ತಮಿಳುನಾಡಿನ ಕೋಳಿ ಆವಕ ಸ್ಥಗಿತ

7

ತಮಿಳುನಾಡಿನ ಕೋಳಿ ಆವಕ ಸ್ಥಗಿತ

Published:
Updated:
ತಮಿಳುನಾಡಿನ ಕೋಳಿ ಆವಕ ಸ್ಥಗಿತ

ಚಾಮರಾಜನಗರ: ರಾಜ್ಯದ ಹಲವೆಡೆ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಜಿಲ್ಲಾ ಕೇಂದ್ರಕ್ಕೆ ತಮಿಳುನಾಡಿನಿಂದ ಕೋಳಿಗಳ ಆವಕವನ್ನು ಸ್ಥಗಿತಗೊಳಿಸಲಾಗಿದೆ.

‘ಚಾಮರಾಜನಗರ ತಾಲ್ಲೂಕಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೂ, ಇಲಾಖೆಯಿಂದ ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಜಿಲ್ಲೆಯ ಗಡಿಯ ಪುಣಜನೂರು ಚೆಕ್‌ಪೋಸ್ಟ್‌ ಬಳಿ ಇಲಾಖೆ ಸಿಬ್ಬಂದಿ ದಿನದ 24 ಗಂಟೆಯೂ ವಾಹನ ತಪಾಸಣೆ ನಡೆಸಿ, ಔಷಧಿ ಸಿಂಪಡಿಸುತ್ತಿದ್ದಾರೆ’ ಎಂದು ಪಶುಸಂಗೋಪನ ಇಲಾಖೆಯ ಅಧಿಕಾರಿ ನಟರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಲ್ಲೂಕಿನ ವ್ಯಾಪ್ತಿಯಲ್ಲಿ 114 ಚಿಕನ್‌ ಸ್ಟಾಲ್‌ಗಳು ಇದ್ದು, ದಿನಕ್ಕೆ 10ರಿಂದ 11 ಟನ್‌ ಚಿಕನ್‌ ಮಾರಾಟವಾಗುತ್ತಿದೆ. ಗ್ರಾಹಕರ ಆರೋಗ್ಯ ದೃಷ್ಟಿಯಿಂದ ತಮಿಳುನಾಡಿನ ಕೋಳಿಗಳ ಪೂರೈಕೆ ಸ್ಥಗಿತಗೊಳಿಸಲಾಗಿದೆ’ ಎಂದು ತಿಳಿಸಿದರು.

‘ದಿನವೊಂದಕ್ಕೆ 20ರಿಂದ 25 ಕೆ.ಜಿ. ಚಿಕನ್‌ ಮಾರಾಟ ಮಾಡುತ್ತೇನೆ. ಕಳೆದ ವಾರದಿಂದ ವ್ಯಾಪಾರ ಕಡಿಮೆಯಾಗಿದೆ. ಪ್ರತಿ ವರ್ಷ ಚಿಕ್ಕಲ್ಲೂರು ಜಾತ್ರೆಯ ವೇಳೆಯಲ್ಲಿ 50–60 ಕೆ.ಜಿ. ಕೋಳಿ ಮಾರಾಟ ಮಾಡುತ್ತಿದೆ. ಈ ಬಾರಿ 30 ರಿಂದ 40 ಕೆ.ಜಿ. ಮಾತ್ರ ವ್ಯಾಪಾರವಾಗಿದೆ’ ಎಂದು ಚಿಕನ್‌ ಸ್ಟಾಲ್‌ ವ್ಯಾಪಾರಿಯೊಬ್ಬರು ತಿಳಿಸಿದರು.

ನಗರದಲ್ಲಿ ಚಿಕನ್ ಪ್ರತಿ ಕೆ.ಜಿ.ಗೆ ₹140ರಂತೆ ಮಾರಾಟವಾಗುತ್ತಿದ್ದರೆ, ಕೊಳ್ಳೇಗಾಲದಲ್ಲಿ ದರ ₹120ರ ಆಸುಪಾಸಿನಲ್ಲಿದೆ.ತರಕಾರಿ ಧಾರಣೆ ಸ್ಥಿರ: ನಗರದ ಮಾರುಕಟ್ಟೆಯಲ್ಲಿ ಕಳೆದ ವಾರದಿಂದ ತರಕಾರಿ ಬೆಲೆಗಳಲ್ಲಿ ಸ್ಥಿರತೆ ಮುಂದುವರಿದಿದೆ. ತರಕಾರಿಗಳು ಗ್ರಾಹಕಸ್ನೇಹಿಯಾಗಿ ಪರಿಣಮಿಸಿದೆ.

ವರ್ಷಾರಂಭದಲ್ಲಿ ಒಂದೆರಡು ತರಕಾರಿಗಳನ್ನು ಹೊರತುಪಡಿಸಿದರೆ ಉಳಿದ ತರಕಾರಿಗಳ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಸಣ್ಣ ಈರುಳ್ಳಿ ₹ 100 ಮತ್ತು ನುಗ್ಗೆಕಾಯಿ ಕೆ.ಜಿ.ಗೆ ₹ 180 ರಿಂದ 200 ಇದೆ. ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ.

‘ಮಾರುಕಟ್ಟೆಗೆ ತರಕಾರಿ ಪೂರೈಕೆ ಪ್ರಮಾಣ ಹೆಚ್ಚಾಗಿದೆ. ಈಗ ಎಲ್ಲ ಕಡೆ ಕಾಮಗಾರಿಗಾಗಿ ರಸ್ತೆಗಳನ್ನು ಒಡೆದು ಹಾಕಿರುವುದರಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಅಂಗಡಿಗಳತ್ತ ಗ್ರಾಹಕರೇ ಸುಳಿಯುತ್ತಿಲ್ಲ’ ಎಂದು ತರಕಾರಿ ವ್ಯಾಪಾರಿ ಭಾಗ್ಯಮ್ಮ ಬೇಸರ ವ್ಯಕ್ತಪಡಿಸಿದರು.

ಹಣ್ಣು, ಹೂವು ಸ್ಥಿರ: ಹಣ್ಣು ಮತ್ತು ಹೂವಿನ ಬೆಲೆ ತುಸು ಏರಿಕೆಯಾಗಿದೆ. ಚಿಕ್ಕಲ್ಲೂರು ಜಾತ್ರೆ, ಕಸ್ತೂರು ಬಂಡಿ ಜಾತ್ರೆ ಕಾರಣದಿಂದ ಜಿಲ್ಲಾ ಕೇಂದ್ರದಲ್ಲಿ ಒಂದು ವಾರದಿಂದ ಹಣ್ಣು ಮತ್ತು ಹೂವು ತುಟ್ಟಿಯಾಗಿವೆ. ಬೇಡಿಕೆ ಹೆಚ್ಚಿದ್ದರಿಂದ ವ್ಯಾಪಾರದ ಭರಾಟೆ ಜೋರಾಗಿತ್ತು.

ಏಲಕ್ಕಿ ಬಾಳೆಹಣ್ಣಿನ ಬೆಲೆ ಕೆ.ಜಿ.ಗೆ ₹ 60 ಹಾಗೂ ಪಚ್ಚಬಾಳೆ ಹಣ್ಣಿಗೆ ₹ 30ರಿಂದ 40 ಧಾರಣೆ ಇದೆ. ಹೂವಿನ ಬೆಲೆಯು ಕಳೆದ ವಾರಕ್ಕಿಂತ ಕೊಂಚ ಏರಿಕೆಯಾದೆ. ಚೆಂಡು ಹೂವು ₹ 10, ಮಲ್ಲಿಗೆ ₹ 50ರಿಂದ 60, ಕಾಕಡ ₹ 10, ಕನಕಾಂಬರ ₹ 50ರಿಂದ 60, ಸೂಜಿ ಮಲ್ಲಿಗೆ ₹ 20, ಗುಲಾಬಿ ₹ 5 ಹಾಗೂ ಹೂವಿನ ಹಾರ ₹ 50ರಿಂದ 300ರವರೆಗೂ ಮಾರಾಟವಾಗುತ್ತಿವೆ.

* * 

ಬೆಂಗಳೂರು ಸೇರಿದಂತೆ ಹಲವೆಡೆ ಹಕ್ಕಿಜ್ವರ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮಾರುಕಟ್ಟೆಯಲ್ಲಿ ಚಿಕನ್‌ ಧಾರಣೆ ಕಡಿಮೆಯಾಗಿಲ್ಲ. ಚಿಕನ್‌ ಕೊಳ್ಳಲು ಭಯವಾಗುತ್ತಿದೆ

ಮರಿಸ್ವಾಮಿ ಗ್ರಾಹಕ

ತರಕಾರಿ ಬೆಲೆ ಕೆಜಿಗೆ

ಹಸಿಮೆಣಸಿಕಾಯಿ ₹ 20

ಬೂದುಗುಂಬಳ ₹10

ಸಿಹಿಕುಂಬಳ ಕಾಯಿ ₹15

ಬಿಳಿ ಬದನೆಕಾಯಿ ₹30

ಬೀನ್ಸ್‌ ₹20

ಕ್ಯಾರೆಟ್‌ ₹40

ಸೌತೆಕಾಯಿ ₹20

ಆಲೂಗಡ್ಡೆ ₹20

ಮೂಲಂಗಿ ₹20

ಶುಂಠಿ ₹50

ಬೀಟ್‌ರೂಟ್‌ ₹30

ಹೀರೇಕಾಯಿ ₹40

ಅವರೆಕಾಯಿ ₹30

ತೊಗರಿಕಾಯಿ ₹30

ಹಣ್ಣಿನ ಧಾರಣೆ ಕೆಜಿಗೆ

ಸೇಬು ₹ 80 ರಿಂದ 100

ಕಿತ್ತಳೆ ₹ 80 ರಿಂದ 100

ಮೂಸಂಬಿ ₹ 80 ರಿಂದ 100

ದ್ರಾಕ್ಷಿ ₹100

ದಾಳಿಂಬೆ ₹100

ಸಪೋಟ ₹60

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry