ಕೆಲಸಕ್ಕೆಂದು ಹೋದವರು ಬೆಂಕಿಗೆ ಆಹುತಿಯಾದರು

7

ಕೆಲಸಕ್ಕೆಂದು ಹೋದವರು ಬೆಂಕಿಗೆ ಆಹುತಿಯಾದರು

Published:
Updated:

ಹಿರೀಸಾವೆ: ಬೆಂಗಳೂರಿನ ಕಲಾಸಿಪಾಳ್ಯದ ಮಾರ್ಕೆಟ್‌ನ ಕೈಲಾಶ್ ಬಾರ್‌ನಲ್ಲಿ ಸೋಮವಾರ ಬೆಳಗಿನ ಜಾವ ನಡೆದ ಬೆಂಕಿ ಅವಘಡದಲ್ಲಿ ಮೃತಪಟ್ಟ ಐವರಲ್ಲಿ ಇಬ್ಬರು ಹಿರೀಸಾವೆ ಹೋಬಳಿಯವರು.

ಹಿರೀಸಾವೆ ಹೋಬಳಿ ಬಾಳಗಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಶಿವನಂಜಯ್ಯ ಅವರ ಪುತ್ರ ಮಂಜುನಾಥ್ (42) ಹಾಗೂ ಕಬ್ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಕಿಕೆರೆ ಗ್ರಾಮದ ಮಹೇಶ್ (28) ಮೃತರು. ಇಬ್ಬರೂ ಜೀವನ ನಿರ್ವಹಣೆಗಾಗಿ ಹಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಾರ್, ವೈನ್‌ ಶಾಪ್‌ಗಳಲ್ಲಿ ಕೆಲಸ ಮಾಡುವ ಮೂಲಕ ಕುಟುಂಬಗಳ ನಿರ್ವಹಣೆ ಮಾಡುತ್ತಿದ್ದರು.

ಮಂಜುನಾಥ್ ಸುಮಾರು 25 ವರ್ಷಗಳಿಂದ ಬೆಂಗಳೂರಿನ ವಿವಿಧ ಬಾರ್‌ಗಳಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅವರ ಕುಟುಂಬದವರು ಊರಿನಲ್ಲಿ ನೆಲೆಸಿದ್ದಾರೆ. ಪತ್ನಿ, ಪುತ್ರಿ, ಪುತ್ರ ಇದ್ದಾರೆ. 2 ತಿಂಗಳ ಹಿಂದಷ್ಟೇ ಕೈಲಾಶ್ ಬಾರ್‌ಗೆ ಸೇರಿಕೊಂಡಿದ್ದರು.

ಮೂಕಿಕೆರೆ ಗ್ರಾಮದ ಮಹೇಶ್ (ಅಂಗವಿಕಲ) 7 ವರ್ಷಗಳ ಹಿಂದೆ ಬೆಂಗಳೂರು ಸೇರಿದ್ದರು. ಬೆಂಗಳೂರಿನ ಹಲವು ವೈನ್‌ ಶಾಪ್‌ ಮತ್ತು ಬಾರ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಜಮೀನಿನ ಕೆಲಸ ಇದ್ದ ಕಾರಣ ಒಂದು ತಿಂಗಳು ರಜೆ ಹಾಕಿ ಗ್ರಾಮಕ್ಕೆ ಬಂದು, ಕೃಷಿ ಕೆಲಸ ಮುಗಿಸಿ, ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದರು. ಹಿಂದೆ ಇದ್ದ ಕಡೆ ಕೆಲಸಕ್ಕೆ ಸೇರಿಸಿಕೊಳ್ಳದ ಕಾರಣ, ಭಾನುವಾರವಷ್ಟೇ ಕೈಲಾಶ್‌ ಬಾರ್‌ನಲ್ಲಿ ಕೆಲಸ ಕೇಳಿದ್ದರು. ನಾಳೆ ಯಿಂದ ಕೆಲಸ ಮಾಡು ಎಂದು ಅಲ್ಲಿ ಯವರು ಹೇಳಿದ್ದರು. ಮಲಗಲು ಜಾಗ ಇಲ್ಲದ ಕಾರಣ ಮಹೇಶ್‌ ಅಲ್ಲಿ ತಂಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

‘ಈ ಹಿಂದೆ ಕೆಲಸ ಮಾಡಿದ್ದ ಬಾರ್‌ನವರ ಬಳಿ ಹಣ ಇದೆ. ಅದನ್ನು ಪಡೆದು ಜ. 16 ರಂದು ನಡೆಯುವ ತಮ್ಮನ ಮಗಳ ನಾಮಕರಣಕ್ಕೆ ಬರುತ್ತೇನೆ ಎಂದು ಹೇಳಿ ಹೋಗಿದ್ದ’ ಮಹೇಶ್‌ ಎಂದು ತಾಯಿ ಪದ್ಮಮ್ಮ ದುಖಃತಪ್ತರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry