ಕುಸಿದ ಸೀಡಿ; ಅಪಾಯಕ್ಕೆ ಆಹ್ವಾನ

7

ಕುಸಿದ ಸೀಡಿ; ಅಪಾಯಕ್ಕೆ ಆಹ್ವಾನ

Published:
Updated:

ಯಲಬುರ್ಗಾ: ‘ತಾಲ್ಲೂಕಿನ ಕರಮುಡಿ ಗ್ರಾಮದ ಹೊರವಲಯದಲ್ಲಿರುವ ಯೋಗಾನಂದ ಓಣಿ ಸಂಪರ್ಕ ರಸ್ತೆಗೆ ನಿರ್ಮಿಸಿರುವ ಸೀಡಿ ಕುಸಿದ ಪರಿಣಾಮ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರಾತ್ರಿ ವೇಳೆ ಅಪಘಾತಗಳಾದರೂ ಸಂಬಂಧಪಟ್ಟವರು ಇತ್ತ ಕಡೆ ಗಮನಕೊಡದೇ ನಿರ್ಲಕ್ಷಿಸಿದ್ದಾರೆ’ ಎಂದು ಅಲ್ಲಿಯ ನಿವಾಸಿಗರು ಆರೋಪಿಸಿದ್ದಾರೆ.

‘ಬಂಡಿಹಾಳ ರಸ್ತೆಗೆ ಹೊಂದಿಕೊಂಡ ಈ ಓಣಿಯಲ್ಲಿ ಅಗತ್ಯ ಸೌಲಭ್ಯಗಳು ಇದ್ದು ಇಲ್ಲದಂತಿದೆ. ಈ ಓಣಿಯೊಳಗೆ ಹೋಗಲು ಚರಂಡಿ ಮೇಲೆ ನಿರ್ಮಿಸಿದ ಈ ಸೀಡಿಯ ಬಹುಭಾಗ ಕಿತ್ತು ಹೋಗಿದೆ. ಕೇವಲ ನಾಲ್ಕೈದು ತಿಂಗಳ ಹಿಂದಷ್ಟೇ ಈ ಸೀಡಿ ನಿರ್ಮಿಸಿದ್ದು, ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿರುವುದರಿಂದ ಹಾಳಾಗಿದೆ. ಕಳಪೆ ಕೆಲಸ ಮಾಡಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜನಕಲ್ಯಾಣ ವೇದಿಕೆಯ ಶರಣಪ್ಪ ಪಾಟೀಲ ಆಗ್ರಹಿಸಿದ್ದಾರೆ.

‘ರಾತ್ರಿ ಹಗಲು ಸಾಕಷ್ಟು ಜನರು ಈ ಮಾರ್ಗವಾಗಿ ಸಂಚರಿಸುತ್ತಿರುವುದರಿಂದ ಪಂಚಾಯಿತಿ ಅಧಿಕಾರಿಗಳು ಮರು ನಿರ್ಮಾಣಕ್ಕೆ ಮುಂದಾಗಬೇಕು. ರಾತ್ರಿ ಬರುವ ಬೈಕ್ ಸವಾರರು ಕುಸಿದ ಪ್ರದೇಶದಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಪಾಯಕ್ಕೆ ಅವಕಾಶ ಕೊಡದೇ ಶೀಘ್ರದಲ್ಲಿ ದುರಸ್ಥಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಉದಾಸೀನ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಕರಮುಡಿಯ ನಾಗರಿಕರು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry