‘ಕೆಲಸವನ್ನು ಪ್ರೀತಿಸಿ’

7

‘ಕೆಲಸವನ್ನು ಪ್ರೀತಿಸಿ’

Published:
Updated:
‘ಕೆಲಸವನ್ನು ಪ್ರೀತಿಸಿ’

ಈಗ ನನಗೆ ಎಂಬತ್ತೈದು ವರ್ಷ. ನಾನು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದ ದಿನಗಳು ಕಳೆದಿವೆ. ಈಗ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿಕೊಂಡು ಅದಕ್ಕೆ ಧಕ್ಕೆಯಾಗದ ಹಾಗೆ ಒಂದಿಷ್ಟು ಬರವಣಿಗೆಯನ್ನೋ, ಓದನ್ನೋ ಮಾಡುತ್ತಿರುತ್ತೇನೆ.

ಬರವಣಿಗೆ, ಲೈಬ್ರರಿ ಕೆಲಸಗಳು, ಕಚೇರಿ ಕೆಲಸಗಳು, ಅಧ್ಯಾಪನ, ಸಂಶೋಧನೆ, ಸಂಸಾರದ ಭಾರ ಹೊರುವುದು - ಇವನ್ನೆಲ್ಲ ಹೇಗೆ ನಿಭಾಯಿಸಿದೆ ಎಂದು ಈಗ ಹೇಳುವುದು ಕಷ್ಟ. ಯಾಕೆಂದರೆ ಆವಾಗ ಇಷ್ಟೆಲ್ಲ ಕೆಲಸ ಇದ್ದರೂ ಅದು ಏನೋ ದೊಡ್ಡ ಒತ್ತಡ ಎಂದು ಅನಿಸುತ್ತಲೇ ಇರಲಿಲ್ಲ. ಯಾವುದೋ ಮಹತ್ವಾಕಾಂಕ್ಷೆ ನನ್ನ ಕೈಯಿಂದ ಕೆಲಸ ಮಾಡಿಸುತ್ತಿತ್ತು. ಅದಕ್ಕನುಗುಣವಾಗಿ ಆ ಸಂದರ್ಭದಲ್ಲಿ ನಮ್ಮ ವಯಸ್ಸು, ನಾವು ಕೈಗೊಂಡ ಯೋಜನೆ ನಮ್ಮಿಂದ ಬೇಡುವ ನಿರೀಕ್ಷೆ ಈ ಎಲ್ಲವೂ ಸೇರಿ ಹೇಗೋ ಕೆಲಸ ಆಗಿಹೋಗುತ್ತಿತ್ತು.

ಒಂದು ನಿಯಮವನ್ನು ನಾನು ಯಾವಾಗಲೂ ಕಡ್ಡಾಯವಾಗಿ ಪಾಲಿಸುತ್ತಿದ್ದೆ. ಅದೇನೆಂದರೆ ರಾತ್ರಿ ಹತ್ತೂವರೆಯಿಂದ ಬೆಳಿಗ್ಗೆ ಆರುಗಂಟೆಯವರೆಗೂ ನಿದ್ರೆಯನ್ನು ಕೆಡಿಸಿಕೊಂಡಿಲ್ಲ. ಕೆಲವರು ರಾತ್ರಿ ಹೊತ್ತು ನಿದ್ದೆಗೆಟ್ಟು ಕೆಲಸ ಮಾಡುತ್ತಾರೆ. ನನಗೆ ಅದು ಅಸಾಧ್ಯ. ಆದರೆ ಹಗಲನ್ನು ಪೂರ್ತಿಯಾಗಿ ಬಳಸಿಕೊಂಡು ಕೆಲಸ ಮಾಡುತ್ತಿದ್ದೆ.

ಈಗ ನಿವೃತ್ತಿಯಾಗಿಯೇ 24 ವರ್ಷ ಕಳೆದವು. ಈ ಅವಧಿಯಲ್ಲಿಯೂ ನಾನು ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ನಿವೃತ್ತಿಯಾದ ಮೇಲೆ ಎಲ್ಲ ಸಮಯವೂ ನನ್ನ ಸಮಯವೇ ಆಗಿತ್ತು. ಸಿನಿಮಾ, ಕಲಾಪ್ರದರ್ಶನಗಳಂಥ ಹೊರಗಡೆ ಹೋಗುವ ಹವ್ಯಾಸಗಳೂ ನನಗೆ ಕಡಿಮೆ. ನನ್ನ ಕೆಲಸದಲ್ಲಿಯೇ ನಾನು ಪೂರ್ತಿಯಾಗಿ ತೊಡಗಿಕೊಳ್ಳುತ್ತೇನೆ. ಆದ್ದರಿಂದ ವೇಗವಾಗಿ ಕೆಲಸಗಳು ನಡೆಯುತ್ತವೆ. ಕೆಲಸ ಎಂದರೆ ನನಗೆ ಯಾವಾಗಲೂ ಉತ್ಸಾಹ ಹುಟ್ಟುತ್ತದೆ.

ನನಗೆ ಯಾವತ್ತೂ ಒತ್ತಡ ಎನ್ನುವುದು ಒಂದು ಕಾಯಿಲೆಯ ರೀತಿ ಕಾಡಿಲ್ಲ. ನಮಗಿರುವ ಸಮಯವನ್ನು ಹಾಳುಮಾಡದೆ, ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವುದು ತುಂಬ ಮುಖ್ಯ. ನಾನು ಇದನ್ನು ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದೇನೆ.

ಹೊಸ ಪುಸ್ತಕಗಳು, ಬರವಣಿಗೆ, ಮುದ್ರಣಕೆಲಸ, ಸಂಶೋಧನೆ, ತರಗತಿ ಪಾಠಗಳು - ಈ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರೂ ನನ್ನ ಕೆಲಸದ ಗುಣಮಟ್ಟ ಎಂದಿಗೂ ಕಡಿಮೆಯಾಗಿರಲಿಲ್ಲ. ಇದಕ್ಕೆ ಕಾರಣ ನನಗೆ ಆ ಎಲ್ಲ ಕೆಲಸಗಳ ಮೇಲೆ ಇರುವ ಪ್ರೀತಿ. ಯಾವ ಕೆಲಸಕ್ಕೂ ಸಮಯ ಸಾಲುವುದಿಲ್ಲ ಎನಿಸುತ್ತಿರಲಿಲ್ಲ. ನನ್ನ ಕೆಲಸಕ್ಕೆ, ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳು ಇರುತ್ತಿದ್ದವು. ಅಲ್ಲದೇ ವಿದ್ವಾಂಸರ ಬಳಿ ಹೋಗಿ ಚರ್ಚೆ ಮಾಡುತ್ತಿದ್ದೆ. ಡಿ. ಎಲ್‌. ನರಸಿಂಹಾಚಾರ್‌, ರಂ.ಶ್ರೀ. ಮುಗಳಿ  – ಎಲ್ಲರನ್ನೂ ಭೇಟಿ ಮಾಡಿ ಮೂಲ ಸಾಮಗ್ರಿ ಪಡೆದುಕೊಳ್ಳುತ್ತಿದ್ದೆ. ಈ ಯಾವ ಕೆಲಸಗಳನ್ನೂ ರಾತ್ರಿ ನಿದ್ರೆಗೆಟ್ಟು ಮಾಡಬೇಕಾದ ಸಂದರ್ಭ ನನಗೆ ಒದಗಿಬರಲಿಲ್ಲ. ಆದ್ದರಿಂದ ಒತ್ತಡದಲ್ಲಿದ್ದೇನೆ ಎಂದೂ ಅನಿಸಿಲ್ಲ. ನಮ್ಮ ಸಂಸ್ಥೆಯಲ್ಲಿನ ವಾತಾವರಣವೂ ಹಾಗೆಯೇ ಇತ್ತು. ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು ಕೆಲಸಗಾರರು, ವಿದ್ವಾಂಸರು. 

ಅಲ್ಲದೇ ಕೆಲಸದ ಬದಲಾವಣೆಯೂ ಒತ್ತಡವನ್ನು ನಿವಾರಣೆ ಮಾಡುತ್ತಿತ್ತು. ಅಂದರೆ ಸ್ವಲ್ಪ ಹೊತ್ತು ಅಧ್ಯಯನ ಮಾಡುವುದು, ಆಮೇಲೆ ಪಾಠ ಮಾಡುವುದು, ಮತ್ತೆ ಕಚೇರಿಯ ಕೆಲಸ, ಮನೆ – ಹೀಗೆ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಹೋದಾಗಲೇ ಮನಸ್ಸು ಒತ್ತಡವನ್ನು ಮರೆತು ಇನ್ನಷ್ಟು ಉತ್ಸಾಹದಿಂದ ತುಂಬುತ್ತಿತ್ತು.

ಈಗ ಮೊದಲಿನ ಹಾಗೆ ಆರೋಗ್ಯ ಉತ್ತಮವಾಗಿರುವುದಿಲ್ಲ. ಆದ್ದರಿಂದ ಕೆಲಸದ ಪ್ರಮಾಣವನ್ನು ಕಡಿಮೆ ಮಾಡಿದ್ದೇನೆ. ಮೊದಲಿನ ರೀತಿ ಕೆಲಸಗಳು ಈಗ ಸಾಧ್ಯವಾಗುವುದಿಲ್ಲ. ಆದರೆ ಎದುರಾಗುವ ಸಮಸ್ಯೆಗಳು ಅನುಭವದಿಂದಲೇ ಗೊತ್ತಿರುವುದರಿಂದ ನನ್ನ ಬಳಿಯೇ ಇರುವ ಸಾಮಗ್ರಿಗಳನ್ನು ಬಳಸಿಕೊಂಡು ಸಮಸ್ಯೆಯನ್ನು ನಿವಾರಿಸಿಕೊಂಡು ಕೆಲಸ ಮಾಡುತ್ತೇನೆ.

ನಾನು ಪ್ರತಿದಿನ ಮಲಗುವ ಮೊದಲು, ಸ್ವಲ್ಪ ಹೊತ್ತು ಚೇತೋಹಾರಿ ಸಾಹಿತ್ಯವನ್ನು ಓದುತ್ತೇನೆ. ಸಣ್ಣ ಸಣ್ಣ ನಗೆಬರಹಗಳು, ಚಂದಮಾಮ – ಇಂಥವನ್ನು ಓದುತ್ತೇನೆ. ಆಗ ಇಷ್ಟೊತ್ತಿನ ಪ್ರಪಂಚವೇ ಬೇರೆಯಾಗುತ್ತದೆ. ಪುಸ್ತಕದಲ್ಲಿ ತೆರೆದುಕೊಳ್ಳುವ ಹೊಸ ಪ್ರಪಂಚದಲ್ಲಿ ಐಕ್ಯವಾಗಿ ಹೋಗುತ್ತೇನೆ. ಹಾಗೆಯೇ ನಿದ್ರೆ ಬರುತ್ತದೆ.

ಇಂದು ಒತ್ತಡ ಎನ್ನುವುದು ಒಂದು ಕಾಯಿಲೆ ಎನ್ನುವ ಹಾಗೆ ಆಗಿದೆ. ಅದು ಯಾಕೆ ಎಂದು ನಿಖರವಾಗಿ ಹೇಳುವುದು ಕಷ್ಟ. ಅದೇನೋ ಒಂದು ಗೀಳು ಕಾಡಲು ತೊಡಗುತ್ತದೆ. ಇಂದಿನ ಜನರ ಜೀವನಕ್ರಮ, ಆಲೋಚನೆಗಳು, ಕೆಲಸದ ರೀತಿ ಪೂರ್ತಿ ಬೇರೆಯಾಗಿರುವುದರಿಂದ ಅವರ ಒತ್ತಡದ ಬಗ್ಗೆ ನಾನು ಹೇಳುವುದು ಅಷ್ಟು ಸಮಂಜಸ ಅಲ್ಲ. ಆದರೆ ಒಂದು ಮಾತು ಹೇಳಬಲ್ಲೆ. ಕೆಲಸವನ್ನು ಪ್ರೀತಿಸಬೇಕು. ಏನೋ ಪದವಿ ಬರುತ್ತದೆ, ಪ್ರಶಸ್ತಿ ಬರುತ್ತದೆ ಎಂಬ ಆಸೆಯಿಂದ ಕೆಲಸ ಮಾಡಬಾರದು.

ನನ್ನ ಕ್ಷೇತ್ರವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಮಾತಾಡುತ್ತೇನೆ. ಇಲ್ಲಿ ಕೆಲಸ ಮಾಡುವವರು ಈ ಕ್ಷೇತ್ರವನ್ನು ಪ್ರೀತಿಸಬೇಕು. ಈ ಕ್ಷೇತ್ರದಲ್ಲಿ ಹೆಚ್ಚು ಜನರು ಸಂಶೋಧನೆಯನ್ನು ಮಾಡಿಲ್ಲ. ಯಾವುದೋ ಒಂದು ಶಬ್ದಾರ್ಥ, ವ್ಯಾಕರಣ, ಸಾಹಿತ್ಯಪ್ರಕಾರದ ಉಗಮ, ವಿಕಾಸದ ವಿಚಾರ ಒಂದು ಸಮಸ್ಯೆಯಾಗಿ ಉಳಿದಿದೆ, ಅದಕ್ಕೊಂದು ಪರಿಹಾರ ಹುಡುಕಬೇಕು ಇತ್ಯಾದಿ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸಕ್ಕೆ ತೊಡಗಬೇಕು. ಅಲ್ಲದೇ ಮಹತ್ವಾಕಾಂಕ್ಷೆ ಇರಲೇಬೇಕು. ಕೆಲಸದ ಗುಣಮಟ್ಟ ಉಳಿಯಬೇಕಾದರೆ ಮಹತ್ವಾಕಾಂಕ್ಷೆ ಬೇಕೇ ಬೇಕು. ಎಂ.ಎಂ. ಕಲಬುರ್ಗಿ ನನ್ನ ಬಗ್ಗೆ  ‘ನಿಮ್ಮ ಎಲ್ಲ ಬರವಣಿಗೆಯಲ್ಲಿಯೂ ನಿಮ್ಮದೇ ವಿಶಿಷ್ಟವಾದ ಛಾಪಿರುತ್ತದೆ. ನೀವು ಸರ್ವಶಕ್ತಿಯನ್ನೂ ಹಾಕಿ ಕೆಲಸ ಮಾಡುತ್ತೀರಿ’ ಎಂದು ಹೇಳಿದ್ದರು. ಹೀಗೆ ನಾವು ಮಾಡುವ ಕೆಲಸದಲ್ಲಿ ನಮ್ಮ ಸರ್ವಶಕ್ತಿಯನ್ನೂ ವಿನಿಯೋಗಿಸಬೇಕು. ಅಂದರೆ ಸಮಗ್ರವಾಗಿರಬೇಕು, ಏನೋ ಹೊಸ ವಿಚಾರ ಹೇಳಿದ್ದಾರೆ ಎಂದು ಬೇರೆಯವರಿಗೂ ಅನ್ನಿಸಬೇಕು. ಇವೆಲ್ಲವೂ ಆಗಬೇಕಾದರೆ ಕೆಲಸವನ್ನು ಪ್ರೀತಿಸಬೇಕು. ಅದರ ಹೊರತು ಇನ್ಯಾವ ವಿಷಯಗಳನ್ನೂ ಮನಸ್ಸಿನಲ್ಲಿ ಇರಿಸಿಕೊಳ್ಳಬಾರದು. ನಾವು ಮಾಡುತ್ತಿರುವ ಕೆಲಸ ಸಮಗ್ರವಾಗಿರಬೇಕು, ಚೆನ್ನಾಗಿರಬೇಕು, ದೊಡ್ಡ ವಿದ್ವಾಂಸರು ಮೆಚ್ಚಿಕೊಳ್ಳಬೇಕು, ನಮ್ಮ ಪರಂಪರೆ ಬೆಳೆಯಬೇಕು ಎಂಬ ಆಸೆ ಇರಬೇಕು.

ಈಗೀಗ ಆಕರ್ಷಣೆಗಳು ಜಾಸ್ತಿ. ಅದೇ ಒತ್ತಡಕ್ಕೂ ಮೂಲ ಆಗಿದೆಯೋ ಏನೋ. ನಮ್ಮ ಕಾಲಕ್ಕೆ ನಾನು ರೇಡಿಯೊ ಕೇಳುತ್ತಿದ್ದದ್ದು ಕಡಿಮೆ; ಟಿ.ವಿ. ಇರಲೇ ಇಲ್ಲ. ದೂರವಾಣಿ ಸೌಕರ್ಯಗಳನ್ನೂ ಬಳಸಿಕೊಳ್ಳುತ್ತಿದ್ದದ್ದು ಅಷ್ಟಕ್ಕಷ್ಟೆ. ಸಿನಿಮಾ ಆಕರ್ಷಣೆ ಇರಲಿಲ್ಲ. ಹೊರಗಿನ ಪಾರ್ಟಿಗಳು, ಓಡಾಟಗಳು ಇರಲಿಲ್ಲ. ಈಗ ಈ ಎಲ್ಲವೂ ಸೇರಿಕೊಂಡಿವೆ. ಎಕ್ಸ್ಟ್ರಾ ಕರಿಕ್ಯುಲರ್‌ ಎನ್ನುವುದೇ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತಿದೆ. ಅದರಿಂದಾಗಿ ಕೆಲಸದ ಗುಣಮಟ್ಟದಲ್ಲಿ ದೊಡ್ಡ ಮಟ್ಟದ ಕುಸಿತ ಕಾಣುತ್ತಿದೆ. ತಿದ್ದಿ ಬರೆಯುವಷ್ಟು ತಾಳ್ಮೆ ಇರಲ್ಲ, ಸಮಸ್ಯೆಯನ್ನು ಎಲ್ಲ ಆಯಾಮಗಳಿಂದಲೂ ಅವಲೋಕಿಸುವ ಸಂಯಮ ಇಲ್ಲ. ಹೇಗೆ ಬರೆದರೂ ನಡೆಯುತ್ತದೆ ಎಂಬ ಮನೋಭಾವ ಕಾಣುತ್ತಿದೆ. ಬರವಣಿಗೆ–ಸಂಶೋಧನೆಯನ್ನು ಹವ್ಯಾಸವಾಗಿ ತೆಗೆದುಕೊಂಡಾಗ ಗುಣಮಟ್ಟ ಇರಲು ಸಾಧ್ಯವಿಲ್ಲ.

ನಾವು ಮಾಡುವ ಕೆಲಸದಲ್ಲಿಯೇ ಖುಷಿ ಕಾಣುತ್ತ, ಅದಕ್ಕಾಗಿಯೇ ನಮ್ಮೆಲ್ಲ ಚೈತನ್ಯವನ್ನು ವಿನಿಯೋಗಿಸಿದರೆ ಒತ್ತಡದ ಪ್ರಶ್ನೆಯೇ ಬರುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry