ಗೆದ್ದವರೆಲ್ಲ ಜಾಣರಲ್ಲ!

7

ಗೆದ್ದವರೆಲ್ಲ ಜಾಣರಲ್ಲ!

Published:
Updated:

ಪರೀಕ್ಷೆಯಲ್ಲಿ ಪಾಸಾಗುವುದು ತುಂಬಾ ಸುಲಭವಾಗಿರುವ ದಿನಗಳಿವು. ಆದರೆ, ಪರೀಕ್ಷೆಯಲ್ಲಿ ಫೇಲಾಗುವುದಕ್ಕೆ ಸಿಕ್ಕಾಪಟ್ಟೆ ಧೈರ್ಯ ಬೇಕು. ಪಾಸಾದವರಿಗೆ ಕಾಲೇಜೊಂದರಲ್ಲಿ ಪ್ರವೇಶ ದೊರೆತರೆ, ಫೇಲಾದವರ ಎದುರು ಬದುಕಿನ ವಿಶ್ವವಿದ್ಯಾಲಯವೇ ಅನಾವರಣಗೊಳ್ಳುತ್ತದೆ. ಮುಂದಿನ ಜೀವನದ ಮಹತ್ವದ ಸಾಧನೆಗೆ ಈ ಫೇಲೆಂಬ ಪ್ರಕ್ರಿಯೆ ಪ್ರೇರಣೆಯಾಗುತ್ತದೆ. ಆ ಕಾರಣದಿಂದಲೇ ಪಾಸಾದ ವಿದ್ಯಾರ್ಥಿಗಳಿಗಿಂತ ಫೇಲಾದವರ ಬಗ್ಗೆ ಸಮಾಜ ಹೆಚ್ಚು ಕಾಳಜಿ ತೋರಬೇಕು. ‘ಕಾಲೇಜು ಗೇಟಲ್ಲಿ ಫೇಲಾಗಿ ಬಂದವರ ಕಾಪಾಡು ಚೊಂಬೇಶ್ವರ’ ಎನ್ನುವ ಸಿನಿಮಾ ಹಾಡಿನ ಆಶಯ ಕೂಡ ಇದೇನೇ.

ಎಸ್‌ಎಸ್‌ಎಲ್‌ಸಿ/ಪಿಯುಸಿ: ಮುಂದೇನು? ಈಗ ಎಲ್ಲಿ ನೋಡಿದರೂ ಇಂತಹುದೇ ಪ್ರಕಟಣೆಗಳು. ಎಲ್ಲರಿಗೂ ಪರೀಕ್ಷೆಗಳಲ್ಲಿ ಪಾಸಾದವರ ನಾಳೆಗಳ ಬಗ್ಗೆ, ಅದರಲ್ಲೂ ಅಂಕಗಳನ್ನು ಗುಡ್ಡೆ ಹಾಕಿಕೊಂಡ ಜಾಣ ಜಾಣೆಯರ ಭವಿಷ್ಯದ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ ಉಕ್ಕುತ್ತದೆ. ಫೇಲಾದವರ ಕಾಳಜಿ ಯಾರಿಗೂ ಬೇಡ.ಬೇಕಿದ್ದರೆ ಹುಡುಕಿ ನೋಡಿ– ‘ಎಸ್‌ಎಸ್‌ಎಲ್‌ಸಿ – ಪಿಯುಸಿ ಫೇಲ್‌: ಮುಂದೇನು?’ ಎನ್ನುವ ಬಗ್ಗೆ ಹಿಡಿ ಸುದ್ದಿಯೂ ಕಾಣಿಸುವುದಿಲ್ಲ. ಪರೀಕ್ಷೆಗಳ ಅಡ್ಡಾದಲ್ಲಿ ಗೆದ್ದವನಷ್ಟೇ ಮಹಾಶೂರ! ಹಾಗೆ ನೋಡಿದರೆ ಪರೀಕ್ಷೆಗಳಲ್ಲಿ ಪಾಸಾದವರಿಗಿಂತ ಸೋತವರ ಬಗ್ಗೆ ಹೆಚ್ಚು ಚರ್ಚೆ ನಡೆಯಬೇಕು. ಫೇಲಾದವರು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ದೋಷಗಳನ್ನು ತೋರುವ ರೂಪಕಗಳೂ ಹೌದು. ಹಾಗಾಗಿ, ಫೇಲಾದವರಲ್ಲಿ ಆತ್ಮವಿಶ್ವಾಸ ತುಂಬುವುದರ ಜೊತೆಗೆ ಅವರನ್ನು ಫೇಲು ಮಾಡಿದ ಶಿಕ್ಷಣ ಕ್ರಮದ ಬಗ್ಗೆ ವಿಮರ್ಶೆಯೂ ನಡೆಯಬೇಕು.

ಪರೀಕ್ಷೆಯಲ್ಲಿ ಫೇಲಾದವರಿಗೆ ದುಃಖವಾಗುವುದು ಸಹಜ. ಅದು ಅತಿರೇಕಕ್ಕೆ ಹೋಗಿ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಪ್ರಯತ್ನ ನಡೆಸುವುದೂ ಇದೆ. ಸೋಲನ್ನು ಅರಗಿಸಿಕೊಳ್ಳಲಾಗದ ಮನಸ್ಥಿತಿ, ಸೋಲು ಉಂಟು ಮಾಡುವ ಕೀಳರಿಮೆ, ಯಾರದೋ ಅಣಕ, ಮನೆಯವರ ನಿರಾಶೆ– ಹೀಗೆ, ಹಲವು ಕಾರಣಗಳು ಸೇರಿಕೊಂಡು ಬದುಕು ಕೊನೆಗಾಣಿಸಿಕೊಳ್ಳಲು ಮುಂದಾಗುವವರು ಇದ್ದಾರೆ. ಇವರೆಲ್ಲ ನಮ್ಮ ರಾಜಕಾರಣಿಗಳನ್ನು ನೋಡಿ ಜೀವನೋತ್ಸಾಹ ರೂಢಿಸಿಕೊಳ್ಳಬೇಕು. ಕಳೆದ ವಾರ ಲೋಕಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾಯಿತಲ್ಲ; ಈ ಚುನಾವಣೆಯಲ್ಲಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿಯೂ ಸೋತವರಿದ್ದಾರೆ.ಆದರೆ, ಚುನಾವಣೆಯಲ್ಲಿ ಸೋತೆನೆಂದು ಆತ್ಮಹತ್ಯೆ ಮಾಡಿಕೊಂಡವರು ಒಬ್ಬರೂ ಇಲ್ಲ. ಹಾಗೆಂದು ರಾಜಕಾರಣಿಗಳು ಜಡ್ಡುಗಟ್ಟಿದ್ದಾರೆ ಎಂದು ಸರಳವಾಗಿ ಹೇಳುವಂತಿಲ್ಲ. ಅವರಿಗೆ, ಬದುಕುವ ಕಲೆ ಹಾಗೂ ಜೀವನ ಸಾಧ್ಯತೆಗಳ ಅರಿವಿದೆ ಎನ್ನುವುದೇ ಹೆಚ್ಚು ಸರಿ.

ಚುನಾವಣೆಯಲ್ಲಿ ಸೋತವರೇ ಸಲೀಸಾಗಿ ತಿರುಗಾಡಿಕೊಂಡಿರುವಾಗ ಶಾಲೆ ಕಾಲೇಜುಗಳ ಪರೀಕ್ಷೆಗಳಲ್ಲಿ ನಪಾಸಾದವರು ಧೈರ್ಯಗೆಡುವುದು ಯಾಕೆ?ಹೀಗೆ ಧೈರ್ಯಗುಂದುವವರು ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಷಯವಿದೆ. ಅದೆಂದರೆ, ಹತ್ತನೇ ತರಗತಿಯಲ್ಲೋ ಅಥವಾ ಪಿಯುಸಿ ಪರೀಕ್ಷೆಯಲ್ಲೋ ಅನುತ್ತೀರ್ಣರಾದರೆ ಅಲ್ಲಿಗೆ ಜೀವನ ಮುಗಿದಂತಲ್ಲ. ಬದಲಾಗಿ ಅಲ್ಲಿಂದ ನಿಜವಾದ ಜೀವನ ಆರಂಭಗೊಳ್ಳುತ್ತದೆ. ಈ ಸಂಕ್ರಮಣ ಸನ್ನಿವೇಶ ಈವರೆಗೆ ನಾವು ನೋಡಿದ ಬದುಕಿನ ಮತ್ತೊಂದು ಆಯಾಮವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ; ಈವರೆಗೆ ಸಾಗಿಬಂದ ಬದುಕನ್ನು ಒಮ್ಮೆ ಹಿಂತಿರುಗಿ ನೋಡಲು ಅವಕಾಶ ಕಲ್ಪಿಸುತ್ತದೆ. ಹೀಗೆ, ಹಿಂತಿರುಗಿ ನೋಡದೇ ಹೋದ ಯಾವ ಪಯಣವೂ ಪರಿಪೂರ್ಣವಲ್ಲ. ಪಾಸಾದವರಿಗೆ ವಿದ್ಯಾಲಯದ ಗೇಟೊಂದೇ ಕಾಣಿಸುತ್ತದೆ. ಫೇಲಾದವರಿಗೆ ಬದುಕಿನ ವಿಶ್ವವಿದ್ಯಾಲಯವೇ ಬಾಗಿಲು ತೆರೆಯುತ್ತದೆ. ‘ಕರುಣಾಜನಕ ವೈಫಲ್ಯವನ್ನು ಎದುರಿಸಲು ಧೈರ್ಯ ತೋರುವವರು ಬಹು ದೊಡ್ಡ ಸಾಧನೆಯನ್ನು ಎಟುಕಿಸಿಕೊಳ್ಳಲು ಸಮರ್ಥರು’ ಎನ್ನುವ ಅರ್ಥದ ಹಿರಿಯರೊಬ್ಬರ ಮಾತನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.ಮರು ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಆರು ತಿಂಗಳು ಅಥವಾ ನಂತರದ ಶೈಕ್ಷಣಿಕ ವರ್ಷ ಆರಂಭಗೊಳ್ಳುವ ಒಂದು ವರ್ಷದ ಅವಧಿ ಇದೆಯಲ್ಲ– ಅದು ಬದುಕನ್ನು ಗಟ್ಟಿಗೊಳಿಸುವ ಕಾಲ. ಅಷ್ಟು ಮಾತ್ರವಲ್ಲ, ಆ ಸಮಯ ನಮ್ಮ ಆಲೋಚನಾ ಕ್ರಮವನ್ನೂ ನೇರ್ಪುಗೊಳಿಸುತ್ತದೆ. ಬಿಲ್‌ ಗೇಟ್ಸ್‌ ಹೇಳಿದ್ದು ಇದನ್ನೇ. ‘ಯಶಸ್ಸಿಗಾಗಿ ಸಂಭ್ರಮಿಸುವುದು ಸಹಜ. ಆದರೆ, ಅದಕ್ಕೂ ಮುಖ್ಯವಾದುದು ಸೋಲಿಗೆ ಕಾರಣಗಳನ್ನು ಕಂಡುಕೊಳ್ಳುವುದು’. ಇದೇ ಬಿಲ್‌ ಗೇಟ್ಸ್‌ ಕೂಡ ಕಾಲೇಜನ್ನು ಅರ್ಧದಲ್ಲೇ ಬಿಟ್ಟಿದ್ದ.ಅಂದಹಾಗೆ, ಸಮಾಜಮುಖಿ ವ್ಯಕ್ತಿತ್ವವೊಂದು ತಂತಾನೇ ರೂಪುಗೊಳ್ಳುವುದಿಲ್ಲ. ಅದು ಅಂಕುಡೊಂಕುಗಳಿಲ್ಲದ ಸರಳರೇಖೆಯಂಥ ಯಶಸ್ಸಿನ ದಾರಿಯಲ್ಲೂ ತಯಾರಾಗುವುದಿಲ್ಲ. ದೇಹವನ್ನು ಕುಗ್ಗಿಸುವ – ತಲೆ ತಗ್ಗಿಸುವಂಥ ಅವಮಾನಗಳು, ಬದುಕಲಿಕ್ಕೆ ಕಾರಣವೇ ಇಲ್ಲ ಎನ್ನುವ ಭಾವ ಹುಟ್ಟಿಸುವ ನಿರಾಶೆ, ಸರೀಕರ ಕೊಂಕು ಮಾತು, ಮನೆಯವರ ಪೇಚಾಟ– ಇಂಥ ಅಗ್ನಿದಿವ್ಯಗಳ ಕಮ್ಮಟದಲ್ಲೇ ಸದೃಢ ವ್ಯಕ್ತಿತ್ವ ರೂಪುಗೊಳ್ಳುವುದು; ಈ ಋಣಾತ್ಮಕ ಸಂಗತಿಗಳನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ, ಛಲ ಹಾಗೂ ಹೋರಾಟದ ಶ್ರಮಕ್ಕೆ ಮನಸ್ಸು ಸಜ್ಜಾಗುವುದು. ಸಾಧನೆಯ ಹಾದಿಯಲ್ಲಿ ವೈಫಲ್ಯಗಳ ಮೈಲಿಗಲ್ಲುಗಳು ಇದ್ದರೇನೇ ಅದು ಹೆಚ್ಚು ಚಂದ.ಹಿರಿಯರ ನೆನಪುಗಳನ್ನು ಕೆದಕಿ ನೋಡಿ. ಅವರಲ್ಲಿ ಬಹುತೇಕರು ಹತ್ತರ ಹೊಸ್ತಿಲಲ್ಲೋ ಪಿಯುಸಿ ಹಿತ್ತಲಲ್ಲೋ ಸಾಕಷ್ಟು ಮಣ್ಣು ಹೊತ್ತಿರುತ್ತಾರೆ. ಇಂಗ್ಲಿಷ್‌ನಲ್ಲೋ ಗಣಿತದಲ್ಲೋ ಡುಂಕಿ ಹೊಡೆದಿರುತ್ತಾರೆ. ಆದರೆ, ಹದಿನಾರು–ಹದಿನೆಂಟರ ವಯಸ್ಸಿನ ಹಿನ್ನಡೆಯ ನಂತರದ ಅವರ ಶೈಕ್ಷಣಿಕ ಪ್ರಗತಿ ಅದ್ಭುತವಾಗಿರುತ್ತದೆ. ತಾವು ಫೇಲಾದ ವಿಷಯಗಳ ಮೇಲೆ ಅವರು ಹಿಡಿತ ಸಾಧಿಸಿರುತ್ತಾರೆ. ಈ ಅನುಭವ ಇವತ್ತಿನ ತಲೆಮಾರಿನಲ್ಲಿ ಉಲ್ಟಾ ಆದಂತಿದೆ. ಈಚಿನ ವರ್ಷಗಳ ಎಸ್ಎಸ್‌ಎಲ್‌ಸಿ – ಪಿಯುಸಿ ಫಲಿತಾಂಶಗಳನ್ನು ನೋಡಿದರೆ ಗಾಬರಿಯಾಗುವಷ್ಟರ ಮಟ್ಟಿಗೆ ವಿದ್ಯಾರ್ಥಿಗಳ ಸಾಧನೆ ಕಣ್ಣುಕೋರೈಸುತ್ತದೆ. ನೂರಕ್ಕೆ ತೊಂಬತ್ತು ತೊಂಬತ್ತೆಂಟು, ನೂರಕ್ಕೆ ನೂರೂ ಅಂಕ ಗಳಿಸುವ ವಿದ್ಯಾರ್ಥಿಗಳನ್ನು ನೋಡಿದರೆ ನಮ್ಮ ಹಳೆಯ ತಲೆಮಾರಿನವರಿಗೆ ಗಾಬರಿಯಾಗುವುದು ಸಹಜ.ಮ್ಯಾಥಮೆಟಿಕ್ಸ್‌ನಲ್ಲಿ ನೂರಕ್ಕೆ ನೂರು ಅಂಕ ಬಂದರೇನೊ ಒಪ್ಪಬಹುದು; ಕನ್ನಡದಂಥ ಭಾಷಾ ವಿಷಯದಲ್ಲಿ ಪಣಕ್ಕಿಟ್ಟ ಅಷ್ಟೂ ಅಂಕ ಗಿಟ್ಟಿಸಿಕೊಳ್ಳುವುದು ಎಂದರೇನು? –ಹೀಗೆ, ಪ್ರಶ್ನಿಸುವ ಹಿರಿಯರ ಪ್ರಕಾರ, ಇವತ್ತಿನ ಅಂಕ ಕೇಂದ್ರಿತ ಪರೀಕ್ಷಾ ಕ್ರಮದಲ್ಲೇ ಐಬಿದೆ.

ಅಂಕಗಳನ್ನು ಗುಡ್ಡೆ ಹಾಕಿಕೊಂಡ ಕುಡಮಿಗಳೆಲ್ಲ ನಂತರದ ಹಂತದಲ್ಲೂ ಅಷ್ಟೇ ಯಶಸ್ಸು ಗಳಿಸುತ್ತಾರೆ ಎಂದು ನಿರೀಕ್ಷಿಸುವಂತಿಲ್ಲ.ಪದವಿ ತರಗತಿ ಮೆಟ್ಟಿಲು ತುಳಿದ ಕ್ಷಣ ಅವರಲ್ಲಿ ಸ್ವಾತಂತ್ರ್ಯದ ಭಾವ ಜಾಗೃತಿಗೊಳ್ಳುತ್ತದೆ. ಒಮ್ಮೆಗೇ ಪಠ್ಯದ ಚೌಕಟ್ಟಿನಾಚೆಗೆ ಹೊಸತೊಂದು ಲೋಕ ಇರುವುದು ಗೋಚರಿಸುತ್ತದೆ. ಪರಿಣಾಮವಾಗಿ ಡಿಗ್ರಿ ಹಂತದಲ್ಲಿ ಎಡವಟ್ಟುಗಳಾಗುತ್ತವೆ. ಹತ್ತು, ಹನ್ನೆರಡನೇ ಕ್ಲಾಸಿನಲ್ಲಿ ಎಡವಿದವರಿಗೆ ಈ ಸಮಸ್ಯೆ ಕಾಡುವುದು ಕಡಿಮೆ. ಒಮ್ಮೆ ಎಡವಿದ ಪಾಠ ಅವರನ್ನು ಪ್ರಬುದ್ಧರನ್ನಾಗಿಸಿ ಪದವಿಯಲ್ಲಿ ಮುನ್ನಡೆಸುವ ಅವಕಾಶ ಹೆಚ್ಚು. (ಫೇಲಾಗುವುದೆಂದರೆ ಜೀವನ ಅನುಭವವನ್ನು ಹೆಚ್ಚಿಸಿಕೊಳ್ಳುವ ಒಂದು ಸಹಜ ಮಾರ್ಗ).

ಪರೀಕ್ಷೆಯ ಫಲಿತಾಂಶ ಬದುಕಿಗೂ ಹೊಂದುತ್ತದೆ. ಯುವ ಮನಸ್ಸುಗಳಿಗೆ ತುಂಬಾ ಪ್ರಿಯವಾದ ‘ಲವ್‌’ ವಿಷಯವನ್ನೇ ತೆಗೆದುಕೊಳ್ಳಿ.ಲವ್ವಿನಲ್ಲಿ ಬಿದ್ದು ಎದ್ದ ಎಲ್ಲ ಹುಡುಗ ಹುಡುಗಿಯರಿಗೂ ‘ಯಾವ ಹೂವು ಯಾರ ಮುಡಿಗೊ/ಯಾರ ಒಲವು ಯಾರ ಕಡೆಗೊ’ ಎನ್ನುವ ಹಾಡು ರಾಷ್ಟ್ರಗೀತೆ ಇದ್ದಂತೆ. ಪ್ರೇಮದಲ್ಲಿ ಯಶಸ್ವಿ ಆಗುವುದಕ್ಕಿಂತ ವಿಫಲವಾಗುವುದೇ ಒಳ್ಳೆಯದು ಎನ್ನುವ ಅನುಭವಿಗಳೂ ಇದ್ದಾರೆ. ಅಂಥವರು– ‘ಊರಿಗೊಬ್ಳೆ ಪದ್ಮಾವತಿ’ ಎಂದು ನೆಚ್ಚಿ ದೇವದಾಸರಾಗದೆ ಮುಂದೆ ಸಾಗುತ್ತಾರೆ. ಅದು ಬದುಕನ್ನು ಕಟ್ಟಿಕೊಳ್ಳುವವರ ಜಾಣತನ. ಇದರ ಬದಲಾಗಿ, ಒಮ್ಮೆ ಪ್ರೇಮದಲ್ಲಿ ಸೋತದ್ದನ್ನೇ ನೆಪವಾಗಿಸಿಕೊಂಡು ವಿರಾಗಿಗಳಂತೆ ವರ್ತಿಸುವವರು ಇದ್ದಾರೆ. ಪ್ರೇಮದ ನೋವನ್ನು ಇತರೆ ನಶೆಗಳಲ್ಲಿ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವ ಇವರದು ಬದುಕಿನ ಕುರಿತ ಪಲಾಯನವಾದವೇ ಸರಿ. ಹಾಂ, ಪ್ರೇಮ ವೈಫಲ್ಯಗಳಲ್ಲೂ ಪಾಠಗಳಿವೆ. ಇವು, ನಮ್ಮ ವ್ಯಕ್ತಿತ್ವದ ಅರೆಕೊರೆಗಳನ್ನು ಮರು ಪರಿಶೀಲಿಸಲು ಅವಕಾಶ ಒದಗಿಸುತ್ತವೆ; ಬದುಕಿನ ಹೊಂದಾಣಿಕೆಯ ಕುರಿತ ಒಳನೋಟಗಳನ್ನೂ ನಮ್ಮದಾಗಿಸುತ್ತವೆ.‘ಕಾಲೇಜ್ ಗೇಟಲ್ಲಿ ಫೇಲಾಗಿ ಬಂದವರ ಕಾಪಾಡೋ ಚೊಂಬೇಶ್ವರ’ ಎನ್ನುವ ಸಿನಿಮಾ ಹಾಡಿದೆ. ಈ ಹಾಡಿನ ನಾಯಕ ‘ಮಾರ್ಕ್ಸ್ ಕಾರ್ಡಿನಲಿ ಸೊನ್ನೆ.. ರೌಂಡಾಗಿ ಕಾಣುವುದು.. ಏನ್ ಮಾಡ್ಲಿ’ ಎನ್ನುವ ಮನೋಭಾವದವನು. ‘ಫೇಲ್ ಆಗದವರುಂಟೆ ಚೊಂಬೇಶ್ವರ/ಪಾಸಾಗಿ ಏನ್ ಮಾಡ್ಲಿ ಒಂದೇ ಸಲ’ ಎನ್ನುವುದು ಆತನ ಗೊಂದಲ. ಈ ಸಿನಿಮಾ ನಾಯಕ ನಮಗೆ ಅನುಕರಣೀಯ ಆಗಬೇಕಿಲ್ಲ. ಆದರೆ, ಆತ ಪ್ರತಿಪಾದಿಸುವ ‘ಫೇಲ್‌ ಆಗದವರುಂಟೆ ಚೊಂಬೇಶ್ವರ’ ಎನ್ನುವ ಮಾತು ಬದುಕಿನ ಸುಡು ಸತ್ಯದಂತಿದೆ ಅಲ್ಲವೇ?ಫೇಲ್‌ ಆಗುವುದು ಮನುಷ್ಯ ಸಹಜ. ಈ ವೈಫಲ್ಯವನ್ನೇ ನಾಳೆಯ ಏಳಿಗೆಗಳಿಗೆ ಮೆಟ್ಟಿಲಾಗಿಸಿಕೊಳ್ಳಲು ಸಾಧ್ಯವಾದರೆ, ಫೇಲ್‌ ಆದದ್ದು ಕೂಡ ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಎನ್ನಬಹುದು. ‘ಸೋಲುಗಳಿಂದ ಪಾಠ ಕಲಿತರೆ, ನಾವು ನಿಜವಾಗಿ ಸೋತಂತಲ್ಲ’ ಎನ್ನುವ ಮಾತು ಧ್ವನಿಸುವ ಅರ್ಥ ಕೂಡ ಇದೇನೇ. ಮತ್ತೂ ಸರಳವಾಗಿ ಹೇಳುವುದಾದರೆ– ಪರೀಕ್ಷೆಯಲ್ಲಿ ಫೇಲಾಗುವುದು ತಪ್ಪೂ ಅಲ್ಲ, ಅಪರಾಧವೂ ಅಲ್ಲ. ಆ ತಪ್ಪುಗಳಿಂದ ಪಾಠ ಕಲಿಯದೆ ಹೋಗುವುದು ತಪ್ಪು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry