ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌– ಬಿಜೆಪಿ ಕೈಯಿಂದ ಜಾರಿದ ದಾಳ?

Last Updated 9 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದ ರಾಜಕೀಯ ದಾಳ ಕಾಂಗ್ರೆಸ್‌ ಮತ್ತು ಬಿಜೆಪಿ ಕೈಯಿಂದ ಜಾರಿ ಹೋಗಿದೆ. ಈ ವಿವಾದವನ್ನು ವಿಧಾನಸಭೆ ಚುನಾವಣೆಯಲ್ಲಿ ಬಳಸಿಕೊಳ್ಳಲು ಉಭಯ ಪಕ್ಷಗಳೂ ಪ್ರಯತ್ನಿಸಿದ್ದವು. ಆದರೆ, ಎರಡೂ ಬಣಗಳ ಕಿತ್ತಾಟದಿಂದ ವಿವಾದ ಬದಿಗೊತ್ತಿ ಕೈತೊಳೆದುಕೊಳ್ಳಲು ತುದಿಗಾಲ ಮೇಲೆ ನಿಂತಿದ್ದವು. ಅವುಗಳ ಅಪೇಕ್ಷೆ ಈಡೇರಿದಂತಾಗಿದೆ.

ಸ್ವತಂತ್ರ ಧರ್ಮದ ಬೇಡಿಕೆ ಪರಿಶೀಲಿಸುತ್ತಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ಸಮಿತಿ ವರದಿ ಕೊಡಲು ಆರು ತಿಂಗಳು ಸಮಯ ಕೇಳಿದೆ. ಅಷ್ಟರೊಳಗೆ ಚುನಾವಣೆಯೇ ಮುಗಿದಿರುತ್ತದೆ!

ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಿದರೆ ಕಾಂಗ್ರೆಸ್‌ಗೆ  ಒಂದಿಷ್ಟು ಲಾಭವಾಗಬಹುದು ಎಂಬ ಲೆಕ್ಕಾಚಾರವಿತ್ತು. ಹಿಂದೆ ಅಧಿಕಾರದಲ್ಲಿದ್ದ ಎನ್‌ಡಿಎ ಸರ್ಕಾರ ಈ ಬೇಡಿಕೆಯನ್ನು ತಿರಸ್ಕರಿಸಿತ್ತು. ಆದರೂ ಪ್ರಯತ್ನ ನಿಂತಿರಲಿಲ್ಲ. ಈ ಬಗ್ಗೆ ಜನಸಾಮಾನ್ಯರಿಗಿಂತಲೂ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ರಾಜಕೀಯ ಮುಖಂಡರು ಹಾಗೂ ಮಠಮಾನ್ಯಗಳಿಗೆ ಆಸಕ್ತಿ ಇದ್ದಂತಿದೆ. ಇದಕ್ಕೆ ಬೇರೆ ಬೇರೆ ಕಾರಣವೂ ಇರಬಹುದು.

ಸ್ವತಂತ್ರ ಧರ್ಮದ ಬೇಡಿಕೆಗೆ ಚಾರಿತ್ರಿಕ ಹಿನ್ನೆಲೆ ಇದ್ದರೂ, 2016ರ ಜೂನ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ವೀರಶೈವ ಮಹಾಸಭಾ ಸಮಾರಂಭದಲ್ಲಿ ಈ ಕೂಗು ಹೆಚ್ಚು ಬಲ ಪಡೆಯಿತು. ‘ಪ್ರತ್ಯೇಕ ಧರ್ಮದ ಬೇಡಿಕೆ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿತು. ಈ ಅವಕಾಶವನ್ನು ಮುಖ್ಯಮಂತ್ರಿ ಸಮರ್ಥವಾಗಿ ಬಳಸಿಕೊಂಡರು. ಅಲ್ಪಸಂಖ್ಯಾತ, ಹಿಂದುಳಿದವರು ಮತ್ತು ದಲಿತರ (ಅಹಿಂದ) ಪಕ್ಷಪಾತಿ ಎಂಬ ಟೀಕೆಗಳಿಂದ ಅವರು ಪಾರಾಗಬೇಕಿತ್ತು. ವೀರಶೈವ ಲಿಂಗಾಯತ ಸಮಾಜದ ಮೇಲೆ ಬಿಜೆಪಿ ಹೊಂದಿದ ಹಿಡಿತವನ್ನು ತಪ್ಪಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು’ ಎಂದು ಆಡಳಿತ ಪಕ್ಷದೊಳಗೆ ವಿಶ್ಲೇಷಿಸಲಾಗುತ್ತಿದೆ.

ಈ ಬೆಳವಣಿಗೆಯನ್ನು ಬಿಜೆಪಿ ನಾಯಕರು ಆತಂಕದಿಂದಲೇ ಗಮನಿಸುತ್ತಿದ್ದರು. ಲಿಂಗಾಯತರನ್ನು ತಮ್ಮಿಂದ ಬೇರ್ಪಡಿಸಬಹುದು ಎಂಬ ‌ದಿಗಿಲು ಅವರಿಗೆ ಶುರುವಾಯಿತು. ಯಾವುದೇ ಪರಿಸ್ಥಿತಿಯಲ್ಲಿ ಎರಡೂ ಬಣಗಳನ್ನು ಬೇರ್ಪಡಿಸಲು ಬಿಡಬಾರದು. ಪಕ್ಷದ ಹಿಡಿತದಲ್ಲೇ ಈ ಸಮಾಜವನ್ನು ಉಳಿಸಿಕೊಳ್ಳಬೇಕು ಎಂದು ತಲೆಕೆಡಿಸಿಕೊಂಡರು. ಇದಕ್ಕೆ ವೀರಶೈವ ಸಮಾಜದ ಮುಖಂಡರು ಹಾಗೂ ಮಠಾಧೀಶರು ಬೆಂಬಲವಾಗಿ ನಿಂತರು. ಕೆಲವೇ ದಿನಗಳಲ್ಲಿ ವೀರಶೈವರು ಹಾಗೂ ಲಿಂಗಾಯತರ ಬೀದಿಗೂ ಬಂದು ಬೈದಾಡಿಕೊಂಡಿದ್ದೂ ಆಯಿತು. ವಿವಾದ ಹೈಕೋರ್ಟ್‌ ಮೆಟ್ಟಿಲೇರಿತು. ತಜ್ಞರ ಸಮಿತಿಗೆ ತಡೆ ಕೊಡಲು ಕೋರ್ಟ್‌ ನಿರಾಕರಿಸಿತು. ಈಗ ತಜ್ಞರ ಸಮಿತಿಯೇ ಆರು ತಿಂಗಳು ಕೇಳಿರುವುದರಿಂದ ಉಭಯ ಬಣಗಳ ನಡುವೆ ಕದನ ವಿರಾಮ ಘೋಷಣೆಯಾಗಿದೆ.

ವೀರಶೈವರು ಮತ್ತು ಲಿಂಗಾಯತರ ನಡುವಿನ ಕಚ್ಚಾಟ ಹೊರಗಡೆಗೆ ಮಾತ್ರ ಸೀಮಿತವಾಗಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿಯೊಳಗೂ ಸಂಘರ್ಷ ನಡೆಯುತ್ತಿದೆ. ಕಾಂಗ್ರೆಸ್‌ ನಾಯಕರು ಪರಸ್ಪರ ಮುಖ ಕೊಟ್ಟು ಮಾತನಾಡದ ಸ್ಥಿತಿಗೆ ತಲುಪಿದ್ದಾರೆ. ಸಚಿವರೂ ಪರಸ್ಪರರನ್ನು ವಿರೋಧಿಸುತ್ತಿದ್ದಾರೆ. ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ಕೆಲವು ಕಾಂಗ್ರೆಸ್‌ ಮುಖಂಡರು ಹಾಗೂ ಸಚಿವರು ಬಿಜೆಪಿ ವರಿಷ್ಠರ ಜೊತೆಗೆ ಸಂಪರ್ಕದಲ್ಲಿ ಇರಬಹುದೇನೊ ಎನ್ನುವ ಅನುಮಾನವೂ ಬರುತ್ತದೆ. ಅಷ್ಟೇ ಅಲ್ಲ, ಮೊದಮೊದಲಿಗೆ ಪ್ರತ್ಯೇಕ ಧರ್ಮದ ಬಗ್ಗೆ ವೀರಾವೇಶದಿಂದ ಮಾತನಾಡಿದ ಅನೇಕ ಸಚಿವರು ಮೌನಕ್ಕೆ ಶರಣಾಗಿದ್ದಾರೆ. ಸಚಿವರಾದ ಎಂ.ಬಿ. ಪಾಟೀಲ ಹಾಗೂ ವಿನಯ ಕುಲಕರ್ಣಿ ಮಾತ್ರ ಗಟ್ಟಿಯಾಗಿ ನಿಂತಿದ್ದಾರೆ.

ಲಿಂಗಾಯತ ಧರ್ಮ ಕುರಿತು ಜಾಗೃತಿ ಮೂಡಿಸಲು ಸಿದ್ದರಾಮಯ್ಯ ಐವರು ಸಚಿವರ ಸಮಿತಿ ರಚಿಸುವವರೆಗೂ ಕಾಂಗ್ರೆಸ್‌ನೊಳಗೆ ಏನೇನೂ ಸಮಸ್ಯೆ ಇರಲಿಲ್ಲ. ಆಮೇಲೆ ಬಿಕ್ಕಟ್ಟು ಸೃಷ್ಟಿಯಾಯಿತು. ಸ್ವತಂತ್ರ ಧರ್ಮದ ಹೋರಾಟದಿಂದಾಗಿ ಲಿಂಗಾಯತರಲ್ಲಿ ಪರ್ಯಾಯ ನಾಯಕರು ಹುಟ್ಟಿಕೊಂಡಿದ್ದಾರೆ. ಇವರನ್ನು ವೀರಶೈವ ಮಹಾಸಭಾ, ವೀರಶೈವ ಪಂಗಡದ ಪ್ರಭಾವಿ ರಾಜಕಾರಣಿಗಳು ಒಪ್ಪಿಕೊಳ್ಳಲು ತಯಾರಿಲ್ಲ. ಈ ಕಾರಣಕ್ಕೆ ಎರಡೂ ಬಣಗಳು ಒಟ್ಟಿಗೆ ಸೇರುತ್ತಿಲ್ಲ. ಮೇಲ್ನೋಟಕ್ಕೆ ಎರಡೂ ಬಣಗಳು ಒಂದೇ ಎಂದು ಹೇಳುತ್ತಿದ್ದರೂ ಒಳಗೆ ನಡೆಯುತ್ತಿರುವುದೇ ಬೇರೆ.

ಬಿಜೆಪಿಯೊಳಗೂ ವೀರಶೈವ, ಲಿಂಗಾಯತರ ಕಿತ್ತಾಟ ಬೂದಿ ಮುಚ್ಚಿದ ಕೆಂಡ. ಉಮೇಶ್‌ ಕತ್ತಿ ಮಾತ್ರ ಬೇಗುದಿಯನ್ನು ಹೊರ ಹಾಕಿದ್ದಾರೆ. ಉಳಿದವರು ಹೇಳಲೂ ಆಗದೆ, ಬಿಡಲೂ ಆಗದೆ  ಕುದಿಯುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ, ಈ ವಿಷಯದಲ್ಲಿ  ತಟಸ್ಥವಾಗಿರುವಂತೆ ಬಿಜೆಪಿ ಮುಖಂಡರಿಗೆ ಫರ್ಮಾನು ಹೊರಡಿಸಿದ್ದಾರೆ. ವೀರಶೈವರು– ಲಿಂಗಾಯತರ ನಡುವೆ ಹೊತ್ತಿಕೊಂಡಿರುವ ಸಣ್ಣ ಕಿಡಿ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಹಾದಿಗೆ ಅಡ್ಡಿಯಾಗಬಹುದು ಎಂಬ ಅಂಜಿಕೆಯಿಂದ ಬಿಜೆಪಿ ಈ ತೀರ್ಮಾನಕ್ಕೆ ಬಂದಂತಿದೆ.

ಸದ್ಯಕ್ಕೆ ವೀರಶೈವ ಲಿಂಗಾಯತರು ರಾಜ್ಯದ ದೊಡ್ಡ ಪಂಗಡ. ಜಾತಿ ಸಮೀಕ್ಷೆ ವರದಿ ಬಿಡುಗಡೆಯಾದರೆ ಸಂಖ್ಯಾಬಲದಲ್ಲಿ ಒಂದನೇ ಸ್ಥಾನದಲ್ಲಿ ಉಳಿಯುವುದೋ ಅಥವಾ ಎರಡು, ಮೂರನೇ ಸ್ಥಾನಕ್ಕೆ ಇಳಿಯುವುದೋ ಗೊತ್ತಿಲ್ಲ. ಅನಧಿಕೃತ ಮಾಹಿತಿ ಪ್ರಕಾರ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಂಖ್ಯೆ ಹೆಚ್ಚಿದೆಯಂತೆ. ಈಗ ಈ ಚರ್ಚೆ ಅಪ್ರಸ್ತುತ. ಆದರೆ, ಈ ದೊಡ್ಡ ಸಮಾಜವನ್ನು ನಿಯಂತ್ರಿಸಲು ಪೈಪೋಟಿ ಆರಂಭವಾಗಿರುವುದಂತೂ ನಿಜ. ಅನೇಕ ವರ್ಷಗಳಿಂದ ವೀರಶೈವ ಮಹಾ
ಸಭೆ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಬೆಂಬಲಿಗರ ಹಿಡಿತದಲ್ಲಿದೆ.

ಸ್ವತಂತ್ರ ಧರ್ಮದ ಬೇಡಿಕೆಯಿಂ ದಾಗಿ ಪಂಚ ಪೀಠಗಳೂ ಬೆಚ್ಚಿ ಬಿದ್ದಿವೆ. ಇಲ್ಲಿವರೆಗೂ ಕಿತ್ತಾಟ  ಗುರು–ವಿರಕ್ತ ಪರಂಪರೆಗೆ ಸೀಮಿತವಾಗಿತ್ತು. ಯಾವಾಗ ಧರ್ಮ ಪ್ರಜ್ಞೆ ಜಾಗೃತವಾಯಿತೋ ಅಂದಿನಿಂದ ಪರಿಸ್ಥಿತಿ ಬದಲಾಗಿದೆ.  ‘ಪಂಚ ಪೀಠಾಧೀಶರು ಇದುವರೆಗೆ ಆಕಾಶದಲ್ಲೇ ಇರುತ್ತಿದ್ದರು. ಈಗ ಭೂಮಿಗೆ ಬಂದಿದ್ದಾರೆ’ ಎಂದು ಲಿಂಗಾಯತ ಪಂಗಡದ ಮುಖಂಡರು ಲೇವಡಿ ಮಾಡುತ್ತಿದ್ದಾರೆ. ಪಂಚ ಪೀಠಗಳು ಲಿಂಗಾಯತರ ಗುರುಗಳೇ ಆಗಿದ್ದರೂ ಮಾನಸಿಕವಾಗಿ ಬಿಜೆಪಿ ಜೊತೆಗಿದ್ದಾರೆ. ಹಿಂದೂ ಧರ್ಮದಿಂದ ಹೊರಬರಲು ಅವರಿಗೆ ಇಷ್ಟವಿಲ್ಲ ಎಂಬ ಆರೋಪಗಳೂ ಇವೆ.

ತಜ್ಞರ ಸಮಿತಿ ಆರು ತಿಂಗಳು ಕಾಲಾವಕಾಶ ಕೇಳಿರುವುದರಿಂದ ಲಿಂಗಾಯತ ಮುಖಂಡರು ಮತ್ತು ವಿರಕ್ತ ಮಠಗಳ ಪೀಠಾಧ್ಯಕ್ಷರು ಅತೃಪ್ತಿ  ಹೊರಹಾಕಿದ್ದಾರೆ. ‘ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಗೆ ಮೊದಲಿಗೆ ಅತ್ಯುತ್ಸಾಹ ತೋರಿದ್ದ ಮುಖ್ಯಮಂತ್ರಿ ನಿಧಾನವಾಗಿ ಹಿಂದೆ ಸರಿಯುತ್ತಿದ್ದಾರೆ. ಈ ವಿಷಯದಲ್ಲಿ ಆತುರ ಬೇಡ ಎಂದು ಅವರ ಮೇಲೆ ಕೆಲವು ಪ್ರಭಾವಿ ಮಠಗಳು ಒತ್ತಡ ಹೇರಿವೆ’ ಎಂಬ ಮಾತುಗಳು ಕೇಳಿಬರುತ್ತಿವೆ. ತಜ್ಞರ ಸಮಿತಿಯ ಮೊದಲ ಸಭೆಯಲ್ಲಿ ನಡೆದಿರುವ ಚರ್ಚೆಗಳು ಈ ಅನುಮಾನಗಳಿಗೆ
ಇಂಬು ಕೊಡುತ್ತವೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮುಖಂಡರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT