ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಮೋದಿ ಕಂಟಕ: ಜಿಗ್ನೇಶ್‌

‘ಯುವ ಹೂಂಕಾರ ರ‍್ಯಾಲಿ’ಯಲ್ಲಿ ಹೂಂಕರಿಸಿದ ದಲಿತ ಮುಖಂಡ
Last Updated 9 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೊಡ್ಡ ಕಂಟಕವಾಗಿದೆ ಎಂದು ಗುಜರಾತ್‌ನ ವಡಗಾಂವ್‌ ಕ್ಷೇತ್ರದ ಶಾಸಕ ಹಾಗೂ ದಲಿತ ಮುಖಂಡ ಜಿಗ್ನೇಶ್‌ ಮೆವಾನಿ ಆರೋಪಿಸಿದ್ದಾರೆ.

ಮಂಗಳವಾರ ನಡೆದ ‘ಯುವ ಹೂಂಕಾರ (ಯುವ ಗರ್ಜನೆ) ರ‍್ಯಾಲಿ’ಯಲ್ಲಿ  ಮಾತನಾಡಿದ ಅವರು, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

‘ನಮ್ಮದು ದ್ವೇಷದ ರಾಜಕಾರಣವಲ್ಲ. ಒಗ್ಗಟ್ಟಿನ ರಾಜಕಾರಣ. ಸಂವಿಧಾನದ ಮೌಲ್ಯಗಳ ಆಧಾರದ ರಾಜಕಾರಣ. ನಮಗೆ ಲವ್‌ನಲ್ಲಿ ನಂಬುಗೆ ಇದೆ,  ಲವ್‌ ಜಿಹಾದ್‌ನಲ್ಲಿ ಅಲ್ಲ’ ಎಂದರು.

‘ಘರ್‌ ವಾಪಸಿ, ಲವ್‌ ಜಿಹಾದ್‌, ಗೋಹತ್ಯೆಯಂತ ವಿಷಯಗಳ ಅಬ್ಬರದಲ್ಲಿ ಭ್ರಷ್ಟಾಚಾರ, ಬಡತನ, ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳು ಹಿನ್ನೆಲೆಗೆ ಸರಿದಿವೆ.ಈ ಷಡ್ಯಂತ್ರದ ವಿರುದ್ಧ ನಾವು ಧ್ವನಿ ಎತ್ತಬೇಕಾಗಿದೆ’  ಎಂದು ಮೆವಾನಿ ಹೇಳಿದರು.

ಶಿಕ್ಷಣ ಹಕ್ಕು, ಉದ್ಯೋಗ ಅವಕಾಶ, ದಲಿತರ ಮೇಲಿನ ದೌರ್ಜನ್ಯ ತಡೆ, ಭಿಮ್‌ ಸೇನೆಯ ಸಂಸ್ಥಾಪಕ, ಉತ್ತರ ಪ್ರದೇಶದ ಪೊಲೀಸರ ಬಂಧನದಲ್ಲಿರುವ ಚಂದ್ರಶೇಖರ್‌ ಆಜಾದ್‌ ಬಿಡುಗಡೆಗೆ ಒತ್ತಾಯಿಸಿ ಈ ರ‍್ಯಾಲಿ ಆಯೋಜಿಸಲಾಗಿತ್ತು.

ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ವಿದ್ಯಾರ್ಥಿ ನಾಯಕರಾದ ಕನ್ಹಯ್ಯಾ ಕುಮಾರ್‌, ಶೆಹ್ಲಾ ರಶೀದ್‌, ಉಮರ್‌ ಖಾಲಿದ್‌, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಖಿಲ್‌ ಗೋಗೊಯ್‌ ಭಾಗವಹಿಸಿದ್ದರು.

ದೆಹಲಿ, ಲಖನೌ, ಅಲಹಾಬಾದ್‌ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಅನುಮತಿ ನಿರಾಕರಣೆ

ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿ ‘ಯುವ ಹೂಂಕಾರ ರ‍್ಯಾಲಿ’ ನಡೆಸಲು ಅನುಮತಿ ನೀಡಲು ದೆಹಲಿ ಪೊಲೀಸರು ನಿರಾಕರಿಸಿದರು. ಹಾಗಿದ್ದರೂ ಮಧ್ಯಾಹ್ನದ ನಂತರ ಪೂರ್ವ ನಿಗದಿತ ಸ್ಥಳದಲ್ಲಿಯೇ ರ‍್ಯಾಲಿ ನಡೆಯಿತು.

ಶಾಂತಿಯುತವಾಗಿ ರ‍್ಯಾಲಿ ನಡೆಸಲು ಅವಕಾಶ ನಿರಾಕರಿಸಲಾಗಿದೆ. ಜನರಿಂದ ನೇರವಾಗಿ ಆಯ್ಕೆಯಾದ ಪ್ರತಿನಿಧಿಯ ಮಾತನಾಡುವ ಹಕ್ಕನ್ನೂ ಕಸಿದುಕೊಳ್ಳಲಾಗಿದೆ. ‘ಇದು ಗುಜರಾತ್‌ ಮಾದರಿ ರಾಜಕಾರಣ’ ಎಂದು ಮೆವಾನಿ ಆಕ್ರೋಶ ವ್ಯಕ್ತಪಡಿಸಿದರು.

***

ಗುಜರಾತ್‌ನಲ್ಲಿ ಬಿಜೆಪಿಯ ಅಹಂಕಾರ ಮುರಿದ ಕಾರಣಕ್ಕೆ ಹಾರ್ದಿಕ್‌ ಪಟೇಲ್‌, ಅಲ್ಪೇಶ್‌ ಠಾಕೂರ್‌ ಮತ್ತು ನನ್ನ ಮೇಲೆ ಬಿಜೆಪಿ ಕಣ್ಣಿಟ್ಟಿದೆ
- ಜಿಗ್ನೇಶ್‌ ಮೆವಾನಿ, ಶಾಸಕ, ದಲಿತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT