ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ

7

ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ

Published:
Updated:

ನಾಯಕನಹಟ್ಟಿ: ಪಟ್ಟಣದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಇಲ್ಲಿನ ಪಟ್ಟಣ ಪಂಚಾಯ್ತಿ ಸೋಮವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಮತ್ತು 2018–19ನೇ ಸಾಲಿನ ಆಯವ್ಯಯ ಪಟ್ಟಿ ತಯಾರಿಕೆಯ ಪೂರ್ವಭಾವಿ ಸಭೆಯಲ್ಲಿ  ಒತ್ತಾಯಿಸಿದರು.

ಈ ಸಂಬಂಧ 11ನೇ ವಾರ್ಡ್‌ ಸದಸ್ಯ ಜೆ.ಆರ್.ರವಿಕುಮಾರ್ ಮಾತನಾಡಿ, ನಾಯಕನಹಟ್ಟಿ ಪಟ್ಟಣ ಐತಿಹಾಸಿಕ ಹಿನ್ನೆಲೆ ಇರುವುದರಿಂದ  ಸಾವಿರಾರು ಭಕ್ತ ಭೇಟಿ ನೀಡುತ್ತಾರೆ. ಹಾಗಾಗಿ 2018–19ನೇ ಸಾಲಿನಲ್ಲಿ ಪಟ್ಟಣದ ಸ್ವಚ್ಛತೆಗಾಗಿ ಕಸದ ಬುಟ್ಟಿಗಳ ವ್ಯವಸ್ಥೆ ಮತ್ತು ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಒಳಗೊಂಡಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ತಿಳಿಸಿರು.

ನಂತರ ಉಪಾಧ್ಯಕ್ಷ ಎಸ್.ಕೃಷ್ಣಮೂರ್ತಿ ಮತ್ತು ಮುಖಂಡ ಬಿ.ಟಿ.ಶಿವಕುಮಾರ್ ಮಾತನಾಡಿ, ಪಟ್ಟಣದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳನ್ನು ಡಿಜಿಲೀಕರಣಗೊಳಿಸಲು ಕಂಪ್ಯೂಟರ್‌ಗಳು, ಪೀಠೋಪಕರಣಗಳನ್ನು ನೀಡಬೇಕು. ಶಾಲೆಯ ಸುತ್ತ ಕಾಂಪೌಂಡ್‌  ನಿರ್ಮಿಸಬೇಕು. ಪಟ್ಟಣದಲ್ಲಿ 3 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಕ್ರೀಡಾಂಗಣವನ್ನು ನಿರ್ಮಿಸಬೇಕು. ಪ್ರತಿ ವಾರ್ಡ್‌ಗಳಲ್ಲಿ ಉದ್ಯಾನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮುಖ್ಯಾಧಿಕಾರಿ ಡಿ.ಭೂತಪ್ಪ ಮಾತನಾಡಿ, ಪಟ್ಟಣದಲ್ಲಿರುವ 10ಕ್ಕೂ ಹೆಚ್ಚು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳು ಕೇಂದ್ರೀಕೃತವಾಗಿ ಏಕಕಾಲಕ್ಕೆ ಪಟ್ಟಣವನ್ನು ಪ್ರತಿನಿಧಿಸುವಂತೆ ಒಂದೇ ಕಡೆ ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡುವ ಪ್ರಸ್ತಾಪ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಚಾರ್ಯ ಜಿ.ಎಂ.ಶಾಂತವೀರಪ್ಪ, ಪಟ್ಟಣದ ಇತಿಹಾಸದಲ್ಲಿ ಮೊದಲ ಬಾರಿಗೆ ಏಕಾಕಾಲಕ್ಕೆ ರಾಷ್ಟ್ರೀಯ ಹಬ್ಬಗಳನ್ನು ಒಂದೇ ಕಡೆ ಸೇರಿ ಆಚರಿಸುವುದು ಸಂತೋಷದ ಸಂಗತಿ. ಇದಕ್ಕೆ ಹಲವು  ಸವಾಲುಗಳು ಎದುರಾಗುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಚಿಂತನೆ ನಡೆಸಬೇಕು ಎಂದು ತಿಳಿಸಿದರು.

ನಂತರ 13ನೇ ವಾರ್ಡ್‌ ಸದಸ್ಯ ಎನ್.ಮಹಂತಣ್ಣ ಮಾತನಾಡಿ, ಎಲ್ಲರೂ ಸೇರಿ ಒಟ್ಟಿಗೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ಪಟ್ಟಣದ ಎಸ್‌.ಟಿ.ಎಸ್.ಆರ್ ಶಾಲಾ ಮೈದಾನ ಸೂಕ್ತವಾಗಿದೆ. ಸುಸಜ್ಜಿತ ಸಭಾಂಗಣ, ಧ್ವಜಸ್ಥಂಭ ಕಟ್ಟಡ ನಿರ್ಮಾಣ  ಸೌಲಭ್ಯ ಒದಗಿಸಿ ರಾಷ್ಟ್ರೀಯ ಹಬ್ಬಗಳನ್ನು ಒಟ್ಟಾಗಿ ಆಚರಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸದಸ್ಯರಾದ ಟಿ.ಬಸಣ್ಣ, ಬೋರಮ್ಮ ಓಬಣ್ಣ, ಗಿರಿಜಮ್ಮ, ಬೋರಮ್ಮದಿವವಾಕರ್, ಜೆ.ಟಿ.ಎಸ್.ತಿಪ್ಪೇಸ್ವಾಮಿ, ಉಪ ಪ್ರಾಚಾರ್ಯ ಬಿ.ಆರ್.ರಮೇಶ್, ಶಿಕ್ಷಕರಾದ ವಾಜೀದ್, ಉಮಾ, ನಾಗರತ್ನಮ್ಮ, ನಾಗರಾಜಪ್ಪ, ಹಾಗೂ ಪಟ್ಟಣಪಂಚಾಯ್ತಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry