ಹಾರುಬೂದಿ: ರಾಜ್ಯ ಸರ್ಕಾರಗಳಿಗೆ ಎನ್‌ಜಿಟಿ ಸೂಚನೆ

7
ಸಮಗ್ರ ವರದಿ ಸಲ್ಲಿಕೆಗೆ 4 ವಾರಗಳ ಗಡುವು..

ಹಾರುಬೂದಿ: ರಾಜ್ಯ ಸರ್ಕಾರಗಳಿಗೆ ಎನ್‌ಜಿಟಿ ಸೂಚನೆ

Published:
Updated:

ನವದೆಹಲಿ: ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಘಟಕಗಳು ಹೊರಸೂಸುವ ಹಾರುಬೂದಿಯ ವಿಲೇವಾರಿ ಕ್ರಮಗಳ ಕುರಿತ ಸಮಗ್ರ ವರದಿಯನ್ನು ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಆಯಾ ಸರ್ಕಾರಗಳು ನಾಲ್ಕು ವಾರದೊಳಗೆ ಕ್ರಿಯಾ ಯೋಜನೆಯ ಸಮಗ್ರ ವರದಿ ಸಿದ್ಧಪಡಿಸಿ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನೀಡಬೇಕು. ಸಚಿವಾಲಯವು ಮುಂದಿನ ವಿಚಾರಣೆ ವೇಳೆ ಆ ವರದಿಗಳನ್ನು ನ್ಯಾಯಮಂಡಳಿಗೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಯು.ಡಿ. ಸಾಳ್ವಿ ನೇತೃತ್ವದ ಪೀಠ ಮಂಗಳವಾರ ತಿಳಿಸಿದೆ.

ಶಾಖೋತ್ಪನ್ನ ಘಟಕಗಳ ಹಾರುಬೂದಿಯನ್ನು ಪರಿಸರಕ್ಕೆ ಮಾರಕವಾಗದ ರೀತಿಯಲ್ಲಿ ವಿಲೇವಾರಿ ಮಾಡುವ ಕುರಿತು ಪರಿಸರ ಮತ್ತು ಅರಣ್ಯ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಗಳನ್ನು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಕಾರ್ಯಗತಗೊಳಿಸುವುದು ಕಡ್ಡಾಯ ಎಂದು ಹಸಿರು ಪೀಠ ಇದೇ ವೇಳೆ ಹೇಳಿದೆ.

ಪರಿಸರ ಸಚಿವಾಲಯವು 1999, 2003 ಹಾಗೂ 2009ರಲ್ಲಿ ಹೊರಡಿಸಿರುವ ಅಧಿಸೂಚನೆಗಳ ಅನ್ವಯ ಹಾರುಬೂದಿ ವಿಲೇವಾರಿ ಮಾಡುವಂತೆ ಆದೇಶಿಸಬೇಕು ಎಂದು ಕೋರಿ ಶಂತನು ಶರ್ಮಾ ಹಾಗೂ ಅನುಪಮ್‌ ರಾಘವ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಮುಂದಿನ ವಿಚಾರಣೆಯನ್ನು ಫೆಬ್ರುವರಿ 16ಕ್ಕೆ ನಿಗದಿಪಡಿಸಿದೆ.

ರಸ್ತೆ ಅಭಿವೃದ್ಧಿಯಂತಹ ನಿರ್ಮಾಣ ಕಾಮಗಾರಿಗಳಲ್ಲಿ, ರಸ್ತೆಗಳ ತಗ್ಗು ಮುಚ್ಚಲು ಅಥವಾ ಗಣಿ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಉಂಟಾದ ದೊಡ್ಡ ತಗ್ಗುಗಳನ್ನು ಮುಚ್ಚಲು ಹಾರುಬೀದಯನ್ನು ಬಳಸಬೇಕು ಎಂದು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry