‘ಧರ್ಮ ಒಡೆಯುವ ಆತಂಕ ದೂರ’

7
ವೀರಶೈವ– ಲಿಂಗಾಯತ ಸಮನ್ವಯದ ಜನಜಾಗೃತಿ ಸಮಾವೇಶ

‘ಧರ್ಮ ಒಡೆಯುವ ಆತಂಕ ದೂರ’

Published:
Updated:
‘ಧರ್ಮ ಒಡೆಯುವ ಆತಂಕ ದೂರ’

ಬಬಲೇಶ್ವರ (ವಿಜಯಪುರ): ‘ವೀರಶೈವ ಲಿಂಗಾಯತ ಧರ್ಮ ಒಡೆಯುವ ಆತಂಕ ದೂರವಾಗಿದೆ. ಐದಾರು ತಿಂಗಳಿನಿಂದ ದಟ್ಟೈಸಿದ್ದ ಕಾರ್ಮೋಡ ಕರಗಿದೆ’ ಎಂದು ಶ್ರೀಶೈಲದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಗ್ರಾಮದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವೀರಶೈವ– ಲಿಂಗಾಯತ ಸಮನ್ವಯದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಹಾನಗಲ್ಲ ಕುಮಾರ ಶಿವಯೋಗಿಗಳು ಶತಮಾನದ ಹಿಂದೆ ಆರಂಭಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಹೆಸರಿಗೆ ಲಿಂಗಾಯತ ಸೇರಿಸಬೇಕು ಎಂಬ ನಿರ್ಧಾರವನ್ನೂ ಆರು ತಿಂಗಳ ಮಟ್ಟಿಗೆ ಮುಂದೂಡಿರುವುದು ನಮ್ಮ ಏಕತೆಯ ಶಕ್ತಿ’ ಎಂದು ಬಣ್ಣಿಸಿದರು.

‘ವೀರಶೈವ, ಲಿಂಗಾಯತ ಬೇರೆ ಬೇರೆ ಎಂದು ಪ್ರತಿಪಾದಿಸುವ ಪ್ರತ್ಯೇಕತಾವಾದಿಗಳು, ಒಂದೆಡೆ ಇವೆರಡೂ ಒಂದಕ್ಕೊಂದು ಸಂಬಂಧವಿಲ್ಲ ಎನ್ನುತ್ತಾರೆ. ಇನ್ನೊಂದೆಡೆ ಲಿಂಗಾಯತದ 99 ಉಪ ಪಂಗಡಗಳಲ್ಲಿ ವೀರಶೈವವೂ ಒಂದು ಎನ್ನುತ್ತಾರೆ. ಯಾವುದು ನಿಜ ಎಂಬುದನ್ನು ಮೊದಲು ನಿರ್ಧರಿಸಿಕೊಂಡು ಮಾತನಾಡಬೇಕು’ ಎಂದರು.‌

ಸೌಲಭ್ಯ ಸಿಗದು: ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ‘ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ ಆ ಧರ್ಮದ ಶಿಕ್ಷಣ ಸಂಸ್ಥೆಗಳಿಗೆ ವಿನಾಯಿತಿ ದೊರಕುತ್ತದೆ. ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ ಎಂಬುದನ್ನು ಹೊರತುಪಡಿಸಿದರೆ ಜನ ಸಾಮಾನ್ಯರಿಗೆ ಯಾವುದೇ ಸೌಲಭ್ಯಗಳು ದೊರೆಯಲಾರವು’ ಎಂದರು.

ವೀರಶೈವ ಲಿಂಗಾಯತ ಎಂಬ ಪದ ಶತಮಾನದಿಂದಲೂ ಬಳಕೆಯಲ್ಲಿದೆ. ಈ ಹಿಂದೆ ತಿಕ್ಕಾಟ ನಡೆದಿದ್ದರೂ ಎಂದೆಂದೂ ಬೀದಿಗೆ ಬಿದ್ದಿರಲಿಲ್ಲ. ಮೊದಲ ಬಾರಿಗೆ ರಾಜಕಾರಣಿಗಳ ಹಸ್ತಕ್ಷೇಪದಿಂದ ಬೀದಿಗೆ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪಂಚಾಚಾರ್ಯರು ಬಸವ ಆರಾಧಕರು. ಆದರೆ, ಬೆರಳೆಣಿಕೆಯಷ್ಟು ಮಂದಿ ಈ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ದೂರಿದರು.

‘ಶ್ರೀಶೈಲ ಪೀಠದ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು ಮಹಾತ್ಮ ಬಸವೇಶ್ವರರ ಕುರಿತು ‘ಲೋಕಾರಾಧ್ಯ ಬಸವಣ್ಣ’ ಎಂಬ ಕೃತಿ ರಚಿಸಿದ್ದಾರೆ. ಪ್ರತ್ಯೇಕತಾವಾದಿಗಳು ಇದನ್ನು ಅರ್ಥೈಸಿಕೊಳ್ಳಬೇಕು’ ಎಂದು ಹೇಳಿದರು.

ತಂಟೆಗೆ ಬಂದರೆ ಹೋರಾಟ

ಧಾರವಾಡ: ವೀರಶೈವರು, ಲಿಂಗಾಯತ ಪದದ ತಂಟೆಗೆ ಬಂದರೆ ರಾಜ್ಯದಾದ್ಯಂತ ಹೋರಾಟ ನಡೆಸುವುದಾಗಿ ಉಳವಿ ಚನ್ನಬಸವ ಜ್ಞಾನಪೀಠದ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಎಚ್ಚರಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಹೆಸರನ್ನು ಬದಲಾಯಿಸಿ, ವೀರಶೈವ- ಲಿಂಗಾಯತ ಮಹಾಸಭಾ ಎಂದು ಮಾಡುವುದು ಖಂಡನೀಯ ಎಂದ ಅವರು, ಒಂದು ವೇಳೆ ಹೆಸರು ಜೋಡಣೆ ಮಾಡುವುದಾದರೆ ಹಾನಗಲ್ ಕುಮಾರೇಶ್ವರರಿಗೆ ವೀರಶೈವರೇ ದ್ರೋಹ ಮಾಡಿದಂತೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಾದಯಾತ್ರೆ

ರಾಜ್ಯದ ಪ್ರತಿ ಜಿಲ್ಲೆಯ ವ್ಯಾಪ್ತಿಯಲ್ಲಿ ವೀರಶೈವ ಲಿಂಗಾ ಯತ ಧರ್ಮದ ಕುರಿತಂತೆ ಜನಜಾಗೃತಿ ಮೂಡಿಸಲು ಪ್ರತಿ ತಿಂಗಳು ಮೂರು ದಿನ ಪಂಚಾಚಾರ್ಯರು ಹಾಗೂ ಗುರು–ವಿರಕ್ತರು ಪಾದಯಾತ್ರೆ ನಡೆಸುವರು ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾ ಚಾರ್ಯರು ತಿಳಿಸಿದರು.

***

ಲಿಂಗಾಯತ ಎಂಬುದು ವೀರಶೈವ ಧರ್ಮದ ಒಂದು ಸಂಸ್ಕಾರ. ಆಚಾರ ಎಂದೆಂದೂ ಧರ್ಮವಾಗಲು ಸಾಧ್ಯವಿಲ್ಲ.

– ಡಾ.ಚಂದ್ರಶೇಖರ ಶಿವಾಚಾರ್ಯರು, ಕಾಶಿ ಪೀಠ

***

ಲಿಂಗಾಯತ ಎಂಬುದು ಮನೆಯೊಂದರ ಭಾಗವಿದ್ದಂತೆ. ಆದರೆ, ಇದೀಗ ಪ್ರತ್ಯೇಕತಾವಾದಿಗಳು ಮನೆಯನ್ನೇ ಭಾಗ ಮಾಡಲು ಹೊರಟಿದ್ದಾರೆ

– ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಉಜ್ಜಯಿನಿ

***

ಹಾನಗಲ್ಲ ಕುಮಾರ ಶಿವಯೋಗಿಗಳ ಸಮಾಜ ಸಂಘಟನೆಯ ಸಂಕಲ್ಪ ಫಲಿಸುತ್ತಿದೆ. ಜ 1ರಿಂದ ವೀರಶೈವ ಲಿಂಗಾಯತ ಪ್ರತಿಪಾದಕರಿಗೆ ಸರಣಿ ಸಿಹಿ ಸುದ್ದಿ ಲಭಿಸುತ್ತಿದೆ

– ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಶ್ರೀಶೈಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry