ತುಪ್ಪಕ್ಕೂ ಬ್ರ್ಯಾಂಡ್‌ ಮೌಲ್ಯ ತಂದ ಜಿಆರ್‌ಬಿ

7

ತುಪ್ಪಕ್ಕೂ ಬ್ರ್ಯಾಂಡ್‌ ಮೌಲ್ಯ ತಂದ ಜಿಆರ್‌ಬಿ

Published:
Updated:
ತುಪ್ಪಕ್ಕೂ ಬ್ರ್ಯಾಂಡ್‌ ಮೌಲ್ಯ ತಂದ ಜಿಆರ್‌ಬಿ

1970ರಲ್ಲಿ ಪಳನಿ ಪಕ್ಕದ ಸಣ್ಣ ಹಳ್ಳಿಯೊಂದರಿಂದ ಬೆಂಗಳೂರಿಗೆ ಬಂದಿದ್ದ ಹದಿಮೂರು ವರ್ಷದ ಬಾಲಕನೊಬ್ಬ ಸೈಕಲ್‌ ತುಳಿಯುತ್ತ ಮನೆ, ಮನೆಗಳಿಗೆ ಬೆಣ್ಣೆ ಪೂರೈಸುತ್ತಲೇ ಕ್ರಮೇಣ ಆಧುನಿಕ ರೀತಿಯಲ್ಲಿ ತುಪ್ಪ ತಯಾರಿಕೆ ಮತ್ತು ಮಾರಾಟದ ಉದ್ದಿಮೆಗೆ ಕಾಲಿಟ್ಟು, ತುಪ್ಪಕ್ಕೂ ಪ್ರತ್ಯೇಕ ಬ್ರ್ಯಾಂಡ್‌ ಮೌಲ್ಯ ತಂದುಕೊಟ್ಟ ಯಶೋಗಾಥೆ ಇಲ್ಲಿದೆ. ಹೆಚ್ಚಿನ ವಿದ್ಯಾಭ್ಯಾಸ ಪಡೆಯದ, ಗ್ರಾಹಕರು ಮತ್ತು ವರ್ತಕರ ಜತೆಗಿನ ಒಡನಾಟದಿಂದಲೇ ವ್ಯವಹಾರ ಕರಗತ ಮಾಡಿಕೊಂಡ, ಮಾರುಕಟ್ಟೆಯ ಮಾರಾಟ ತಂತ್ರ ಕಲಿತ ಜಿ. ಆರ್‌. ಬಾಲಸುಬ್ರಹ್ಮಣ್ಯಂ ಅವರು ಉದ್ದಿಮೆ ಕಟ್ಟಿ ಬೆಳೆಸಿದ ಪರಿ ಬೆರಗುಗೊಳಿಸುತ್ತದೆ.

ಅಕ್ಕನ ಮನೆಯಲ್ಲಿದ್ದುಕೊಂಡು ಬೆಣ್ಣೆ ಮಾರಾಟ ವಹಿವಾಟಿನ ಅ, ಆ ಇ ಕಲಿಯುತ್ತಿದ್ದ ಇವರು, ಅಡಿಕೆಪಟ್ಟೆಯಲ್ಲಿ ಕಾಲುಕೆಜಿ, ಅರ್ಧಕೆಜಿ, ಒಂದು ಕೆಜಿ ಬೆಣ್ಣೆ ಕಟ್ಟಿಕೊಂಡು ಬೆಂಗಳೂರಿನಲ್ಲಿ ಅಂಗಡಿಗಳಿಗೆ ಮತ್ತು ಮನೆ, ಮನೆಗೆ ಸರಬರಾಜು ಮಾಡುತ್ತಿದ್ದರು. ಆಗಿನ ಕಾಲದಲ್ಲಿ ತುಪ್ಪದ ವ್ಯಾಪಾರ ಈಗಿನಂತೆ ಭರಾಟೆಯಿಂದ ನಡೆಯುತ್ತಿರಲಿಲ್ಲ.

ಬಿಎಚ್‌ಇಎಲ್‌, ಎ.ಜಿ, ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದವರು ಮಾತ್ರ ಬೆಣ್ಣೆಯನ್ನು ಹೆಚ್ಚಾಗಿ ಖರೀದಿಸುತ್ತಿದ್ದರು. ತಿಂಗಳ ಮೊದಲ ವಾರದಲ್ಲಿ ಮಾರಾಟ ಹೆಚ್ಚಾಗಿರುತ್ತಿತ್ತು. ಉಳಿದವರು ತಮ್ಮ ಊರಿನಿಂದಲೇ ಹೆಚ್ಚಾಗಿ ತುಪ್ಪ ತರುತ್ತಿದ್ದರು. ತವರು ಮನೆಯಿಂದ ತಂದ ತುಪ್ಪದ ಮುಂದೆ ಯಾವುದೂ ಸರಿಸಾಟಿಯಲ್ಲ ಎನ್ನುವುದು ಗೃಹಿಣಿಯರ ನಂಬಿಕೆ. ತಾಯಿ ಸಿದ್ಧಪಡಿಸಿಕೊಟ್ಟ ತುಪ್ಪ ತಿಂದರೇನೆ ಆಕೆಗೆ ತೃಪ್ತಿ. ಇಂತಹ ಮನೋಭಾವ ಈಗಲೂ ಇದೆ ಎನ್ನುವ ಬಾಲಸುಬ್ರಹ್ಮಣ್ಯಂ ಅವರು, ‘ತುಪ್ಪದ ವಿಷಯದಲ್ಲಿ ಗೃಹಿಣಿಯರ ಮನ ಗೆಲ್ಲುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅವರಿಗೆ ಇಷ್ಟವಾಗುವ ಬಗೆಯಲ್ಲಿಯೇ ತುಪ್ಪ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರಿಂದಲೇ ವಹಿವಾಟನ್ನು ವ್ಯಾಪಕವಾಗಿ ವಿಸ್ತರಿಸಲು ಸಾಧ್ಯವಾಯಿತು’ ಎಂದು ತಮ್ಮ ಯಶಸ್ವಿ ವಹಿವಾಟಿನ ಗುಟ್ಟು ಬಿಟ್ಟುಕೊಡುತ್ತಾರೆ.

ಎಪ್ಪತ್ತು – ಎಂಬತ್ತರ ದಶಕದಲ್ಲಿ ಬೆಂಗಳೂರಿನ ಮಲ್ಲೇಶ್ವರಂ, ಅವೆನ್ಯೂ ರೋಡ್‌, ಕೆ. ಆರ್‌. ಮಾರುಕಟ್ಟೆ, ಗಾಂಧಿಬಜಾರ್‌ನಂತಹ ಆಯ್ದ ಮೂರ್ನಾಲ್ಕು ಕಡೆಗಳಲ್ಲಿನ ಅಂಗಡಿಗಳಲ್ಲಿ ಮಾತ್ರ ಬೆಣ್ಣೆ ಸಿಗುತ್ತಿತ್ತು. ಅಂಗಡಿಗೆ ಬಂದು ಬೆಣ್ಣೆ ಖರೀದಿಸಲು ಆಗದವರ ಮನೆ, ಮನೆಗೆ ಸೈಕಲ್‌ ಮೇಲೆ ಬೆಣ್ಣೆ ತೆಗೆದುಕೊಂಡು ಹೋಗಿ ಪೂರೈಕೆ ಮಾಡಲಾಗುತ್ತಿತ್ತು. ಅಕ್ಕಪಕ್ಕದ ಊರುಗಳಿಗೆ ಬಸ್‌ನಲ್ಲಿಯೂ 20 ರಿಂದ 30 ಕೆ.ಜಿ. ಬೆಣ್ಣೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು.

ಬೆಂಗಳೂರು ಬೆಳೆಯುತ್ತಿದ್ದಂತೆ ಬೆಣ್ಣೆಗೂ ಬೇಡಿಕೆ ಹೆಚ್ಚಾಗತೊಡಗಿತು. ಆದರೆ, ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದ ಬೆಣ್ಣೆ ಕೆಲವೊಮ್ಮೆ ಮೂರ್ನಾಲ್ಕು ದಿನಗಳಲ್ಲಿ ಮಾರಾಟ ಆಗದಿದ್ದರೆ ಹಾಳಾಗಿ ಬಿಡುತ್ತಿತ್ತು. ಈ ಸಮಸ್ಯೆಗೆ ಯಾವ ಪರಿಹಾರ ಕಂಡುಕೊಳ್ಳಬೇಕು ಎಂದು ಚಿಂತಿಸಿದಾಗ, ಬೆಣ್ಣೆಯನ್ನು ಹದವಾಗಿ ಕಾಯಿಸಿ ತುಪ್ಪವನ್ನೇ ಬಾಟಲಿಗಳಲ್ಲಿ ಮಾರಾಟ ಮಾಡಬಹುದಲ್ಲ. ಆಗ ಬೆಣ್ಣೆ ಹಾಳಾಗುವ ವಹಿವಾಟು ಕೈಕಚ್ಚುವ ಮಾತೇ ಬರಲಾರದಲ್ಲ ಎನ್ನುವ ಆಲೋಚನೆಯನ್ನು ಇವರು ಕಾರ್ಯರೂಪಕ್ಕೆ ತರಲು ಮುಂದಾದರು. ಆದರೆ, ಈ ಆಲೋಚನೆಯನ್ನು ಕಾರ್ಯಗತಗೊಳಿಸುವುದು ಹೇಳಿಕೊಂಡಷ್ಟು ಸುಲಭವೂ ಆಗಿರಲಿಲ್ಲ.

ರಾಜ್ಯದ ವಿವಿಧ ಭಾಗಗಳಲ್ಲಿನ ಬೆಣ್ಣೆಗೆ ಅದರದ್ದೇ ಆದ ರುಚಿ, ಸುವಾಸನೆ ಇದೆ. ಮಂಡ್ಯ, ಹೊಳೆನರಸೀಪುರ, ನಾಗಮಂಗಲದ ಬೆಣ್ಣೆ ವಿಭಿನ್ನವಾಗಿರುವಂತೆ, ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಆಯಾ ಪ್ರದೇಶದ ಜನರಿಗೆ ಅವರ ಭಾಗದಲ್ಲಿ ಸಿಗುವ ಬೆಣ್ಣೆಯಿಂದ ತಯಾರಿಸಿದ ತುಪ್ಪವೇ ಬೇಕಾಗುತ್ತಿತ್ತು. ಬೇರೆ ಭಾಗದ ತುಪ್ಪವನ್ನು ಗ್ರಾಹಕರು ಮೂಸಿಯೂ ನೋಡುತ್ತಿರಲಿಲ್ಲ. ಇಂತಹ ಬೃಹತ್‌ ಸವಾಲನ್ನು ಮೀರಿ ಎಲ್ಲ ಪ್ರದೇಶದ ಗ್ರಾಹಕರೂ ಮೆಚ್ಚಿಕೊಳ್ಳುವಂತಹ ತುಪ್ಪ ತಯಾರಿಸುವ ಬಗ್ಗೆ ಬಾಲಸುಬ್ರಹ್ಮಣ್ಯಂ ಅವರು ತಲೆಕೆಡಿಸಿಕೊಂಡಿದ್ದರು. ದೇಶದ ವಿವಿಧ ಭಾಗಗಳಿಗೆ ತೆರಳಿ, ಬೆಣ್ಣೆ – ತುಪ್ಪ ವಹಿವಾಟಿನ ಪರಿಣತರ ಜತೆ ಚರ್ಚಿಸಿ ವಿವಿಧ ಪ್ರದೇಶಗಳ ಗ್ರಾಹಕರೂ ಮೆಚ್ಚಿಕೊಳ್ಳುವಂತಹ ಶುದ್ಧ ತುಪ್ಪ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಂಡರು. ಅದಕ್ಕೆ ಪೂರಕವಾದ ಅತ್ಯಾಧುನಿಕ ಸ್ವಯಂಚಾಲಿತ ಯಂತ್ರೋಪಕರಣಗಳನ್ನು ಹೊಸೂರು ಬಳಿಯ ತಯಾರಿಕಾ ಘಟಕದಲ್ಲಿ ಅಳವಡಿಸಿದರು.  ರೈತರಿಂದ ನೇರವಾಗಿ ಬೆಣ್ಣೆ ಖರೀದಿಸಿ ಅಂಗಡಿಯಿಂದ ಅಂಗಡಿಗೆ, ಮನೆ– ಮನೆಗೆ ಮಾರಾಟ ಮಾಡಿದ್ದೇ ಅವರ ಈ ಭವಿಷ್ಯದ ಉದ್ದಿಮೆಗೆ ಭದ್ರ ಬುನಾದಿ ಹಾಕಿತ್ತು.

ಮಾರುಕಟ್ಟೆಯಲ್ಲಿ ಬೆಣ್ಣೆಯ ಬದಲಿಗೆ ತುಪ್ಪ ದೊರೆಯಲಾರಂಭಿಸಿದಾಗ, ಆರಂಭದಲ್ಲಿ ಗ್ರಾಹಕರು ಅದನ್ನು ಸ್ವೀಕರಿಸಲು ಹಿಂದೇಟು ಹಾಕತೊಡಗಿದ್ದರು. ಅನೇಕರು ಮೂಗು ಮುರಿದವರೇ ಹೆಚ್ಚು. ತು‌ಪ್ಪದಲ್ಲಿ ಏನಾದರೂ ಕಲಬೆರಕೆ ಇರಬಹುದೇ ಎನ್ನುವ ಅನುಮಾನವೂ ಅವರನ್ನು ಕಾಡುತ್ತಿತ್ತು. ಬಹುತೇಕ ಗ್ರಾಹಕರು ಸ್ವಂತ ಊರಿನಿಂದಲೇ ತುಪ್ಪ ತರುತ್ತಿದ್ದರಿಂದ ಸಿದ್ಧ ತುಪ್ಪ ಖರೀದಿಸುವುದು ಅವರಿಗೆ ಅಷ್ಟಾಗಿ ಹಿತಕರ ಅನಿಸಿರಲಿಲ್ಲ. ಗ್ರಾಹಕರ ಇಂತಹ ಉದಾಸೀನ ಧೋರಣೆಯಿಂದ ಬಾಲಸುಬ್ರಹ್ಮಣ್ಯಂ ಅವರು ಧೃತಿಗೆಡಲಿಲ್ಲ. ಶುದ್ಧ ತುಪ್ಪ ತಯಾರಿಸಿ ಮಾರಿದರೆ ಗ್ರಾಹಕರು ಖಂಡಿತವಾಗಿಯೂ ತಮ್ಮ ಕೈಬಿಡುವುದಿಲ್ಲ. ಇಂದಲ್ಲ ನಾಳೆ ಗ್ರಾಹಕರು ತಮ್ಮಲ್ಲಿಗೆ ಬಂದೇ ಬರುತ್ತಾರೆ ಎನ್ನುವ ದೃಢ ವಿಶ್ವಾಸದಿಂದ ಮುನ್ನಡೆದರು. ಬಳಕೆದಾರರ ಮೇಲೆ ಅವರು ಇಟ್ಟ ನಂಬಿಕೆ ಹುಸಿಯಾಗಲಿಲ್ಲ. ಗ್ರಾಹಕರು ಕ್ರಮೇಣ ಬೆಣ್ಣೆ ಬದಲಿಗೆ ಶುದ್ಧ ತುಪ್ಪವನ್ನೇ ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸಲಾರಂಭಿಸಿದರು. ಬೆಣ್ಣೆ ಖರೀದಿಸಿ ಕಾಯಿಸುವಾಗ ಏರುಪೇರಾಗಿ ಅತ್ತ ತುಪ್ಪವೂ ಇಲ್ಲ, ಇತ್ತ ಬೆಣ್ಣೆಯೂ ಇಲ್ಲ ಎನ್ನುವ ಪರಿಸ್ಥಿತಿಗೆ ಬದಲಾಗಿ ಶುದ್ಧ ತುಪ್ಪ ಖರೀದಿಸುವುದೇ ಮೇಲು ಎನ್ನುವ ನಿರ್ಧಾರಕ್ಕೆ ಬರಲಾರಂಭಿಸಿದರು. ಗ್ರಾಹಕರಲ್ಲಿ ಈ ಬದಲಾವಣೆ ಕಂಡುಬರಲು ಹಲವು ವರ್ಷಗಳೇ ಕಾಯಬೇಕಾಯಿತು. ಅಲ್ಲಿಯವರೆಗೆ ಬಾಲಸುಬ್ರಹ್ಮಣ್ಯ ಅವರು ತಾಳ್ಮೆಯಿಂದಲೇ ಇದ್ದರು. ತುಪ್ಪ ಖರೀದಿಯತ್ತ ಗ್ರಾಹಕರ ಮನೋಭಾವ ಬದಲಾಗುತ್ತಿದ್ದಂತೆ ಇವರು ಹಿಂತಿರುಗಿ ನೋಡಲೇ ಇಲ್ಲ. ಸಿದ್ಧ – ಶುದ್ಧ ತುಪ್ಪಕ್ಕೆ ಬಳಕೆದಾರರಲ್ಲಿ ಮಾನ್ಯತೆ ತಂದುಕೊಡುವಲ್ಲಿ ಬಾಲಸುಬ್ರಮಣಿಯನ್‌ ಅವರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ.

ಮೂರು ಸಾವಿರ ರೂಪಾಯಿಗಳ ಬಂಡವಾಳ ಹಾಕಿ ಆರಂಭಿಸಿದ ವಹಿವಾಟು ಇಂದು ₹ 400 ಕೋಟಿಗಳವರೆಗೆ ಬೆಳೆದು ನಿಂತಿದೆ. ಇದರ ಹಿಂದೆ ಬಾಲಕೃಷ್ಣನ್‌ ಅವರ ಅಪಾರ ಪರಿಶ್ರಮ, ಗ್ರಾಹಕರ ನಾಡಿ ಮಿಡಿತ ಅರಿತ ಪ್ರಾವೀಣ್ಯತೆ, ವಹಿವಾಟು ವಿಸ್ತರಿಸಿದ ಜಾಣ್ಮೆ ಎಲ್ಲವೂ ಮೇಳೈಸಿವೆ.

ರಾಜ್ಯದಲ್ಲಿ ವಹಿವಾಟು ಒಂದು ಹಂತಕ್ಕೆ ಬಂದ ನಂತರ ಇವರು ಚೆನ್ನೈ ನಗರದಲ್ಲಿ ತುಪ್ಪ ಮಾರಾಟಕ್ಕೆ ಮುಂದಾದರು. ಇವರ ಉತ್ಪನ್ನ ಮಾರುಕಟ್ಟೆಗೆ ತಂದಾಗ, ಸ್ಥಳೀಯ ಕೆಲ ಬ್ರ್ಯಾಂಡ್‌ನ ತುಪ್ಪದ ಬೆಲೆಗೆ ಹೋಲಿಸಿದರೆ ‘ಜಿಆರ್‌ಬಿ’ ತುಪ್ಪ ಕೆಜಿಗೆ ₹ 20ರಷ್ಟು ತುಟ್ಟಿಯಾಗಿತ್ತು.  ಇದೇ ಕಾರಣಕ್ಕೆ ಮಾರಾಟಗಾರರು ಈ ತುಪ್ಪ ಮಾರಾಟ ಮಾಡಲು ಹಿಂದೇಟು ಹಾಕತೊಡಗಿದರು. ‘ಈ ತುಪ್ಪದ ಬೆಲೆಯೇ ಇಷ್ಟು. ಇದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಇದರಿಂದ ಲಾಭ ಬರದಿದ್ದರೂ ಚಿಂತೆ ಇಲ್ಲ. ತಯಾರಿಕಾ ವೆಚ್ಚ ಮರಳಿದರೆ ಸಾಕು ಎಂದು ವ್ಯಾಪಾರಿಗಳನ್ನು ಇವರು ನಂಬಿಸಿದ್ದರು. ಈ ಮಾತಿಗೆ ಓಗೊಟ್ಟ ವ್ಯಾಪಾರಿಗಳು ಜಿಆರ್‌ಬಿ ಬ್ರ್ಯಾಂಡ್‌ ತುಪ್ಪ ಮಾರಾಟಕ್ಕೆ ಮುಂದಾಗಿದ್ದರು. ಕ್ರಮೇಣ ಅಲ್ಲಿನ ಗ್ರಾಹಕರಿಗೂ ಇದು ಮೆಚ್ಚುಗೆಯಾಯಿತು. ಇದಕ್ಕೆ ಈ ತುಪ್ಪದ ಪರಿಶುದ್ಧತೆಯೇ ಕಾರಣ ಎಂದು ಹೇಳುತ್ತಾರೆ.

ಸಾಂಪ್ರದಾಯಿಕ ರುಚಿ ಮತ್ತು ಶುದ್ಧತೆಪರಿಶುದ್ಧ, ಮರಳು ಮರಳಾದ ಹಾಗೂ ಮನೆಯಲ್ಲಿಯೇ ತಯಾರಿಸಿದ ರುಚಿಗೆ ‘ಜಿಆರ್‌ಬಿ’ ತುಪ್ಪ ಪರ್ಯಾಯವಾಗಿದೆ. ಬೆಣ್ಣೆ ಮಾರಾಟ ಮತ್ತು ತುಪ್ಪ ತಯಾರಿಕೆ ಕುರಿತ ಅವರ ಅಪಾರ ಪರಿಜ್ಞಾನ ಮತ್ತು ಮಾರಾಟ ಅನುಭವವು ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ.  ಜಿಆರ್‌ಬಿ ಡೇರಿಫುಡ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು  ಸಣ್ಣದಾಗಿ ಪ್ರಾರಂಭಿಸಿ ಇಂದು ತುಪ್ಪಕ್ಕ್ಕೆ ವಿಶ್ವದಾದ್ಯಂತ ಮಾನ್ಯತೆ ತಂದುಕೊಟ್ಟಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೂ ಇದು ಅಚ್ಚುಮೆಚ್ಚಿನ ತುಪ್ಪವಾಗಿದೆ. ಹೀಗಾಗಿ ಅನೇಕ ದೇಶಗಳಿಗೆ ರಫ್ತು ಕೂಡ ಆಗುತ್ತಿದೆ.

ಮೂರು ದಶಕಗಳಿಂದ ‘ಜಿಆರ್‌ಬಿ’ಯು ಗ್ರಾಹಕರ ನಂಬಿಕೆ ಮತ್ತು ಧೃಡ ವಿಶ್ವಾಸದ ಮೇಲೆಯೇ ಬೆಳೆದಿದೆ. ಆರಂಭದಲ್ಲಿ ಕೇವಲ ತುಪ್ಪವನ್ನಷ್ಟೇ ತಯಾರಿಸುತ್ತಿದ್ದ ಕಂಪನಿಯು ಈಗ ಬಹು ಉತ್ಪನ್ನಗಳ ಬಹು ಬ್ರ್ಯಾಂಡ್ ಕಂಪನಿಯಾಗಿ ಬೆಳೆದಿದೆ. ‘ಜಿಆರ್‌ಬಿ’ಯು ಮಾರುಕಟ್ಟೆಯಲ್ಲಿ ಪರಿಶುದ್ಧತೆಗೆ ಮತ್ತೊಂದು ಹೆಸರಾಗಿದೆ.

1984ರವರೆಗೆ ತುಪ್ಪದ ಮಾರಾಟ ವ್ಯವಸ್ಥಿತವಾಗಿರಲಿಲ್ಲ. ಜಿಆರ್‌ಬಿ ಸಂಸ್ಥೆಯೇ ಇದಕ್ಕೊಂದು ವ್ಯವಸ್ಥಿತ  ಮಾರುಕಟ್ಟೆ ಒದಗಿಸಿಕೊಟ್ಟಿತು. 1993ರಲ್ಲಿ ಮೊದಲ ಬಾರಿಗೆ ತುಪ್ಪವನ್ನು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ ರೂಪದಲ್ಲಿ (ಎಫ್ಎಂಸಿಜಿ) ಉತ್ಪನ್ನವಾಗಿ ಸಂಸ್ಥೆಯು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ವಿತರಕರನ್ನು ನೇಮಿಸಿ ಮಾರಾಟ ಆರಂಭಿಸಲಾಯಿತು. ಆಕರ್ಷಕ ಪ್ಯಾಕಿಂಗ್‌ ಮತ್ತು ವೈವಿಧ್ಯಮಯ ಪ್ರಚಾರದ ಮೂಲಕ ಗ್ರಾಹಕರ ಮನಕ್ಕೆ ಲಗ್ಗೆ ಇಡಲು ಮುನ್ನುಡಿ ಬರೆಯಿತು. 1998ರಲ್ಲಿ ಸಂಸ್ಥೆಗೆ ಆಗ್‌ಮಾರ್ಕ್‌ ಧೃಡೀಕರಣ ಪತ್ರವೂ ದೊರೆಯಿತು.

‘ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣ, ಗುಣಮಟ್ಟದ ಸಂಸ್ಕರಣಾ ಪ್ರಕ್ರಿಯೆ ತುಪ್ಪವೇ ಇರಲಿ, ಐಸ್‌ಕ್ರೀಂ, ಇನ್‌ಸ್ಟಂಟ್ ಮಿಕ್ಸಸ್‌, ಮಸಾಲಾ, ಸಂಬಾರ ಪದಾರ್ಥ, ಸಿಹಿ ಉತ್ಪನ್ನ ಮತ್ತು ಕುರುಕಲು ತಿಂಡಿಗಳು ಇರಲಿ– ಎಲ್ಲದರಲ್ಲಿಯೂ ಸಂಸ್ಥೆಯು ಅತ್ಯುತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡುತ್ತ ಬಂದಿದೆ. ಎಲ್ಲಿಯೂ ಗುಣಮಟ್ಟದ ಜತೆ ರಾಜಿ ಪ್ರಶ್ನೆಯೇ ಉದ್ಭವಿಸಲಾರದು’ ಎಂದು ಬಾಲಸುಬ್ರಹ್ಮಣ್ಯಂ ಅವರು ಹೇಳುತ್ತಾರೆ.

‘ಕಚ್ಚಾ ಸರಕು ಖರೀದಿಯಿಂದ ಹಿಡಿದು ಅಂತಿಮ ಉತ್ಪನ್ನ ಸಿದ್ಧವಾಗುವವರೆಗೆ ಗುಣಮಟ್ಟದ ಮಂತ್ರವನ್ನೇ ಜಪಿಸಲಾಗುತ್ತಿದೆ. ಈ ತಯಾರಿಕೆ ಮತ್ತು ವ್ಯವಹಾರ ಸೂತ್ರವೇ ನಮ್ಮ ಕೈಹಿಡಿದಿದೆ.

ಉತ್ಪನ್ನಗಳ ತಯಾರಿಕೆಯು ಬಹುತೇಕ ಸ್ವಯಂಚಾಲಿತ ವ್ಯವಸ್ಥೆಯಾಗಿದೆ. ಗ್ರಾಹಕರ ಕೈಗೆ ಉತ್ಪನ್ನ ತಲುಪುವವರೆಗೆ ತಾಜಾತನ ಉಳಿಸಿಕೊಳ್ಳಲು ಗರಿಷ್ಠ ಗುಣಮಟ್ಟದ ಪ್ಯಾಕೇಜಿಂಗ್‌ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 10 ಎಂಎಲ್‌ನಿಂದ ಹಿಡಿದು 5 ಕೆ.ಜಿವರೆಗೆನ ತುಪ್ಪ ಸರಬರಾಜು ಮಾಡಲಾಗುತ್ತಿದೆ.

ತು‍ಪ್ಪದ ಸುವಾಸನೆ, ರುಚಿ, ಸ್ವಾದಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಎಚ್ಚರಿಕೆವಹಿಸಲಾಗಿದೆ.

‘ಈಗ, ಡಬ್ಬಿಗಳಲ್ಲಿ ರಸಗುಲ್ಲಾ, ರಾಜ್‌ಭೋಗ್‌, ಗುಲಾಬ್‌ ಜಾಮೂನ್‌, ಇನ್‌ಸ್ಟಂಟ್‌ ಮಿಕ್ಸ್‌ಗಳಾದ ರವಾ ಇಡ್ಲಿ, ರವಾ ದೋಸಾ, ಪಾಯಸ ಉತ್ಪನ್ನಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಈಗ ವೈವಿಧ್ಯಮಯ ಕುರುಕಲು ತಿಂಡಿಗಳನ್ನು ‘ಟೌನ್‌ ಬಸ್‌’ ಬ್ರ್ಯಾಂಡ್‌ ಹೆಸರಿನಲ್ಲಿ ಪರಿಚಯಿಸಲಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ₹ 1,000 ಕೋಟಿಗಳಷ್ಟು ವಹಿವಾಟು ನಡೆಸುವ ನಿಟ್ಟಿನಲ್ಲಿ ಸಂಸ್ಥೆ ದಾಪುಗಾಲು ಹಾಕುತ್ತ ಸಾಗಿದೆ.

ವಿದೇಶಕ್ಕೂ ವಹಿವಾಟಿನ ವಿಸ್ತರಣೆ

ಆರಂಭದಲ್ಲಿ ದೊಡ್ಡ ಕಡಾಯಿಗಳಲ್ಲಿ ಕುದಿಸಿ ತುಪ್ಪದ ಮಂಡಿಗಳಲ್ಲಷ್ಟೇ ಮಾರಾಟ ಮಾಡಲಾಗುತ್ತಿತ್ತು. 1999ರಲ್ಲಿ ಹೊಸೂರಿನ ಕೈಗಾರಿಕಾ ಪ್ರದೇಶದಲ್ಲಿ ತುಪ್ಪ ತಯಾರಿಕಾ ಘಟಕ ಸ್ಥಾಪಿಸಿ ಅತ್ಯಾಧುನಿಕ ಉಪಕರಣಗಳನ್ನು ಉಪಯೋಗಿಸಿ ಪರಿಶುದ್ಧ ತುಪ್ಪ ತಯಾರಿಸುವುದನ್ನು ಕಾರ್ಯರೂಪಕ್ಕೆ ತರಲಾಗಿತ್ತು. 2004ರಲ್ಲಿ ಸಿಂಗಪುರ ಮತ್ತು ಮಲೇಷ್ಯಾಗಳಿಗೂ ತುಪ್ಪ ಪರಿಚಯಿಸಲಾಯಿತು. 2005ರಲ್ಲಿ ತುಪ್ಪದ ವಹಿವಾಟಿನ ಜತೆಯಲ್ಲಿಯೇ ಜಿಆರ್‌ಬಿ ಬ್ರ್ಯಾಂಡ್‌ನ ಐಸ್ ಕ್ರೀಂ ಮಾರಾಟ ಆರಂಭಿಸಲಾಯಿತು. 2007ರಲ್ಲಿ ಧಿಡೀರ್ ಖಾದ್ಯ, ಮಸಾಲೆ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯು 2011ರಲ್ಲಿ ಮೊದಲ ಬಾರಿಗೆ ₹ 100 ಕೋಟಿಗಳ ವಹಿವಾಟಿನ ಗಡಿ ದಾಟಿತು. 2012ರಲ್ಲಿ ಸಿಹಿ ಖಾದ್ಯಗಳ ತಯಾರಿಕೆಗೂ ಕಾಲಿಟ್ಟಿತು. 2016ರಲ್ಲಿ ಕುರುಕಲು ತಿಂಡಿಗಳ ತಯಾರಿಕೆ ಆರಂಭಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry