ಮಗು ನೀಡದ ಆಸ್ಪತ್ರೆ: ತನಿಖೆ ಸಿಬಿಐಗೆ ವಹಿಸಿದ ಹೈಕೋರ್ಟ್‌

7

ಮಗು ನೀಡದ ಆಸ್ಪತ್ರೆ: ತನಿಖೆ ಸಿಬಿಐಗೆ ವಹಿಸಿದ ಹೈಕೋರ್ಟ್‌

Published:
Updated:

ಧಾರವಾಡ: ಮಗು ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲ್ಲಿನ ಹೈಕೋರ್ಟ್‌ ವಿಭಾಗೀಯ ಪೀಠ, ತನಿಖೆಯನ್ನು ಸಿಬಿಐಗೆ ವಹಿಸುವಂತೆ ನಿರ್ದೇಶನ ನೀಡಿದೆ. ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದ ಸಿಬ್ಬಂದಿ, ನಂತರ ಮಗು ಮೃತಪಟ್ಟಿದ್ದಾಗಿ ವರದಿ ಸಲ್ಲಿಸಿದ್ದ ಪ್ರಕರಣವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ರಕ್ಕಸಕಿಯ ಶಂಕರಮ್ಮ ಪೂಜಾರ ಎನ್ನುವವರು ವಿವಾಹವಾಗಿ ಎಂಟು ವರ್ಷಗಳ ಬಳಿಕ ಗರ್ಭಿಣಿಯಾಗಿದ್ದರು. ಹೆರಿಗೆಗಾಗಿ ಇಳಕಲ್‌ನ ಕಠಾರಿಯಾ ನರ್ಸಿಂಗ್‌ ಹೋಮ್‌ಗೆ ದಾಖಲಾಗಿದ್ದ ಅವರು, 2016ರ ನವೆಂಬರ್‌ 9 ರಂದು ಮಗುವಿಗೆ ಜನ್ಮ ನೀಡಿದ್ದರು. ನ.14 ರಂದು ಆಸ್ಪತ್ರೆಯಿಂದ ಬಿಡುಗಡೆ ಆಗುವಾಗ ಮಗುವನ್ನು ನೀಡದೆ, ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕಳುಹಿಸಿರುವುದಾಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು.

ಈ ಕುರಿತು ಸಂಶಯ ವ್ಯಕ್ತಪಡಿಸಿ ಇಳಕಲ್‌ ಮತ್ತು ಹುನಗುಂದ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ ದೂರು ಸ್ವೀಕರಿಸಿರಲಿಲ್ಲ. ಅಂತಿಮವಾಗಿ ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ ಮೇರೆಗೆ 2017ರ ಫೆಬ್ರುವರಿ 24ರಂದು ದೂರು ದಾಖಲಾಗಿತ್ತು. ಆದರೂ ಪೊಲೀಸರು ಮಗುವನ್ನು ಹುಡುಕಲು ಪ್ರಯತ್ನಿಸಿರಲಿಲ್ಲ ಎಂದು ದೂರಿ, ಶಂಕರಮ್ಮ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ದಾಖಲಿಸಿದ್ದರು. ವಿಚಾರಣೆ ಸಂದರ್ಭದಲ್ಲಿ, 2016ರ ನವೆಂಬರ್‌ 13ರಂದು ಮಗು ಮೃತಪಟ್ಟಿದೆ ಎಂದು ಆಸ್ಪತ್ರೆ ವರದಿ ಸಲ್ಲಿಸಿತ್ತು.

ನಂತರ ಮುಂದುವರಿದ ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ಕುರಿತು ಸಂಶಯ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಮತ್ತು ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ಪೀಠ, ‘ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ, ಉಪ ಪೊಲೀಸ್‌ ವರಿಷ್ಠಾಧಿಕಾರಿಗಳು ತನಿಖೆ ನಡೆಸಬೇಕು. ಮಗು ಮೃತಪಟ್ಟಿದ್ದರೆ ಅದಕ್ಕೆ ಸಮರ್ಪಕ ಮಾಹಿತಿ ಒದಗಿಸಬೇಕು. ಇಲ್ಲದಿದ್ದರೆ ಮಗುವನ್ನು ನ್ಯಾಯಪೀಠದ ಮುಂದೆ ಹಾಜರು ಪಡಿಸಬೇಕು’ ಎಂದು ನಿರ್ದೇಶನ ನೀಡಿತ್ತು.

ಸೋಮವಾರ ನ್ಯಾಯಮೂರ್ತಿ ಎಸ್‌.ಸುಜಾತಾ ಮತ್ತು ಬೆಂಗಳೂರು ಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಡಾ.ಎಚ್.ಬಿ.ಪ್ರಭಾಕರಶಾಸ್ತ್ರಿ ಅವರಿದ್ದ ಪೀಠ, ‘ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸುವಂತೆ’ ನಿರ್ದೇಶನ ನೀಡಿತು. ದೂರುದಾರರ ಪರ ಎಚ್‌.ಎಲ್‌.ಹಾವರಗಿ ವಕಾಲತ್ತು ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry