ನ್ಯಾಯಾಂಗ ವಿಚಾರಣೆಗೆ ದಲಿತರ ಆಗ್ರಹ

7

ನ್ಯಾಯಾಂಗ ವಿಚಾರಣೆಗೆ ದಲಿತರ ಆಗ್ರಹ

Published:
Updated:
ನ್ಯಾಯಾಂಗ ವಿಚಾರಣೆಗೆ ದಲಿತರ ಆಗ್ರಹ

ಆಳಂದ: ಮಹಾರಾಷ್ಟ್ರದ ಭೀಮಾ ಕೋರೇಗಾಂ‌ವ್‌ನಲ್ಲಿ ದಲಿತರ ಮೇಲೆ ನಡೆಸಿದ ಹಿಂಸಾಚಾರ ಮತ್ತು ದೌರ್ಜನ್ಯವು ರಾಷ್ಟ್ರದ್ರೋಹಿ ಘಟನೆ ಯಾಗಿದೆ. ಇದರ ನಿಷ್ಪಕ್ಷಪಾತವಾದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಿಂದ ನಡೆಸಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯು ಸೋಮವಾರ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ.

ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳು ‘ಆಳಂದ ಬಂದ್‌’ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಪಟ್ಟಣದ ಜನಜೀವನ ಸಂಪೂರ್ಣ ಸ್ಥಗಿತಗೊಂಡಿತ್ತು. ಅಂಗಡಿ ಮುಂಗಟ್ಟುಗಳು, ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು ಹಾಗೂ ಕೆಲ ಸರ್ಕಾರಿ ಸಂಘ–ಸಂಸ್ಥೆಗಳ ಕಚೇರಿಗಳು ತೆರೆಯಲಿಲ್ಲ. ಬಸ್‌ ನಿಲ್ದಾಣ, ಶ್ರೀರಾಮ ಮಾರುಕಟ್ಟೆ, ಚೆಕ್‌ಪೋಸ್ಟ್‌, ಮುಖ್ಯರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಂಘಟನೆಯ ಕಾರ್ಯಕರ್ತರು ಬೆಳಿಗ್ಗೆಯಿಂದಲೇ ಪಟ್ಟಣದ ಸಿದ್ದಾರ್ಥ ಚೌಕ್, ಬಸ್‌ ನಿಲ್ದಾಣ, ಚೆಕ್‌ಪೋಸ್ಟ್‌, ಮಟಕಿ ರಸ್ತೆ, ತಡಕಲ ರಸ್ತೆ ಮೇಲೆ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಪರಿಣಾಮ ಯಾವ ವಾಹನಗಳೂ ರಸ್ತೆಗೆ ಇಳಿಯಲಿಲ್ಲ. ಆಳಂದ–ಕಲಬುರ್ಗಿ, ಆಳಂದ–ಸೋಲಾಪುರ, ಆಳಂದ–ಗಾಣಗಾಪುರ, ಆಳಂದ–ಉಮರ್ಗಾ, ಬಸವ ಕಲ್ಯಾಣ ಮಾರ್ಗದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಸಿದ್ಧಾರ್ಥ ಚೌಕ್‌ನಿಂದ ಬಸ್‌ ನಿಲ್ದಾಣ, ಶ್ರೀರಾಮ ಮಾರುಕಟ್ಟೆ ಮಾರ್ಗವಾಗಿ ತಹಶೀಲ್ದಾರ್‌ ಕಚೇರಿವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಭೀಮಾ ಕೋರೇಗಾಂವ್ ಘಟನೆಗೆ ಕಾರಣವಾದ ಸಂಘಟನೆ ಪ್ರಮುಖರಾದ ಮಿಲಿಂದ ಏಕಬೋಟೆ, ಸಂಬಾಜಿ ಬೀಡೆ, ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಸಚಿವ ಅನಂತಕುಮಾರ, ವಿಜಯಪುರದ ಬಾಲಿಕಿ ಮೇಲೆ ಅತ್ಯಾಚಾರ ಘಟನೆ ಹಾಗೂ ತಾಲ್ಲೂಕಿನ ಬೆಳಮಗಿ, ಧುತ್ತರಗಾಂವ್ ಗ್ರಾಮದ ದಲಿತರ ಮೇಲಿನ ದೌರ್ಜನ್ಯದ ಘಟನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಸಮನ್ವಯ ಸಮಿತಿ ಅಧ್ಯಕ್ಷ ದಯಾನಂದ ಶೇರಿಕಾರ, ಮುಖಂಡ ಪ್ರಕಾಶ ಮೂಲಭಾರತಿ, ಜಿ.ಪಂ ಸದಸ್ಯ ಸಿದ್ದರಾಮ ಪ್ಯಾಟಿ, ಸಲಾಂ ಸಗರಿ, ಹಣಮಂತ ಯಳಸಂಗಿ, ದಿಲೀಪ ಕ್ಷೀರಸಾಗರ, ಮಲ್ಲಿಕಾರ್ಜುನ ಬೋಳಣಿ, ದತ್ತಾ ಅಟ್ಟೂರು, ಅಫ್ಜಲ ಅನ್ಸಾರಿ, ರಾಜು ಮುದಗಲೆ, ಅಂಬಾರಾಯ ಬೆಳಮಗಿ, ಮೌಲಾ ಮುಲ್ಲಾ, ಬಾಬುರಾವ ಮಡ್ಡೆ, ಮಲ್ಲಿನಾಥ ಪರೇಣಿ ಮಾತನಾಡಿ, ‘ಭೀಮಾ ಕೋರೇಗಾಂವ್‌ ಘಟನೆಯಲ್ಲಿ ಆರ್‌ಎಸ್‌ಎಸ್‌ ಕೈವಾಡವಿದೆ. ಈ ಘಟನೆಯ ನೈತಿಕ ಹೊಣೆ ಹೊತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕು. ಘಟನೆಗೆ ಕಾರಣರಾದ ಸಂಘಟನೆ ಮುಖಂಡರನ್ನು ರಾಷ್ಟ್ರದ್ರೋಹದ ಪ್ರರಕಣ ದಾಖಲಿಸಿ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಬಾಬುರಾವ ಅರುಣೋದಯ ಮನವಿ ಪತ್ರ ಓದಿದರು. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಅವರ ಮೂಲಕ ವಿವಿಧ ಬೇಡಿಕೆಗಳಿದ್ದ ಮನವಿಯನ್ನು ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಶಿವಪುತ್ರ ನಡಗೇರಿ, ಧರ್ಮಾ ಬಂಗರಗಾ, ಪ್ರಹ್ಲಾದ ಸಿಂಗೆ, ಜೈಕಾಂತ ವಾಘ್ಮೋರೆ, ಫಿರ್ದೋಶಿ ಅನ್ಸಾರಿ, ಯೂಸುಫ್ ಅನ್ಸಾರಿ, ಭೋಜರಾಜ ಜುಬ್ರೆ, ಸೂರ್ಯಕಾಂತ ಜಿಡಗಾ, ಶರಣು ಕವಲಗಾ, ಚನ್ನವೀರ ಕಾಳಕಿಂಗೆ, ಆನಂದ ಗಾಯಕವಾಡ, ಬಸಲಿಂಗಪ್ಪ ಗಾಯಕವಾಡ, ಭೀಮಾಶಂಕರ ತಳಕೇರಿ, ಪಾಂಡುರಂಗ ಮೊದಲೆ, ಸೂರ್ಯಕಾಂತ ಸಾಲೇಗಾಂವ, ರಾಜಕುಮಾರ ಆಳಂದ ಇದ್ದರು.

ಆಳಂದ ಬಂದ್‌ ಕರೆಗೆ ಬೆಂಬಲಿಸಿ ತಾಲ್ಲೂಕಿನ ಮುಸ್ಲಿಂ ಸಂಘಟನೆಗಳು ಹಾಗೂ ಅದರ ಮುಖಂಡರು ಭಾಗವಹಿಸಿದ್ದರು. ಡಿವೈಎಸ್‌ಪಿ ಪಿ.ಕೆ.ಚೌಧರಿ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು. ಸಂಜೆ 6 ನಂತರ ಪಟ್ಟಣದಲ್ಲಿ ಸಂಚಾರ ಆರಂಭಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry