ಗಾಂಧಿಯ ದಲಿತೀಕರಣ, ಅಂಬೇಡ್ಕರ್ ಜಾತ್ಯತೀತಕರಣ

7
ಈ ಇಬ್ಬರ ರೂಪಾಂತರದ ಅವ್ಯಕ್ತ ಪ್ರಕ್ರಿಯೆಗಳನ್ನು ನಾವೀಗ ಗಾಢವಾಗಿ, ತಾಳ್ಮೆಯಿಂದ ವಿವೇಚಿಸಬೇಕಾಗಿದೆ

ಗಾಂಧಿಯ ದಲಿತೀಕರಣ, ಅಂಬೇಡ್ಕರ್ ಜಾತ್ಯತೀತಕರಣ

Published:
Updated:
ಗಾಂಧಿಯ ದಲಿತೀಕರಣ, ಅಂಬೇಡ್ಕರ್ ಜಾತ್ಯತೀತಕರಣ

ಭಾರತೀಯ ಸಮಾಜಗಳಲ್ಲಿ ಚರಿತ್ರೆಯ ಸಂಗತಿಗಳು ಆಗಾಗ ಹಿಂದೂ ಸಂಗತಿಗಳನ್ನು ಉದ್ದೀಪಿಸುತ್ತಲೇ ಬಂದಿವೆ. ಈ ಕಾಲಕ್ಕೆ ಬಂದು ವ್ಯಾಖ್ಯಾನಿಸಲು ನೋಡಿದರೆ, ಹಿಂದೂ ಎಂಬ ಸಂಗತಿಯು ಭಗ್ನವಾಗಿ ಅತೀ ಸೂಕ್ಷ್ಮವಾಗಿದೆ. ಹಿಂದುಸ್ತಾನದ ಮೇಲೆ ಆದ ಆಕ್ರಮಣಗಳನ್ನು ಈಗ ಹಿಂದುತ್ವದ ಭಾಗವಾಗಿ ಅರ್ಥೈಸಲಾಗುತ್ತದೆ. ಆಕ್ರಮಣಕಾರರಿಗೆ ಹಿಂದುತ್ವ ಗುರಿಯಾಗಿರಲಿಲ್ಲ; ಅವರಿಗೆ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಬೇರೆಬೇರೆಯಾದ ಕಾರಣಗಳಿದ್ದವು. ಅವುಗಳಲ್ಲಿ ಮತಧರ್ಮದ ವಿಚಾರಗಳೂ ಸೇರಿದ್ದವು.

ಈಗ ಭಾರತವು ಸ್ವತಂತ್ರ ಗಣರಾಜ್ಯದ ವ್ಯವಸ್ಥೆಯಲ್ಲಿ ಸಂವಿಧಾನಬದ್ಧ ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಜಾಗತೀಕರಣದ ಪರ್ವ ಕಾಲದಲ್ಲಿ ಚಲಿಸುತ್ತಿದೆ. ಜಾತಿ, ಮತ, ಧರ್ಮಗಳ ಸಂಗತಿಗಳು ಮುನ್ನೆಲೆಗೆ ಬರುತ್ತಿವೆ. ರಾಜಕಾರಣವು ಮತೀಯತೆಯನ್ನು ಅಂತರ್ಗತ ಮಾಡಿಕೊಳ್ಳುತ್ತಿದೆ. ನಮ್ಮ ದೇಶದ ಸಾರ್ವಭೌಮತ್ವವನ್ನೂ

ಸಾಮಾಜಿಕ ನ್ಯಾಯವನ್ನೂ ಪರಿಶೀಲಿಸುವಾಗ ಈ ಕಾಲದ  ಭಾರತಕ್ಕೆ ಮೂಲ ಕಾರಣವಾದ ಎರಡು ದೃಷ್ಟಿಕೋನಗಳನ್ನು ಮತ್ತೆ ಮತ್ತೆ ಪುನರ್ ಸೃಷ್ಟಿಸಿಕೊಳ್ಳುವ ಆಲೋಚನೆಯನ್ನು ಮಾಡಬೇಕು. ಈ ಆಶಯದಲ್ಲಿ ದಲಿತೀಕರಣಗೊಂಡ ಗಾಂಧೀಜಿಯ ಪ್ರಕ್ರಿಯೆಯನ್ನು; ಜಾತ್ಯತೀತಗೊಂಡ ಅಂಬೇಡ್ಕರ್ ಅವರ ವ್ಯಕ್ತಿತ್ವಗಳ ರೂಪಾಂತರ ಪರಿವರ್ತನೆಗಳನ್ನು ಪರಿಶೀಲಿಸುವೆ.

ಗಾಂಧೀಜಿ 1915ರ ಹೊತ್ತಿಗಾಗಲೇ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ಬಂದು ಭಾರತೀಯ ಸಮಾಜವನ್ನು ದಿಟ್ಟಿಸಿದಾಗ ಅವರಿಗೆ ಧುತ್ತೆಂದು ಕಂಡದ್ದು ಅಸ್ಪೃಶ್ಯ ಭಾರತ. ವರ್ಣಭೇದದ ಹಿಂಸೆಯನ್ನು ಕಂಡಿದ್ದ ಗಾಂಧಿ ಅವರಿಗೆ ಭಾರತೀಯ ಸಮಾಜದ ಜಾತಿಯ ನರಕ ಮನಕ್ಕೆ ತಟ್ಟಿದ್ದು ಸಹಜವಾಗಿತ್ತು. ಭಾರತದ ಮಧ್ಯಕಾಲೀನ ಸಮಾ

ಜಗಳಲ್ಲಿ ಮಾನವೀಯತೆಯ ದನಿಯಲ್ಲಿ ಭಕ್ತಿ ಪಂಥ ಚಳವಳಿ ಅದಾಗಲೇ ಆಗಿಹೋಗಿತ್ತು. ಜಾತಿಯ ಅಪಮಾನದಿಂದ ಭಾರತೀಯ ಸಮಾಜ ಎಷ್ಟು ನರಳಿದೆ ಎಂಬ ಆಧುನಿಕ ಪ್ರಜ್ಞೆಯು ಗಾಂಧಿಯ ಮೂಲಕ ವಿಶೇಷವಾಗಿ ಬೆಳೆಯಿತು. ಹಾಗಾಗಿಯೇ ಅವರು ಮೊದಲಿಗೆ ಅಸ್ಪೃಶ್ಯತಾ ನಿವಾರಣೆಯ ಆಂದೋಲನ ಕೈಗೊಂಡದ್ದು. ದಮನಿತರ ಪರವಾದ ನ್ಯಾಯಕ್ಕಾಗಿ ಉಪವಾಸ ಕೂತರು. ನೀಲಿ ತೋಟಗಳ ಕಾರ್ಮಿಕರ ಪರವಾಗಿ ದನಿ ಎತ್ತಿದರು. ‘ಅಹಿಂಸೆಯ ಗಾಂಧಿ’ ಹೋರಾಟವು ದಮನಿತರ ಆರ್ದ್ರವಾದ ಪ್ರತಿರೋಧವಾಗಿತ್ತು. ಅದು ಹಿಂದುತ್ವವನ್ನು ಪರಿವರ್ತಿಸುವ ಅವ್ಯಕ್ತ ಕ್ರಮವಾಗಿತ್ತು. ದಮನಿತ ಜಾತಿಗಳು ಸಂಘಟಿತವಾಗಿರಲಿಲ್ಲ. ಅಸಂಘಟಿತ ದಮನಿತರ ಮೌನ ಪ್ರತಿರೋಧವನ್ನು, ಅಸಹಾಯಕರ ಕಿಚ್ಚನ್ನು ಗಾಂಧೀಜಿ ಬೆಳಕಾಗಿ ಪರಿವರ್ತಿಸಿದರು. ಇದು ದಲಿತೀಕರಣದ ಮೊದಲ ಸ್ಥಿತಿ.

ದಮನಿತರು ಒಂದು ಸಂಘಟಿತ ಪರ್ಯಾಯ ಶಕ್ತಿಯಾಗಿ ರೂಪುಗೊಳ್ಳಲು ಈ ಕಾಲಕ್ಕೂ ಸಾಧ್ಯವಾಗದಿರುವ ಸಂದರ್ಭದಲ್ಲಿ, ಗಾಂಧೀಜಿ ಎಲ್ಲರನ್ನೂ ಒಳಗೊಳ್ಳುವ ಬಗೆಯಲ್ಲಿ ಅಹಿಂಸೆಯ ದಂಗೆಯನ್ನು ತಣ್ಣಗೆ ರೂಪಿಸಿದ್ದು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಉಂಟಾದ ಒಂದು ಮಹೋನ್ನತ ಪ್ರಕ್ರಿಯೆ. ಇದೊಂದು ಯಾವತ್ತೂ ಬೇಕಾದ ಒಂದು ರೂಪಾಂತರ ಮಾದರಿ. ಚರಿತ್ರೆಯ ಹಿಂದೂ ಸಾಮ್ರಾಜ್ಯಗಳಿಂದ, ವೀರ ಹಿಂದುತ್ವದಿಂದ ಭಾರತವನ್ನು ರೂಪಿಸಲು ಸಾಧ್ಯವಿರಲಿಲ್ಲ. ಹಿಂದೂ ಸಾಮ್ರಾಜ್ಯಗಳ ತರ್ಕವನ್ನು ಗಾಂಧೀಜಿ ಅನುಸರಿಸಲಿಲ್ಲ. ಆ ಹೊತ್ತಿಗೆ ಹಿಂದುತ್ವವೇ ಬಡವಾಗಿತ್ತು. ಬಡಪಾಯಿ ದಮನಿತರ ದನಿಯೇ ಗಾಂಧಿಯ ಬಲವಾಗಿತ್ತು. ಈ ದಮನಿತರ ಚಹರೆಯು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಐಕ್ಯಗೊಂಡ ಗುರುತಾಗಿತ್ತು, ಶಕ್ತಿಯಾಗಿತ್ತು. ಇದನ್ನು ಗಾಂಧೀಜಿ ಗ್ರಹಿಸುವ ಮೂಲಕ ವಿರಾಟ್ ರೂಪದಲ್ಲಿ ತಾಯಿ ಭಾರತಿಯ ಅನಾಥರನ್ನು ಅಂತರ್ಗತ ಮಾಡಿಕೊಳ್ಳುವ ಪ್ರಕ್ರಿಯೆಗೆ ಒಡ್ಡಿಕೊಂಡರು. ಇದು ಗಾಂಧೀಜಿಯ ದಲಿತೀಕರಣದ ಇನ್ನೊಂದು ಸ್ಥಿತಿ.

ಜಾತಿಯ ಹುಟ್ಟು, ಬೆಳವಣಿಗೆಯ ಕುರಿತು ಅಂಬೇಡ್ಕರ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿವೇಚಿಸುವ ಹೊತ್ತಿಗೆ ಗಾಂಧೀಜಿ ಅಸ್ಪೃಶ್ಯರನ್ನು ಮುಟ್ಟಿಸಿಕೊಳ್ಳುವ ರೂಪಾಂತರವನ್ನು ಭಾರತೀಯತೆಯಲ್ಲಿ ವಿಸ್ತರಿಸಿಕೊಂಡಿದ್ದರು. 1920ರ ನಂತರ ಅಂದರೆ ತಿಲಕರ ಸಾವಿನ ನಂತರ ಗಾಂಧೀಜಿ ಅಖಂಡ ಭಾರತದ ವಿಮುಕ್ತಿಯ ಹೊಣೆಯನ್ನು ಹೊತ್ತುಕೊಂಡರು. ಆ ಸ್ಥಿತಿಯಲ್ಲಿ ಗಾಂಧೀಜಿ ತನ್ನ ವ್ಯಕ್ತಿತ್ವವನ್ನು ರಾಷ್ಟ್ರೀಕರಣಗೊಳಿಸಿಕೊಳ್ಳುತ್ತಿದ್ದರು. ಹಾಗೆಯೇ ಮಾನವ ಸಮಾಜಗಳನ್ನು ಆಧ್ಯಾತ್ಮಿಕ ದಂಗೆಯ ಮೂಲಕ ಮುನ್ನಡೆಸಲು ಸತ್ಯಾಗ್ರಹದ ಪ್ರಯೋಗ ಮಾಡುತ್ತಿದ್ದರು.

ಮಧ್ಯಕಾಲೀನ ಸಮಾಜಗಳ ಗಾಯಗಳಿಂದ ಆಗತಾನೆ ಎಚ್ಚೆತ್ತಿದ್ದ ಬಡಪಾಯಿಗಳ ದೇಶಕ್ಕೆ ರಕ್ತ ಕ್ರಾಂತಿಯ ಅವಶ್ಯಕತೆ ಇರಲಿಲ್ಲ. ಅಸಹಾಯಕತೆಯೇ ದಮನಿತ ಅಭಿವ್ಯಕ್ತಿಯ ಒಂದು ಜಾಗತಿಕ ಪರ್ಯಾಯ ಶಕ್ತಿಯಾಗುವ ಕಾಲಮಾನ ಗಾಂಧೀಜಿಯ ಮುಂದಿತ್ತು. ತಡಮಾಡದೆ ಅದನ್ನು ಗಾಂಧೀಜಿ ಮೈದುಂಬಿಸಿಕೊಂಡು ಬ್ರಿಟಿಷ್ ಸಾಮ್ರಾಜ್ಯದ ಮುಂದೆ ಉಪ್ಪಿನ ಸತ್ಯಾಗ್ರಹದ ಮೂಲಕ ಮಾತನಾಡಿದರು.

ಇನ್ನೊಂದು ದಿಕ್ಕಿನಲ್ಲಿ ಅಂಬೇಡ್ಕರ್ ಅವರು ‘ಅಸ್ಪೃಶ್ಯರಿಗೆ ಕುಡಿಯಲು ನೀರು ಕೊಡಿ’ ಎಂದು ಭಾರತೀಯತೆಯ ದಾಹದಲ್ಲಿ ಚೌದಾರ್ ಕೆರೆಯ ನೀರು ಮುಟ್ಟುವ ಆಂದೋಲನ ಮಾಡಿದ್ದರು. ಒಂದು ಉಪ್ಪು, ಇನ್ನೊಂದು ನೀರು... ಇವೆರಡೂ ಆಳದ ಅಂತರ್ಗತ ಸಂಗತಿಗಳು. ಮೇಲುನೋಟಕ್ಕೆ ಭಿನ್ನ... ಆದರೆ ಇವೆರಡರ ಪ್ರಕ್ರಿಯೆಗಳನ್ನು

ಬೇರ್ಪಡಿಸಿ ಅರ್ಥೈಸಲು ಸಾಧ್ಯವಿಲ್ಲ.

ಭಾರತ ಎನ್ನುವ ಒಂದು ದೇಹ ಅಂತರ್ಗತಗೊಳ್ಳುವ ಪ್ರಕ್ರಿಯೆಯಲ್ಲಿ ಗಾಂಧಿ– ಅಂಬೇಡ್ಕರ್ ಅವರ ಚಾರಿತ್ರಿಕತೆಯನ್ನು ಗಮನಿಸಬೇಕು. ಇದರಲ್ಲೇ ನಮ್ಮ ವರ್ತಮಾನದ ಅನೇಕ ಸಂಬಂಧಗಳು ಬೆಸುಗೆ ಆಗಿರುವುದು. ಗಾಂಧಿ ಅವರು ದಲಿತೀಕರಣಗೊಳ್ಳುತ್ತಿದ್ದ ಕಾಲದಲ್ಲೇ ‘ಪೂನಾ ಒಪ್ಪಂದ’ದ ಸವಾಲು ಎದುರಾದದ್ದು. ದಲಿತೀಕರಣಗೊಳ್ಳುತ್ತಿದ್ದ ಗಾಂಧೀಜಿಗೆ ಈ ಒಪ್ಪಂದ ವಿದ್ರೋಹದ ಮಾನವ ವಿಭಜನೆಯಂತೆ ಕಂಡಿರಬಹುದು. ನಾನು ಈಗಲೂ ಅಂಬೇಡ್ಕರ್ ನಿಲುವಿನ ಪರವಾಗಿಯೇ ಯೋಚಿಸು

ವವನು. ಒಂದು ಕಾಲದ ಚಾರಿತ್ರಿಕ ಅಭಿಪ್ರಾಯಗಳನ್ನು ಚಲನಶೀಲ ಸಮಾಜಗಳ ಆಯ್ಕೆಯಿಂದಲೇ ಧ್ಯಾನಿಸಬೇಕು. ನ್ಯಾಯವನ್ನು ಗಾಂಧೀಜಿ ಇಡಿಯಾಗಿ ನೋಡಿದರೆ, ಅಂಬೇಡ್ಕರ್ ಅದನ್ನು ಸಕಾಲಿಕದ ಬಿಡಿಯಾಗಿ ನೋಡುತ್ತಿದ್ದಾರೆ... ಈ ಮಹನೀಯರಿಬ್ಬರೂ ಎರಡು ಸಾಧ್ಯತೆಗಳ ಅಖಂಡ ಭಾರತದ ಎರಡು ಪ್ರಕ್ರಿಯೆಗಳಲ್ಲಿ ಒಳಪಟ್ಟಿದ್ದರು.

ಬಹಿಷ್ಕೃತ ಭಾರತೀಯನ ನೆಲೆಯಲ್ಲೇ ಅಖಂಡ ಭಾರತೀಯನಾಗುವ ಹೊಣೆಯ ವಿಕಾಸದಲ್ಲಿ ಹೇಗೆ ಜವಾಬ್ದಾರಿ ನಿರ್ವಹಿಸಬಹುದು ಎಂಬುದನ್ನು ಬಾಬಾಸಾಹೇಬಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ಒಂದೆಡೆ ದಲಿತೀಕರಣಗೊಳ್ಳುತ್ತಿರುವ ಗಾಂಧಿ, ಇನ್ನೊಂದೆಡೆ ಭಾರತೀಕರಣಗೊಳ್ಳುತ್ತಲೇ ಜಾತ್ಯತೀತಗೊಳ್ಳುತ್ತಿರುವ ಅಂಬೇಡ್ಕರ್ ಅವರ ರೂಪಾಂತರಗಳ ಪ್ರಕ್ರಿಯೆಯು ನಮ್ಮ ಕಾಲದ ಸಮಸ್ಯೆಗಳ ಪರಿಹಾರಕ್ಕೆ ಪುನರ್‌ ಅವಲೋಕಿಸುವ ಸಂಗತಿಗಳು.

ಭಾರತವನ್ನು ಹೇಗೆ ಜಾತ್ಯತೀತಗೊಳಿಸಲು ಸಾಧ್ಯ ಎಂಬ ಪ್ರಮೇಯ ಹೋರಾಟಗಳನ್ನು ಅಂಬೇಡ್ಕರ್ ರೂಪಿಸುತ್ತಿದ್ದಾಗಲೇ, ಗಾಂಧಿಯವರು ಭಾರತೀಯ ಸಮಾಜಗಳನ್ನು ಅಹಿಂಸೀಕರಿಸುವ ಒತ್ತಾಯಗಳಿಗೂ ಮುಂದಾಗಿದ್ದರು. ಮೃದು ಹಿಂದುತ್ವವನ್ನು ನಿರಾಕರಿಸುವ ಗಾಂಧೀಜಿಯ ಕೊನೆಗಾಲವು ಅವರ ದಲಿತೀಕರಣವನ್ನು ಆರ್ದ್ರವಾಗಿ ಬಿಂಬಿಸುತ್ತದೆ. ತಾನೊಬ್ಬ ಬಹಿಷ್ಕೃತ ಭಾರತೀಯ ಎಂದುಕೊಳ್ಳುವ ಅಂಬೇಡ್ಕರ್, ಸಂವಿಧಾನ ರಚಿಸುವ ಹೊತ್ತಿಗೆ ಅಖಂಡ ಭಾರತೀಯನಾಗಿ ಭ್ರಾತೃತ್ವ– ಸಮಾನತೆ–ಸ್ವಾತಂತ್ರ್ಯವನ್ನು ಸಾರುವ ಹೊತ್ತಿಗೆ ಜಾತ್ಯತೀತಗೊಂಡು, ಬುದ್ಧನ ಅಪರಿಮಿತ ಆಯ್ಕೆ– ಸ್ವಾತಂತ್ರ್ಯ– ಆರ್ದ್ರತೆಗೆ ಬಂದು ತಲುಪಿದ ಈ ಕ್ರಮ ಸಾಮಾನ್ಯವಾದುದಲ್ಲ. ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಜಾತಿಗಳನ್ನು, ಹಿಂದುತ್ವವನ್ನು ಜಾತ್ಯ‌ತೀತಕರಣಗೊಳಿಸಿದ್ದಾರೆ. ಅದರಿಂದಾಗಿಯೇ ಸನಾತನಿಗಳಿಗೆ ಸಂವಿಧಾನವು ಮುಳ್ಳಾಗಿ ಕಂಡಿರುವುದು.

ಅಹಿಂಸೆ ಮತ್ತು ಜಾತ್ಯತೀತತೆಗಳೆರಡೂ ಬೇರೆ ಬೇರೆ ಅಲ್ಲ. ದಲಿತೀಕರಣಗೊಳ್ಳುವುದು ಒಂದು ಬಗೆಯಲ್ಲಿ ಜಾತ್ಯತೀತಕರಣಗೊಳ್ಳುವ ಪ್ರಕ್ರಿಯೆ. ಗಾಂಧಿ ಇದರ ಭಾಗವಾಗಿದ್ದರು. ಅಂಬೇಡ್ಕರ್ ಜತೆ ‘ಪೂನಾ ಒಪ್ಪಂದ’ದ ಭಿನ್ನಾಭಿಪ್ರಾಯಗಳ ಮೂಲಕ ಗಾಂಧೀಜಿ ಇನ್ನಷ್ಟು ದಲಿತೀಕರಣಗೊಂಡರು. ಹಾಗೆಯೇ ಅಂಬೇಡ್ಕರ್ ಕೂಡ ಜಾತ್ಯತೀತಕರಣಗೊಂಡ ಭಾರತೀಯತೆಯನ್ನು ಗಾಢವಾಗಿ ಆವಾಹಿಸಿಕೊಂಡರು. ಇಲ್ಲದಿದ್ದರೆ, ‘ಬಹಿಷ್ಕೃತ ಭಾರತೀಯ’ ಎಂದು ಕರೆದುಕೊಂಡ ಅವರಲ್ಲಿ ಆ ಪ್ರಮಾಣದ ಪಲ್ಲಟ ಉಂಟಾಗುತ್ತಿರಲಿಲ್ಲ.

ರಾಷ್ಟ್ರ ನಿರ್ಮಾಣದ ನೆಲೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಬೇರೆ ಬೇರೆ ಅಲ್ಲ. ಅವರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಬೇರೆ. ವರ್ತಮಾನದ ಸನಾತನ ಒತ್ತಾಯಗಳು ಮಾತ್ರ ಒಂದೇ... ಗಾಂಧೀಜಿಯ ದಲಿತೀಕರಣ ರೂಪಾಂತರ ಕೂಡ ವಿಶಾಲವಾದ ಅರ್ಥದಲ್ಲಿ ಜಾತ್ಯತೀತಕರಣ ಪ್ರಕ್ರಿಯೆಯೇ ಆಗಿದೆ. ಅಂಬೇಡ್ಕರ್ ಅವರ ಭಾರತೀಕರಣ ಹಾಗೂ ಜಾತ್ಯತೀತಕರಣವು ಸನಾತನತೆಯ ವಿರುದ್ಧದ ಚಲನೆಯೇ ಆಗಿದೆ.

ಅಂಬೇಡ್ಕರ್ ಅನ್ವಯಿಸಿದ ಭ್ರಾತೃತ್ವ, ಸಮಾನತೆ, ಸ್ವಾತಂತ್ರ್ಯ ತತ್ವಗಳು ಮೂಲತಃ ಜಾತ್ಯತೀತವಾದವು. ಈ ಮೌಲ್ಯಗಳು ಗಾಂಧೀಜಿಯ ಸರ್ವೋದಯದ ದಲಿತೀಕರಣದಲ್ಲಿ ಬೆರೆತಿವೆ. ಗಾಂಧಿಯ ಸರ್ವೋದಯದಲ್ಲಿ ದಲಿತೀಕರಣದ ಆದರ್ಶವಿದೆ. ಅಂಬೇಡ್ಕರ್ ಅವರ ಜಾತ್ಯತೀತಕರಣದಲ್ಲಿ ನಿಜವಾದ ಭಾರತೀಯತೆ ಇದೆ.ವಾದಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಬೇರೆ; ಆದರೆ ಗುರಿಯಲ್ಲಿ ಅವರಿಬ್ಬರ ಅಖಂಡ ಭಾರತೀಯತೆ ಒಂದೇ.

ಜಾತ್ಯತೀತತೆ ಎಂಬುದು ಪಶ್ಚಿಮದ್ದೋ ಭಾರತೀಯತೆಯದೋ ಎಂಬುದು ಮುಖ್ಯ ಅಲ್ಲ. ಅದೊಂದು ಮಾನವ ಸಂಗತಿ. ಭ್ರಾತೃತ್ವ, ಅಹಿಂಸೆ, ಸ್ವಾತಂತ್ರ್ಯ, ಸಮಾನತೆ, ನ್ಯಾಯಗಳಿಂದ ಒಂದು ರಾಷ್ಟ್ರ ನಿರ್ಮಾಣ ಆಗಬೇಕು ಎಂದರೆ ಅದೊಂದು ಕೇವಲ ರಾಜಕೀಯ ಸಂಗತಿ ಅಲ್ಲ. ಜಾತ್ಯತೀತತೆ ಎಂಬುದು ದಮನಿತರ ಪ್ರಜ್ಞೆ, ಅಸ್ತಿತ್ವ, ಆಲೋಚನೆ, ಜೀವನಕ್ರಮ. ಜಾತಿಯ ಹಿಂಸೆಯ ನಿರಾಕರಣೆಯಿಂದಲೇ ಮಾನವ ಭ್ರಾತೃತ್ವ, ಸಮಾನತೆ, ಸ್ವಾತಂತ್ರ್ಯದ ಪ್ರಜ್ಞೆ ಅಂಬೇಡ್ಕರ್ ಅವರಿಗೆ ಬಂದದ್ದು. ಈ ಗುಣ ಗಾಂಧೀಜಿ ಅವರಲ್ಲೂ ಸಮಾನವಾಗಿ ಇತ್ತು. ಇವೆರಡೂ ಸಂಗತಿಗಳು ಭಾರತೀಯ ಸಂವಿಧಾನದಲ್ಲಿ ಸಂಗಮಿಸಿದವು. ಅದರಿಂದಾಗಿಯೇ ದೇಶದ ಸಾರ್ವಭೌಮತ್ವವು ಜನಸಾಮಾನ್ಯರ ಹಕ್ಕಾದದ್ದು.

ಜಾತ್ಯತೀತತೆಯನ್ನು ಅಂಬೇಡ್ಕರ್ ಪಶ್ಚಿಮದ ಧಾರ್ಮಿಕ ಸಾಮರಸ್ಯದಿಂದ ಅರ್ಥೈಸಿಲ್ಲ. ಅದನ್ನು ಅವರು ಅಳವಡಿಸಿರುವುದು ಮಾನವತ್ವದ ಜಾತಿ ವಿನಾಶದ ಆರ್ದ್ರತೆಯಿಂದ. ಜಗತ್ತಿನಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾಗಿರುವುದುಈ ಬಗೆಯ ಸೆಕ್ಯುಲರ್ ದರ್ಶನದಿಂದ. ಹಿಂದುತ್ವ ಈಗ ಪ್ರಜಾಪ್ರಭುತ್ವದ ಶಕ್ತಿಯನ್ನು ಬಳಸಿಕೊಂಡೇ ಮತೀಯಗೊಳ್ಳುತ್ತಿದೆ. ಇದಕ್ಕೆ ತೆರಬೇಕಾದ ದಂಡ ಬಹಳ ದುಬಾರಿಯಾದುದು.

ಗಾಂಧಿಯ ದಲಿತೀಕರಣವೇ ಅಹಿಂಸೆಯ ದಂಗೆ. ದಲಿತರು ಹಿಂಸೆಗೆ ಇಳಿಯಲಿಲ್ಲ. ಅಂಬೇಡ್ಕರ್ ಆಯುಧಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಬುದ್ಧನ ಕರುಣೆ ಮತ್ತು ಮಮಕಾರವನ್ನು ಅವರು ಅನುಸರಿಸಿದರು. ಆ ಮೂಲಕ ಅಹಿಂಸೆಯ ಪ್ರಜಾಪ್ರಭುತ್ವವನ್ನು ಅಂಬೇಡ್ಕರ್ ಪ್ರತಿಪಾದಿಸಿದರು.

ಇಂದು ಬಲಪಂಥೀಯರು ಹಿಂದುತ್ವವನ್ನು ಬಾಯಿಗೆ ಬಂದಂತೆಲ್ಲ ಆಡುತ್ತಿದ್ದಾರೆ. ಅದಕ್ಕಾಗಿ ಸಾರ್ವಭೌಮತ್ವವನ್ನೇ ಬಳಸುತ್ತಿದ್ದಾರೆ. ಈ ಸ್ಥಿತಿಯಲ್ಲಿ ಜಾತ್ಯತೀತ ಭಾರತದ ವೈಚಾರಿಕ ಸಾಮಾಜಿಕತೆಗೆ ಪ್ರಜ್ಞಾವಂತರು ತೀವ್ರವಾಗಿ ಸ್ಪಂದಿಸಬೇಕಾಗಿದೆ. ಇಲ್ಲದಿದ್ದರೆ ಭಾರತವು ಮತೀಯವಾದಿ ಹಿಂದೂ ರಾಷ್ಟ್ರವಾಗಿ ಅನೇಕ ಸಮಸ್ಯೆಗಳಿಗೆ ಈಡಾಗುತ್ತದೆ. ಭಾರತದ ಪ್ರಜಾಪ್ರಭುತ್ವವು ಮತೀಯವಾದಂತೆಲ್ಲ, ದಕ್ಷಿಣ ಏಷ್ಯಾದ ರಾಷ್ಟ್ರಗಳ ಸಂಬಂಧಗಳಲ್ಲಿ ಸಂಕುಚಿತ ಸಂಬಂಧಗಳು ಮಾತ್ರ ಸಾಧ್ಯವಾಗಿ ಮುಂದೆ ಅದೊಂದು ಜಾಗತಿಕ ಸಮಸ್ಯೆಯಾಗಿಯೂ ಮಾರ್ಪಡಬಲ್ಲದು. ಅಂತೆಯೇ ಆಂತರಿಕ ಮತೀಯವಾದವು ಉಲ್ಬಣಿಸಿ ದೇಶದಲ್ಲಿ ಅಭದ್ರತೆ, ಅಸಮಾನತೆ, ಹಿಂಸೆ ಇನ್ನಷ್ಟು ಹೆಚ್ಚಬಲ್ಲದು.

ಇವು ನಾಳೆಯ ಆಪತ್ತುಗಳಲ್ಲ. ಇವು ಈಗಾಗಲೇ ಮನೆ ಬಾಗಿಲಿಗೆ ಬಂದಿವೆ. ಹಿಂದುತ್ವದ ಪುನರುಜ್ಜೀವನವು ಪ್ರತಿ ಸಲವೂ ಜಾತಿ ಮತ್ತು ಧರ್ಮಗಳನ್ನೇ ಬಂಡವಾಳ ಮಾಡಿಕೊಳ್ಳುತ್ತ ಬಂದಿದೆ. ನಮಗೆ ಬೇಕಿರುವುದು ಗಾಂಧೀಜಿಯ ‘ದಲಿತೀಕರಣದ ಹಿಂದ್ ಸ್ವರಾಜ್’. ಹಾಗೆಯೇ ಅಂಬೇಡ್ಕರ್ ಕನಸಿನ ‘ಜಾತ್ಯತೀತ ಮಾನವತ್ವದ ಭಾರತೀಕರಣ’. ಇವು ಚರ್ಚಿಸಬೇಕಾದ ವಾಗ್ವಾದಗಳಲ್ಲ; ಭಾವಿಸಬೇಕಾದ ಮಾನವ ಸಂಬಂಧಗಳು. ಅಖಂಡ ಭಾರತದ ರಾಜ್ಯಾಂಗ ವ್ಯವಸ್ಥೆಯಲ್ಲಿ ಅಳವಡಿಸಲಾದ ಈ ಇಬ್ಬರ ರೂಪಾಂತರದ ಅವ್ಯಕ್ತ ಪ್ರಕ್ರಿಯೆಗಳನ್ನು ನಾವೀಗ ಗಾಢವಾಗಿ ತಾಳ್ಮೆಯಿಂದ ವಿವೇಚಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry