ಅಭದ್ರ ‘ಆಧಾರ್’ ಸರಿಪಡಿಸಿ ಮಾಹಿತಿ ಭದ್ರತೆ ಬಲಗೊಳಿಸಿ

7

ಅಭದ್ರ ‘ಆಧಾರ್’ ಸರಿಪಡಿಸಿ ಮಾಹಿತಿ ಭದ್ರತೆ ಬಲಗೊಳಿಸಿ

Published:
Updated:
ಅಭದ್ರ ‘ಆಧಾರ್’ ಸರಿಪಡಿಸಿ ಮಾಹಿತಿ ಭದ್ರತೆ ಬಲಗೊಳಿಸಿ

ಕೇವಲ 500 ರೂಪಾಯಿ ಕೊಟ್ಟರೆ ಆಧಾರ್ ಮಾಹಿತಿ ಪಡೆದುಕೊಳ್ಳುವುದು ಸಾಧ್ಯ ಎಂಬುದು ಆತಂಕಕಾರಿ. ಈ ಕುರಿತಂತೆ ತನಿಖಾ ವರದಿಯನ್ನು ಪ್ರಕಟಿಸಿದ ‘ದಿ ಟ್ರಿಬ್ಯೂನ್’ ಪತ್ರಿಕೆ ವಿರುದ್ಧ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ನಡೆದುಕೊಂಡ ರೀತಿ ಮತ್ತೂ ಆತಂಕಕಾರಿ. ನಿಜಕ್ಕೂ ಮಾಹಿತಿ ಸೋರಿಕೆ ಆಗಿದೆಯೇ ಎಂಬ ಬಗ್ಗೆ ಯುಐಡಿಎಐ ತನಿಖೆ ಕೈಗೊಳ್ಳಲು ಮುಂದಾಗಲಿಲ್ಲ. ಬದಲಿಗೆ ವರದಿಗಾರ್ತಿ ರಚನಾ ಖೈರಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ವಿಪರ್ಯಾಸ. ಸಂದೇಶವಾಹಕಳನ್ನು ಹೊಡೆದುರುಳಿಸುವಂತಹ ಈ ಕ್ರಮ ಖಂಡನೀಯ. ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲದೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪ್ರಕಟಿಸಲಾದ ಈ ತನಿಖಾ ವರದಿಯು ವ್ಯವಸ್ಥೆಯ ಲೋಪದೋಷಗಳನ್ನು ಬಯಲಿಗೆಳೆದಿದೆ. ಈ ಪ್ರಯತ್ನ ಶ್ಲಾಘನೀಯ. ಆದರೆ ಪತ್ರಕರ್ತರ ಕೆಲಸಕ್ಕೆ ತಡೆ ಒಡ್ಡುವ ರೀತಿಯಲ್ಲಿ ಯುಐಡಿಎಐ ನಡೆದುಕೊಂಡಿದೆ. ಅಷ್ಟೇ ಅಲ್ಲ, ಆಧಾರ್ ವ್ಯವಸ್ಥೆಯಲ್ಲಿರುವ ದೋಷವನ್ನು ಬಯಲು ಮಾಡಿದ ವರದಿಯನ್ನು ಲಘುವಾಗಿ ಪರಿಗಣಿಸುವಂತಹ ಧಾಟಿಯಲ್ಲಿ ಸ್ವಸಮರ್ಥನೆ ಮಾಡಿಕೊಳ್ಳುವುದಕ್ಕೂ ಅದು ಮುಂದಾಯಿತು. ವ್ಯಕ್ತಿಗಳ ಬೆರಳಚ್ಚು ಹಾಗೂ ಕಣ್ಣಿನ ಪಾ‍ಪೆಯ ದಾಖಲೆ ಇರುವ ಬಯೊಮೆಟ್ರಿಕ್ ವಿವರಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಯುಐಡಿಎಐ ಪ್ರತಿಪಾದಿಸಿತು. ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿ ವಿವಾದದ ರೂಪದಲ್ಲಿ ಇದು ದೊಡ್ಡದಾಗಿ ಬೆಳೆಯತೊಡಗಿದಂತೆ, ‘ಪತ್ರಿಕಾ ಸ್ವಾತಂತ್ರ್ಯಕ್ಕೆ ಸರ್ಕಾರ ಬದ್ಧ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದರು. ‘ಎಫ್‍‍ಐಆರ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಇದೆ. ನಿಜವಾದ ಅಪರಾಧಿಗಳ ಪತ್ತೆಗಾಗಿ ಪೊಲೀಸರಿಗೆ ಎಲ್ಲಾ ಸಹಕಾರ ನೀಡಬೇಕೆಂದು ‘ದಿ ಟ್ರಿಬ್ಯೂನ್’ ಪತ್ರಿಕೆ ಹಾಗೂ ಪತ್ರಕರ್ತೆಯ ಸಹಕಾರ ಕೋರಲು ಯುಐಡಿಎಐಗೆ ಸೂಚಿಸಿದ್ದೇನೆ’ ಎಂದು ಟ್ವೀಟ್ ಮಾಡಿದ್ದರು. ಆ ನಂತರ, ನಿಲುವು ಬದಲಿಸಿದ ಯುಐಡಿಎಐ, ‘ತಪ್ಪು ಎಲ್ಲಿ ಆಗಿದೆ’ ಎಂಬುದನ್ನು ಪತ್ತೆಮಾಡಲು ಪತ್ರಿಕೆಯ ಸಹಕಾರ ಪಡೆದುಕೊಳ್ಳುವುದಾಗಿ ಹೇಳಿದೆ. ಅಷ್ಟೇ ಅಲ್ಲ ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ಧ ಎಂದು ಸಹ ಹೇಳಿದೆ.

2009ರಲ್ಲಿ ರಾಷ್ಟ್ರದಲ್ಲಿ ಆಧಾರ್ ಸಂಖ್ಯೆ ನೀಡುವುದು ಆರಂಭವಾಯಿತು. ಈಗ ಈ ಆಧಾರ್ ಸಂಖ್ಯೆ ಪಡೆದುಕೊಂಡವರ ಪ್ರಮಾಣ 100 ಕೋಟಿ ದಾಟಿದೆ. ಅನೇಕ ಸೇವೆಗಳಿಗೆ ಆಧಾರ್ ಸಂಖ್ಯೆ ಈಗ ಕಡ್ಡಾಯವೂ ಆಗುತ್ತಿದೆ. ವ್ಯಕ್ತಿಯ ಗುರುತು ದಾಖಲಿಸುವ ಆಧಾರ್ ಸಂಖ್ಯೆ ಪಡೆದುಕೊಳ್ಳಲು ನೀಡಲಾಗುವ ವ್ಯಕ್ತಿಗತ ಮಾಹಿತಿಗಳ ಭದ್ರತೆ ಕುರಿತಾದ ಕಾಳಜಿಯ ವಿಚಾರ ಆಗಿನಿಂದಲೂ ಚರ್ಚೆ ಆಗುತ್ತಲೇ ಇದೆ. ಖಾಸಗಿತನದ ಹಕ್ಕಿನ ವಿಚಾರವೂ ಇಲ್ಲಿದೆ. ಈಗ ಸುಮಾರು 139 ಸರ್ಕಾರಿ ಸಬ್ಸಿಡಿ ಸೇವೆಗಳು, ಬ್ಯಾಂಕ್ ಖಾತೆ ಸೇರಿದಂತೆ ಹಲವು ಸೇವೆಗಳಿಗೆ ಆಧಾರ್ ಸಂಖ್ಯೆ ಬಳಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲೇ ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಿಸಲು ಹೋದ ಗ್ರಾಹಕರ ಅರಿವಿಗೇ ಬಾರದಂತೆ ಟಿಲಿಕಾಂ ಕಂಪನಿಯೊಂದು ಪೇಮೆಂಟ್ ಬ್ಯಾಂಕ್ ಖಾತೆ ತೆರೆದು ಅಡುಗೆ ಅನಿಲ ಸಬ್ಸಿಡಿ ವರ್ಗಾಯಿಸಿದ್ದು ಇತ್ತೀಚೆಗೆ ವಿವಾದವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಸೈಬರ್‌ಲೋಕದ ಭದ್ರತೆ ಪೂರ್ಣ ದೋಷರಹಿತವೇನಲ್ಲ ಎಂಬುದು ಇಂತಹ ವಿದ್ಯಮಾನಗಳಿಂದ ಇತ್ತೀಚೆಗೆ ಪದೇಪದೇ ವ್ಯಕ್ತವಾಗುತ್ತಲೇ ಇದೆ. ವೈಯಕ್ತಿಕ ವಿವರಗಳನ್ನು ಒಳಗೊಂಡಂತಹ ಆಧಾರ್‌ ಮಾಹಿತಿ ಸೂಕ್ಷ್ಮವಾದದ್ದು. ಹೀಗಾಗಿ ಮಾಹಿತಿ ಭದ್ರತೆಗೆ ಗಮನ ನೀಡುವುದು ಅತ್ಯವಶ್ಯ. ಮಾಹಿತಿ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಬೇಕು. ಹೀಗಾದಾಗ ಮಾತ್ರವೇ ಆಧಾರ್‌ನಿಂದ ದೊರಕುವ ಅನೇಕ ಪ್ರಯೋಜನಗಳು ಅರ್ಥಪೂರ್ಣ ಎನಿಸುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry