ಶಿಥಿಲ ಶಾಲಾ ಕಟ್ಟಡಗಳ ಪಟ್ಟಿಗೆ ಸೂಚನೆ

7

ಶಿಥಿಲ ಶಾಲಾ ಕಟ್ಟಡಗಳ ಪಟ್ಟಿಗೆ ಸೂಚನೆ

Published:
Updated:
ಶಿಥಿಲ ಶಾಲಾ ಕಟ್ಟಡಗಳ ಪಟ್ಟಿಗೆ ಸೂಚನೆ

ಕೋಲಾರ: ‘ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲಾ ಕಟ್ಟಡಗಳ ಪಟ್ಟಿ ಮಾಡಿ ದುರಸ್ತಿಗೆ ಅಂದಾಜು ವೆಚ್ಚ ಪಟ್ಟಿ ಸಿದ್ಧಪಡಿಸಿ 15 ದಿನದೊಳಗೆ ಸರ್ಕಾರಕ್ಕೆ ಕಳುಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳು (ಸಿಆರ್‌ಪಿ) ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಕಿರಿಯ ಎಂಜಿನಿಯರ್‌ಗಳು ಮತ್ತು ಸಿಆರ್‌ಪಿಗಳು ಶಿಥಿಲ ಶಾಲಾ ಕಟ್ಟಡಗಳ ಬಗ್ಗೆ ಜಂಟಿ ಸರ್ವೆ ನಡೆಸಬೇಕು’ ಎಂದರು.

ತಾಲ್ಲೂಕಿನಲ್ಲಿ ಇತ್ತೀಚೆಗೆ ವ್ಯಾಪಕ ಮಳೆಯಾದ ಕಾರಣ ಸಾಕಷ್ಟು ಶಾಲಾ ಕಟ್ಟಡಗಳು ಶಿಥಿಲಗೊಂಡು ಬೀಳುವ ಹಂತ ತಲುಪಿವೆ. ಹೀಗಾಗಿ ಶಾಲಾ ಮಕ್ಕಳು ಪ್ರತಿನಿತ್ಯ ಭಯದ ನಡುವೆ ಪಾಠ ಕೇಳುವಂತಾಗಿದೆ. ಮತ್ತೊಂದೆಡೆ ಪೋಷಕರು ಮಕ್ಕಳನ್ನು ಶಾಲೆಗೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿಥಿಲ ಕಟ್ಟಡಗಳನ್ನು ಶೀಘ್ರವೇ ದುರಸ್ತಿ ಮಾಡಬೇಕು. ಸರ್ಕಾರದಿಂದ ಅನುದಾನ ಬಂದ ಕೂಡಲೇ ದುರಸ್ತಿ ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದರು.

ಶೌಚಾಲಯ ಸಮಸ್ಯೆ: ಶಾಲೆಗಳಲ್ಲಿ ಶೌಚಾಲಯ ಅತ್ಯಗತ್ಯ. ಆದರೆ, ಬಹುಪಾಲು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸಮಸ್ಯೆ ಇದೆ. ಇದರಿಂದ ವಿದ್ಯಾರ್ಥಿನಿಯರು ಪ್ರತಿನಿತ್ಯ ಬವಣೆ ಪಡುವಂತಾಗಿದೆ. ಶೌಚಾಲಯವಿಲ್ಲದ ಶಾಲೆಗಳನ್ನು ಗುರುತಿಸಿ ಹೊಸದಾಗಿ ಶೌಚಾಲಯ ನಿರ್ಮಿಸಲಾಗುವುದು. ಕೆಲ ಶಾಲೆಗಳಲ್ಲಿ ಕುಡಿಯುವ ನೀರು, ತಡೆಗೋಡೆ, ಪೀಠೋಪಕರಣ ಸಮಸ್ಯೆ ಇದೆ. ಆ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕು ಎಂದು

ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸು ನೆರವು ನೀಡಲು ತಾಲ್ಲೂಕಿನ ಕೆಲ ಕಾರ್ಖಾನೆಗಳು ಮತ್ತು ಖಾಸಗಿ ಕಂಪೆನಿಗಳು ಮುಂದೆ ಬಂದಿವೆ. ಕಂಪೆನಿಗಳಲ್ಲಿ ಕಾರ್ಪೊ ರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ಅಡಿ (ಸಿಎಸ್‌ಆರ್) ಸಾಮಾಜಿಕ ಕಾರ್ಯಗಳಿಗೆ ಹಣ ಮೀಸಲಿಡಲಾಗಿರುತ್ತದೆ. ಆ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯಕ್ಕೆ ಕೊಡುವಂತೆ ಕಂಪೆನಿಗಳ ಮುಖ್ಯಸ್ಥರಿಗೆ ಮನವಿ ಮಾಡಿದ್ದೇನೆ ಎಂದು ವಿವರಿಸಿದರು.

ತಾಲ್ಲೂಕಿನ ಬೆತ್ತನಿ ಗ್ರಾಮದ ಬಳಿ ಇರುವ ಸಿದ್ಧ ಉಡುಪು ಕಾರ್ಖಾನೆಯವರು ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಾಲಯ ಆರಂಭಿಸುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಟ್ಯಾಂಕ್‌ ತೆರವುಗೊಳಿಸಿ: ‘ತಾಲ್ಲೂಕಿನ ಕೋಡಿ ಕಣ್ಣೂರು ಗ್ರಾಮದಲ್ಲಿ ಸರ್ಕಾರಿ ಶಾಲೆ ಬಳಿ ಎರಡು ಹಳೆಯ ಓವರ್ ಹೆಡ್‌ ಟ್ಯಾಂಕ್‌ಗಳಿದ್ದು, ಅದರಲ್ಲಿ ಒಂದು ಶಿಥಿಲಗೊಂಡಿದೆ. ಅದು ಕುಸಿದರೆ ಮಕ್ಕಳಿಗೆ ಪ್ರಾಣಾಪಾಯವಾಗುವ ಸಾಧ್ಯತೆ ಹೆಚ್ಚು. ಆದ ಕಾರಣ ಅದನ್ನು ತೆರವುಗೊಳಿಸಿ ಸಂಪ್‌ ನಿರ್ಮಿಸಬೇಕು’ ಎಂದು ಸಿಆರ್‌ಪಿ ಆರ್.ಶ್ರೀನಿವಾಸ್ ಮನವಿ ಮಾಡಿದರು.

‘ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಗುರಗಂಜಿಗುರ್ಕಿ ಗ್ರಾಮದ ಶಾಲಾ ಮೈದಾನದ ಪಕ್ಕದಲ್ಲಿ ರೈತರು ಎರಡು ಕೃಷಿ ಹೊಂಡ ನಿರ್ಮಿ ಸಿದ್ದಾರೆ. ಶಾಲಾ ಮಕ್ಕಳು ಆ ಭಾಗದಲ್ಲಿ ಓಡಾಡುವುದರಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ. ಆದ ಕಾರಣ ಕೃಷಿ ಹೊಂಡಗಳ ಸುತ್ತ ತಂತಿ ಬೇಲಿ ಅಳವಡಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ರೈತರಿಗೆ ಸೂಚನೆ ನೀಡಬೇಕು’ ಎಂದು ವಕ್ಕಲೇರಿ ಸಿಆರ್‌ಪಿ ಸೈಯದ್ ಖಲೀಮ್‌ ಉಲ್ಲಾ

ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿ ಆಂಜಿನಪ್ಪ, ನೀರಿನ ಟ್ಯಾಂಕ್‌ ತೆರವುಗೊಳಿಸುವುದಾಗಿ ಮತ್ತು ಕೃಷಿ ಹೊಂಡಗಳ ಸುತ್ತ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ರೈತರಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

* * 

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ತಾ.ಪಂಯಲ್ಲಿ ₹ 30 ಲಕ್ಷ ಅನುದಾನವಿದೆ. ಅಲ್ಲದೇ, ಜಿ.ಪಂಯಿಂದಲೂ ಶೌಚಾಲಯ ನಿರ್ಮಾಣಕ್ಕೆ ಮತ್ತು ನೀರಿನ ಸೌಕರ್ಯ ಕಲ್ಪಿಸಲು ಅನುದಾನವಿದೆ. ಈ ಅನುದಾನಗಳನ್ನು ಬಳಸಿಕೊಂಡು ಶಾಲೆಗಳಿಗೆ ಅನುಕೂಲ ಮಾಡಲಾಗುವುದು.

–ಎಂ.ಆಂಜಿನಪ್ಪ, ತಾ.ಪಂ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry