ಸಭೆಗೆ ಬಾರದ ಬುಡಾ ಅಧ್ಯಕ್ಷ, ಆಯುಕ್ತ

7

ಸಭೆಗೆ ಬಾರದ ಬುಡಾ ಅಧ್ಯಕ್ಷ, ಆಯುಕ್ತ

Published:
Updated:
ಸಭೆಗೆ ಬಾರದ ಬುಡಾ ಅಧ್ಯಕ್ಷ, ಆಯುಕ್ತ

ಬಳ್ಳಾರಿ: ‘ನಲ್ಲಚೆರುವು ಪ್ರದೇಶದ ಈದ್ಗಾ ಮೈದಾನ ಸಮೀಪ ಅನಧಿಕೃತವಾಗಿ ಕಾಂಪೌಂಡ್‌ ನಿರ್ಮಿಸಿ ಬಡಾವಣೆ ರಚಿಸಲು ಸಿದ್ಧತೆ ನಡೆದಿದೆ’ ಎಂಬ ದೂರಿನ ಅನ್ವಯ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಸಾರ್ವಜನಿಕ ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಮುಸ್ಲಿಮ್‌ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯನ್ನು ಪ್ರಾಧಿಕಾರದ ಸೂಚನೆ ಮೇರೆಗೆ ಏರ್ಪಡಿಸಿದ್ದರೂ ಅಧ್ಯಕ್ಷರು ಮತ್ತು ಆಯುಕ್ತರು ಗೈರಾಗಿರುವುದು ಅನುಮಾನಗಳಿಗೆ ಎಡೆ ಮಾಡಿದೆ ಎಂದೂ ಮುಖಂಡರು ದೂರಿದರು. ಅಲ್ಲದೇ, ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್‌ ರವಿಶಂಕರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಬಡಾವಣೆ ನಿರ್ಮಾಣಕ್ಕೆ ತಾತ್ಕಾಲಿಕ ಅನುಮತಿಯನ್ನಷ್ಟೇ ನೀಡಲಾಗಿದೆ ಎಂಬ ಅವರ ಮಾತನ್ನು ಸಭೆಯಲ್ಲಿದ್ದ ಬಹುತೇಕರು ವಿರೋಧಿಸಿದರು.

ಕ್ರಮವಿಲ್ಲ: ‘ಕಾಂಪೌಂಡ್‌ ನಿರ್ಮಾಣ ಆರಂಭವಾದ ಕೂಡಲೇ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೂ ಸ್ಪಂದಿಸದ ಕಾರಣ ಪ್ರಾಧಿಕಾರದವರೆಗೂ ಪಾದಯಾತ್ರೆ ನಡೆಸಿ ಆಗ್ರಹಿಸಿದ್ದರೂ ಪ್ರಾಧಿಕಾರ ಕ್ರಮ ಕೈಗೊಂಡಿಲ್ಲ. ಈಗ ಕಾಂಪೌಂಡ್‌ ನಿರ್ಮಾಣ ಪೂರ್ಣಗೊಂಡಿದ್ದು, ಒಳಗೆ ಬಡಾವಣೆ ನಿರ್ಮಾಣ ಕಾರ್ಯ ನಡೆದಿದೆ. ಈ ಅಕ್ರಮಕ್ಕೆ ಪ್ರಾಧಿಕಾರ ಕುಮ್ಮಕ್ಕು ನೀಡಿದೆ’ ಎಂದು ಜಿಲ್ಲಾ ವಕ್ಫ್‌ ಮಂಡಳಿ ಅಧ್ಯಕ್ಷ ರಿಜ್ವಾನ್‌, ಮುಖಂಡರಾದ ಬಾಬು ಇಬ್ರಾಹಿಂ, ವಲಿಬಾಷಾ ಆರೋಪಿಸಿದರು.

ಅವರ ಮಾತಿಗೆ ದನಿಗೂಡಿಸಿದ ಕೆಲವು ಸ್ಥಳೀಯರು, ‘ಕೂಡಲೇ ಕಾಂಪೌಂಡ್‌, ಕಾಲುವೆಗಳನ್ನು ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು. ಆದರೆ ‘ಬುಡಾ ಅಧ್ಯಕ್ಷ, ಆಯುಕ್ತರು ಇಲ್ಲದಿರುವುದರಿಂದ ದಿಢೀರನೆ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ’ ಎಂದು ಪಾಲಿಕೆ ಆಯುಕ್ತೆ ಜೆ.ಆರ್‌.ಜೆ.ದಿವ್ಯಪ್ರಭು ಸ್ಪಷ್ಟಪಡಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅನಿಲ್‌ ಲಾಡ್,‘ಸರ್ವೆ ನಂ. 964 ಗೆ ಸೇರಿದ ಭೂಮಿಯನ್ನು ಸರ್ವೆ ನಂ 964ಎ ಮತ್ತು ಬಿ ಎಂದು ವಿಂಗಡಿಸಿ ಅಲ್ಲಿ ಸಾಗುವಳಿ ನಡೆಯುತ್ತಿತ್ತು ಎಂಬ ದಾಖಲೆಯನ್ನು ಸೃಷ್ಟಿಸಲಾಗಿದೆ. ಸಾಗುವಳಿ ನಡೆಸುತ್ತಿದ್ದವರು ಎನ್ನಲಾದವರಿಗೆ ಪ್ರಾಧಿಕಾರವು ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂಬುದು ಮುಸ್ಲಿಂ ಸಮುದಾಯದವರ ದೂರು. ಅನುಮತಿ ನೀಡುವ ಮುನ್ನ ಸ್ಥಳ ಪರಿಶೀಲನೆ ನಡೆಸಿಲ್ಲ. ಆದರೆ ಆಕ್ಷೇಪಣೆ ಸಲ್ಲಿಸಲು ಮುಸ್ಲಿಂ ಸಮುದಾಯದವರಿಗೆ ನೋಟಿಸ್‌ ನೀಡಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ತಿಳಿಸಿದರು.

‘ಆರು ಎಕರೆಯಷ್ಟು ಪ್ರದೇಶಕ್ಕೆ ಎರಡೇ ದಿನದಲ್ಲಿ ಕಾಂಪೌಂಡ್‌ ಹಾಕಲಾಗಿದೆ. ಅದನ್ನು ಸಮುದಾಯದವರು ವಿರೋಧಿಸಿದ ಕಾರಣಕ್ಕೆ ಸಭೆಯನ್ನು ಏರ್ಪಡಿಸಲಾಗಿತ್ತು. ಪ್ರಾಧಿಕಾರದ ಆಯುಕ್ತರು ಚುನಾವಣೆ ತರಬೇತಿಯಲ್ಲಿ ಪಾಲ್ಗೊಂಡಿದ್ದರಿಂದ 16ರಂದು ಅವರು ಬರಲಿದ್ದಾರೆ. ನಂತರ ಮತ್ತೆ ಸಭೆ ನಡೆಯಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry