ದಲಿತ ಬಾಲಕಿ ಕುಟುಂಬಕ್ಕೆ ಬೆದರಿಕೆ: ಇಬ್ಬರ ಬಂಧನ

7
ಮುಸ್ಲಿಂ ಯುವಕನ ಜೊತೆ ಮಾತನಾಡದಂತೆ ಆಕ್ಷೇಪ

ದಲಿತ ಬಾಲಕಿ ಕುಟುಂಬಕ್ಕೆ ಬೆದರಿಕೆ: ಇಬ್ಬರ ಬಂಧನ

Published:
Updated:
ದಲಿತ ಬಾಲಕಿ ಕುಟುಂಬಕ್ಕೆ ಬೆದರಿಕೆ: ಇಬ್ಬರ ಬಂಧನ

ಮಂಗಳೂರು: ಇಲ್ಲಿನ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ದಲಿತ ಕುಟುಂಬದ ಮಹಿಳೆಯೊಬ್ಬರ ಮನೆಗೆ ಹೋಗಿ ಅವರ ಮಗಳು ಮುಸ್ಲಿಂ ಯುವಕನ ಜೊತೆ ಮಾತನಾಡುತ್ತಿರುವುದನ್ನು ತಡೆಯುವಂತೆ ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಬಜರಂಗದಳದ ಇಬ್ಬರು ಕಾರ್ಯಕರ್ತರನ್ನು ಮಂಗಳವಾರ ಬಂಧಿಸಲಾಗಿದೆ.

‘ಆಟೊ ಚಾಲಕ ಉಮೇಶ್‌ (33) ಮತ್ತು ಸಣ್ಣ ಹೋಟೆಲ್‌ ನಡೆಸುತ್ತಿರುವ ರಮೇಶ್‌ (48) ಬಂಧಿತರು. ರಮೇಶ್‌ ಸಹೋದರ ರಾಜೇಶ್‌ ಎಂಬಾತ ತಲೆಮರೆಸಿಕೊಂಡಿದ್ದಾನೆ. ಇನ್ನೂ ಕೆಲವರು ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಪತ್ತೆಗೆ ಶೋಧ ನಡೆಯುತ್ತಿದೆ’ ಎಂದು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಬಂಧಿತ ಉಮೇಶ್‌ ಮತ್ತು ರಮೇಶ್‌ ಇಬ್ಬರೂ ಬಜರಂಗದಳದಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಬಿಜೆಪಿಯಲ್ಲೂ ಸಕ್ರಿಯರಾಗಿದ್ದರು. ದಲಿತ ಕುಟುಂಬದ ಮಹಿಳೆಯ ಮನೆಗೆ ತೆರಳಿದ್ದ ಆರೋಪಿಗಳು, ‘ನಿಮ್ಮ ಮಗಳು ಮುಸ್ಲಿಂ ಯುವಕನ ಜೊತೆ ಮಾತನಾಡುತ್ತಿದ್ದಾಳೆ. ತಕ್ಷಣ ನಿಲ್ಲಿಸಲು ಹೇಳಿ. ಇಲ್ಲವಾದರೆ ಊರಿನಿಂದ ಹೊರ ಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಗುಂಪು ಬೆದರಿಕೆ ಹಾಕಿದ ಮರುದಿನವೇ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ತಾಯಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿಗಳ ತಂಡ ಬೆದರಿಕೆ ಹಾಕಿರುವ ಮಾಹಿತಿ ತನಿಖಾ ತಂಡಕ್ಕೆ ದೊರೆಯಿತು. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.

‘ನಾಪತ್ತೆಯಾಗಿರುವ ಬಾಲಕಿಗೆ ಯಾವುದೇ ಮುಸ್ಲಿಂ ಯುವಕರು ಸ್ನೇಹಿತರಾಗಿರಲಿಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿಗಳು ದುರುದ್ದೇಶದಿಂದ ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಮುಂದುವರಿದಿದೆ. ಬಾಲಕಿ ಪತ್ತೆಗೂ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry