ಪ್ರಧಾನಿಗೆ ದೂರು ಕೊಟ್ಟರೂ ದುರಸ್ತಿಯಾಗದ ರಸ್ತೆ !

7

ಪ್ರಧಾನಿಗೆ ದೂರು ಕೊಟ್ಟರೂ ದುರಸ್ತಿಯಾಗದ ರಸ್ತೆ !

Published:
Updated:
ಪ್ರಧಾನಿಗೆ ದೂರು ಕೊಟ್ಟರೂ ದುರಸ್ತಿಯಾಗದ ರಸ್ತೆ !

ಜೋಗಿಮಕ್ಕಿ(ಎನ್.ಆರ್.ಪುರ): ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿ ಮಕ್ಕಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಪ್ರಧಾನಿ ಕಾರ್ಯಾಲಯಕ್ಕೆ ಈ ಬಗ್ಗೆ ದೂರು ನೀಡಿದರೂ ದುರಸ್ತಿ ಕಾಣಲಿಲ್ಲ.

ಕಾನೂರು– ಕಟ್ಟಿನಮನೆ ಮಾರ್ಗ ಮಧ್ಯೆ ಬರುವ ಕೋಣಗುಡ್ಡ ಬಸ್ ನಿಲ್ದಾಣದಿಂದ ಜೋಗಿಮಕ್ಕಿಗೆ 4 ಕಿ.ಮೀ ದೂರ ಇದ್ದು, ಅದರಲ್ಲಿ 2 ಕಿ. ಮೀಯಷ್ಟು ಕೆಲವು ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿದೆ. ರಸ್ತೆಗೆ ಹಾಕಿದ ಟಾರು ಕಿತ್ತು ಹೋಗಿ ರಸ್ತೆ ತುಂಬಾ ಗುಂಡಿ ಬಿದ್ದಿವೆ.  ಉಳಿದ 2 ಕಿ.ಮೀ ಜಲ್ಲಿ ರಸ್ತೆ. ಮಳೆಗಾಲದಲ್ಲಿ ಕಾಫಿ ತೋಟದ ಮರದ ದಿಮ್ಮಿಗಳನ್ನು ಇದೇ ರಸ್ತೆಯ ಮೂಲಕ ಸಾಗಿಸುವುದರಿಂದ ರಸ್ತೆ ಗುಂಡಿ ಬಿದ್ದಿದೆ. ಮಾರ್ಗ ಮಧ್ಯೆ ಇರುವ ಸೇತುವೆಯೂ ಶಿಥಿಲಾವಸ್ಥೆಗೆ ತಲುಪಿದೆ.

ಜೋಗಿಮಕ್ಕಿ, ಕೋಣನಗುಡ್ಡೆಯ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮನೆಗಳು ಇದ್ದು, ರಸ್ತೆ ದುರಸ್ತಿಗಾಗಿ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು. ಹದಗೆಟ್ಟ ರಸ್ತೆ, ವಿದ್ಯುತ್ ವ್ಯತ್ಯಯ, ದೂರವಾಣಿಯೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ನೊಂದ ಗ್ರಾಮಸ್ಥರು ಜೋಗಿಮಕ್ಕಿಯ ಯುವತಿ ಧನ್ಯ ಎಸ್‌.ಕಾರಂತ್ ಅವರಿಂದ ಪ್ರಧಾನಿ ಕಾರ್ಯಾಲಯಕ್ಕೆ ಇ–ಮೇಲ್ ಕಳುಹಿಸಿದ್ದರು.

ಇದಕ್ಕೆ ಪ್ರತಿಯಾಗಿ ಪ್ರಧಾನಿ ಕಾರ್ಯಾಲಯ ಸ್ಪಂದಿಸಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ರಸ್ತೆಗೆ ಸಂಬಂಧಿಸಿದ ಎಲ್ಲ ವರದಿ ಸಲ್ಲಿಸುವಂತೆ ಆದೇಶ ನೀಡಿತ್ತು.

ಈ ಪತ್ರದ ಪ್ರತಿಯನ್ನು ಧನ್ಯ ಎಸ್.ಕಾರಂತ್ ಅವರಿಗೂ ಸಹ ಕಳುಹಿಸಲಾಗಿತ್ತು. ಜಿಲ್ಲಾ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಜೋಗಿಮಕ್ಕಿಯ ರಸ್ತೆಯ ಕ್ರಿಯಾ ಯೋಜ ನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

ಪತ್ರ ವ್ಯವಹಾರವೆಲ್ಲಾ ಪೂರ್ಣಗೊಂಡು 6 ತಿಂಗಳು ಕಳೆದರೂ ಸಹ ಈ ಬಗ್ಗೆ ಪುನಃ ಯಾವುದೇ ಮಾಹಿತಿಯೂ ಲಭ್ಯವಿಲ್ಲ. 20 ವರ್ಷಗಳಿಂದಲೂ ರಸ್ತೆ ದುರಸ್ತಿಯಾಗದೆ ಕಂಗಾಲಾಗಿದ್ದಾರೆ. ಪ್ರಧಾನಿ ಕಾರ್ಯಾಲಯದಿಂದ ಬಂದ ಪತ್ರ ದಿಂದ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿತ್ತು. ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪುನಾ ಜೋಗಿಮಕ್ಕಿ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಗ್ರಾಮಸ್ಥರು ನಿರಾಸೆ ವ್ಯಕ್ತಪಡಿಸಿದ್ದಾರೆ.

‘ಮಳೆಗಾಲ ಬಂತೆಂದರೆ ಜೋಗಿಮಕ್ಕಿ ಗ್ರಾಮದಲ್ಲಿ ಸಂಚಾರ ದುಸ್ತರವಾಗಲಿದೆ. ಮಳೆಗಾಲದ ಅವಧಿಯಲ್ಲಿ ವಿದ್ಯುತ್ ಪೂರೈಕೆ ಅಸಮರ್ಪಕವಾಗಿರಲಿದೆ. ಸರ್ಕಾರ ರಸ್ತೆ ಅಭಿವೃದ್ಧಿ ಪಡಿಸಬೇಕೆನ್ನುತ್ತಾರೆ’ ಜೋಗಿಮಕ್ಕಿ ಗ್ರಾಮಸ್ಥ ಶಿವರಾಂ.

‘ಈ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಎರಡು ಭಾರಿ ಮನವಿ ಸಲ್ಲಿಸಿದ್ದೇನೆ’ ಎಂದು ಶಾಸಕ ಡಿ.ಎನ್‌.ಜೀವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜೋಗಿಮಕ್ಕಿ ರಸ್ತೆ ಅಭಿವೃದ್ಧಿಗೆ ₹48 ಲಕ್ಷ ಅನುದಾನ ಬೇಕಾಗಿದೆ. ಹಾಗಾಗಿ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವಿಭಾಗ ವಿಶೇಷ ಅನುದಾನಕ್ಕೆ ಸರ್ಕಾರಕ್ಕೆ ಪತ್ರ ಬರೆದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

* * 

ಗ್ರಾಮದ ರಸ್ತೆಯ ದುರವಸ್ತೆ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದ ವಾರದಲ್ಲೇ ಸ್ಪಂದಿಸಿದ್ದು ಸಂತಸವಾಗಿತ್ತು.  6 ತಿಂಗಳಾದರೂ ಕಾಮಗಾರಿ ಆರಂಭವಾಗದಿರುವುದು ನಿರಾಶೆಯಾಗಿದೆ

ಧನ್ಯ ಎಸ್.ಕಾರಂತ್

ಜೋಗಿಮಕ್ಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry