‘ನಾಕುಮುಖ’ಗಳ ಥ್ರಿಲ್ಲರ್ ಕಥೆ

7

‘ನಾಕುಮುಖ’ಗಳ ಥ್ರಿಲ್ಲರ್ ಕಥೆ

Published:
Updated:
‘ನಾಕುಮುಖ’ಗಳ ಥ್ರಿಲ್ಲರ್ ಕಥೆ

‘ಚಂದನವನ’ಕ್ಕೆ ಹೊಸಬರ ಪ್ರವೇಶ ಆಗುತ್ತಲೇ ಇದೆ. ಹೊಸ–ಹಳೆ ಕಥೆಗಳನ್ನು ಇಟ್ಟುಕೊಂಡು ಅವರು ಬರುತ್ತಿದ್ದಾರೆ. ಕಥೆ ಹಳೆಯದಾಗಿದ್ದರೂ, ಕಥೆ ಹೇಳುವ ಶೈಲಿ ಹೊಸದಾಗಿದ್ದಾಗ ಪ್ರೇಕ್ಷಕ ಹೊಸಬರನ್ನೂ ಗೆಲ್ಲಿಸಿದ್ದಾನೆ, ಹಳಬರ ಕೈಯನ್ನೂ ಹಿಡಿದಿದ್ದಾನೆ.

ಈಗ ‘ನಾಕುಮುಖ’ ಎಂಬ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ ಹೊಸ ಹುಡುಗರ ತಂಡ. ಇದರ ನಿರ್ದೇಶನ ಕುಶಾನ್ ಗೌಡ ಅವರದ್ದು, ನಿರ್ಮಾಣದ ಹೊಣೆ ದರ್ಶನ್ ರಾಗ್ ಅವರದ್ದು.

ಸಿನಿಮಾದ ಶೀರ್ಷಿಕೆ ಹಾಡು ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಮಾಹಿತಿ ನೀಡಲು ತಂಡ ಮಾಧ್ಯಮದವರನ್ನು ಆಹ್ವಾನಿಸಿತ್ತು. ‘ನಾವು ಜನರನ್ನು ಗುರುತಿಸುವುದೇ ಅವರ ಮುಖದ ಮೂಲಕ’ ಎನ್ನುತ್ತಲೇ ಸಿನಿತಂಡ ಕಾರ್ಯಕ್ರಮ ಆರಂಭಿಸಿತು.

ಕುಶಾನ್‌ ತಾವೇ ಬರೆದಿರುವ, ತಾವೇ ಹಾಡಿರುವ ಶೀರ್ಷಿಕೆ ಹಾಡನ್ನು ತೆರೆಯ ಮೇಲೆ ಪ್ರದರ್ಶಿಸಲಾಯಿತು. ಈ ಹಾಡನ್ನು ಬಿಡುಗಡೆ ಮಾಡಿದ್ದು ನಿರ್ದೇಶಕ ಸಿಂಪಲ್ ಸುನಿ. ಹಾಡಿನ ಪ್ರದರ್ಶನದ ನಂತರ ಮಾತಿಗೆ ನಿಂತರು ಕುಶಾನ್.

‘ಹಲವು ವರ್ಷಗಳಿಂದ ನಾನು ಸಿನಿಮಾ ರಂಗದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೆ. ಸಿನಿಮಾ ರಂಗದಲ್ಲಿ ನಾನಾ ಬಗೆಯ ಮುಖಗಳನ್ನು ನೋಡಿದೆ. ಆಗ ನಾನೂ ಒಂದು ಸಿನಿಮಾ ಮಾಡಬೇಕು ಅನಿಸಿತು. ಹಾಗಾಗಿ ನಾಕುಮುಖ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದೇನೆ. ಸಹೃದಯರು ಈ ಶೀರ್ಷಿಕೆಯನ್ನು ಹೇಗೆ ಬೇಕಿದ್ದರೂ ಅರ್ಥ ಮಾಡಿಕೊಳ್ಳಬಹುದು’ ಎಂಬ ಮಾತು ಅವರಿಂದ ಬಂತು.

(ದರ್ಶನ್ ರಾಗ್ ಮತ್ತು ಕುಶಾನ್ ಗೌಡ)

ಸಿನಿಮಾ ರಂಗದಲ್ಲಿ ತಮ್ಮ ಬೆಂಬಲಕ್ಕೆ ಯಾರೂ ಇರಲಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ ಕುಶಾನ್, ‘ನನ್ನನ್ನು ಕೆತ್ತುವವರು ಯಾರೂ ಇರಲಿಲ್ಲ. ಹಾಗಾಗಿ ನನ್ನನ್ನು ನಾನೇ ಕೆತ್ತಿಕೊಂಡೆ’ ಎಂದು ಹೇಳಿ ನಕ್ಕರು. ‘ಈ ಸಿನಿಮಾದಲ್ಲಿ ನಾನು ಹೀರೊ ಅಲ್ಲ. ಕಥೆಯೇ ಹೀರೊ’ ಎಂಬುದನ್ನು ಸ್ಪಷ್ಟಪಡಿಸಿದರು.

ದರ್ಶನ್ ರಾಗ್ ಅವರು ಈ ಸಿನಿಮಾ ನಿರ್ಮಾಣಕ್ಕೆ ಮುಂದಾದ ಕಥೆಯನ್ನೂ ಕುಶಾನ್ ಅವರೇ ಹೇಳಿದರು. ‘ನಾವು ಹಿಂದೆ ಒಂದು ರ್ಯಾಪ್ ಹಾಡು ಮಾಡಿದ್ದೆವು. ಅದಕ್ಕೆ ದರ್ಶನ್ ಅವರೇ ಹಣ ಹೂಡಿದ್ದರು. ಆಗ ಒಮ್ಮೆ, ನಾವೂ ಸಿನಿಮಾ ಮಾಡಬಹುದಲ್ಲ ಎಂಬ ಮಾತು ಬಂತು. ಒಂದು ಕಥೆ ಸಿದ್ದಪಡಿಸಿ ಎಂದು ದರ್ಶನ್ ಹೇಳಿದ್ದರು. ನಿದ್ದೆ ಬಾರದ ಒಂದು ರಾತ್ರಿಯಲ್ಲಿ ಕಥೆಯ ಎಳೆ ಹೊಳೆಯಿತು. ಅದು ದರ್ಶನ್ ಅವರಿಗೆ ಇಷ್ಟವಾಗಿ, ಸಿನಿಮಾ ನಿರ್ಮಾಣಕ್ಕೆ ಮುಂದಾದರು’ ಎಂದು ವಿವರಿಸಿದರು.

ಅಂದಹಾಗೆ, ಈ ಕಥೆ ಕೇಳಿಸಿಕೊಂಡ ನಂತರ ದರ್ಶನ್, ‘ಇದನ್ನು ಬೇರೆ ಯಾವ ನಿರ್ಮಾಪಕರ ಬಳಿಯೂ ಹೇಳಬೇಡಿ, ನಾವೇ ನಿರ್ಮಾಣ ಮಾಡೋಣ’ ಎಂದು ತುಸು ಎಚ್ಚರಿಕೆಯ ಮಾತನ್ನೂ ಕುಶಾನ್ ಅವರಿಗೆ ಹೇಳಿದ್ದರಂತೆ! ದರ್ಶನ್ ಅವರೂ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸಿನಿಮಾದ ಮುಹೂರ್ತ ಜನವರಿ 18ರಂದು ನಡೆಯಲಿದೆ. 21 ದಿನಗಳ ಕಾಲ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಂದು ಸಿನಿತಂಡ ಹೇಳಿದೆ.

ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆ ಮಾಡಲಾಗುತ್ತದೆ. ಆ ಕೃತ್ಯ ಎಸಗಿದ್ದು ಸಚಿವರೊಬ್ಬ ಮಗ ಮತ್ತು ಅವನ ಸ್ನೇಹಿತರು. ಆದರೆ, ಅವರಿಗೆ ಯಾರಿಂದಲೂ ಏನೂ ಮಾಡಲು ಆಗದಂತಹ ಸ್ಥಿತಿ ಇರುತ್ತದೆ. ನಂತರದ ದಿನಗಳಲ್ಲಿ ಅವರೂ ಕೊಲೆಯಾಗುತ್ತಾರೆ. ಈ ಕೊಲೆಗಳ ಹಿಂದಿನ ಸಸ್ಪೆನ್ಸ್‌ ‘ನಾಕುಮುಖ’ ಸಿನಿಮಾದ ಕಥಾಹಂದರ ಎಂದು ಕುಶಾನ್ ಹೇಳಿದರು.

ನಿರ್ಮಾಪಕ ದರ್ಶನ್ ಅವರು ಏಳು ವರ್ಷಗಳಿಂದ ಐ.ಟಿ. ಕ್ಷೇತ್ರದಲ್ಲಿ ಕೆಲಸ‌ ಮಾಡುತ್ತಿದ್ದಾರೆ. ‘ಕುಶಾನ್ ಅವರಲ್ಲಿ ಪ್ರತಿಭೆ ಇದೆ. ಆದರೆ ಆ ಪ್ರತಿಭೆಗೆ ನೀರೆರೆಯುವವರು ಇರಲಿಲ್ಲ. ನಾನು ಅವರಿಗೆ ಸಹಾಯ ಮಾಡುವ ಅಳಿಲಿನ ಕೆಲಸ ಮಾಡುತ್ತಿದ್ದೇನೆ’ ಎಂದರು ದರ್ಶನ್.

ಅಮೃತಾ ಅಯ್ಯಂಗಾರ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ಇದು ನನ್ನ ಮೂರನೆಯ ಸಿನಿಮಾ. ಎಲ್ಲ ಸಿನಿಮಾಗಳಲ್ಲೂ ನಾಯಕಿಯು, ನಾಯಕನ ಹಿಂದೆ–ಮುಂದೆ ಓಡಾಡುವ ಪಾತ್ರಕ್ಕೆ ಸೀಮಿತವಾಗಿರುತ್ತಾಳೆ. ಆದರೆ ಈ ಸಿನಿಮಾದಲ್ಲಿ ಹಾಗಲ್ಲ. ಸ್ನೇಹಿತೆಯನ್ನು ಕಳೆದುಕೊಂಡ ನಂತರ ಆ ನೋವನ್ನು ಹೇಗೆ ಎದುರಿಸುತ್ತಾಳೆ ಎಂಬುದನ್ನು ನನಗೆ ಸಿಕ್ಕಿರುವ ಪಾತ್ರವು ತೋರಿಸಿಕೊಡುತ್ತದೆ’ ಎಂದರು ಅಮೃತಾ. ಹರಿ ಬಾಬು ಅವರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry