ಚಿಂತಾಮಣಿ: ಮೇಲಾಟದಲ್ಲಿ ಯಾರ ‘ಕೈ’ ಮೇಲು?

7

ಚಿಂತಾಮಣಿ: ಮೇಲಾಟದಲ್ಲಿ ಯಾರ ‘ಕೈ’ ಮೇಲು?

Published:
Updated:
ಚಿಂತಾಮಣಿ: ಮೇಲಾಟದಲ್ಲಿ ಯಾರ ‘ಕೈ’ ಮೇಲು?

ಚಿಂತಾಮಣಿ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚಿಂತಾಮಣಿ ವಿಧಾನಸಭೆ ಕ್ಷೇತ್ರದಲ್ಲಿ ‘ಕೈ’ ಪಾಳೆಯದಲ್ಲಿ ಮುಖಂಡರ ‘ಹಳೆಯ ಚಾಳಿ’ಯಿಂದಾಗಿ ತೆರೆಮರೆಯಲ್ಲಿ ‘ಹಾವು–ಮುಂಗಸಿ ಕಾದಾಟ’ ಶುರುವಾಗಿದೆ. ಇದು ಕಾಂಗ್ರೆಸ್‌ ಕಾರ್ಯಕರ್ತರನ್ನು ಗೊಂದಲಕ್ಕೆ ನೂಕಿದೆ.

2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ತಿರಸ್ಕರಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೂದಳೆಯ ಅಂತರದಲ್ಲಿ ಸೋತಿದ್ದ ಮುಖಂಡ ಡಾ.ಎಂ.ಸಿ. ಸುಧಾಕರ್‌, ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದಾರೆ. ಆದರೆ, ಅವರಿಗೆ ಟಿಕೆಟ್‌ ನೀಡಬಾರದು ಎಂದು ಸಂಸದ ಕೆ.ಎಚ್‌. ಮುನಿಯಪ್ಪ ಬೆಂಬಲಿಗರು ಪ್ರಬಲವಾಗಿ ವಿರೋಧಿಸುತ್ತಿರುವುದು ಪಕ್ಷದೊಳಗಿನ ‘ಬಣ ಕಾಜಕೀಯ’ವನ್ನು ಬೀದಿಗೆ ತಂದು ನಿಲ್ಲಿಸಿದೆ.

ಸದ್ಯ, ಈ ರಾಜಕೀಯ ಜಂಗಿ ಕುಸ್ತಿಯಲ್ಲಿ ಯಾರ ‘ಕೈ’ ಮೇಲಾಗುತ್ತದೆ? ಸುಧಾಕರ್‌ ನಡೆ ಏನಾಗಿರುತ್ತದೆ? ಈ ಭಿನ್ನಮತದ ಗಾಯಕ್ಕೆ ಪಕ್ಷದ ವರಿಷ್ಠರು ಯಾವ ‘ಚಿಕಿತ್ಸೆ’ ನೀಡುತ್ತಾರೆ ಎನ್ನುವುದು ಕ್ಷೇತ್ರದ ಜನರಲ್ಲಿ ಕೂತುಹಲ ಮೂಡಿಸಿ, ಚರ್ಚೆಗೆ ಗ್ರಾಸವಾಗಿದೆ.

‘ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಸುಧಾಕರ್ ಸ್ಪರ್ಧಿಸುವಂತೆ ನಾಯಕರು ಒತ್ತಾಯಿಸಿದ್ದರು. ಆಗ ಮುನಿಯಪ್ಪ ಸೇರಿದಂತೆ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಸುಧಾಕರ್‌ ಅತಿಯಾದ ಆತ್ಮವಿಶ್ವಾಸದಿಂದ ತೆಗೆದುಕೊಂಡ ತಪ್ಪು ನಿರ್ಧಾರದಿಂದ ಕೈ ಸುಟ್ಟುಕೊಂಡರು. ಒಂದೊಮ್ಮೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ ಖಂಡಿತ ಗೆಲ್ಲುತ್ತಿದ್ದರು’ ಎಂದು ಕಾಂಗ್ರೆಸ್ ಮುಖಂಡರು ವಿಶ್ಲೇಷಿಸುತ್ತಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್ ಕಾಂಗ್ರೆಸ್ ಟಿಕೆಟ್‌ ಒಲ್ಲೆ ಎನ್ನುತ್ತಿದ್ದಂತೆ ಮುನಿಯಪ್ಪ ಅವರು ಜೆ.ಡಿ.ಎಸ್‌ನ ವಾಣಿ ಕೃಷ್ಣಾರೆಡ್ಡಿ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಬಿ.ಫಾರಂ ನೀಡಿ ಅಭ್ಯರ್ಥಿಯನ್ನಾಗಿ ಮಾಡಿದರು. ಆದರೆ ಅವರು ಕೇವಲ 10 ಸಾವಿರ ಮತ ಪಡೆದು ಠೇವಣಿ ಕಳೆದುಕೊಂಡಿದ್ದರು. ಕಾಲ ಕಳೆದಂತೆ ತೆರೆಮರೆಗೆ ಸರಿದಿದ್ದ ವಾಣಿ ಅವರಿಗೆ ಇತ್ತೀಚೆಗೆ ಸಂಸದರು ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸ್ಥಾನ ಕೊಡಿಸಿದ್ದಾರೆ. ಇದು ಸಹಜವಾಗಿ ಸುಧಾಕರ್ ಅವರಿಗೆ ಇರುಸು ಮುರುಸು ಉಂಟು ಮಾಡಿದೆ ಎನ್ನಲಾಗಿದೆ.

ಇವತ್ತು ‘ಕೈ’ ಟಿಕೆಟ್‌ ಗಿಟ್ಟಿಸಿಕೊಳ್ಳಲು ಸುಧಾಕರ್ ಅವರಷ್ಟೇ ವಾಣಿ ಕೃಷ್ಣಾರೆಡ್ಡಿ ಸಹ ಪೈಪೋಟಿ ನಡೆಸಿದ್ದಾರೆ. ಇದೆರ ನಡುವೆ ಸಮಾಜಸೇವೆ’  ಹೆಸರಿನಲ್ಲಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವ ಟಿ.ಸಿ. ವೆಂಕಟೇಶ್ ರೆಡ್ಡಿ ಕೂಡ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ‘ತ್ರಿಕೋನ’ ಸ್ಪರ್ಧೆಯಲ್ಲಿ ಯಾರ ಕೈ ಮೇಲಾಗುತ್ತದೆ ಎನ್ನುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲೇ ಗೊಂದಲ ಮೂಡಿಸಿದೆ.

ಪ್ರಸ್ತುತ ಮುನಿಯಪ್ಪ ಮತ್ತು ಸುಧಾಕರ್‌ ನಡುವಿನ ‘ಶೀತಲ ಸಮರ’ ಪಕ್ಷನಿಷ್ಠ ಕಾರ್ಯಕರ್ತರಿಗೆ ಇಬ್ಬರ ಮೇಲೂ ಬೇಸರ ಮೂಡಿಸಿದೆ. ಎರಡು ದಶಕಗಳಿಂದ ಇವರ ಬಾಂಧವ್ಯ ಪದೇ ಪದೇ ಮುರಿಯುವುದು, ಕಟ್ಟುವುದನ್ನು ಕಂಡವರು ಉಭಯ ಮುಖಂಡರ ರಾಜಕೀಯ ತಂತ್ರಗಾರಿಕೆ ಅರಿಯಲು ಹೆಣಗಾಡುತ್ತಿದ್ದಾರೆ. ಆದರೆ ಇವರಿಬ್ಬರೂ ತಮ್ಮ ರಾಜಕೀಯ ಗುಟ್ಟು ಬಿಟ್ಟು ಕೊಡುತ್ತಿಲ್ಲ.

‘ಕೋಲಾರದ ಕಾಂಗ್ರೆಸ್‌ನಲ್ಲಿ ವರ್ತೂರ್‌ ಪ್ರಕಾಶ್‌ ವಿರುದ್ಧ ಅನುಸರಿಸಿದ ನೀತಿಯನ್ನೇ ಚಿಂತಾಮಣಿಯಲ್ಲಿ ಸುಧಾಕರ್‌ ವಿರುದ್ಧ ಬಳಸಬೇಕು’ ಎಂದು ಮುನಿಯಪ್ಪ ಪಕ್ಷದ ಮುಖಂಡರ ಸಭೆಯೊಂದರಲ್ಲಿ ವಾದ ಮಂಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನು ಆಕ್ಷೇಪಿಸುವ ಕೆಲ ಮುಖಂಡರು, ‘ವರ್ತೂರ್‌ ಪ್ರಕಾಶ್‌ ಮುಖ್ಯಮಂತ್ರಿ ವಿರುದ್ಧವೇ ನಿಂದನೆ ಮಾಡುತ್ತಾ ಬೇರೆ ಪಕ್ಷ ಕಟ್ಟಿದ್ದಾರೆ. ಸುಧಾಕರ್ ವೈಯುಕ್ತಿಕವಾಗಿ ಮುನಿಯಪ್ಪ ವಿರುದ್ಧ ಮುನಿಸಿಕೊಂಡಿದ್ದಾರೆ ವಿನಾ ನಾಯಕರ ಬಗ್ಗೆ ಚಕಾರ ಎತ್ತಿಲ್ಲ. ಹೀಗಾಗಿ ಆ ಪ್ರಕರಣ ಇಲ್ಲಿ ಹೋಲಿಸುವುದು ತರವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

‘ಸಂಕಷ್ಟದಲ್ಲಿರುವ ಕಾಂಗ್ರೆಸ್‌ಗೆ ಈ ಸಂದರ್ಭದಲ್ಲಿ ಒಂದೊಂದು ಸ್ಥಾನವೂ ಮುಖ್ಯ. ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷ ಅಧಿಕಾರ ಹಿಡಿಯುವಲ್ಲಿ ಸುಧಾಕರ್‌ ಪಾತ್ರ ಬಹಳಷ್ಟಿದೆ. ಸದ್ಯ ಗೆಲ್ಲುವ ಕುದುರೆಯಂತಿರುವ ಅವರಿಗೆ ಪಕ್ಷದ ಹಿತದೃಷ್ಟಿಯಿಂದ ಟಿಕೆಟ್‌ ನೀಡುವುದು ಒಳಿತು’ ಎನ್ನುವ ಅಭಿಪ್ರಾಯ ಅನೇಕ ಮುಖಂಡರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ಇತ್ತೀಚೆಗೆ ನಿಗದಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರ ನಗರ ಭೇಟಿ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಸದ್ಯ, ಟಿಕೆಟ್‌ಗಾಗಿ ಪೈಪೋಟಿಗೆ ಇಳಿದವರಲ್ಲಿ ಪಕ್ಷದ ವರಿಷ್ಠರು ಯಾರ ‘ಕೈ’ ಎತ್ತಿ ಹಿಡಿದು ಬಿ.ಫಾರಂ ನೀಡುತ್ತದೆ ಎತ್ತುವುದು ಕಾಯ್ದು ನೋಡಬೇಕಿದೆ.

ವರಿಷ್ಠರಲ್ಲೇ ಒಡಕು!

ಒಂದೆಡೆ ಕ್ಷೇತ್ರದಲ್ಲಿನ ಕಾಂಗ್ರೆಸ್‌ ಪಾಳೆಯದಲ್ಲಿ ಬಣಗಳು ಹುಟ್ಟಿಕೊಂಡರೆ, ಇನ್ನೊಂದೆಡೆ ಈ ಬಣಗಳ ಮುಖಂಡರ ಬೆಂಬಲಕ್ಕೆ ನಿಲ್ಲುವ ವಿಚಾರದಲ್ಲಿ ಪಕ್ಷದ ವರಿಷ್ಠರಲ್ಲೇ ಒಡಕು ಉಂಟಾಗಿದೆ ಎನ್ನಲಾಗಿದೆ.

ಸಚಿವರಾದ ಡಿ.ಕೆ.ಶಿವಕುಮಾರ್‌, ರಮೇಶಕುಮಾರ್‌, ಕೃಷ್ಣ ಬೈರೇಗೌಡ, ವಿಧಾನಸಭೆಯ ಉಪಾಧ್ಯಕ್ಷ ಶಿವಶಂಕರರೆಡ್ಡಿ, ಸಂಸದ ವೀರಪ್ಪ ಮೊಯಿಲಿ, ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರು ಸುಧಾಕರ್‌ ಬೆನ್ನಿಗೆ ನಿಂತಿದ್ದಾರೆ.

ಸಂಸದ ಕೆ.ಎಚ್‌.ಮುನಿಯಪ್ಪ, ಚಿಕ್ಕಬಳ್ಳಾಪುರದ ಶಾಸಕ ಡಾ.ಕೆ.ಸುಧಾಕರ್‌ ಮಾತ್ರ ವಿರೋಧಿ ಪಾಳೆಯದಲ್ಲಿ ಇದ್ದಾರೆ ಎಂದು ಪಕ್ಷದ ಮುಖಂಡರೇ ಬಹಿರಂಗವಾಗಿ ಹೇಳುತತಿದ್ದಾರೆ.

* * 

ನಾನು ಕಾಂಗ್ರೆಸ್‌ನಲ್ಲೇ ಇದ್ದೇನೆ. ಆದರೆ ಕೆಲವರು ನನ್ನನ್ನು ಹೊರಹಾಕಲು ಆತುರ ಪಡುತ್ತಿದ್ದಾರೆ. ಕಾಂಗ್ರೆಸ್‌ ಅವರ ಮನೆಯಲ್ಲ. ಇದು ಎಲ್ಲರಿಗೂ ಗೊತ್ತು

ಡಾ.ಎಂ.ಸಿ.ಸುಧಾಕರ್ 

ಕಾಂಗ್ರೆಸ್ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry