24 ಗಂಟೆಯಲ್ಲಿ ವೆಬ್‌ಸೈಟ್‌ನಲ್ಲಿ ಎಫ್‌ಐಆರ್‌

7
ಹೈಕೋರ್ಟ್‌ಗೆ ಎಸಿಬಿ ಪ್ರಮಾಣ ಪತ್ರ

24 ಗಂಟೆಯಲ್ಲಿ ವೆಬ್‌ಸೈಟ್‌ನಲ್ಲಿ ಎಫ್‌ಐಆರ್‌

Published:
Updated:

ಬೆಂಗಳೂರು: ‘ಟ್ರ್ಯಾಪ್‌ ಮತ್ತು ದಾಳಿ ಪ್ರಕರಣ ಹೊರತುಪಡಿಸಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗುವ ಪ್ರಥಮ ವರ್ತಮಾನ ವರದಿಗಳನ್ನು (ಎಫ್‌ಐಆರ್) 24 ಗಂಟೆ ಒಳಗಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹೈಕೋರ್ಟ್‌ಗೆ ತಿಳಿಸಿದೆ.

ಎಸಿಬಿ ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ದಾಖಲಿಸುವ ಪ್ರಥಮ ವರ್ತಮಾನ ವರದಿಗಳ (ಎಫ್‌ಐಆರ್) ಪ್ರತಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಎಸ್.ಉಮಾಪತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಎಸಿಬಿ ಪರ ವಕೀಲ ವೆಂಕಟೇಶ ದಳವಾಯಿ ಈ ಕುರಿತಂತೆ ಪ್ರಮಾಣಪತ್ರ ಸಲ್ಲಿಸಿದರು.

‘24 ಗಂಟೆಯೊಳಗೆ ಅಪ್‌ಲೋಡ್‌ ಮಾಡುವ ಸಂಬಂಧ ಎಸಿಬಿಯ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸೂಚಿಸಿ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ’ ಎಂದೂ ದಳವಾಯಿ ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಈ ಕುರಿತಂತೆ ಸುತ್ತೋಲೆ ಹೊರಡಿಸಿ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಬಿಎಂಟಿಎಫ್ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

‘ಎಫ್‌ಐಆರ್ ದಾಖಲಿಸಿದರೆ, ಅದರ ಪ್ರತಿಯನ್ನು 24 ಗಂಟೆಯೊಳಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರಿಂ ಕೋರ್ಟ್ ನಿರ್ದೇಶಿಸಿದೆ. ಆದರೆ, ಈ ಆದೇಶವನ್ನು ಎಸಿಬಿ ಮತ್ತು ಬಿಎಂಟಿಎಫ್ ಪಾಲಿಸುತ್ತಿಲ್ಲ ಎಂಬುದು ಅರ್ಜಿದಾರರ ಕೋರಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry