ಇನ್ನೂ ಇದ್ದಾರೆ ಸಾವಿರ ಸೈನಿಕರು

7
ಕೊರೆಯುವ ಚಳಿ, ಪ್ರತಿಕೂಲ ಹವಾಮಾನ ಲೆಕ್ಕಿಸದೆ ದೋಕಲಾದಲ್ಲಿ ಬಿಡಾರ ಹೂಡಿರುವ ಚೀನಿಯರು

ಇನ್ನೂ ಇದ್ದಾರೆ ಸಾವಿರ ಸೈನಿಕರು

Published:
Updated:
ಇನ್ನೂ ಇದ್ದಾರೆ ಸಾವಿರ ಸೈನಿಕರು

ನವದೆಹಲಿ: ಕೊರೆಯುವ ಚಳಿ ಮತ್ತು ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ ಚೀನಾದ ಸುಮಾರು 1,000 ಸೈನಿಕರು ಸಿಕ್ಕಿಂ ವಲಯದ ದೋಕಲಾದಲ್ಲಿ ಬಿಡಾರ ಹೂಡಿದ್ದಾರೆ.

ಈ ವರ್ಷದ ಜೂನ್‌–ಆಗಸ್ಟ್‌ ತಿಂಗಳಲ್ಲಿ ಇದೇ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರು 72 ದಿನಗಳ ಕಾಲ ಮುಖಾಮುಖಿಯಾಗಿದ್ದರು. ಈ ವಿವಾದಿತ ‍ಪ್ರದೇಶದಲ್ಲಿ ಚಳಿಗಾಲದಲ್ಲೂ ಚೀನಾದ ಸೈನಿಕರು ಇಷ್ಟೊಂದು ಪ್ರಮಾಣದಲ್ಲಿ ನಿಯೋಜನೆಗೊಂಡಿರುವುದು ಇದೇ ಮೊದಲು.

ಕೆಲವು ತಿಂಗಳ ಹಿಂದೆ ಇಲ್ಲಿದ್ದ 250 ಸೈನಿಕರು ಯಾಡೊಂಗ್‌ನಲ್ಲಿರುವ ಸೇನಾ ಕೇಂದ್ರಕ್ಕೆ ತೆರಳಿದ್ದರು. ಹಾಗಿದ್ದರೂ ಈಗ ಸಾಕಷ್ಟು ಯೋಧರು ಇದ್ದಾರೆ.

ಅಪರೂಪದ ವಿದ್ಯಮಾನ:  ಸಾಮಾನ್ಯವಾಗಿ ಚೀನಾ ಸೈನಿಕರು ಬೇಸಿಗೆ ಕಾಲದಲ್ಲಿ ಮಾತ್ರ ಇಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಉಳಿದ ಸಮಯದಲ್ಲಿ ಕಾಣ ಸಿಗುವುದಿಲ್ಲ.

ಭಾರತೀಯ ಸೈನಿಕರು ಎತ್ತರದ ಪ್ರದೇಶದಲ್ಲಿ ನಿಯೋಜನೆಗೊಳ್ಳುವುದರಿಂದ, ಚಳಿಗಾಲದಲ್ಲಿ ಚೀನಾ ಸೇನೆ ಕೆಳಭಾಗದಲ್ಲಿ ಸೈನಿಕರನ್ನು

ನಿಯೋಜಿಸುತ್ತಿರಲಿಲ್ಲ.

ಆದರೆ, 72 ದಿನಗಳ ಸೇನಾ ಸಂಘರ್ಷದ ನಂತರ ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದ್ದು ಮಾತ್ರವಲ್ಲದೇ, ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಅವರಿಗೆ ಉಳಿದುಕೊಳ್ಳುವುದಕ್ಕಾಗಿ ಕಟ್ಟಡ ಸೇರಿದಂತೆ ವಿವಿಧ ಸೌಲಭ್ಯಗಳನ್ನೂ ಕಲ್ಪಿಸಿದೆ.‌

ಆಗಸ್ಟ್‌ನಲ್ಲಿ ಬಿಕ್ಕಟ್ಟು ಬಗೆಹರಿದ ನಂತರ ಎರಡೂ ಕಡೆಯ ಸೈನಿಕರು 600 ಮೀಟರ್‌ಗಳಷ್ಟು ಹಿಂದೆ ಬಂದು ನೆಲೆ ನಿಂತಿದ್ದರು.

ಸಂಘರ್ಷದ ನಂತರ ಭಾರತೀಯ ಸೇನೆಯು ಚೀನಾ–ಭಾರತ ಗಡಿಯುದ್ದಕ್ಕೂ ಶೇ 10–15ರಷ್ಟು ಹೆಚ್ಚು ಸೈನಿಕರನ್ನು ನಿಯೋಜಿಸಿತ್ತು. ಭವಿಷ್ಯದಲ್ಲಿ ಚೀನಾ ಸೈನಿಕರು ದೊಕಲಾ ರೀತಿಯಲ್ಲೇ ಬೇರೆ ಕಡೆಗಳಲ್ಲೂ ಅತಿಕ್ರಮಣ ನಡೆಸಲು ಯತ್ನಿಸಬಹುದು ಎಂಬುದು ಸೇನೆಯ ಲೆಕ್ಕಾಚಾರ.

ಮತ್ತೊಂದು ಬಿಕ್ಕಟ್ಟು: ಡಿಸೆಂಬರ್‌ 28ರಂದು ಎರಡೂ ಸೇನೆಯ ನಡುವೆ ಮತ್ತೊಂದು ಬಿಕ್ಕಟ್ಟು ಉಂಟಾಗಿತ್ತು. ಅರುಣಾಚಲ ಪ್ರದೇಶದ ಟುಟಿಂಗ್‌ ಗಡಿ ಪ್ರದೇಶದಲ್ಲಿ ಭಾರತದ ಭೂಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಚೀನಾ ಯತ್ನಿಸಿತ್ತು.

ಆದರೆ, ಬ್ರಿಗೇಡಿಯರ್‌ ಮಟ್ಟದಲ್ಲಿ ನಡೆದ ಸೇನಾ ಮಾತುಕತೆಯ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಲಾಗಿದೆ ಎಂದು ಸೇನಾ ಮುಖ್ಯಸ್ಥ ಜ. ಬಿಪಿನ್‌

ರಾವತ್‌ ಹೇಳಿದ್ದರು.

ಅಲ್ಲದೇ, ದೋಕಲಾದಲ್ಲಿ ಚೀನಿ ಸೈನಿಕರ ಪ್ರಮಾಣ ಗಮನಾರ್ಹವಾಗಿ ಇಳಿಕೆಯಾಗಿದೆ ಎಂದೂ ಹೇಳಿದ್ದರು.

20ನೇ ಸುತ್ತಿನ ಮಾತುಕತೆ:  ಕಳೆದ ತಿಂಗಳು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮತ್ತು ಚೀನಾ ಸ್ಟೇಟ್‌ ಕೌನ್ಸಿಲರ್‌ ಯಾಂಗ್‌ ಜೀಚಿ ನಡುವೆ 20ನೇ ಸುತ್ತಿನ ಗಡಿ ಮಾತುಕತೆ ನಡೆದಿತ್ತು.

ಗಡಿ ವಿವಾದವನ್ನು ಶೀಘ್ರವಾಗಿ ಬಗೆಹರಿಸಲು ಒಪ್ಪಿದ್ದ ಇಬ್ಬರೂ ಮುಖಂಡರು, ಇದರಿಂದ ಎರಡೂ ರಾಷ್ಟ್ರಗಳ ಮೂಲಭೂತ ಹಿತಾಸಕ್ತಿಗಳನ್ನು ಕಾಪಾಡಬಹುದು ಎಂದು ಪ್ರತಿಪಾದಿಸಿದ್ದರು.

ರಾವತ್‌ ಹೇಳಿಕೆ: ಸ್ಪಷ್ಟ ಉತ್ತರ ನೀಡದ ಚೀನಾ

ಬೀಜಿಂಗ್‌ (ಪಿಟಿಐ): ಬಿಪಿನ್‌ ರಾವತ್‌ ಹೇಳಿಕೆಗೆ ಚೀನಾ ಸ್ಪಷ್ಟವಾದ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಆ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ತನ್ನ ಸೈನಿಕರು ದೇಶದ ಸಾರ್ವಭೌಮತ್ವವನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಿದೆ.

ರಾವತ್‌ ಹೇಳಿಕೆ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್‌, ‘ದೋಕಲಾ ಪ್ರದೇಶವು ಚೀನಾದ ಭಾಗ. ಅದು ಚೀನಾದ ಭಾಗವಾಗಿಯೇ ಮುಂದುವರಿಯಲಿದೆ. ಈ ವಿಚಾರದಲ್ಲಿ ಯಾವುದೇ ಚರ್ಚೆಗೆ ಆಸ್ಪದ ಇಲ್ಲ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry