ಹಲ್ಲೆ ಯತ್ನದ ಕಟ್ಟುಕತೆ ಬಯಲು ಮಾಡಿದ ಕಮಿಷನರ್‌

7
ಮಂಗಳೂರು: ಹಿಂದೂ ಜಾಗರಣ ವೇದಿಕೆ ಮುಖಂಡನ ದೂರಿಗೂ, ಹೇಳಿಕೆಗೂ ಅಜಗಜಾಂತರ

ಹಲ್ಲೆ ಯತ್ನದ ಕಟ್ಟುಕತೆ ಬಯಲು ಮಾಡಿದ ಕಮಿಷನರ್‌

Published:
Updated:
ಹಲ್ಲೆ ಯತ್ನದ ಕಟ್ಟುಕತೆ ಬಯಲು ಮಾಡಿದ ಕಮಿಷನರ್‌

ಮಂಗಳೂರು: ತನ್ನ ಮೇಲೆ ತಲವಾರಿನಿಂದ ದಾಳಿ ನಡೆಸಿ, ಕೊಲ್ಲಲು ಯತ್ನಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಸುರತ್ಕಲ್‌ ಘಟಕದ ಸಹ ಸಂಚಾಲಕ ಭರತ್‌ ರಾಜ್‌ ಅಗರಮೇಲು ಸುರತ್ಕಲ್‌ ಪೊಲೀಸ್‌ ಠಾಣೆಗೆ ಸೋಮವಾರ ರಾತ್ರಿ ನೀಡಿದ್ದ ದೂರು ಕಟ್ಟುಕತೆ ಎಂಬುದು ಪೊಲೀಸರು ನಡೆಸಿದ ತನಿಖೆಯಲ್ಲಿ ಬಯಲಾಗಿದೆ.

ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌.ಸುರೇಶ್‌ ಖುದ್ದಾಗಿ ಸ್ಥಳಕ್ಕೆ ಹೋಗಿ ದೂರುದಾರರನ್ನು ಕರೆದೊಯ್ದು ವಿಚಾರಣೆ ನಡೆಸಿದ ಬಳಿಕ ಭರತ್‌ ರಾಜ್‌ ಕತೆಯೊಂದನ್ನು ಹೆಣೆದು ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಯತ್ನಿಸಿದ್ದ ಎಂಬುದು ಖಚಿತವಾಗಿದೆ. ಕಮಿಷನರ್‌ ವಿಚಾರಣೆ ಮುಗಿಸುವಷ್ಟರಲ್ಲೇ ದೂರುದಾರ ಅಲ್ಲಿಂದ ಕಾಲ್ಕಿತ್ತಿದ್ದ.

‘ಸೋಮವಾರ ರಾತ್ರಿ 7.45ರ ಸುಮಾರಿಗೆ ಅಗರ ಮೇಲು ಬಳಿ ಮೋಟರ್‌ ಬೈಕ್‌ನಲ್ಲಿ ಬರುವಾಗ ಪೊದೆಯಲ್ಲಿ ಅವಿತು ಕುಳಿತಿದ್ದ ಮೂವರು ತಲವಾರುಗಳೊಂದಿಗೆ ನನ್ನನ್ನು ಕೊಲ್ಲಲು ಯತ್ನಿಸಿದರು. ಆಗ ಬೈಕ್‌ ಬಿಟ್ಟು ಓಡಿ ತಪ್ಪಿಸಿಕೊಂಡ ನಾನು ಸಮೀಪದ ಮನೆಯೊಂದಕ್ಕೆ ಹೋದೆ. ಆರೋಪಿಗಳು ಅಲ್ಲಿಂದ ಹೊರಟುಹೋದ ಬಳಿಕ ವಾಪಸು ಬಂದಿದ್ದೇನೆ’ ಎಂದು ಭರತ್‌ ರಾಜ್‌ ದೂರಿನಲ್ಲಿ ಉಲ್ಲೇಖಿಸಿದ್ದ.

ರಾತ್ರಿ 8.30ಕ್ಕೆ ಭರತ್‌ ರಾಜ್‌ ಮೇಲೆ ನಾಲ್ವರು ದಾಳಿಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ವಾಟ್ಸ್‌ ಆ್ಯಪ್‌ ಮೂಲಕ ಹರಿದಾಡಿತ್ತು. ಈ ಮಾಹಿತಿ ಸುದ್ದಿ ವಾಹಿನಿಗಳಲ್ಲೂ ಪ್ರಸಾರವಾಗಿತ್ತು. ಆ ಬಳಿಕವೇ ಹೋಗಿ ಆತ ದೂರು ನೀಡಿದ್ದ. ಅದನ್ನು ಆಧರಿಸಿ ಸುರತ್ಕಲ್‌ ಠಾಣೆ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನೂ ದಾಖಲಿಸಿದ್ದರು.

ಕಮಿಷನರ್‌ ಸ್ಥಳಕ್ಕೆ: ವಿಷಯ ತಿಳಿಯುತ್ತಿದ್ದಂತೆ ಕಮಿಷನರ್‌ ಸುರೇಶ್‌, ಡಿಸಿಪಿ ಹನುಮಂತರಾಯ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಸುದ್ದಿ ವಾಹಿನಿಯೊಂದರ ನೇರ ಪ್ರಸಾರದಲ್ಲಿದ್ದ ಭರತ್‌ ರಾಜ್‌ನನ್ನು ಸ್ಥಳಕ್ಕೆ ಕರೆದೊಯ್ದ ಕಮಿಷನರ್‌ ಸ್ಥಳದಲ್ಲೇ ವಿಚಾರಣೆ ನಡೆಸಿದರು. ಆಗ ದೂರಿನಲ್ಲಿರುವ ಅಂಶಗಳಿಗೂ, ಆತನ ಹೇಳಿಕೆಗೂ ತಾಳೆಯಾಗಿಲ್ಲ.

ಮಾಧ್ಯಮಗಳಿಗೆ ನೀಡಿದ ಎಸ್‌ಎಂಎಸ್‌ನಲ್ಲಿ ನಾಲ್ವರಿಂದ ದಾಳಿಗೆ ಯತ್ನ ಎಂದು ಉಲ್ಲೇಖಿಸಲಾಗಿತ್ತು. ಪೊಲೀಸರಿಗೆ ನೀಡಿದ ದೂರಿನಲ್ಲಿ ಮೂವರಿಂದ ಎಂದು ತಿಳಿಸಲಾಗಿತ್ತು. ಮೂವರ ಬಳಿ ತಲವಾರು ಇದ್ದುದ್ದಾಗ ಹೇಳಲಾಗಿತ್ತು. ಒಬ್ಬ ವ್ಯಕ್ತಿ ಬೂದು ಬಣ್ಣದ ಟಿ ಷರ್ಟ್‌ ಮತ್ತು ಪ್ಯಾಂಟ್‌ ಹಾಗೂ ಇನ್ನೊಬ್ಬ ವ್ಯಕ್ತಿ ಷರ್ಟ್‌ ಹಾಗೂ ಪ್ಯಾಂಟ್ ಧರಿಸಿದ್ದ ಎಂದು ಮಾಹಿತಿ ನೀಡಲಾಗಿತ್ತು.

‘ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದಾಗ ಒಬ್ಬನ ಬಳಿ ತಲವಾರು ನೋಡಿರುವುದಾಗಿ ಹೇಳಿದ. ಬೂದು ಬಣ್ಣದ ಟಿ ಷರ್ಟ್‌ ಮತ್ತು ಪ್ಯಾಂಟ್‌ ಧರಿಸಿದ ಒಬ್ಬನನ್ನು ಸ್ಪಷ್ಟವಾಗಿ ನೋಡಿರುವುದಾಗಿ ತಿಳಿಸಿದ. ಆದರೆ, ಘಟನೆ ನಡೆದಿದೆ ಎಂದು ಆತ ತೋರಿಸಿದ ಸ್ಥಳದಲ್ಲಿ ಸಂಪೂರ್ಣ ಕತ್ತಲು ಆವರಿಸಿತ್ತು. ಬಟ್ಟೆಯ ಬಣ್ಣ ಗುರುತಿಸುವುದಕ್ಕೆ ಸಾಧ್ಯವೇ ಇರಲಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆ ಸ್ಥಳಕ್ಕೆ ಸಮೀಪದಲ್ಲೇ ಭರತ್‌ ರಾಜ್‌ನ ಸ್ನೇಹಿತ ಮಹೇಂದ್ರ ಎಂಬುವವರ ಮನೆ ಇತ್ತು. ಆದರೆ, ಆ ಮನೆಯನ್ನು ದಾಟಿಕೊಂಡು ಬೇರೊಬ್ಬರ ಮನೆಗೆ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದ. ಮಹೇಂದ್ರ ಅವರ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ‍ಪೊಲೀಸರಿಗೆ ತಿಳಿಸಿದ್ದ. ಆದರೆ, ಅವರನ್ನು ವಿಚಾರಿಸಿದಾಗ ಮನೆಯಲ್ಲೇ ಇದ್ದುದಾಗಿ ತಿಳಿಸಿದ್ದಾರೆ.

ಕಮಿಷನರ್‌ ವಿಚಾರಣೆ ತೀವ್ರಗೊಳಿಸುತ್ತಿದ್ದಂತೆಯೇ ತಬ್ಬಿಬ್ಬಾದ ಭರತ್‌ ರಾಜ್‌ ಅಲ್ಲಿಂದ ಪಲಾಯನ ಮಾಡಿದ್ದಾನೆ. ಮತ್ತೊಮ್ಮೆ ಆತನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸುರತ್ಕಲ್‌ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಸುಳ್ಳು ದೂರು ನೀಡಿದ ಕುರಿತು ಭರತ್‌ ರಾಜ್‌ ವಿರುದ್ಧ ಕ್ರಮ ಜರುಗಿಸುವ ಬಗ್ಗೆಯೂ ಪೊಲೀಸ್‌ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ರೌಡಿ ಪಟ್ಟಿಯಲ್ಲಿರುವ ಯುವಕ

ಹಲ್ಲೆಯತ್ನ ನಡೆದಿದೆ ಎಂದು ದೂರು ನೀಡಿದ್ದ ಅಗರ ಮೇಲು ನಿವಾಸಿ ಭರತ್‌ ರಾಜ್‌ ಸುರತ್ಕಲ್‌ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ. ಈತನ ವಿರುದ್ಧ ಐದು ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry