ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಮಚಾ ಅಧ್ಯಕ್ಷ ಓಡಿ ಹೋಗ್ತಿಯಾ’

ಪುತ್ರನಿಗೆ ಟಿಕೆಟ್‌ ಕೇಳಲು ಬಂದು ಕೂಗಾಡಿದ ವೈಜನಾಥ ಪಾಟೀಲ
Last Updated 9 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಏಯ್‌ ಚಮಚಾ ಅಧ್ಯಕ್ಷ ನಿಂತ್ಕೊಳ್ಳೊ... ಓಡಿ ಹೋಗ್ತಿಯಾ ’

ಹೀಗೆಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ವಿರುದ್ಧ ಏರಿದ ಧ್ವನಿಯಲ್ಲಿ ಹರಿಹಾಯ್ದವರು ಮಾಜಿ ಸಚಿವ ವೈಜನಾಥ ಪಾಟೀಲ.

ಸರಿಯಾಗಿ ನಡೆಯಲೂ ಆಗದೆ ಕೈಯಲ್ಲಿ ಊರುಗೋಲು ಹಿಡಿದು ಸಹಾಯಕರೊಬ್ಬರ ನೆರವಿನಿಂದ ತಮ್ಮ ಪುತ್ರನಿಗೆ ಚುನಾವಣಾ ಟಿಕೆಟ್‌ ಕೇಳಲು ಕೆಪಿಸಿಸಿ ಕಚೇರಿಗೆ ಬಂದಿದ್ದರು. ಆದರೆ, ಅಧ್ಯಕ್ಷರಿಂದ ಯಾವುದೇ ಭರವಸೆ ಸಿಗದ ಕಾರಣ ಸಿಟ್ಟಿನಿಂದ ಕುದಿಯುತ್ತಿದ್ದರು.

ಮಂಗಳವಾರ ಪರಮೇಶ್ವರ ಮಾಧ್ಯಮಗೋಷ್ಠಿ ನಡೆಸುವಾಗ ವೈಜನಾಥ್‌ ಪಾಟೀಲರು ಅವರ ಪಕ್ಕದಲ್ಲಿ ಬಂದು ಕುಳಿತರು. ಎಲ್ಲ ಮುಗಿದ ಮೇಲೆ ಪರಮೇಶ್ವರ ಎದ್ದು ಹೊರಡಲು ಸಿದ್ಧತೆ ನಡೆಸಿದಾಗ ಅವರ ಕಿವಿ ಬಳಿ ಹೋಗಿ ವೈಜನಾಥ ಪಾಟೀಲರು ಏನೋ ಉಸುರಿದರು.

ಆದರೆ, ಅದನ್ನು ಕೇಳಿಸಿಕೊಳ್ಳದೇ ಪರಮೇಶ್ವರ ಅಲ್ಲಿಂದ ಎದ್ದರು. ಆಗ ಕೋಪಗೊಂಡ ವೈಜನಾಥ ಪಾಟೀಲ ‘ಏಯ್‌ ಚಮಚಾ ಅಧ್ಯಕ್ಷ ನಿಂತ್ಕೊಳ್ಳೊ’ ಎಂದರು. ಎರಡು– ಮೂರು ಬಾರಿ ಚಮಚಾ ಎಂದು ಹೇಳಿದರೂ ಪರಮೇಶ್ವರ ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ನಡೆದೇ ಬಿಟ್ಟರು.

ತಕ್ಷಣವೇ ಟಿ.ವಿ ಕ್ಯಾಮೆರಾಗಳು ವೈಜನಾಥ ಪಾಟೀಲರನ್ನು ಮುತ್ತಿಕೊಂಡವು. ಅವರನ್ನು ಅಲ್ಲಿಂದ ತೆರವು ಮಾಡಲು ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ರಾಧಾಕೃಷ್ಣ ಹರಸಾಹಸ ಮಾಡಿದರೂ ಸಫಲರಾಗಲಿಲ್ಲ. ‘ನಿಮ್ಮ ಸಮಸ್ಯೆಯೇನು? ಏನನ್ನು ಕೇಳಲು ಬಂದಿದ್ದೀರಿ’ ಎಂದು ಪಾಟೀಲರನ್ನು ಪ್ರಶ್ನಿಸಿದಾಗ, ‘ಅಧ್ಯಕ್ಷರ ಜತೆ ಮಾತನಾಡಲು ಬಂದೆ. ಆದರೆ ಮಾತನಾಡಲು ತಯಾರಿಲ್ಲ ಎದ್ದು ಓಡಿ ಹೋದರು’ ಎಂದರು.

‘ನನ್ನ ಮಗನಿಗೆ ಎಂಎಲ್‌ಸಿ ಟಿಕೆಟ್‌ ಕೇಳಿದ್ದೆ. ಯಾವುದೇ ಪ್ರಯೋಜನ ಆಗಿಲ್ಲ. ಧರ್ಮಸಿಂಗ್‌ ಅವರ ಇಬ್ಬರೂ ಮಕ್ಕಳಿಗೆ ಟಿಕೆಟ್‌ ಕೊಟ್ಟಿದ್ದಾರೆ. ಇಲ್ಲಿ (ಕೆಪಿಸಿಸಿ) ಬರಿ ಚಮಚಾಗಿರಿ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಅಥವಾ ಮುಖ್ಯಮಂತ್ರಿ ಹುದ್ದೆಗಳ ಪೈಕಿ ಒಂದನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು. ಈ ಎರಡೂ ಹುದ್ದೆಗಳನ್ನು ಈ ಭಾಗದವರಿಗೆ
ಕೊಟ್ಟಿರುವುದರಿಂದ ನಮ್ಮ ಭಾಗದವರಿಗೆ ಅನ್ಯಾಯ ಆಗುತ್ತಿದೆ. ಇಬ್ಬರಲ್ಲಿ ಒಬ್ಬರು ರಾಜೀನಾಮೆ ನೀಡಬೇಕು’ ಎಂದು ವೈಜನಾಥ ಪಾಟೀಲ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಧ್ಯಕ್ಷ ಪರಮೇಶ್ವರ ಇಬ್ಬರೂ ಒಂದೇ, ಇಬ್ಬರೂ ಚಮಚಾಗಿರಿಯನ್ನೇ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT