ರಾಜಕಾರಣದ ಕರಾಳ ಮುಖ

7

ರಾಜಕಾರಣದ ಕರಾಳ ಮುಖ

Published:
Updated:
ರಾಜಕಾರಣದ ಕರಾಳ ಮುಖ

ಸಮಾಜವಾದ ಚಳವಳಿ ಸಂದರ್ಭದ ರಾಜಕಾರಣಕ್ಕೂ ಈಗಿನ ರಾಜಕೀಯಕ್ಕೂ ಬಹಳ ವ್ಯತ್ಯಾಸ ಇರಬಹುದು. ಆದರೆ, ಅಷ್ಟೇ ಸಾಮ್ಯತೆಗಳೂ ಇವೆ. ಆ ಕಾಲಘಟ್ಟದ ರಾಜಕೀಯ ವ್ಯವಸ್ಥೆ ಕುರಿತಾದ ವಿಡಂಬನೆಯನ್ನು ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ರಂಗದ ಮೇಲೆ ತರುವ ಪ್ರಯತ್ನಕ್ಕೆ ಮುಂದಾಗಿದೆ ರಂಗಸಂಪದ ತಂಡ. ಇದರ ಪ್ರಯತ್ನದ ಫಲವಾಗಿ ರಂಗದ ಮೇಲೆ ಮೈದಳೆಯುತ್ತಿರುವುದೇ ‘ಸಂದರ್ಭ’ ನಾಟಕ. ಇದು ‘ನಾಟಕ ಬೆಂಗ್ಳೂರು ದಶಮಾನೋತ್ಸವ ಸಂಭ್ರಮ’ದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಇದು ಸಮಾಜವಾದ ಚಳವಳಿಯ ಕಾಲಘಟ್ಟದಲ್ಲಿ, 80ರ ದಶಕದಲ್ಲಿ ರಚಿತಗೊಂಡ ರಾಜಕೀಯ ವಿಡಂಬನೆ ‘ಸಂದರ್ಭ’. ಬಿ.ವಿ. ವೈಕುಠರಾಜು ಅವರು ಇದರ ಕರ್ತೃ. 1981ರಲ್ಲೇ ಈ ನಾಟಕ ಸುಮಾರು 70 ಪ್ರದರ್ಶನಗಳನ್ನು ಕಂಡಿತ್ತು. ಅಶೋಕ ಬಾದರದಿನ್ನಿ ನಿರ್ದೇಶನದಲ್ಲಿ 80ರ ಈ ನಾಟಕ ಮತ್ತೆ ವೇದಿಕೆಯೇರುತ್ತಿದೆ.

ರಾಜಕೀಯ ವ್ಯವಸ್ಥೆಯಲ್ಲಿರುವ ಲೋಪ, ಕುಂದು–ಕೊರತೆ, ಅನ್ಯಾಯಗಳ ವಿರುದ್ಧದ ಹೋರಾಟ ಮತ್ತು ಅದರ ಪರಿಣಾಮವನ್ನು ಕಟ್ಟಿಕೊಡುವುದು ಈ ನಾಟಕದ ಪ್ರಮುಖ ಉದ್ದೇಶ. ಪ್ರಾಮಾಣಿಕ ರಾಜಕಾರಣಿ ಚಂದ್ರಪ್ಪ ಇದರ ಹೀರೊ. ಚಂದ್ರಪ್ಪನ ಮೂಲಕ ರಾಜಕಾರಣದ ಕರಾಳ ಮುಖವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಡಿ.ಟಿ. ಚನ್ನಕೇಶವಮೂರ್ತಿ.

ರಾಜಕೀಯ ವ್ಯವಸ್ಥೆಯ ಲೋಪಗಳ ವಿರುದ್ಧ ಹೋರಾಟ ಮಾಡುವ ಚಂದ್ರಪ್ಪ ತನ್ನ ಪ್ರಯತ್ನದಲ್ಲಿ ವಿಫಲನಾಗುತ್ತಾನೆ. ಕಡೆಗೆ ತಾನೂ ಅದೇ ವ್ಯವಸ್ಥೆಯ ಒಂದು ಭಾಗವಾಗುತ್ತಾನೆ. ಅಲ್ಲಿಗೆ, ಹೋರಾಟ ಅರ್ಥ ಕಳೆದುಕೊಳ್ಳುತ್ತದೆ. ಚಂದ್ರಪ್ಪನ ವ್ಯಾಪ್ತಿ ಸೀಮಿತವಾಗುತ್ತದೆ.

ವರ್ತಮಾನ ಕಾಲದ ರಾಜಕೀಯ ವಿದ್ಯಮಾನಗಳಾದ ಪಕ್ಷಾಂತರ, ಶಾಸಕರ ಖರೀದಿ, ಗೆದ್ದ ವ್ಯಕ್ತಿಯನ್ನು ಓಲೈಸಿಕೊಂಡು ತಮ್ಮ ಕೆಲಸ ಮಾಡಿಕೊಳ್ಳಲು ಮುಂದಾಗುವ ಪ್ರಭಾವಿಗಳ ಬಗ್ಗೆ ಬೆಳಕು ಚೆಲ್ಲಲು ನಾಟಕದಲ್ಲಿ ಪ್ರಯತ್ನಿಸಲಾಗಿದೆ. ಜನನಾಯಕರನ್ನು ಹಿಡಿತದಲ್ಲಿಟ್ಟುಕೊಂಡು ಮತದಾನದ ಸಂದರ್ಭದಲ್ಲಿ ತಮಗೆ ಬೇಕಾದಂತೆ ಬಳಸಿಕೊಳ್ಳುವುದು ಹಿಂದೆಯೂ ಚಾಲ್ತಿಯಲ್ಲಿತ್ತು. ಇಂದು ಅದು ರೆಸಾರ್ಟ್‌ ರಾಜಕಾರಣದ ರೂಪ ತಾಳಿದೆ. ಇದನ್ನು ಪ್ರಸಕ್ತ ಸನ್ನಿವೇಶಕ್ಕೆ ಅನುಗುಣವಾಗಿ ಕಟ್ಟಿಕೊಡಲು ನಾಟಕದಲ್ಲಿ ಪ್ರಯತ್ನಿಸಲಾಗಿದೆ’ ಎನ್ನುತ್ತಾರೆ ಸಂಚಾಲಕ ಚಡ್ಡಿ ನಾಗೇಶ್.

***

ಪ್ರದರ್ಶನ ವಿವರ

* ನಾಟಕ: ಸಂದರ್ಭ

* ತಂಡ: ರಂಗಸಂಪದ

* ರಚನೆ: ಬಿ.ವಿ. ವೈಕುಂಠರಾಜು

* ನಿರ್ದೇಶನ: ಡಿ.ಟಿ. ಚನ್ನಕೇಶವಮೂರ್ತಿ

* ಪ್ರದರ್ಶನ ದಿನ: ಜನವರಿ 10

* ಸಮಯ: ಸಂಜೆ ಗಂಟೆ 7

* ಸ್ಥಳ: ಕಲಾಗ್ರಾಮ ಸಮುಚ್ಛಯ, ಮಲ್ಲತ್ತಹಳ್ಳಿ

* ಟಿಕೆಟ್: www.bookmyshow.com (₹70)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry