ಗಣತಿ: ದರ್ಶನ ನೀಡದ ಹುಲಿರಾಯ

7

ಗಣತಿ: ದರ್ಶನ ನೀಡದ ಹುಲಿರಾಯ

Published:
Updated:
ಗಣತಿ: ದರ್ಶನ ನೀಡದ ಹುಲಿರಾಯ

ಗುಂಡ್ಲುಪೇಟೆ: ಸದ್ದು ಮಾಡದಂತೆ ಜಾಗ್ರತೆಯಿಂದ ಹೆಜ್ಜೆ ಇರಿಸುತ್ತಿದ್ದ ಉತ್ಸಾಹಿ ಯುವಪಡೆಯ ಕಣ್ಣುಗಳು ಆಳೆತ್ತರ ಬೆಳೆದು ನಿಂತ ಲಂಟಾನ ಮತ್ತು ವಿವಿಧ ಕಳೆಗಿಡಗಳ ನಡುವೆ ಹಳದಿ ಹಾಗೂ ಕಪ್ಪುಪಟ್ಟಿಗಳನ್ನು ಅರಸುತ್ತಿದ್ದವು. ಮೃಗಾಲಯಗಳಲ್ಲಿ, ಸಫಾರಿ ವೇಳೆ ನೋಡಿದ್ದ ಹುಲಿರಾಯ ಒಮ್ಮೆಯಾದರೂ ದರ್ಶನ ನೀಡ ಬಾರದೇ ಎಂಬ ಭಯಮಿಶ್ರಿತ ಬಯಕೆ ಅವರಲ್ಲಿತ್ತು.

ಸೂರ್ಯ ಕಾಣಿಸಿಕೊಳ್ಳುವ ಮುನ್ನವೇ ನಡುಗಿಸುವ ಚಳಿಯಲ್ಲಿ ಬೆಚ್ಚನೆಯ ಉಡುಪುಗಳನ್ನು ಧರಿಸಿ ಕಾಡು ಹೊಕ್ಕ ಸ್ವಯಂ ಸೇವಕರಿಗೆ, ಎತ್ತರದ ಮರಗಳ ಮಧ್ಯೆ ಯಿಂದ ಸೂರ್ಯರಶ್ಮಿ ತೂರಿಕೊಂಡು ಮೈತಾ ಕುವ ಸಮಯವಾದರೂ ಹುಲಿ ರಾಯ ದರ್ಶನ ಭಾಗ್ಯ ಕರುಣಿಸಲಿಲ್ಲ. ಹಾಗೆಂದು ಮೊದಲ ದಿನದ ಅನುಭವ ಹೆಚ್ಚಿನವರಿಗೆ ನಿರಾಸೆಯನ್ನೇನೂ ಮಾಡಲಿಲ್ಲ. ಹುಲಿಯನ್ನರಸಿ ಕಾನನದಲ್ಲಿ ಹೆಜ್ಜೆ ಹಾಕಿದವರಿಗೆ ಆನೆ, ಕಾಡೆಮ್ಮೆ, ಚಿರತೆ, ಕಾಡುನಾಯಿ, ಜಿಂಕೆ ಮತ್ತು ವಿವಿಧ ಪಕ್ಷಿಗಳು ಕಾಣಿಸಿಕೊಂಡು ಖುಷಿ ನೀಡಿದವು.

ಹೆಜ್ಜೆಗಳು ಜಾಡು: ರಾಷ್ಟ್ರೀಯ ಹುಲಿ ಗಣತಿ ಅಂಗವಾಗಿ ಜಿಲ್ಲೆಯ ಬಂಡೀಪುರ ಉದ್ಯಾನ, ಬಿಳಿಗಿರಿ ರಂಗನಾಥ ರಕ್ಷಿತಾರಣ್ಯ, ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಲ್ಲಿ ಹುಲಿಗಣತಿ ಕಾರ್ಯ ಸೋಮವಾರ ಆರಂಭವಾಯಿತು.

ಗಣತಿಗೆ ತೆರಳಿದ್ದ ಸ್ವಯಂಸೇವಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಬಂಡೀಪುರ ಹಾಗೂ ಬಿಆರ್‌ಟಿಯಲ್ಲಿ ಕೆಲವೆಡೆ ಹುಲಿಗಳ ಹೆಜ್ಜೆ ಗುರುತುಗಳು ಮಾತ್ರ ಕಾಣಿಸಿದವು.

ಬಂಡೀಪುರ ಉದ್ಯಾನಕ್ಕೆ ಸೇರಿದ ಗೋಪಾಲಸ್ವಾಮಿ ಬೆಟ್ಟ, ಕುಂದ ಕೆರೆ, ಬಂಡೀಪುರ, ಮದ್ದೂರು, ಮೂಲೆ ಹೊಳೆ, ಓಂಕಾರವಲಯ ಸೇರಿದಂತೆ 12 ವಲಯಗಳಲ್ಲಿ ಬೆಳಿಗ್ಗೆ 6ರಿಂದ 10ರ ವರೆಗೆ ಹುಲಿ ಗಣತಿ ಕಾರ್ಯ ನಡೆಯಿತು. ಬಂಡೀಪುರ, ಕುಂದಕೆರೆ ಮತ್ತು ಓಂಕಾರ ವಲಯಗಳಲ್ಲಿ ಹುಲಿಗಳ ಹೆಜ್ಜೆ ಗುರುತುಗಳು ಕಂಡುಬಂದವು.

ಗಣತಿ ವೇಳೆ ಕಾಣಿಸುವ ಗುರು ತುಗಳನ್ನು ಮೊಬೈಲ್ ಡೇಟಾ ಅಪ್ಲಿಕೇಷನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಯಾವ ಗುರುತು ಸಿಕ್ಕರೂ ಅವುಗಳ ಚಿತ್ರವನ್ನು ಆ್ಯಪ್‌ನಲ್ಲಿ ಕ್ಲಿಕ್‌ ಮಾಡಿ ಸ್ಥಳ ನಮೂದಿಸಿದರೆ ಅದು ಜಿಪಿಎಸ್ ಸಹಾಯದಿಂದ ನೇರವಾಗಿ ಕೇಂದ್ರಕ್ಕೆ ರವಾನೆಯಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಹಿಂದಿನ ದಿನವೇ ಪೂರ್ವ ತಯಾರಿ ಮಾಡಿಕೊಂಡಿದ್ದೆವು. ಹುಲಿ ಕಾಣಿಸುತ್ತದೆ ಎಂಬ ವಿಶ್ವಾಸದೊಂದಿಗೆ ಚಳಿಯನ್ನು ಲೆಕ್ಕಿಸದೆ ಅಧಿಕಾರಿಗಳೊಂದಿಗೆ ಕಾಡಿನೊ ಳಗೆ ಹೋದೆವು. ಹುಲಿ ಹೊರತುಪಡಿಸಿ ಅನೇಕ ಪ್ರಾಣಿಗಳು ಸಿಕ್ಕವು. ಅವುಗಳನ್ನು ನೋಡಿ ಖುಷಿಯಾಯಿತು. ಕಾಡಿನ ಕುರಿತು ಅನೇಕ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಯಿತು’ ಎಂದು ಸ್ವಯಂಸೇವಕ ರಜನೀಶ್ ಅಭಿಪ್ರಾಯ ಹಂಚಿಕೊಂಡರು.

‘ಗಣತಿಯಲ್ಲಿ ಪಾಲ್ಗೊಂಡವರಿಗೆ ಹುಲಿ ಕಾಣಿಸಿಲ್ಲ. ಆದರೆ ಬಂಡೀಪುರದ ಸುಬ್ಬರಾಯನಕಟ್ಟೆಯಲ್ಲಿ ಸಫಾರಿಗೆ ಹೋದವರಿಗೆ ಸಂಜೆ ಹುಲಿ ಕಾಣಿಸಿಕೊಂ ಡಿದೆ’ ಎಂದು ಸಫಾರಿ ವಾಹನ ಚಾಲಕ ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕುರುಹುಗಳಷ್ಟೇ ಲಭ್ಯ

ಚಾಮರಾಜನಗರ: ಬಿಆರ್‌ಟಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಹ ಸೋಮವಾರ ಗಣತಿದಾರರಿಗೆ ಹುಲಿಗಳು ಕಾಣಿಸಿಕೊಳ್ಳಲಿಲ್ಲ. ಬಿಆರ್‌ಟಿಯಲ್ಲಿ 43 ಬೀಟ್‌ಗಳಲ್ಲಿ 47 ಸ್ವಯಂಸೇವಕರು ಮತ್ತು 125 ಅರಣ್ಯ ಇಲಾಖೆ ಸಿಬ್ಬಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

‘ಮೊದಲ ದಿನ ಕೆಲವೆಡೆ ಹೆಜ್ಜೆ ಗುರುತು ಮತ್ತು ಹುಲಿ ಓಡಾಟದ ಕೆಲವು ಕುರುಹುಗಳು ಕಂಡುಬಂದವು. ಇನ್ನೂ ಎರಡು ದಿನ ನಿಗದಿತ ಸ್ಥಳಗಳಲ್ಲಿ ಹುಲಿಯ ಅಸ್ತಿತ್ವದ ಪತ್ತೆ ಕಾರ್ಯ ನಡೆಯಲಿದೆ. ಮೊದಲ ದಿನ ಯಾವುದೇ ತೊಂದರೆ ಇಲ್ಲದೆ ಕಾರ್ಯ ನಡೆಯಿತು’ ಎಂದು ಬಿಆರ್‌ಟಿ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ. ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಸಲ ರಾಜ್ಯಮಟ್ಟದಲ್ಲಿ ನಡೆದ ಗಣತಿಯಲ್ಲಿ ಕ್ಯಾಮೆರಾ ಟ್ರ್ಯಾಪ್‌ಗೆ ದೊರೆತ ಮಾಹಿತಿ ಆಧಾರದಲ್ಲಿ ಬಿಆರ್‌ಟಿಯಲ್ಲಿ 63 ಹುಲಿಗಳು ಇವೆ ಎಂದು ಅಂದಾಜಿಸಲಾಗಿತ್ತು. ಹುಲಿಗಳು ನಿರಂತರವಾಗಿ ಸಂಚರಿಸುವ ಪ್ರಾಣಿಗಳಾಗಿರುವುದರಿಂದ ಅವುಗಳ ಸಂಖ್ಯೆಯನ್ನು ಅಂದಾಜಿಸುವುದು ಕಷ್ಟ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry