ಸುಕೋಮಲ ಮಗುವಿನ ಕಾಳಜಿ

7

ಸುಕೋಮಲ ಮಗುವಿನ ಕಾಳಜಿ

Published:
Updated:
ಸುಕೋಮಲ ಮಗುವಿನ ಕಾಳಜಿ

ಮಗುವಿನ ತ್ವಚೆ ಸುಕೋಮಲ. ಚಳಿಗಾಲದಲ್ಲಿ ಸಣ್ಣ ಮಕ್ಕಳ ಚರ್ಮ, ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಚಳಿಗಾಲದಲ್ಲಿ ಮಗುವಿನ ನವಿರಾದ ಚರ್ಮ ಬೇಗ ಹಾಳಾಗಬಹುದು. ಇದಕ್ಕಾಗಿ ಪೋಷಕರೂ ಹೆಚ್ಚು ಕಾಳಜಿ ವಹಿಸುವುದು ಅಗತ್ಯ.

ಬಾದಾಮಿ, ಹಾಲಿನಿಂದ ಮಾಡಿರುವ ಬಾಡಿಲೋಶನ್‌ಗಳನ್ನು ಮಗುವಿನ ಚರ್ಮಕ್ಕೆ ಹಚ್ಚಿದರೆ ಚರ್ಮವು ಕಾಂತಿಯುಕ್ತವಾಗಿರುತ್ತದೆ.ವಿಟಮಿನ್‌ ಇ ಇರುವ ಕ್ರೀಮ್‌ಗಳು ಮಗುವಿನ ಚರ್ಮಕ್ಕೆ ಸೂಕ್ತ. ಯಾವುದೇ ಲೋಷನ್ ಹಚ್ಚಿದ ನಂತರ ಮಗುವಿನ ಚರ್ಮ ಒಣಗಿದರೆ ಮತ್ತೆ ಅಂಥ ಲೋಷನ್‌ ಬಳಸಬೇಡಿ. ವಾರಕ್ಕೆ ಒಮ್ಮೆ ಗಂಧದ ಪುಡಿಗೆ ಅರಿಷಿನ ಬೆರೆಸಿ, ತುಸು ಹಾಲು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಆಗಾಗ ಮಗುವಿಗೆ ಲೇಪಿಸಿದರೆ ತ್ವಚೆ ಕಾಂತಿಯುತವಾಗುತ್ತದೆ. ಸ್ನಾನದ ಸಮಯದಲ್ಲಿ ಸೋಪಿನ ಬದಲು ಕಡಲೆಹಿಟ್ಟಿಗೆ ಆದ್ಯತೆ ಕೊಡಿ.

ತುಸು ಬೆಚ್ಚಗೆ ಮಾಡಿಕೊಂಡ ಎಣ್ಣೆಯಿಂದ ಮೃದುವಾಗಿ ಮಸಾಜ್‌ ಮಾಡಿ. ಮಸಾಜ್‌ಗೆ ತೆಂಗಿನೆಣ್ಣೆ, ಹರಳೆಣ್ಣೆಯಿಂದ ಮಸಾಜ್‌ ಮಾಡುವುದು ಒಳಿತು. ಇದರಿಂದ ಮಗುವಿನ ಚರ್ಮವನ್ನು ಮೃದುವಾಗುವುದರ ಜೊತೆಗೆ ದೇಹದ ಉಷ್ಣಾಂಶವನ್ನು ಸೂಕ್ತ ಪ್ರಮಾಣದಲ್ಲಿ ಕಾಪಾಡಲು ಸಹಕರಿಸುತ್ತದೆ. ವಿಟಮಿನ್ ಇ ಅಂಶಗಳಿರುವ ಎಣ್ಣೆಯನ್ನು ಮಸಾಜ್‌ಗೆ ಬಳಸಿದರೆ ಚರ್ಮಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುವುದರಿಂದ ಮಗುವಿಗೆ ಆರಾಮ ಎನಿಸುತ್ತದೆ.

ಚಳಿಗಾಲದಲ್ಲಿ ಮಕ್ಕಳಿಗೆ ಶೀತ–ನೆಗಡಿ ಸಾಮಾನ್ಯ. ವಿವಿಧ ಸೋಂಕುಗಳಿಗೂ ಮಗು ತುತ್ತಾದೀತು ಎಂಬ ಎಚ್ಚರ ಇರಲಿ. ಮಗು ಹಾಲು ಕುಡಿಯುವ ಬಾಟಲಿಗಳನ್ನು ಚೆನ್ನಾಗಿ ತೊಳೆದಿಡಬೇಕು. ಹಾಲನ್ನು ತುಸು ಬೆಚ್ಚಗಿರುವಂತೆಯೇ ಮಗುವಿಗೆ ಕುಡಿಸಿ. ಚಳಿ ಎನ್ನುವ ಕಾರಣಕ್ಕೆ ಮಗುವಿಗೆ ವಿಪರೀತ ಬಿಸಿನೀರಿನಲ್ಲಿ ಸ್ನಾನ ಮಾಡಿಸಬಾರದು. ಮಗುವಿನ ಎಳೆಚರ್ಮ ಎಷ್ಟು ಬಿಸಿತಡೆಯಬಲ್ಲುದೋ, ಅಷ್ಟೇ ಬಿಸಿಯ ನೀರು ಬಳಸಿ.

ಮಗುವನ್ನು ಹೊರಗೆ ಕರೆದೊಯ್ಯುವುದಾದರೆ ಸ್ವೆಟರ್‌ ಅಥವಾ ಚಳಿ ತಡೆದುಕೊಳ್ಳುವಂತಹ ಬಟ್ಟೆ ಹಾಕಿ. ತಲೆಗೆ ಟೋಪಿ ಅಥವಾ ಮಫ್ಲರ್‌, ಕಾಲಿಗೆ ಸಾಕ್ಸ್‌ ತೊಡಿಸಲು ಮರೆಯಬೇಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry