ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆ-ಅಪನಂಬಿಕೆಗಳ ತೊಳಲಾಟದಲ್ಲಿ...

Last Updated 9 ಜನವರಿ 2018, 19:30 IST
ಅಕ್ಷರ ಗಾತ್ರ

ಸ್ನೇಹವಾಗಲೀ, ಸಂಬಂಧವಾಗಲೀ ಇರುವುದು ನಂಬಿಕೆಯ ಬುನಾದಿಯ ಮೇಲೆ. ಯಾವುದೇ ಬಾಂಧವ್ಯದಲ್ಲಿ ನಮ್ಮ ಇರುವಿಕೆ ಶೇಕಡಾ ನೂರರಷ್ಟು ಇಲ್ಲದಿದ್ದಾಗ, ಮತ್ತೊಬ್ಬ ವ್ಯಕ್ತಿಯ ಇರುವಿಕೆ ಪೂರ್ಣವಾಗಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಶುರುವಾಗುತ್ತದೆ. ಆದ್ದರಿಂದ ಅನುಮಾನ ಯಾರಲ್ಲಿ ಮೊದಲು ಶುರುವಾಗುತ್ತದೆಯೋ ಅದರ ಮೂಲ ಅವರೇ! ಗೌತಮ ಬುದ್ಧ ಹೇಳಿರುವಂತೆ, ಅನುಮಾನಕ್ಕಿಂತ ಭಯಾನಕವಾದುದು ಯಾವುದೂ ಇಲ್ಲ. ಅನುಮಾನವು ಸಂಬಂಧಗಳನ್ನು ಬೇರ್ಪಡಿಸುತ್ತದೆ. ಗೆಳೆಯರ ನಡುವಿನ ಪವಿತ್ರವಾದ ಸ್ನೇಹಕ್ಕೆ ಭಂಗ ತರುತ್ತದೆ. ಅನುಮಾನವೆಂಬ ಹುಳು ಒಮ್ಮೆ ಮನಸ್ಸನ್ನು ಹೊಕ್ಕಿ ಬಿಟ್ಟರೆ ಸಾಕು; ಅದು ಅಲ್ಲೇ ತಳವೂರಿ ಗೂಡನ್ನು ಕಟ್ಟಿ ತನ್ನ ಪ್ರಪಂಚವನ್ನೇ ಸೃಷ್ಟಿಸಿಕೊಂಡುಬಿಡುತ್ತದೆ!

ಒಂದು ಕ್ಷಣದ ಅನುಮಾನ ಎಷ್ಟೊಂದು ವಿಷಪೂರಿತವಾಗಿರುತ್ತದೆಂದರೆ, ಅದು ಈ ಹಿಂದೆ ಕಳೆದ ಸಾವಿರ ಒಳ್ಳೆಯ ಕ್ಷಣಗಳನ್ನು ಮರೆಸಿಬಿಡುತ್ತದೆ. ಸಂದೇಹವೆನ್ನುವುದು ನಕಾರಾತ್ಮಕ ಚಿಂತನೆಗೆ ಎಡೆಮಾಡಿಕೊಡುತ್ತದೆ. ಅನುಮಾನ ಹೊಕ್ಕ ಮನದಲ್ಲಿ ಒಳ್ಳೆಯ ಯೋಚನೆಗೆ ದಾರಿಯೇ ಕಾಣುವುದಿಲ್ಲ. ಸಂದೇಹಭರಿತ ವ್ಯಕ್ತಿಗೆ ಜೀವನದಲ್ಲಿ ಅಡೆತಡೆಗಳು ಹೆಚ್ಚಾಗಿರುತ್ತವೆ. ಸಂದೇಹವೆನ್ನುವುದು ವೈರಸ್‌ ಇದ್ದಂತೆ. ನಮ್ಮ ದೇಹವನ್ನು ಹೊಕ್ಕ ವೈರಸ್‌ ಹೇಗೆ ನಮ್ಮನ್ನು ಕಾಯಿಲೆಯ ಗೂಡನ್ನಾಗಿ ಮಾಡುವುದಲ್ಲವೆ? ಹಾಗೆಯೇ ಈ ಸಂದೇಹವೆನ್ನುವ ವೈರಸ್‌ ನಮ್ಮ ಆತ್ಮಾಭಿಮಾನ, ಭರವಸೆ ಹಾಗೂ ಸಾಮರ್ಥ್ಯದ ಮೇಲೆ ಆಕ್ರಮಣ ಮಾಡುತ್ತದೆ. ಯಾರ ಮೇಲಾದರೂ ಒಮ್ಮೆ ಅಪನಂಬಿಕೆ ಉಂಟಾದರೆ, ಮುಂದೆ ಅವರು ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿದರೂ ಅದರಲ್ಲಿ ನಮಗೆ  ತಪ್ಪೇ ಕಾಣುತ್ತದೆ. ತಂಪು ಕನ್ನಡಕದ ಮೂಲಕ ನೋಡಿದರೆ, ಎಲ್ಲವೂ ತಂಪಾಗಿಯೇ ಕಾಣುತ್ತದೆ. ಹಾಗೆಯೇ ಅಪನಂಬಿಕೆ ಎನ್ನುವ ಕನ್ನಡಕವನ್ನು ಕಳಚಿ ನೋಡದಿದ್ದರೆ, ಎಲ್ಲವೂ ಅನುಮಾನಾಸ್ಪದವಾಗಿಯೇ ಕಾಣುತ್ತದೆ. ಹಾಗಾದರೆ ಈ ಶಂಕಾಭರಿತ ಕನ್ನಡಕವನ್ನು ಕಳಚುವ ಬಗೆ ಹೇಗೆ? ಈ ಅನುಮಾನವೆಂಬ ವೈರಾಣುವಿಗೆ ಲಸಿಕೆಯೇ ಇಲ್ಲವೇ? ಅಪನಂಬಿಕೆಯೆಂಬ ಈ ವಿಷವರ್ತುಲದಿಂದ ಹೊರ ಬರುವ ಬಗೆ ಹೇಗೆ?

ಪ್ರತಿಯೊಂದು ಸಮಸ್ಯೆಗೂ ಈ ಪ್ರಪಂಚದಲ್ಲಿ ಪರಿಹಾರವಿದೆ. ಆದರೆ ಅದನ್ನು ಕಂಡುಕೊಳ್ಳುವ ರೀತಿ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಭಿನ್ನವಾಗಿರುತ್ತದೆ. ಕೆಲವರು ಎಷ್ಟೇ ದೊಡ್ಡ ಸಮಸ್ಯೆಯಿದ್ದರೂ ಬಹಳ ಸಂಮಯಮದಿಂದ ಅದನ್ನು ನಿಭಾಯಿಸಬಲ್ಲರು. ಮತ್ತೆ ಕೆಲವರು ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಬೆಟ್ಟದಷ್ಟು ಮಾಡಿಕೊಳ್ಳುವರು. ಅನುಮಾನದಿಂದ ಕೂಡಿರುವ ಮನಸ್ಸು ಯಾವಾಗಲೂ ಕೆಟ್ಟದ್ದನ್ನೇ ಯೋಚಿಸುತ್ತಿರುತ್ತದೆ. ದೈಹಿಕ ಕಾಯಿಲೆಗಳನ್ನು ಬೇಗ ಗುಣಪಡಿಸಬಹುದು. ಆದರೆ ಮಾನಸಿಕ ಕಾಯಿಲೆಯಾದ ಶಂಕೆಯನ್ನು ಬೇರು ಸಹಿತ ಮನದಿಂದ ಕಿತ್ತೊಗೆಯಬೇಕು. ಆಗಷ್ಟೆ ಅಪಾಯದಿಂದ ಪಾರಾಗಲು ಸಾಧ್ಯ.

ಈ ಅಪನಂಬಿಕೆ ಎನ್ನುವ ವೈರಾಣುವನ್ನು ‘ನಂಬಿಕೆ’ ಎನ್ನುವ ಲಸಿಕೆಯನ್ನು ನೀಡಿ ನಾಶ ಮಾಡಬಹುದು. ಎಲ್ಲ ಸಮಸ್ಯೆಗಳಿಗೂ ಪರಿಹಾರವಿರುವಂತೆ ಈ ಅನುಮಾನವೆಂಬ ವಿಷವನ್ನು ತೆಗೆದು ಹಾಕಲು ಔಷಧ ಉಂಟು. ಮೊದಲಿಗೆ ‘ನಂಬಿಕೆ’ ಎನ್ನುವ ಬೀಜವನ್ನು ಅನುಮಾನ ತುಂಬಿದ ಮನದಲ್ಲಿ ಬಿತ್ತಬೇಕು. ಆದರೆ ನಂಬಿಕೆಯಿಂದ ಬಿತ್ತಿದ ಬೀಜವನ್ನು ಅನುಮಾನದಿಂದ ಮತ್ತೆ ಮತ್ತೆ ತೋಡಿ ನೋಡಬಾರದು. ಬಿತ್ತಿದ ನಂಬಿಕೆಯ ಬೀಜಕ್ಕೆ ನೀರೆರೆದು ಪೋಷಿಸಬೇಕು. ಪೋಷಿಸಿ ಅದನ್ನು ದೊಡ್ಡ ಮರವನ್ನಾಗಿ ಬೆಳೆಸಬೇಕು. ಅಂದರೆ, ಯಾವುದೇ ವಿಷಯದ ಬಗ್ಗೆ ಒಮ್ಮೆ ಮಾತ್ರ ನಂಬಿಕೆಯಿದೆ ಎಂದು ಅರಿವಿದ್ದರೆ ಸಾಲದು. ಪದೇ ಪದೇ ಅದನ್ನು ನೆನಪಿಸಿಕೊಳ್ಳುತ್ತಾ ನಮ್ಮಲ್ಲಿ ನಾವೇ ನಂಬಿಕೆಯ ಮರವನ್ನು ಬೆಳೆಸಿ ಅದು ಆಳವಾಗಿ ಮನದಲ್ಲಿ ಬೇರೂರುವಂತೆ ಮಾಡಬೇಕು. ಆದರೆ ಅನುಮಾನವೆಂಬ ಗೆದ್ದಲು ಹುಳವು ಈ ನಂಬಿಕೆಯ ಮರದ ಹತ್ತಿರಕ್ಕೂ ಬರದಂತೆ ತಡೆಯಬೇಕು. ಅಪನಂಬಿಕೆಯ ಗೆದ್ದಲು ಕೀಟ ಒಮ್ಮೆ ಕೊರೆಯಲು ಆರಂಭ ಮಾಡಿತೆಂದರೆ, ಅದು ಇಡೀ ನಂಬಿಕೆಯ ಮರವನ್ನೇ ಟೊಳ್ಳು ಮಾಡಿ, ಕೊನೆಗೆ ಅದನ್ನು ಬೀಳಿಸುತ್ತದೆ. ಆದ್ದರಿಂದ ನಂಬಿದ್ದನ್ನು ಅನುಮಾನಿಸುವುದಕ್ಕೆ ಮೊದಲು ಅನುಮಾನವನ್ನು ಅನುಮಾನಿಸಿ! ನಿಮ್ಮ ಪ್ರತಿ ಉಸಿರಿನಲ್ಲೂ ನಂಬಿಕೆಯ ಬಗ್ಗೆ, ನೀವು ನಂಬಿದ್ದರ ಬಗ್ಗೆ ವಿಶ್ವಾಸವಿರಲಿ. ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ (ಉಚ್ಛ್ವಾಸ) ಭರವಸೆಯನ್ನು ಒಳಗೆ ತೆಗೆದುಕೊಳ್ಳಿ. ಉಸಿರನ್ನು ಹೊರಗೆ ಬಿಡುವಾಗ (ನಿಃಶ್ವಾಸ) ಅನುಮಾನವನ್ನು ಹೊರಗೆ ತಳ್ಳಿ. ಇದು ಸತತ ಅಭ್ಯಾಸದಿಂದ ಮಾತ್ರ ಸಾಧ್ಯ. ಮನದಲ್ಲಿ ಅಪನಂಬಿಕೆಯಿದ್ದಲ್ಲಿ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸೋಲು ನಮ್ಮನ್ನು ಹತಾಶೆಗೊಳಿಸುವುದಕ್ಕಿಂತ ಹೆಚ್ಚಾಗಿ ಅನುಮಾನವು ನಮ್ಮ ಕನಸುಗಳನ್ನು ಛಿದ್ರಗೊಳಿಸುತ್ತದೆ. ಮನದಲ್ಲಿ ಭರವಸೆಯೊಂದಿದ್ದರೆ ಏನನ್ನು ಬೇಕಾದರೂ ಗೆಲ್ಲಬಹುದು. ಮನಸ್ಸಿಗೆ ಅಗಾಧವಾದ ಶಕ್ತಿಯಿದೆ. ಅದನ್ನು ಅಪನಂಬಿಕೆಯೆನ್ನುವ ನಕಾರಾತ್ಮಕ ಶಕ್ತಿಯ ಕೈಗೆ ಕೊಡಬೇಡಿ. ನಂಬಿಕೆ, ಭರವಸೆ, ವಿಶ್ವಾಸವೆನ್ನುವ ಸಕಾರಾತ್ಮಕ ಸಾಮರ್ಥ್ಯಕ್ಕೆ ಜಾಗ ಕೊಟ್ಟು, ಅದು ನಿಮ್ಮ ಮನದಲ್ಲಿ ಬೇರೂವಂತೆ ಮಾಡಿ.

ಮನಸ್ಸು ಎನ್ನುವುದು ನಾವು ಹೇಳಿದಂತೆ ಕೇಳುವ ಜಾಣ ವಿದ್ಯಾರ್ಥಿ. ಆದರೆ ಬಹಳಷ್ಟು ಬಾರಿ ನಾವಾಗಿಯೇ ಈ ಜಾಣ ವಿದ್ಯಾರ್ಥಿಯ ದಾರಿಯನ್ನು ತಪ್ಪಿಸುತ್ತೇವೆ. ನಮ್ಮ ಸುಪ್ತಮನಸ್ಸಿಗಿರುವಷ್ಟು ಸಾಮರ್ಥ್ಯ ಯಾವುದಕ್ಕೂ ಇಲ್ಲ. ಸುಪ್ತ ಮನಸ್ಸಿಗೆ ಒಳ್ಳೆಯದು ಅಥವಾ ಕೆಟ್ಟದ್ದು ಎಂಬ ವಿಶ್ಲೇಷಣೆ ಮಾಡುವ ಶಕ್ತಿಯಿಲ್ಲ. ನಾವು ಏನನ್ನು ಯೋಚಿಸುತ್ತಾ ಹೋಗುತ್ತೇವೆಯೂ ಅದನ್ನು ನಮ್ಮ ಸುಪ್ತಮನಸ್ಸು ಪೋಷಿಸುತ್ತಾ ಹೋಗುತ್ತದೆ. ಯಾವುದೇ ವಿಷಯದ ಬಗ್ಗೆ ಅನುಮಾನದಿಂದ ಹೆಚ್ಚು ಹೊತ್ತು ಯೋಚಿಸಿದಷ್ಟೂ ಆ ಅನುಮಾನ ಬಲವಾಗುತ್ತಾ ಹೋಗುತ್ತದೆ. ಅದೇ ರೀತಿ ನಂಬಿಕೆಯ ಬಗ್ಗೆಯೂ ಹೆಚ್ಚಾಗಿ ಚಿಂತಿಸಿದರೆ, ಅದೇ ಬೇರೂರುತ್ತಾ ಹೋಗುತ್ತದೆ. ಆಯ್ಕೆ ನಮಗೇ ಬಿಟ್ಟದ್ದು! ಬೆಟ್ಟದ ತುದಿ ಕಾಣದಿದ್ದರೂ ನಂಬಿಕೆಯೆನ್ನುವ ಮೊದಲ ಮೆಟ್ಟಿಲನ್ನು ಮೆಟ್ಟಿ ಹತ್ತಲು ಶುರು ಮಾಡಿದರೆ, ತುದಿ ಮುಟ್ಟುವುದರಲ್ಲಿ ಸಂಶಯವೇ ಇಲ್ಲ. ವಿಶ್ವಾಸವನ್ನು ನಾವು ಉಸಿರಾಡುವ ಆಮ್ಲಜನಕಕ್ಕೆ ಹೋಲಿಸಬಹುದು. ಗಾಳಿ ಕಣ್ಣಿಗೆ ಕಾಣುವುದಿಲ್ಲ. ಆದರೆ ನಮ್ಮನ್ನು ಜೀವಂತವಾಗಿರಿಸುವ ಶಕ್ತಿ ಅದಕ್ಕಿದೆ. ಹಾಗೆಯೇ ನಂಬಿಕೆ, ವಿಶ್ವಾಸ, ಭರವಸೆ – ಎನ್ನುವುದು ಕಣ್ಣಿಗೆ ಕಾಣುವುದಿಲ್ಲ. ಆದರೆ ಅದು ಸಂಬಂಧಗಳನ್ನು ಜೀವಂತವಾಗಿರಿಸುತ್ತದೆ.

ಮೊದಲೇ ಹೇಳಿದಂತೆ ಮನಸ್ಸು ಎನ್ನುವುದು ಬಹಳ ವಿಧೇಯ ವಿದ್ಯಾರ್ಥಿ. ಈ ಮನಸ್ಸು ಅಯಸ್ಕಾಂತೀಯ ಗುಣವನ್ನು ಹೊಂದಿದೆ. ಒಳ್ಳೆಯದನ್ನು ಯೋಚಿಸಿದರೆ, ಮನಸ್ಸು ಒಳ್ಳೆಯದನ್ನೇ ಆಕರ್ಷಿಸುತ್ತದೆ. ಕೆಟ್ಟದ್ದರ ಬಗ್ಗೆ ಅಥವಾ ತೊಂದರೆಗಳ ಬಗ್ಗೆ ಸದಾ ಯೋಚಿಸುತ್ತಿದ್ದರೆ, ಮನಸ್ಸು ಅದನ್ನೇ ಆಕರ್ಷಿಸುತ್ತದೆ. ಅನುಮಾನ ತುಂಬಿದ ಮನ ಯಾವಗಲೂ ಕತ್ತಲನ್ನೇ ಆಕರ್ಷಿಸುತ್ತದೆ. ಆ ಕತ್ತಲಿನಲ್ಲಿ ನಂಬಿಕೆಯೆಂಬ ನಕ್ಷತ್ರವನ್ನು ಅರಸಿ ಹಿಡಿಯಿರಿ. ಅದು ಇಡೀ ಬದುಕನ್ನೇ ಬೆಳಗಬಲ್ಲದು. ನಂಬಿಕೆಯೆನ್ನುವುದು ಸೂರ್ಯನಿದ್ದಂತೆ. ಅಪನಂಬಿಕೆಯೆನ್ನುವುದು ಮೋಡವಿದ್ದಂತೆ. ಜೀವನದಲ್ಲಿ ಕೆಲವು ದಿನ ಮೋಡ ಕವಿದ ವಾತಾವರಣವಿರುವುದು ನಿಜ. ಆದರೆ ಎಂದಿಗೂ ಹಾಗೇ ಇರಲು ಸಾಧ್ಯವಿಲ್ಲವಲ್ಲ. ಸೂರ್ಯನ ಬೆಳಕು ಹೇಗೆ ಮೋಡವನ್ನು ಸರಿಸಿ ಬೆಳಗುತ್ತದೆಯೋ ಹಾಗೆಯೇ ನಂಬಿಕೆಯೆಂಬ ಬೆಳಕು ಅಪನಂಬಿಕೆಯೆಂಬ ಮೋಡವನ್ನು ಸರಿಸಿ ಜೀವನದಲ್ಲಿ ಬೆಳಕನ್ನು ತುಂಬುತ್ತದೆ. ಬೆಳಕಿನಲ್ಲಿ ಕಂಡದ್ದನ್ನು ಕತ್ತಲೆಯಲ್ಲಿ ಅನುಮಾನಿಸಬೇಡಿ. ಅದರಿಂದ ಇಡಿ ಬದುಕೇ ಕತ್ತಲಮಯವಾಗಬಹುದು. ಸತ್ಯ ಮತ್ತು ನಂಬಿಕೆ – ಎರಡೂ ಒಂದೇ ನಾಣ್ಯದ ಎರಡು ಮುಖಗಳು. ನಂಬಿಕೆಯಿದ್ದಲ್ಲಿ ಸತ್ಯವಿರುತ್ತದೆ. ಸತ್ಯವಿಲ್ಲದೆಡೆ ಅಪನಂಬಿಕೆಯ ಉದಯವಾಗುತ್ತದೆ. ಶಂಕೆಯ ಉಗಮಕ್ಕೆ ಮತ್ತೊಂದು ಕಾರಣವೆಂದರೆ, ಮಾತುಕತೆಯ ಕೊರತೆ. ಸಂಬಂಧಗಳಲ್ಲಿ ಸಂಪರ್ಕ–ಸಂವಹನಗಳು ಇಲ್ಲದಾದಾಗ, ಅಪನಂಬಿಕೆಯಿಂದ ಬಿರುಕುಗಳು ಏರ್ಪಡುತ್ತವೆ. ಶಂಕೆಯನ್ನು ಹೊಡೆದೋಡಿಸುವ ಶಕ್ತಿ ಮಾತುಕತೆಗಿದೆ. ಪರಸ್ಪರ ಮಾತನಾಡಿ, ವಿಷಯಗಳನ್ನು ಪೂರ್ಣವಾಗಿ ಅರಿತರೆ ಅಪನಂಬಿಕೆಯ ಹುಟ್ಟು ಸಾಧ್ಯವೇ ಇಲ್ಲ.

(ಲಾವಣ್ಯಗೌರಿ ವೆಂಕಟೇಶ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT