ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ ಬಂದ್ ಸಂಪೂರ್ಣ ಯಶಸ್ವಿ

Last Updated 9 ಜನವರಿ 2018, 8:52 IST
ಅಕ್ಷರ ಗಾತ್ರ

ಮುಂಡರಗಿ: ದಲಿತ ಮಹಿಳೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಕೈಗೊಂಡಿದ್ದ ಬಂದ್ ಕರೆ ಸಂಪೂರ್ಣವಾಗಿ ಯಶಸ್ವಿಯಾಯಿತು.

ಬೆಳಿಗ್ಗೆ 6 ಗಂಟೆಗೆ ಬೀದಿಗಿಳಿದ ಪ್ರತಿಭಟನಾಕಾರರು ಪಟ್ಟಣದ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದರು. ನಂತರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಹಲವು ಬಾರಿ ಟೈಯರಿಗೆ ಬೆಂಕಿ ಹಚ್ಚಿದರು. 10ಗಂಟೆಗೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಬಿಇಒ ಅವರು ಪಟ್ಟಣದ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದರು. ಕಾಲೇಜುಗಳ ವಿದ್ಯಾರ್ಥಿಗಳನ್ನು ಮುಂಜಾಗೃತಾ ಕ್ರಮವಾಗಿ ಮನೆಗೆ ಕಳುಹಿಸಲಾಯಿತು.

ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಹಾಗೂ ಖಾಸಗಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಪ್ರಯಾಣಿಕರು ಪರ ದಾಡುವಂತಾಯಿತು. ಬ್ಯಾಂಕ್ ಸೇರಿ ಬಹುತೇಕ ಎಲ್ಲ ಕಚೇರಿಗಳನ್ನು ಬಂದ್ ಆಗಿದ್ದವು.

ಪಟ್ಟಣದ ಕೇಂದ್ರ ಬಸ್ ನಿಲ್ದಾಣ, ಬೃಂದಾವನ ವೃತ್ತ, ಕೊಪ್ಪಳ ವೃತ್ತ, ಹೆಸರೂರ ಕ್ರಾಸ್, ಗಾಂಧೀ ವೃತ್ತ, ಜಾಗೃತ ಸರ್ಕಲ್ ಸೇರಿ ಪಟ್ಟಣದ ಬಹುತೇಕ ವೃತ್ತ ಹಾಗೂ ತಹಶೀಲ್ದಾರ ಮತ್ತು ಪೊಲೀಸ ಠಾಣೆಯ ಮುಂಬಾಗಗಳಲ್ಲಿ ಪ್ರತಿಭಟನಾಕಾರರು ನಿರಂತರವಾಗಿ ಟೈರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಯುವಕರ ದಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ನಡೆಸಿದರು. ಪಟ್ಟಣದ ಕೋಟೆ ಆಂಜನೇಯನ ದೇವಸ್ಥಾನದಿಂದ ಹೊರಟ ಪ್ರತಿಭಟನಾಕಾರರು ತಮಟೆ ಬಾರಿಸುತ್ತಾ, ಘೋಷಣೆ ಕೂಗುತ್ತಾ ಪ್ರಮುಖ ರಸ್ತೆ ಮೂಲಕ ಸಂಚರಿಸಿ ನಂತರ ತಹಶೀಲ್ದಾರ್‌ ಕಾರ್ಯಾಲಯಕ್ಕೆ ತೆರಳಿದರು.

ಅಖಿಲ ಕರ್ನಾಟಕ ಮಾದಿಗ ಮಹಾಸಭೆಯ ಉಪಾಧ್ಯಕ್ಷ ಮೋಹನ ಅಲಮೇಲಕರ ಮಾತನಾಡಿ, ‘ದಲಿತ ಮತಗಳಿಂದ ಗೆದ್ದು ಬಂದಿರುವ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಮೃತಳ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸದೆ ಅವರ ಕುಟುಂಬಕ್ಕೆ ಅವಮಾನ ಮಾಡಿ ದ್ದಾರೆ. ದುಖಃದಲ್ಲಿರುವ ಕುಟುಂಬದ ಸದಸ್ಯರಿಗೆ ಸ್ವಾಂತನ ಹೇಳುವ ಸೌಜನ್ಯವನ್ನಾದರೂ ಅವರು ತೋರಬೇಕಾಗಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಪಿ.ಯಶೋಧಾ ಮಾತನಾಡಿ, ‘ದಲಿತ ಮಹಿಳೆ ಶಾಂತವ್ವಳಿಗೆ ಬೆಂಕಿ ಹಚ್ಚಿ ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದ್ದು, ಆರೋಪಿಯ ಕುಟುಂಬ ವರ್ಗದವರು ಹಾಗೂ ಅಧಿಕಾರಿಗಳು ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿ ದ್ದಾರೆ. ನೊಂದ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಎಚ್ಚರಿಸಿದರು.

ದಲಿತ ಮುಖಂಡ ಮುತ್ತು ಬಾವಿಮನಿ ಮಾತನಾಡಿ, ‘ಅಹಿಂದ ಹೆಸರನ್ನು ಜಪಿಸುತ್ತಾ ಅಧಿಕಾರವನ್ನು ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ತಕ್ಷಣ ಅವರು ಮೃತಳ ಮನೆಗೆ ಬಂದು ₹ 25ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ದಸಂಸ ಸಂಚಾಲಕ ಲಕ್ಷ್ಮಣ ತಗಡಿನಮನಿ, ಸುರೇಶ, ರಮೇಶ ಕಡೆಮನಿ ಮಾತನಾಡಿದರು. ಮುಖಂಡರಾದ ಸಂತೋಷ ಹಿರೇಮನಿ, ಶರಣಪ್ಪ ಪೂಜಾರ, ದೇವರಾಜ ಕಟ್ಟಿಮನಿ, ಚಂದ್ರ ಹರಿಜನ, ಚಂದ್ರಕಾಂತ ಕಾದರಳ್ಳಿ, ಪ್ರಕಾಶ ಹೊಸಳ್ಳಿ, ಮಲ್ಲು ಮಾದರ, ನಿಂಗಪ್ಪ ಮುಂದಿನಮನಿ, ಮಂಜುನಾಥ ಮುರುಡಿ, ಬಸವರಾಜ ಪೂಜಾರ, ಸಂತೂ ಪೂಜಾರ, ಸಿದ್ದು ಮ್ಯಾಗೇರಿ, ಚನ್ನು ನಾಡಿಗೇರ ಹಾಜರಿದ್ದರು.

ಸಿಪಿಐ ವರ್ಗಾವಣೆ

ಮುಂಡರಗಿ: ತಾಲ್ಲೂಕಿನ ಸಿಂಗಟಾಲೂರ ಗ್ರಾಮದ ಶಾಂತವ್ವ ಎಂಬ ದಲಿತ ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ಅವರನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.

ಸಿಪಿಐ ಶ್ರೀನಿವಾಸ ಮೇಟಿ ಅವರು ಮುಂದಿನ ಆದೇಶ ಬರುವವರೆಗೆ ಮುಂಡರಗಿ ಪೊಲೀಸ ಠಾಣೆಯ ಸಿಪಿಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಡಿವೈಎಸ್‌ಪಿ ಗುರು ಮತ್ತೂರು ಪ್ರಜಾವಾಣಿಗೆ ತಿಳಿಸಿದರು.

* * 

ಶಾಂತವ್ವಳನ್ನು ವ್ಯವಸ್ಥಿತವಾಗಿ ಕೊಲೆಗೈದಿರುವವರನ್ನು ಗಲ್ಲಿಗೇರಿಸಬೇಕು. ಸಿಪಿಐ ಮಂಜುನಾಥ ನಡುವಿನಮನಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು
ಲಕ್ಷ್ಮಣ ತಗಡಿನಮನಿ
ದಸಂಸ ತಾಲ್ಲೂಕು ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT