನ ಬಳಿಯಿರುವ ಕುಂಟೆಯ ಬಳಿಯಲ್ಲೂ ಸುರಿದು ಬೆಂಕಿ ಹಚ್ಚಿದ್ದಾರೆ.

‘ವಿಜಯಪುರ ಪುರಸಭೆಯಲ್ಲಿ ಅಧ್ಯಕ್ಷರಿಲ್ಲದ ಕಾರಣ, ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸದಸ್ಯರು ಸ್ವ ಪ್ರತಿಷ್ಠೆಗಳನ್ನು ಬದಿಗೊತ್ತಿ ಜನಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು’ ಎಂದು ವ್ಯಾಪಾರಸ್ಥ ನಾಗೇಶ್ ಅವರು ಹೇಳುತ್ತಾರೆ.

ಆಯಾ ವಾರ್ಡುಗಳಲ್ಲಿ ಕಸ ವಿಲೇವಾರಿ ಮಾಡಲು ನಿರ್ಮಾಣ ಮಾಡಿದ್ದ ಘಟಕ ಉಪಯೋಗಕ್ಕೆ ಬರುತ್ತಿಲ್ಲ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ತೆಗೆದಿರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಟೌನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್ ಹೇಳುತ್ತಾರೆ.

ಸಮಯಕ್ಕೆ ಸರಿಯಾಗಿ ಕಸ ವಿಲೇವಾರಿಯಾಗದೆ ಮನೆಗಳಲ್ಲಿ ವಾಸಮಾಡಲಿಕ್ಕೂ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉದ್ಯಮಿ ಎಸ್.ಎಲ್.ವಿ.ವೆಂಕಟೇಶ್ ಒತ್ತಾಯಿಸಿದ್ದಾರೆ.

ಎದುರಾಗುತ್ತಿರುವ ಸಮಸ್ಯೆಗಳು: ಸರಿಯಾಗಿ ಕಸ ವಿಲೇವಾರಿಯಾಗದ ಕಾರಣ, ಪಟ್ಟಣದ ಸೌಂದರ್ಯ ಹಾಳಾಗುತ್ತಿರುವುದರ ಜೊತೆಗೆ ಕೊಳೆಯುತ್ತಿರುವ ಕಸದಿಂದ ಬರುವ ದುರ್ವಾಸನೆಯಿಂದ ಜನರು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಆಸ್ಪತ್ರೆಗೆ ಬರುತ್ತಿರುವ ಬಹುತೇಕ ರೋಗಿಗಳಲ್ಲಿ ಶ್ವಾಸಕೋಶದ ಸಮಸ್ಯೆ, ಹಾಗೂ ಉಸಿರಾಟದ ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ದೂರುತ್ತಾರೆ. ಪಾಳುಬಾವಿಗಳು, ಗುಂಡಿಗಳಲ್ಲಿ ಕಸವನ್ನು ಸರಿಯುತ್ತಿರುವುದರಿಂದ ಭವಿಷ್ಯದಲ್ಲಿ ಅಂತರ್ಜಲ ಕಲುಷಿತವಾಗಿ ವಿಷಮಯವಾಗುವ ಭೀತಿ ಎದುರಾಗಿದೆ ಎಂದಿದ್ದಾರೆ.

ನಿಯಂತ್ರಣ ಕ್ರಮಗಳು: ಕಸ ವಿಲೇವಾರಿ ಮಾಡಲು ಸೂಕ್ತವಾದ ಜಾಗವನ್ನು ಮಂಜೂರು ಮಾಡಿ, ವೈಜ್ಞಾನಿಕವಾಗಿ ಕಸವನ್ನು ವಿಲೇವಾರಿ ಮಾಡಲು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯ.

ಪುರಸಭೆಯಿಂದ ಕಸ ಸಂಗ್ರಹಣೆಗಾಗಿ ಪ್ರತ್ಯೇಕವಾದ ವಾಹನಗಳನ್ನು ನಿಯೋಜನೆಗೊಳಿಸಬೇಕು. ಪ್ಲಾಸ್ಟಿಕ್ ಬಳಕೆಗೆ ಕಡ್ಡಾಯವಾಗಿ ಕಡಿವಾಣ ಹಾಕಬೇಕು. ಮನೆಗಳಲ್ಲಿ ಉತ್ಪತ್ತಿಯಾದ ಕಸವನ್ನು ಎಲ್ಲೆಂದರಲ್ಲಿ ಹಾಕುವ ಬದಲಿಗೆ ಹಸಿ ಕಸ, ಒಣಕಸವನ್ನಾಗಿ ವಿಂಗಡಣೆ ಮಾಡಿ, ಪುರಸಭೆಯ ವಾಹನಗಳಿಗೆ ಸುರಿಯುವಂತೆ ಜಾಗೃತಿ ಮೂಡಿಸಲು ಜನರು ಆಗ್ರಹಿಸಿದ್ದಾರೆ.

ಕನಿಷ್ಠ ಮೂರುದಿನಗಳಿಗೊಮ್ಮೆ ಕಸವನ್ನು ಸಂಗ್ರಹಿಸುವುದು. ಚರಂಡಿಗಳಲ್ಲಿ ಸ್ವಚ್ಛತೆ ಕಾಪಾಡುವುದು, ಬ್ಲೀಚಿಂಗ್ ಸಿಂಪರಣೆ ಮಾಡುವ ಮೂಲಕ ಕಸದ ಸಮಸ್ಯೆ ನಿಯಂತ್ರಿಸಬಹುದಾಗಿದೆ ಎಂದು ನಾಗರಿಕರು ತಿಳಿಸುತ್ತಾರೆ.

ಹಾಳಾಗುವ ನಗರ ಸೌಂದರ್ಯ

ಎಲ್ಲೆಂದರಲ್ಲಿ ಕೊಳೆಯುತ್ತಿರುವ ಕಸದ ರಾಶಿಗಳಿಂದ ಬೇಸತ್ತಿರುವ ನಾಗರಿಕರು ಬೆಂಕಿ ಹಚ್ಚುತ್ತಿದ್ದಾರೆ. ಪ್ಲಾಸ್ಟಿಕ್ ಕವರ್‌, ಕೋಳಿ ತ್ಯಾಜ್ಯಗಳಿಂದ ಬೀರುತ್ತಿರುವ ದುರ್ವಾಸನೆಯಿಂದ ನಾಗರಿಕರ ಆರೋಗ್ಯ ಹದಗೆಡುತ್ತಿರುವುದರ ಜೊತೆಗೆ ಪಟ್ಟಣದ ಸೌಂದರ್ಯವು ಹಾಳಾಗುತ್ತಿದೆ.

ಇಲ್ಲಿ ನಾಯಿಕೊಡೆಗಳಂತೆ ತಲೆಎತ್ತಿರುವ ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುತ್ತಿರುವ ಕೋಳಿ ತ್ಯಾಜ್ಯಗಳನ್ನು ಚಿಕ್ಕಬಳ್ಳಾಪುರದ ಮುಖ್ಯರಸ್ತೆ, ದೇವನಹಳ್ಳಿ–ಕೋಲಾರ ಬೈಪಾಸ್ ರಸ್ತೆ, ಸೇರಿದಂತೆ ರಸ್ತೆಗಳ ಇಕ್ಕೆಲುಗಳಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿ ಪರದಾಡುವಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.

* * 

ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ಸಂಬಂಧಿಸಿದ ಭೂಮಿಯ ಕಡತಗಳು ಉಪವಿಭಾಗಾಧಿಕಾರಿಗಳ ಬಳಿಯಿದೆ, ಅವರು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ನಾವು ದೇವನಹಳ್ಳಿಯ ಬಳಿಯಲ್ಲಿ ಕಸವನ್ನು ಸುರಿಯುತ್ತಿದ್ದೇವೆ
– ಎ.ಎಚ್.ನಾಗರಾಜ್,
ಮುಖ್ಯಾಧಿಕಾರಿ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT