ಬರಲಿವೆ ಹೊಸ ತಂತ್ರಜ್ಞಾನಗಳು

7

ಬರಲಿವೆ ಹೊಸ ತಂತ್ರಜ್ಞಾನಗಳು

Published:
Updated:
ಬರಲಿವೆ ಹೊಸ ತಂತ್ರಜ್ಞಾನಗಳು

ಹೊಸ ವರ್ಷ ಬಂದಾಯಿತು. ಸಂಭ್ರಮಗಳೂ ಮುಗಿದಿವೆ. ಸಮಾಧಾನದಿಂದ ಭವಿಷ್ಯದ ಕಡೆಗೆ ನೋಡಿದರೆ... ಚಂದಮಾಮ ನಮಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾನೆ. ಕೃತಕ ಬುದ್ಧಿಮತ್ತೆ ಮನೆಗಷ್ಟೇ ಅಲ್ಲ ದೇಹಕ್ಕೂ ಆವರಿಸುತ್ತಿದೆ. ಸಂವಹನ ಕ್ಷೇತ್ರದ ಮತ್ತೊಂದು ಮೈಲುಗಲ್ಲು 5ಜಿ ತಂತ್ರಜ್ಞಾನ ಬಳಕೆಗೆ ಸನಿಹವಾಗುತ್ತಿದೆ. ರೋಗಗಳಿಗೆ ಹೊಸ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ದೊರೆಯಲಿದೆ. ಈ ವರ್ಷ ಬಳಕೆಗೆ ಬರಲಿರುವ ಕೆಲವು ವಿಶೇಷ ತಂತ್ರಜ್ಞಾನಗಳ ಮಾಹಿತಿ ಇಲ್ಲಿದೆ.

ಮನೆಯೇ ಕಚೇರಿ ಆಗಲಿದೆ

ಈ ವರ್ಷ ವಾಣಿಜ್ಯ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗಲಿವೆ ಎಂಬುದು ತಜ್ಞರ ಅಭಿಪ್ರಾಯ. ಈಗಾಗಲೇ ನಮ್ಮ ಜೀವನದ ಪ್ರತಿ ಹಂತವೂ ತಂತ್ರಜ್ಞಾನ ಮತ್ತು ಅಂತರ್ಜಾಲದೊಂದಿಗೆ ಬೆಸೆದುಕೊಂಡಿದೆ. ಜತೆಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) (ಕೃತಕ ಬುದ್ಧಿಮತ್ತೆ) ಇಂಟರ್‌ನೆಟ್‌ ಆಫ್ ಥಿಂಗ್ಸ್‌ (IOT), ಆಟೊಮೇಷನ್ ತಂತ್ರಜ್ಞಾನಗಳು ಎಲ್ಲ ಕ್ಷೇತ್ರಗಳಿಗೂ ಲಗ್ಗೆ ಇಡುತ್ತಿವೆ.

ಕೆಲಸ ಮಾಡಲು ಕಚೇರಿಗೇ ಹೋಗಬೇಕು ಎಂದೇನಿಲ್ಲ ಅದೇ ರೀತಿ ಮನೆಗೆಲಸವನ್ನೂ ಕಚೇರಿಯಲ್ಲೇ ಮಾಡಿಕೊಳ್ಳಬಹುದು. ಕಚೇರಿಯಲ್ಲಿ ಇದ್ದುಕೊಂಡೇ ಮನೆಯ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಬಹುದು. ಅಡುಗೆ ಮಾಡಲು ಒವನ್ ಕಾರ್ಯವಿಧಾನವನ್ನು ಸೆಟ್ ಮಾಡಬಹುದು. ಈಗಾಗಲೇ ಕೆಲವು ವಿದೇಶಿ ಕಂಪೆನಿಗಳು ಮನೆಯಿಂದಲೇ ಕೆಲಸ ಮಾಡಲು ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಿವೆ. ಹೊಸದಾಗಿ ಆರಂಭವಾಗುತ್ತಿರುವ ನವೋದ್ಯಮಗಳೂ ಈ ನಿಟ್ಟಿನಲ್ಲಿ ಚಿಂತಿಸುತ್ತಿವೆ. ಈ ರೀತಿಯ ಕಾರ್ಯವಿಧಾನ ಈ ವರ್ಷ ನಮ್ಮ ದೇಶದಲ್ಲೂ ಹೆಚ್ಚಾಗಿ ವಿಸ್ತರಿಸಬಹುದು.

ಕಿವಿಯಚ್ಚನ್ನೂ ಬಳಸಿಕೊಳ್ಳ ಬಹುದು!

ದಿನಸಿ ಖರೀದಿಸಲು, ಕಚೇರಿಯಲ್ಲಿ ಹಾಜರಾತಿ ಹಾಕಲು, ಮೊಬೈಲ್‌ ಬಳಸಲು... ಹೀಗೆ ಎಲ್ಲದಕ್ಕೂ ಬೆರಳಚ್ಚನ್ನೇ ಬಳಸುತ್ತಿದ್ದೇವೆ. ಇದು ಇಲ್ಲದಿದ್ದರೆ ಕೆಲಸವೇ ಆಗುವುದಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವುದರಿಂದ ಇದರ ಬಳಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಆದರೆ ಬೆರಳಚ್ಚಿಗಿಂತ ಕಿವಿಯಚ್ಚು ತುಂಬಾ ಸುರಕ್ಷಿತ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಹಲವು ವರ್ಷಗಳಿಂದ ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳೂ ಇದನ್ನು ದೃಢಪಡಿಸುತ್ತಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಕಿವಿಯಚ್ಚನ್ನೂ ಬಳಸಿಕೊಳ್ಳುವ ಸಾಧ್ಯತೆ ಇದೆ. ದುಬೈನಲ್ಲಿ ಈಗಾಗಲೇ ಅಪರಾಧಿಗಳನ್ನು ಹುಡುಕಲು ಚಲನೆ (ಮನುಷ್ಯ ನಡೆಯುವ ರೀತಿ ಅಂಗಾಂಗಳ ಚಲನೆ) ಆಧಾರವಾಗಿ ಬಳಸಿಕೊಳ್ಳಲಾಗುತ್ತಿದೆ. ಕಾರಣ, ಭದ್ರತೆಗಾಗಿ ಅಡಿಗಡಿಗೂ ಕ್ಯಾಮೆರಾ ಕಣ್ಗಾವಲು ಇಟ್ಟರೂ ಮುಖಗವಸುಗಳನ್ನು ಧರಿಸಿ ಅಪರಾಧ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಮನುಷ್ಯನ ಚಲನೆ ಆಧರಿಸಿ ಪತ್ತೆ ಹಚ್ಚುವ ಕಂಪ್ಯೂಟರ್ ಪ್ರೊಗ್ರಾಮಿಂಗ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಲ್ಲಿ ಬಳಸಿಕೊಳ್ಳಲಾಗುತ್ತಿದೆ. ಮುಂದೆ ಕಿವಿಯಚ್ಚನ್ನು, ಕೈಗಳ ಆಕೃತಿಯನ್ನೂ ಭದ್ರತೆಗಾಗಿ ಬಳಸಿಕೊಳ್ಳಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಕೇರ್‌ ಟೇಕರ್ ರೋಬೊಗಳು

ಮಕ್ಕಳ ಮೇಲೆ ನಿಗಾ ಇಡುವ ಕೇರ್‌ ಟೇಕರ್ ರೋಬೊಗಳು ಈಗಾಗಲೇ ಚೀನಾ, ಜಪಾನ್‌ನಂತಹ ರಾಷ್ಟ್ರಗಳಲ್ಲಿ ಬಳಕೆಯಲ್ಲಿವೆ. ಆದರೆ ಇತರ ದೇಶಗಳಿಗೆ ಇವು ಇನ್ನೂ ಬಂದಿಲ್ಲ. ಜಪಾನ್‌ನ ಗ್ಲೋಬಲ್ ಬ್ರಿಡ್ಜ್‌ ಹೋಲ್ಡಿಂಗ್ ಎಂಬ ಸಂಸ್ಥೆ ತಮ್ಮ ಶಿಶು ಸಂರಕ್ಷಣಾ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಸಮಸ್ಯೆಯಿಂದಾಗಿ ‘ವೆವೊ’ ಎಂಬ ಹೆಸರಿನ ಕೇರ್ ಟೇಕರ್‌ ರೋಬೊಗಳನ್ನು ಬಳಸುತ್ತಿದೆ. ಮಕ್ಕಳ ಮೇಲೆ ನಿಗಾ ಇಡಲು ರೊಬೊಗಳಿಗೆ ಸೆನ್ಸರ್‌ಗಳನ್ನು ಜೋಡಿಸಿ ಮತ್ತಷ್ಟು ಚುರುಕುಗೊಳಿಸಿದೆ. ಇದು ಯಶಸ್ವಿಯಾಗಿರುವುದರಿಂದ ಈ ರೀತಿಯೊ ರೊಬೊಗಳನ್ನು ಮತ್ತಷ್ಟು ತಯಾರಿಸಿ ಇತರ ದೇಶಗಳಿಗೂ ರಫ್ತು ಮಾಡುವುದಾಗಿ ತಿಳಿಸಿದೆ.

ಚಂದಮಾಮನ ಮನೆಗೆ ಹೋಗಬಹುದೇ?

ಚಂದ್ರ ಗ್ರಹದ ಮೇಲೆ ಮಾನವ ಕಾಲಿಟ್ಟು ಅರ್ಧ ಶತಕವೇ ಕಳೆದಿದೆ. ಈ ನಡುವೆ ಚಂದ್ರನ ಬಗ್ಗೆ ಹೊಸ ವಿಷಯಗಳೇನೂ ತಿಳಿಯದಿದ್ದರೂ ಪ್ರಯೋಗಗಳು ನಿಂತಿಲ್ಲ. ಈಚೆಗಷ್ಟೇ ಗೂಗಲ್ ಸಂಸ್ಥೆ ನಿರ್ವಹಿಸುತ್ತಿರುವ 'ಲೂನಾರ್ ಎಕ್ಸ್‌ಪ್ರೈಜ್‌' ಸ್ಪರ್ಧೆಯಿಂದಾಗಿ ಚಂದ್ರ ಮತ್ತೆ ಚರ್ಚೆಗೆ ಬಂದಿದ್ದಾನೆ. ಈಗಾಗಲೇ 5 ತಂಡಗಳು ಈ ಸ್ಪರ್ಧೆಗೆ ಅರ್ಹತೆ ಗಳಿಸಿವೆ. ಈ ವರ್ಷ ಮಾರ್ಚ್ 31ರ ಒಳಗಾಗಿ ಈ ತಂಡಗಳು ಚಂದ್ರನಲ್ಲಿಗೆ ನೌಕೆಗಳನ್ನು ಕಳುಹಿಸಬೇಕು. ಅವು ಅಲ್ಲಿ ಇಳಿದು 500 ಮೀಟರ್ ಕ್ರಮಿಸಿ ಸುತ್ತಮುತ್ತಲಿನ ಪರಿಸರದ ಚಿತ್ರಗಳನ್ನು ಸೆರೆಹಿಡಿದು ಕಳುಹಿಸಬೇಕು. ವಿಜೇತ ತಂಡಕ್ಕೆ ಸುಮಾರು ₹128ಕೋಟಿ ನಗದು ಬಹುಮಾನವೂ ಸಿಗಲಿದೆ. ಬೆಂಗಳೂರಿನ ಟೀಮ್‌ ಇಂಡಸ್‌ ಕೂಡ ಈ ಸ್ಪರ್ಧೆಯಲ್ಲಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry