ಗಮನಸೆಳೆದ ಸೃಜನಾತ್ಮಕತೆ, ಕಲಾತ್ಮಕತೆ

7

ಗಮನಸೆಳೆದ ಸೃಜನಾತ್ಮಕತೆ, ಕಲಾತ್ಮಕತೆ

Published:
Updated:
ಗಮನಸೆಳೆದ ಸೃಜನಾತ್ಮಕತೆ, ಕಲಾತ್ಮಕತೆ

ಕುಕನೂರು: ‘ಬಣ್ಣಬಣ್ಣದ ರಂಗೋಲಿ..! ನೋಡುಗರ ಕಣ್ಮನ ಸೆಳೆಯುವ ರಂಗೋಲಿ..! ಸೃಜನಾತ್ಮಕತೆ ಹಾಗೂ ಕಲಾತ್ಮಕತೆಯಲ್ಲಿ ಒಂದು ಮತ್ತೊಂದನ್ನು ಹಿಂದಿಕ್ಕುವಂತಿರುವ ಆಕರ್ಷಕ ರಂಗೋಲಿಗಳು..!

ಹೌದು! ಈ ದೃಶ್ಯ ಕಂಡು ಬಂದಿದ್ದು ಇಲ್ಲಿನ ವಿದ್ಯಾಶ್ರೀ ಶಾಲೆಯಲ್ಲಿ ವಿಪ್ರೋ ಕಂಪೆನಿ ವತಿಯಿಂದ ಶನಿವಾರ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಸಂಸ್ಥೆಯ ಅಧ್ಯಕ್ಷ ಜಸವಂತ ಜೈನ್‌ ಮಾತನಾಡಿ, ‘ಕೋಳಿ ಕೂಗುವ ಸಮಯದಲ್ಲಿ ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಹೊಸ್ತಿಲಿನಲ್ಲಿ ಹಾಗೂ ಮನೆಯಂಗಳದಲ್ಲಿ ರಂಗೋಲಿ ಇಡುವ ಸಂಸ್ಕೃತಿ ನಮ್ಮದು. ಇಂದಿನ ಧಾವಂತದ ಬದುಕಿನಲಿ ರೆಡಿಮೇಡ್‌ ರಂಗೋಲಿ, ಪೇಂಟ್‌ ರಂಗೋಲಿಗಳು ಮನೆಯಂಗಳವನ್ನು ಅಲಂಕರಿಸಿವೆ.

ಪ್ರತಿ ಮನೆಯ ಮುಂಭಾಗದಲ್ಲಿ ಒಂದು ಕಾಲದಲ್ಲಿ ತಪ್ಪದೆ ಒಪ್ಪವಾಗಿ ಶೋಭಿಸುತ್ತಿದ್ದ ರಂಗೋಲಿ, ಇಂದು ನಮ್ಮ ಮನೆ ಹಾಗೂ ಮನದಿಂದ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಹಿಂದೆ ಮಹಿಳೆಯರ ದಿನಚರಿ ಆರಂಭವಾಗುತ್ತಿದ್ದುದೆ ರಂಗೋಲಿಯ ಮೂಲಕ ಎಂಬತಿದ್ದ ಒಂದು ಕಾಲವಿತ್ತು. ಆದರೆ ಇಂದು ಗ್ರಾಮೀಣ ಭಾಗದ ಕೆಲವು ಮನೆಯ ಮುಂಭಾಗದಲ್ಲಿ ಮಾತ್ರ ಅವುಗಳ ಸ್ಥಾನ ಮೀಸಲಾಗಿದೆ.

ನಮ್ಮ ಸಂಸ್ಕೃತಿಯ ಸೊಗಡನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಸೃಜನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ದೃಷ್ಟಿಯಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಈ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿರುವುದು ಉತ್ತಮವಾಗಿದೆ.

ಹೆಣ್ಣುಗಂಡೆಂಬ ಭೇದ ತೋರದೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಹೆಚ್ಚಿನ ವಿದ್ಯಾರ್ಥಿಗಳು ಹಳೆಯ ಬಣ್ಣಬಣ್ಣದ ಬಟ್ಟೆಯ ಚಿಂದಿಗಳನ್ನು, ನಿರುಪಯುಕ್ತವಾದ ಬಳೆ, ಐಸ್ಕ್ರೀಂ ಕಡ್ಡಿ, ಮರಳು, ಕಾಡು ಗಿಡಗಳ ಎಲೆ, ಗಾಜಿನ ಚೂರು ಮುಂತಾದ ನಿರುಪಯುಕ್ತವಾದ ವಸ್ತುಗಳನ್ನು ಬಳಸಿಕೊಂಡರು. ಮತ್ತೆ ಕೆಲವರು ದಾನ್ಯ, ಹಣತೆ, ಹೂ ಮುಂತಾದವುಗಳನ್ನು ಬಳಸಿದರು. ಕೆಲವು ವಿದ್ಯಾರ್ಥಿಗಳ ತಂಡ ಭತ್ತ, ಅಕ್ಕಿ ಹಾಗೂ ಹರಳು ಉಪ್ಪಿಗೆ ಬಣ್ಣವನ್ನು ಹದವಾಗಿ ಬೆರೆಸಿ ರಂಗೋಲಿಯಲ್ಲಿ ಬಳಸುವ ಮೂಲಕ ತಮ್ಮಲ್ಲಿನ ಸೃಜನಾತ್ಮಕತೆಗೆ ಸಾಕ್ಷಿಯೊದಗಿಸಿದರು.

ವಿದ್ಯಾರ್ಥಿಗಳ ಕೈಚಳಕದಲ್ಲಿ ನರ್ತಿಸುವ ಸೇರಿದಂತೆ ವಿವಿಧ ಭಂಗಿಯಲ್ಲಿನ ನವಿಲು, ಯಾಗದ ಕುದುರೆ ಮುಂತಾದವುಗಳು ನಿರಾಯಾಸವಾಗಿ ಮೂಡಿ ಬಂದವು. ಪ್ರತಿ ತಂಡಕ್ಕೂ ರಂಗೋಲಿ ರಚನೆಗೆ ಒಂದು ಗಂಟೆಯ ಸಮಯಾವಕಾಶವನ್ನು ನಿಗದಿ ಮಾಡಲಾಗಿತ್ತು. ಸುಮಾರು 68 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸ್ಪರ್ಧೆಯಲ್ಲಿ ಸೃಜನಾತ್ಮಕತೆ ಯೊಂದಿಗೆ ನಿರುಪಯುಕ್ತವಾದ ವಸ್ತುಗಳನ್ನು ಬಳಕೆಗೆ ಹೆಚ್ಚಿನ ಅಂಕಗಳನ್ನು ನಿಗದಿಪಡಿಸಲಾಗಿತ್ತು.

ರಂಗೋಲಿಯಲ್ಲಿ ದೀಪಾ ಬೆದವಟ್ಟಿ ಪ್ರಥಮ, ಪವಿತ್ರಾ ಒಂಟಿಗೊಡಮಠ ದ್ವಿತೀಯ, ಲಕ್ಷ್ಮೀ ಕೊಳುರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಪ್ಪತಪ್ಪ ನಾಲ್ವಡ, ರವಿ ನಾಲ್ವಡ, ಬಾಪುಜಿರಾವ್‌ ನವಲೆ, ಸೌಮ್ಯ ನಾಗರಾಜ ದೇಸಾಯಿ, ಮಧುಸೂದನ ದೇಸಾಯಿ, ಮಂಜುನಾಥ ಗದಗ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry